ಬುಧವಾರ, ಮಾರ್ಚ್ 3, 2021
25 °C

ಶಿಕಾರಿ ಅನುಭವಗಳ ಕಣಜ

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಶಿಕಾರಿ ಅನುಭವಗಳ ಕಣಜ

ಬೇಟೆ ಎಂಬುದು ಬಲು ರೋಮಾಂಚಕವೂ, ಖುಷಿ ಕೊಡುವುದೂ ಆಗಿದೆ ಎಂದು ನಾನು ಹೇಳಿದರೆ ಅದರ ಅನುಭವವಿರುವವರು ಖಂಡಿತವಾಗಿಯೂ ಒಪ್ಪುತ್ತಾರೆ. ಆದರೆ ಬೇಟೆಯಾಡುವುದು ಎಂದರೆ ವನ್ಯ ಪ್ರಾಣಿಯನ್ನು ಕೊಲ್ಲುವುದಕ್ಕಷ್ಟೇ ಸೀಮಿತ ಆಗಬಾರದು ಎಂಬುದು ನನ್ನ ಅನಿಸಿಕೆ. ಕಾಡುಗಳಲ್ಲಿ ನಾವು ಅನುಭವಿಸುವ ಪ್ರತಿ ಕ್ಷಣವೂ ರೋಮಾಂಚಕ ಹಾಗೂ ಖುಷಿ ಕೊಡುವಂಥದ್ದು.

ಬಾಲ್ಯದಲ್ಲಿಯೇ ನಾನು ದೊಡ್ಡ ಬಂದೂಕುಗಳನ್ನು ಸುಲಭವಾಗಿ ಬಳಸುವ ಸಾಮರ್ಥ್ಯ ಪಡೆದಿದ್ದೆನಾದರೂ ಕಾಡಿನ ಪ್ರಾಣಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಸಂತಸವನ್ನೂ ಅನುಭವಿಸಿದ್ದೇನೆ. ಹೀಗಾಗಿ ವನ್ಯಜೀವಿ ಸಂರಕ್ಷಣೆ ಕುರಿತು ನನಗೆ ಯಾರೂ ಉಪದೇಶ ನೀಡುವ ಹಾಗಿಲ್ಲ. ಅದರ ಬಗ್ಗೆ ನನಗೆ ಸಾಕಷ್ಟು ಜ್ಞಾನ ಇದೆ. ಕಾಡಿನ ಮೇಲಿನ ಅಪರಿಮಿತ ವ್ಯಾಮೋಹದಿಂದಾಗಿಯೇ ನಾನು ಪದೇ ಪದೇ ದೂರದ ಕಾಡುಗಳಿಗೆ ಹೋಗಿ ಮೂರ್ನಾಲ್ಕು ದಿನ ಕಳೆಯುತ್ತಿದ್ದೆ.

ಬೇಟೆ ಎಂದರೆ ಪ್ರಾಣಿಯನ್ನು ಕೊಲ್ಲುವುದು ಎಂದಷ್ಟೇ ಅಲ್ಲ. ನನ್ನಷ್ಟೇ ಇತರ ಜೀವಿಗಳೂ ಅಮೂಲ್ಯ ಎಂಬ ಭಾವನೆ ನನ್ನಲ್ಲಿದೆ. ಈ ತೆರನಾದ ಮನಃಸ್ಥಿತಿಯಿಂದಾಗಿಯೇ ಕೆಲವೊಮ್ಮೆ ಅಪಾಯದ ಸ್ಥಿತಿಯನ್ನು ತಂದುಕೊಂಡಿದ್ದೂ ಇದೆ. ಆದರೆ ಯಾವೊಂದೂ ಗಾಯವಾಗದೇ ನಾನು ಯಾವಾಗಲೂ ಸುರಕ್ಷಿತವಾಗಿಯೇ ಮರಳಿದ್ದೇನೆ. ಬೇಟೆಯಾಡಲು ನನ್ನದೇ ಆದ ಕೆಲವು ನಿಬಂಧನೆಗಳನ್ನು ರೂಢಿಸಿಕೊಂಡಿದ್ದೆ: ಹೆಣ್ಣು ಪ್ರಾಣಿಗಳನ್ನು ಕೊಲ್ಲಬಾರದು; ಮರಿಗಳನ್ನು ಹತ್ಯೆ ಮಾಡಬಾರದು; ಗೂಡಿನಲ್ಲಿನ ಮೊಟ್ಟೆ ಕದಿಯಬಾರದು; ಜನರಿಗೆ ಪ್ರಾಣಾಪಾಯ ಮಾಡದ ಯಾವ ಜೀವಿಯನ್ನೂ ಸಾಯಿಸಬಾರದು… ಹೀಗೆ. ಅನುಮತಿ ಸಹಿತವಾಗಿ ಅಥವಾ ರಹಿತವಾಗಿ ಬೇಟೆಯಾಡುವುದು ಬರೀ ಕಾಗದದ ತುಂಡಿನ ಮೇಲೆ ಅವಲಂಬಿತವಾಗಿದೆ. ಮುಖ್ಯವಾಗಿ, ಜೀವ ಕಳೆದುಕೊಳ್ಳುವ ಪ್ರಾಣಿ ಯಾವುದು ಹಾಗೂ ಏಕೆ ಎಂಬುದರ ಮೇಲೆ ‘ಶಿಕಾರಿ’ ನಿಂತಿದೆ ಎಂದು ನಂಬಿದವನು ನಾನು.

ಅಪಾಯ

ಶಿಕಾರಿ ಸಂದರ್ಭಗಳಲ್ಲಿ ನಾನು ಬಹುತೇಕ ಸಲ ಅಪಾಯದಿಂದ ಪಾರಾಗಿದ್ದೇನೆಂಬುದು ಹೌದಾದರೂ, ಆ ಅದೃಷ್ಟ ನನ್ನ ಸಹವರ್ತಿಗಳಿಗೆ ಸಿಕ್ಕಿದ್ದು ಕಡಿಮೆ! ಹೀಗಾಗಿ ನಾನು ಒಂಟಿಯಾಗಿಯೇ ಬೇಟೆಗೆ ಹೋಗುತ್ತಿದ್ದೆ. ಅಂಥದೊಂದು ನೋವಿನ ಅನುಭವ ಇಲ್ಲಿದೆ.

70ರ ದಶಕದ ಕೊನೆಯ ಹೊತ್ತಿಗೆ ನಡೆದ ಘಟನೆಯಿದು. ಆಸ್ಟ್ರೇಲಿಯಾದಿಂದ ಬಂದಿದ್ದ ನನ್ನ ಸ್ನೇಹಿತ ಕಾಡು ಪ್ರಾಣಿಗಳ ಫೋಟೋ ತೆಗೆಯಲು ಬಯಸಿದ. ನಾನು ಆತನ ಜತೆ ಬಾಡಿಗೆ ಕಾರಿನಲ್ಲಿ ಬಂಡಿಪುರಕ್ಕೆ ತೆರಳಲು ವ್ಯವಸ್ಥೆ ಮಾಡಿದೆ. ಆದರೆ ಕಾರು ಬಂದಾಗ, ಅದರಲ್ಲಿ ಇನ್ನೊಬ್ಬ ಅಪರಿಚಿತ ಕುಳಿತಿದ್ದ. ಕಾರಿನ ಚಾಲಕ, ಆತ ತನ್ನ ಸ್ನೇಹಿತನೆಂದೂ ಜತೆಗಿರಲು ಅವಕಾಶ ಮಾಡಿಕೊಡಬೇಕೆಂದೂ ಬೇಡಿಕೊಂಡ. ಬೇರೆ ದಾರಿ ಇಲ್ಲದೇ ‘ಅನಪೇಕ್ಷಿತ ಅತಿಥಿ’ ಜತೆಗೆ ಎಲ್ಲರೂ ಕಾಡಿಗೆ ಹೊರಟೆವು. ಮಾರ್ಗ ಮಧ್ಯೆ ಚಹಾ ಕುಡಿಯಲು ನಿಂತಾಗ, ಆ ಅತಿಥಿ ಬೀಡಿ ಸೇದಲು ಶುರು ಮಾಡಿದ.

ಅದೆಲ್ಲಿತ್ತೋ, ಒಂಟಿ ಸಲಗವೊಂದು ನಮ್ಮತ್ತ ಧಾವಿಸಿ ಬಂತು! ಎಲ್ಲರೂ ದಿಕ್ಕಾಪಾಲಾಗಿ ಕತ್ತಲೆ ಇರುವಲ್ಲಿಗೆ ಓಡಿದೆವು. ಆದರೆ ಆ ಸ್ನೇಹಿತ ಕಾರು ಸುರಕ್ಷಿತ ತಾಣ ಎಂದು ಅದರತ್ತ ಓಡಿದ್ದಷ್ಟೇ ಕಾಣಿಸಿತು. ದುರದೃಷ್ಟಕ್ಕೆ ಅದನ್ನು ಲಾಕ್ ಮಾಡಲಾಗಿತ್ತು. ಏನೂ ಸದ್ದು ಕೇಳಲಿಲ್ಲ. ಕೆಲ ನಿಮಿಷಗಳ ತರುವಾಯ ಎಲ್ಲರೂ ಒಟ್ಟುಗೂಡಿ, ಅಲ್ಲಿಗೆ ಹೋದಾಗ ನಿರ್ಜೀವ ದೇಹ ದೂರದಲ್ಲಿ ಬಿದ್ದಿತ್ತು. ಕಾಡುಗಳೂ, ಅದರಲ್ಲಿನ ಪ್ರಾಣಿಗಳೂ ಹೇಗೆ ವರ್ತಿಸುತ್ತವೆ ಎಂಬುದನ್ನು ಅರಿಯದೇ ಹೋದರೆ ಇಂಥ ಅನಾಹುತ ಖಚಿತ. ನಮ್ಮ ಜತೆಗೆ ಬರುವವರಿಗೆ ಅರಣ್ಯ ಹಾಗೂ ವನ್ಯಪ್ರಾಣಿಗಳ ವರ್ತನೆ ಬಗ್ಗೆ ಅರಿವು ಇರಬೇಕು. ಹಾಗೆಂದು ಅದನ್ನು ಕಲಿಯಲು ಪಠ್ಯಕ್ರಮಗಳಿಲ್ಲ. ಅನುಭವವೇ ಎಲ್ಲವನ್ನೂ ಕಲಿಸುತ್ತದೆ.

ನಾನು ಹತ್ತಾರು ನರಭಕ್ಷಕ ಹುಲಿ, ಚಿರತೆಗಳನ್ನು ಬೇಟೆಯಾಡಿದ್ದೇನೆ. ಅವು ಮನುಷ್ಯರಿಗೆ ಅಪಾಯ ಉಂಟು ಮಾಡಿದ್ದವು ಎಂದು ನಾನೇನೂ ಈ ಬೇಟೆಗಳನ್ನು ಈಗ ಸಮರ್ಥಿಸಿಕೊಳ್ಳಲಾರೆ. ಆದರೆ ಅಂಥ ಪ್ರಾಣಿಗಳನ್ನು ಆಗ ವೈರಿಗಳೆಂದೇ ಪರಿಗಣಿಸಲಾಗುತ್ತಿತ್ತು. ಅವುಗಳನ್ನು ಬೇಟೆಯಾಡಿದವರಿಗೆ ಬಹುಮಾನ ಕೊಡಲಾಗುತ್ತಿತ್ತು. ಕರಡಿಗಳನ್ನು ಬೇಟೆಯಾಡುವುದು ಅಂಥ ಸಾಹಸದ ಕೆಲಸ ಆಗಿರಲಿಲ್ಲ. ಹೀಗಾಗಿ ಅವುಗಳನ್ನು ಬೇಟೆಯಾಡಲು ಹೆಚ್ಚು ಆಸಕ್ತಿಯನ್ನು ತೋರುತ್ತಿರಲಿಲ್ಲ.

1873ರಿಂದ ಈಚೆಗೆ ಆನೆಗಳ ಬೇಟೆಗೆ ನಿರ್ಬಂಧ ವಿಧಿಸಲಾಯಿತು. ಅವು ಮನುಷ್ಯರಿಗೆ ಪ್ರಾಣಾಪಾಯ ಉಂಟು ಮಾಡಿದರಷ್ಟೇ ಬೇಟೆಯಾಡಬಹುದು ಎಂಬ ನಿಯಮವಿತ್ತು. ಹಾಗೆಂದು ಮನಬಂದಂತೆ ಬೇಟೆಯಾಡುವಂತೆ ಇರಲಿಲ್ಲ. ಅರಣ್ಯ ಇಲಾಖೆಯು ರೂಪಿಸಿದ ನಿಯಮಗಳಿಗೆ ಅನುಗುಣವಾಗಿ ಆ ಕಾರ್ಯ ಸಾಧಿಸಬೇಕಿತ್ತು ಹಾಗೂ ಅದಾದ ಬಳಿಕ ಉಂಟಾಗುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿತ್ತು.

ನನ್ನ ತಂದೆ ಕೆನೆತ್ ಆ್ಯಂಡರ್ಸನ್‌ ಹೆಸರಾಂತ ಬೇಟೆಗಾರ. ಎಷ್ಟೋ ನರಭಕ್ಷಕ ಹುಲಿ, ಚಿರತೆಗಳನ್ನು ಬೇಟೆಯಾಡಿದ್ದವರು. ಅವರ ಜತೆ ಕಾಡಿಗೆ ಹೋದಾಗಲೆಲ್ಲ ಕಲಿತಿದ್ದು ಬಹಳ. ನನ್ನ ಸಹೋದರಿ ಜೂನ್ ಜತೆಗೆ ಬೆಂಗಳೂರು ಹೊರವಲಯದ ಜವಳಗಿರಿ ಕಾಡಿಗೆ ಹೋಗುತ್ತಿದ್ದಾಗ ನನ್ನ ವಯಸ್ಸು ಬರೀ ಹತ್ತು ವರ್ಷ. ಮೂರ್ನಾಲ್ಕು ವರ್ಷಗಳ ಬಳಿಕ ಒಬ್ಬನೇ ಹೋಗಲು ಶುರು ಮಾಡಿದೆ. ನನ್ನ ತಂದೆ - ತಾಯಿ ನನಗೆ ನೀಡಿದ ಸ್ವಾತಂತ್ರ್ಯವೂ ಇದಕ್ಕೆ ಕಾರಣ.

ಮೊದಲ ಬೇಟೆ

ಭಾರತ ಸ್ವಾತಂತ್ರ್ಯ ಪಡೆದ ವರ್ಷದಲ್ಲಿಯೇ ನಾನು ಮೊದಲ ಬೇಟೆಯಾಡಿದ್ದೆ. ಆ ನರಭಕ್ಷಕ ಚಿರತೆಯನ್ನು ನೆಲಕ್ಕುರುಳಿಸಿದ ಬಗ್ಗೆ ಒಂದಷ್ಟು ಹೇಳಲೇ?

ಭದ್ರಾವತಿ ಸಮೀಪದ ಉಬರಾಣಿ ಬಳಿ ಹೇಳಿಕೊಳ್ಳುವಂಥ ದಟ್ಟ ಕಾಡು ಇರಲಿಲ್ಲ. ಇದ್ದಿದ್ದು ಮುಳ್ಳುಕಂಟಿ - ಬಿದಿರು ಮೆಳೆಗಳಷ್ಟೇ. ಈ ಪ್ರದೇಶದಲ್ಲಿದ್ದ ನರಭಕ್ಷಕ ಹುಲಿಯನ್ನು ಬೇಟೆಯಾಡಿ, ಬಹುಮಾನ ಗಳಿಸುವಂತೆ ಮೈಸೂರು ಸರ್ಕಾರವು ಆಹ್ವಾನ ನೀಡಿತು. ಇದನ್ನು ಬೇಟೆಯಾಡಲು ಹೋಗಿ, ಕಣ್ತಪ್ಪಿನಿಂದ ಇತರ ಎರಡು ಹುಲಿಗಳು ಬೇಟೆಗಾರರ ಗುಂಡಿಗೆ ಪ್ರಾಣತೆತ್ತಿದ್ದವು. ಚಿತ್ರದುರ್ಗ - ಶಿವಮೊಗ್ಗ ರಸ್ತೆಯಲ್ಲಿ ರಾತ್ರಿಹೊತ್ತು ಸಾಗುತ್ತಿದ್ದ ಜನರ ಗುಂಪಿನ ಮೇಲೆ ದಾಳಿ ಮಾಡಿ, ಹತ್ಯೆ ಮಾಡುತ್ತಿದ್ದ ನರಭಕ್ಷಕ ಅದು. ಹೀಗಾಗಿ ಸಂಜೆಯಿಂದ ಮರು ಬೆಳಿಗ್ಗೆವರೆಗೆ ಈ ರಸ್ತೆ ನಿರ್ಜನವಾಗಿರುತ್ತಿತ್ತು. ಕೆಲವೊಮ್ಮೆ ರಾತ್ರಿಗೂ ಕಾಯದೇ ಹಗಲಿನಲ್ಲೇ ದಾಳಿ ಮಾಡಿ, ಚಕ್ಕಡಿಯಲ್ಲಿನ ವ್ಯಕ್ತಿಯನ್ನು ಹೊತ್ತೊಯ್ಯುತ್ತಿದ್ದ ಆ ನರಭಕ್ಷಕನನ್ನು ಹೊಡೆಯುವುದು ಹೇಗೆ ಎಂದು ಸಾಕಷ್ಟು ಹೊತ್ತು ಚಿಂತಿಸಿದೆ.

ಸಮೀಪದಲ್ಲಿನ ವಿಶ್ರಾಂತಿ ಗೃಹದಲ್ಲಿ ವಾಸ್ತವ್ಯ ಹೂಡಿದ ನಾನು, ದಿನವಿಡೀ ಸುಳಿವಿಗಾಗಿ ಕಾಯುತ್ತಿದ್ದೆ. ನಾಲ್ಕೈದು ದಿನಗಳ ಬಳಿಕ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹುಲಿ ದಾಳಿ ಮಾಡಿದ ಸುದ್ದಿ ಕೇಳಿ, ಧಾವಿಸಿದೆ. ಆತನ ಕಳೇಬರ ಇದ್ದಲ್ಲಿ ಬಟ್ಟೆಯಿಂದ ಅರೆಬರೆ ಮುಚ್ಚಿದ ಮೇಕೆ ಮಾಂಸ ಇಟ್ಟೆ. ತಾನು ದಾಳಿ ಮಾಡಿದ ಮಾನವನ ದೇಹ ಇದೇ ಎಂದು ಹುಲಿಯನ್ನು ನಂಬಿಸುವ ಯತ್ನವಾಗಿತ್ತು ಅದು. ಆದರೆ ಅದು ಇತ್ತ ಬಾರದೇ ವಿಶ್ರಾಂತಿ ಗೃಹದ ಬಳಿ ಬಾಲಕಿಯನ್ನು ಕೊಂದಿತ್ತು. ಅದಾದ ಬಳಿಕ ವಾರದಲ್ಲಿ ಒಂದು ಚಕ್ಕಡಿ ಮೇಲೆ ದಾಳಿ ಮಾಡಿ, ಅದರಲ್ಲಿನ ವ್ಯಕ್ತಿಯನ್ನು ಅರ್ಧ ತಿಂದಿತ್ತು. ನಾನು ತಡ ಮಾಡದೇ ಅಲ್ಲಿಗೆ ತೆರಳಿದೆ.

ಪಕ್ಕದ ಮರದ ಮೇಲೆ ಮಚಾನು ಕಟ್ಟಿ, ರಾತ್ರಿ ನರಭಕ್ಷಕನಿಗೆ ಕಾಯುತ್ತ ಕೂತೆ. ನಿದ್ರೆ ಬಾರದಂತೆ ತಡೆದರೂ ವಿಫಲವಾಗಿ, ಮಂಪರಿನಲ್ಲಿ ಇದ್ದಾಗ ನಸುಕಿನ ಜಾವ ಏನೋ ಶಬ್ದ ಕೇಳಿತು. ಭಾರವಾದ ವಸ್ತುವನ್ನು ಎಳೆದೊಯ್ಯುವ ಸದ್ದು ಕೇಳಿ, ಎದ್ದು ಕೂತೆ. ಅಸ್ಪಷ್ಟ ಬೆಳಕಿನಲ್ಲಿ ಹುಲಿ ಕಾಣಿಸಿತು. ಕ್ಷಣಮಾತ್ರವೂ ವ್ಯರ್ಥ ಮಾಡದೇ ಗುಂಡು ಹಾರಿಸಿದೆ. ನರಭಕ್ಷಕ ನೆಲಕ್ಕೆ ಒರಗಿತು. ಮಬ್ಬು ಬೆಳಕಿನಲ್ಲಿ ಪಡೆದ ಮೊದಲ ಯಶಸ್ಸು ಅದಾಗಿತ್ತು.

ಅತೀಂದ್ರಿಯ ಶಕ್ತಿ

ನನ್ನ ತಂದೆ ಕೆನೆತ್ ಆ್ಯಂಡರ್ಸನ್‌ ಅವರಿಗೆ ಅಗೋಚರ ಶಕ್ತಿಗಳ ಬಗ್ಗೆ ನಂಬಿಕೆ ಇತ್ತು. ಅದನ್ನು ಅವರೇ ತಮ್ಮ ಶಿಕಾರಿ ಕೃತಿಗಳಲ್ಲಿ ಹಲವೆಡೆ ಉಲ್ಲೇಖಿಸಿದ್ದಾರೆ. ಆದರೆ ನನಗೆ ಅದರಲ್ಲಿ ನಂಬಿಕೆ ಇರಲಿಲ್ಲ. ಹಾಗಿದ್ದರೂ ನನ್ನ ನಂಬಿಕೆಯನ್ನು ತಲೆಕೆಳಗು ಮಾಡುವ ಘಟನೆಗಳು ನಡೆದಿವೆ.

ಬೆಂಗಳೂರಿಗೆ ಸಮೀಪದಲ್ಲಿರುವ ‘ಥಳಿ’ (ಇದನ್ನು ಬ್ರಿಟಿಷರು ‘ಲಿಟಲ್ ಇಂಗ್ಲೆಂಡ್’ ಎಂದು ಬಣ್ಣಿಸುತ್ತಿದ್ದರು) ಎಂಬ ಗ್ರಾಮದ ಸುತ್ತ ಓಡಾಡಿ ಜನರನ್ನು ಕೊಲ್ಲುತ್ತಿದ್ದ ಚಿರತೆಯನ್ನು ಬೇಟೆಯಾಡಲು ನನಗೆ ಆಹ್ವಾನ ಬಂತು. ವಾರಾಂತ್ಯದಲ್ಲಿ ಅಲ್ಲಿಗೆ ಹೋಗಿ ಅದನ್ನು ಬೇಟೆಯಾಡಲು ಪ್ರಯತ್ನ ಶುರು ಮಾಡಿದೆ; ಆದರೆ ಪದೇ ಪದೇ ವಿಫಲನಾಗುತ್ತಿದ್ದೆ. ಅಲ್ಲೊಂದು ಕೊಳ ಇದ್ದು, ಅದಾಗಲೇ ಬೇಸಿಗೆ ಕಾಲಿಟ್ಟಿದ್ದರಿಂದ ಆ ನರಭಕ್ಷಕ ಚಿರತೆ ತನ್ನ ದಾಹ ತಣಿಸಿಕೊಳ್ಳಲು ಖಂಡಿತ ಬಂದೇ ಬರುತ್ತದೆ ಎಂಬ ನಂಬಿಕೆ ನನಗೆ ಮೂಡಿತು. ಚಿರತೆ ಯಾವ ಕಡೆಯಿಂದ ಬರಬಹುದು ಎಂಬುದು ಖಚಿತವಾಗದ ಕಾರಣ, ಕೊಳದ ದಡದಲ್ಲಿ ಗುಂಡಿ ತೆಗೆದು ಅಡಗಿ ಕೂರಲು ನಿರ್ಧರಿಸಿದೆ.

ಗುಂಡಿ ಅಗೆದ ಇಬ್ಬರು ಹಳ್ಳಿಗರು, ಅದರಲ್ಲಿ ನಾನು ಕೂತ ಬಳಿಕ ಮೇಲೆ ರೆಂಬೆ - ಕೊಂಬೆಗಳನ್ನು ಮುಚ್ಚುತ್ತ ‘ದೊರೆ ಇನ್ನು ಜೀವಂತ ಬರಲಾರ’ ಎಂದು ಗೊಣಗುತ್ತ ಹೊರಟು ಹೋದರು. ಒಳಗೇ ಕೂತು ಚಿರತೆ ಬರುತ್ತದೆಂದು ಕಾಯುತ್ತ ಕಾಯುತ್ತ ನಿದ್ರೆಗೆ ಜಾರಿದೆ. ಒಂದು ಹೊತ್ತಿನಲ್ಲಿ ‘ಎದ್ದೇಳು… ಎದ್ದೇಳು’ ಎಂದು ಯಾರೋ ನನ್ನನ್ನು ಎಚ್ಚರಿಸಿದಂತಾಯಿತು. ನಿಧಾನವಾಗಿ ಎದ್ದು ಸದ್ದು ಮಾಡದೇ ಅತ್ತಿತ್ತ ನೋಡಿದಾಗ ಹದಿನೈದು ಗಜ ದೂರದಲ್ಲಿ ಕವುಚಿ ಕುಳಿತಿದ್ದ ಚಿರತೆ ನನ್ನತ್ತಲೇ ನೋಡುತ್ತಿತ್ತು. ಒಂದೇ ಒಂದು ಗುಂಡು ಅದನ್ನು ಉರುಳಿಸಿತು. ಗುಂಡಿಯಿಂದ ಮೇಲೆದ್ದು ಬಂದು ಸುತ್ತ ನೋಡಿದಾಗ ಯಾರೂ ಇರಲಿಲ್ಲ. ನಿದ್ರೆ ಮಾಡುತ್ತಿದ್ದ ನನ್ನನ್ನು ಎಚ್ಚರಿಸಿದ್ದು ಯಾರು ಎಂಬ ಪ್ರಶ್ನೆಗೆ ಈಗಲೂ ನನ್ನಲ್ಲಿ ಉತ್ತರ ಇಲ್ಲ!

ಪುಂಡು ಸಲಗನ ಉಪಟಳ

ಪ್ರಾಣಿಯೊಂದನ್ನು ಹೊಡೆದಾಗ ಅದು ಗಾಯಗೊಂಡು ನಾಪತ್ತೆಯಾದರೆ, ಅದನ್ನು ಹುಡುಕಿಕೊಂಡು ಹೋಗಿ ನೋವಿನಿಂದ ಮುಕ್ತಿ ಕೊಡುವುದನ್ನು ಮಾತ್ರ ನಾನು ಮರೆತಿಲ್ಲ. ಹಾಗಿದ್ದರೂ ಒಮ್ಮೆ ಅದು ಸಾಧ್ಯವಾಗಲಿಲ್ಲ.

ಹೊಸೂರು ಬಳಿಯ ಕೊಡೇಕರಾಯ್ ಸಮೀಪ ಪುಂಡು ಸಲಗವೊಂದು ಸಿಕ್ಕಾಪಟ್ಟೆ ಕಾಟ ಕೊಡುತ್ತಿದೆ ಎಂದು ಹೊಸೂರು ಸೂಪರಿಂಟೆಂಡೆಂಟ್ ನನಗೆ ಟೆಲಿಗ್ರಾಂ ಕಳಿಸಿದರು. ಅದನ್ನು ಹೊಡೆಯಬೇಕಿತ್ತು. ಹುಲಿ ಅಥವಾ ಚಿರತೆಯಂತೆ ಆನೆಯನ್ನು ಹುಡುಕುವುದು ಕಷ್ಟವೇನೂ ಅಲ್ಲ. ಶುಕ್ರವಾರ ಸಂಜೆ ಗೆರಹಟ್ಟಿಯ ವಿಶ್ರಾಂತಿ ಗೃಹಕ್ಕೆ ಹೋಗಿ, ವಾಸ್ತವ್ಯ ಹೂಡಿದೆ. ಬೆಳಿಗ್ಗೆ ಅಲ್ಲಿನ ಮಾರ್ಗದರ್ಶಕ - ಜತೆಗಾರನೊಂದಿಗೆ ಕಾಡಿನತ್ತ ಹೊರಟೆ. ಬಿಸಿಲ ಧಗೆ ಮುಖಕ್ಕೆ ರಾಚುತ್ತಿತ್ತು. ಐದು ಮೈಲು ಕ್ರಮಿಸಿದಾಗ, ಗದ್ದೆಯೊಂದನ್ನು ಆ ಆನೆ ಸಂಪೂರ್ಣವಾಗಿ ಹಾಳು ಮಾಡಿದ್ದು ಕಾಣಿಸಿತು. ಅದರ ಹೆಜ್ಜೆ ಗುರುತುಗಳು ಸ್ಪಷ್ಟವಾಗಿದ್ದವು. ಅಲ್ಲೇ ಬಿದಿರ ಮೆಳೆಯ ಕೆಳಗೆ ಕೂತು ಊಟ ಮಾಡಿ, ಮುಂದೆ ಸಾಗಿದೆವು. ಒಂದು ಕಡೆ ನನ್ನ ಸಹಚರ ಸ್ತಬ್ಧವಾಗಿ ನಿಂತು, ನನ್ನನ್ನೂ ನಿಲ್ಲಿಸಿದ.

ದೈತ್ಯ ಮರದ ಕೆಳಗೆ ಅಚಲವಾಗಿ ನಿಂತ ಆನೆ ಕಾಣಿಸಿತು. ಆಗಾಗ್ಗೆ ಅದರ ಮೊರದಗಲದ ಕಿವಿ ಅಲ್ಲಾಡುತ್ತಿದ್ದುದನ್ನು ಬಿಟ್ಟರೆ ಬೇರೆ ಚಲನೆ ಇರಲೇ ಇಲ್ಲ. ಅದರ ದಂತಗಳು ಸಾಕಷ್ಟು ಉದ್ದ ಹಾಗೂ ದಪ್ಪ ಇದ್ದವು. ನಾನು ಹೆಚ್ಚು ಸದ್ದು ಮಾಡದೇ ಬಂದೂಕು ಸಿದ್ಧ ಮಾಡಿಕೊಂಡು ತೆವಳುತ್ತ ಅದರ ಬಳಿ ಹೋದೆ. ಇನ್ನೇನು, ನಾನು ಗುರಿಯಿಟ್ಟು ಗುಂಡು ಹಾರಿಸುವುದರಲ್ಲಿ ಅದಕ್ಕೆ ನನ್ನ ಇರವು ತಿಳಿದು ಪಕ್ಕದ ಪೊದೆಯೊಳಗೆ ನುಗ್ಗಿತು. ಮರುಕ್ಷಣವೇ ನಾನು ರೈಫಲ್‌ನಿಂದ ಹಾರಿಸಿದ ಗುಂಡು ಗುರಿ ತಪ್ಪಿತು. ಆದರೂ ಮತ್ತೆ ಗುರಿಯಿಲ್ಲದೇ ಎರಡನೇ ಗುಂಡು ಹಾರಿಸಿದೆ. ಗುಂಡು ದೇಹದೊಳಗೆ ಹೊಕ್ಕಾಗ ದೂರಕ್ಕೆ ಅದು ಸಾಗದು ಎಂದು ಭಾವಿಸಿದೆ.

ಆನೆಯನ್ನು ಹುಡುಕುತ್ತ ಹೋದಂತೆ ಒಂದೆಡೆ ರಕ್ತದ ಮಡುವು ಕಾಣಿಸಿತು. ಅದಾಗಲೇ ಕತ್ತಲು ಕವಿಯುತ್ತಿದ್ದುದರಿಂದ ಮುಂದೆ ಸಾಗುವುದು ಬೇಡ ಎಂದು ಸಹಚರ ಸಲಹೆ ಮಾಡಿದ. ನಾನು ಅದನ್ನು ಧಿಕ್ಕರಿಸಿ, ಹೋಗೋಣ ಎಂದು ತಾಕೀತು ಮಾಡಿದೆ. ಮುಂದೆ ಸಾಗಿದಂತೆಲ್ಲ ಚೆಲ್ಲಿದ್ದ ರಕ್ತ, ನುಜ್ಜುಗುಜ್ಜಾಗಿದ್ದ ಪೊದೆಗಳು ಕಾಣಿಸಿದವು. ಮುಂದೆ ಗಾಯಗೊಂಡ ಆನೆ, ರೋಷದಿಂದ ಗಿಡ-ಮರ ಕಿತ್ತು ಎಸೆದಿದ್ದಿದ್ದನ್ನೂ ನೋಡಿದೆವು. ಮುಂದೆ ಎಷ್ಟು ಹುಡುಕಿದರೂ ಅದು ಕಾಣಿಸಲಿಲ್ಲ. ಆಗ ಕತ್ತಲು ಗಾಢವಾಗುತ್ತ ಬಂದಿದ್ದರಿಂದ, ನೋವಿನಿಂದ ಆ ಆನೆಗೆ ಮುಕ್ತಿ ಕೊಡಿಸುವುದು ಆಗಲಿಲ್ಲ ಎಂಬ ಬೇಸರದೊಂದಿಗೆ ವಾಪಸಾದೆವು.

ಬೇಟೆ ಕೊನೆಯ ದಿನಗಳು…

ವನ್ಯಜೀವಿ ಕಾಯ್ದೆಯು 1972ರಲ್ಲಿ ಜಾರಿಗೆ ಬರುತ್ತಲೇ ಬೇಟೆಗೆ ನಿಷೇಧ ವಿಧಿಸಲಾಯಿತು. ಇದು ಭಾರತದ ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಮಾಡಿದ ಉತ್ತಮ ಪ್ರಯತ್ನವೂ ಹೌದು. ಹಾಗೆಂದು ಈ ಕಾಯ್ದೆಯನ್ನು ರಾತ್ರೋರಾತ್ರಿ ಜಾರಿಗೆ ತರಲಿಲ್ಲ. ಈ ಸಂಬಂಧ ವದಂತಿಗಳು ಹೊರಬರುತ್ತಲೇ ಹವ್ಯಾಸಿ ಬೇಟೆಗಾರರು ಕಾಡಿಗೆ ನುಗ್ಗಿ ಬೇಟೆಯ ಬಯಕೆಯನ್ನು ತಣಿಸಿಕೊಳ್ಳಲು ಶುರು ಮಾಡಿದರು. ಆಗ ಅರಣ್ಯ ಇಲಾಖೆಯ ಗಮನ ನಮ್ಮಂಥವರ ಕಡೆ ಹರಿಯಿತು. ಬೇಟೆಯ ಪರವಾನಗಿ ಪಡೆದಿದ್ದ ನಮ್ಮ ಮೇಲೆ ಅವರ ಶಂಕೆ! ನನ್ನ ಲೈಸೆನ್ಸ್‌ಅನ್ನು ಇಲಾಖೆ ರದ್ದು ಮಾಡಲಿಲ್ಲ; ಆದರೆ ನವೀಕರಿಸಲೂ ಇಲ್ಲ. ಅದರರ್ಥ ಏನೆಂದರೆ, ಕೆಲವು ಅಧಿಕಾರಿಗಳ ಬಳಿ ಶಿಕಾರಿ ಲೈಸೆನ್ಸ್ ಇತ್ತು. ಅವಕಾಶ ಸಿಕ್ಕವರು ಅದನ್ನು ಬಳಸಿಕೊಂಡರು.

ಕಾಯ್ದೆ ಜಾರಿಯಾದ ಸ್ವಲ್ಪ ದಿನಗಳಲ್ಲಿ ಒಬ್ಬ ಅಧಿಕಾರಿ ಬಂಡಿಪುರ ಚೆಕ್‌ಪೋಸ್ಟ್ ಬಳಿ ಹುಲಿಯೊಂದನ್ನು ಬೇಟೆಯಾಡಿದ. ಆದರೆ ನಾನು ಅಂಥ ಕೆಲಸಕ್ಕೆ ಮುಂದಾಗಲಿಲ್ಲ. ನರಭಕ್ಷಕನ ಬೇಟೆಯಾಡಿದ್ದಕ್ಕೆ ಸಿಕ್ಕ ಪಾರಿತೋಷಕಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಿಬಿಟ್ಟೆ. ಹುಲಿ, ಚಿರತೆ ಚರ್ಮಗಳನ್ನು ಸ್ನೇಹಿತರಿಗೆ ಉಡುಗೊರೆಯಾಗಿ ಕೊಟ್ಟೆ. ನನ್ನ ತಂದೆ ಕೆನೆತ್ ಆ್ಯಂಡರ್ಸನ್ ನಿಧನರಾದ ಬಳಿಕ ಬೇಟೆಯ ನಮ್ಮೆಲ್ಲ ಸಾಮಗ್ರಿಗಳನ್ನೆಲ್ಲ ಒಂದು ಕಂಪನಿಗೆ ಕೊಟ್ಟೆ, ಆಮೇಲೆ ಅದು ಉತ್ತರ ಭಾರತದ ವ್ಯಾಪಾರಿಗೆ ಅವುಗಳನ್ನು ಮಾರಿತು. ನನ್ನ ಬೇಟೆಯ ದಿನಗಳು ಅಲ್ಲಿಗೆ ಕೊನೆಯಾದವು.

ಕನ್ನಡ ನಾಡೇ ಅವರ ಕರ್ಮಭೂಮಿ

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಡೊನಾಲ್ಡ್, ‘ಬಿನ್ನಿ ಮಿಲ್‌’ನಲ್ಲಿ ಮ್ಯಾನೇಜರ್‌ ಆಗಿ ಕೆಲಸಕ್ಕೆ ಸೇರಿದರು. ಸಮಯ ಸಿಕ್ಕಾಗಲೆಲ್ಲ ಬೇಟೆಗೆ ಹೋಗುತ್ತಿದ್ದರು. ತಂದೆ ಕೆನೆತ್, ತಾಯಿ ಬ್ಲಾಸಮ್ ನಿಧನರಾದ ಬಳಿಕ ಡೊನಾಲ್ಡ್ ಒಬ್ಬಂಟಿಯಾದರು. ಸಹೋದರಿ ಮಾರ್ಗರೇಟ್ ಜೂನ್ ಆಸ್ಟ್ರೇಲಿಯಾದಲ್ಲಿ ಇದ್ದರು. ಅವಿವಾಹಿತರಾಗಿಯೇ ಉಳಿದ ಡೊನಾಲ್ಡ್ ಅವರನ್ನು ಬಂಧುಗಳು ಇಂಗ್ಲೆಂಡಿಗೆ ಬರುವಂತೆ ಕರೆದರಾದರೂ ಇಲ್ಲಿನ ಕಾಡುಗಳನ್ನು ಬಿಟ್ಟು ಹೋಗಲು ಅವರು ಬಯಸಲಿಲ್ಲ. ‘ಬೆಂಗಳೂರಿನಲ್ಲಿ ಬದುಕುತ್ತಿರುವ ಕೊನೆಯ ಆ್ಯಂಡರ್ಸನ್ ನಾನು’ ಎನ್ನುತ್ತ ಇಲ್ಲೇ ಉಳಿದರು. ಜುಲೈ 12, 2014ರಂದು ಅವರು ಬೆಂಗಳೂರಿನಲ್ಲಿ ನಿಧನರಾದರು.

ಕಾಡನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಡೊನಾಲ್ಡ್ ಬದುಕು ಕಾಡಿನೊಂದಿಗೇ ಬೆಸೆದುಕೊಂಡಿತ್ತು. ಬೆಂಗಳೂರಿನಲ್ಲಿ ನೆಲೆಸಿದ್ದೂ ಅವರು ಕನ್ನಡಿಗರಿಗೆ ಅಪರಿಚಿತರಾಗಿಯೇ ಉಳಿದರು. ತಮ್ಮ ಶಿಕಾರಿ ಅನುಭವಗಳನ್ನು ಬರವಣಿಗೆಯಲ್ಲಿ ದಾಖಲಿಸಲು ಡೊನಾಲ್ಡ್ ಎಂದೂ ಆಸಕ್ತಿ ತೋರಲಿಲ್ಲ. ಆದರೆ ಅವರೊಂದಿಗೆ ವರ್ಷಗಟ್ಟಲೇ ಒಡನಾಡಿದ ಜೋಶುವಾ ಮ್ಯಾಥ್ಯೂ, ಬೇಟೆಯ ಅನುಭವಗಳನ್ನು ಸಂಗ್ರಹಿಸಿ ಅಕ್ಷರ ರೂಪಕ್ಕೆ ತಂದಿದ್ದಾರೆ.

ದಿ ಲಾಸ್ಟ್‌ ವೈಟ್‌ ಹಂಟರ್

ಲೇಖಕರು: ಡೊನಾಲ್ಡ್ ಆ್ಯಂಡರ್ಸನ್, ಜೋಶುವಾ ಮ್ಯಾಥ್ಯೂ

ಪ್ರಕಾಶನ: ಇಂಡಸ್ ಸೋರ್ಸ್‌ ಬುಕ್ಸ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.