ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಸ ಪ್ರತಿಕ್ರಿಯೆ; ಶಾ ರೋಡ್‌ ಷೋ ಮೊಟಕು

ಪಿರಿಯಾಪಟ್ಟಣದಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಸೇರದ ಜನ
Last Updated 5 ಮೇ 2018, 19:30 IST
ಅಕ್ಷರ ಗಾತ್ರ

ಮೈಸೂರು: ನಿರೀಕ್ಷೆಯಷ್ಟು ಜನ ಸೇರದೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಶನಿವಾರ ಪಿರಿಯಾಪಟ್ಟಣದಲ್ಲಿ ಅರ್ಧದಲ್ಲೇ ರೋಡ್‌ ಷೋ ಮೊಟಕುಗೊಳಿಸಿದರು.

ಬಿಜೆಪಿ ಅಭ್ಯರ್ಥಿ ಎಸ್‌.ಮಂಜುನಾಥ್‌ ಅವರ ಪರ ಮತ ಯಾಚಿಸಲು ಎಪಿಎಂಸಿ ಕಚೇರಿ ಆವರಣದಿಂದ ಪ್ರವಾಸಿ ಮಂದಿರದವರೆಗೆ ಸುಮಾರು 1.5 ಕಿ.ಮೀ ರೋಡ್‌ ಷೋ ನಡೆಸಲು ಉದ್ದೇಶಿಸಲಾಗಿತ್ತು. ಬೆಳಿಗ್ಗೆ 11.30ಕ್ಕೆ ಬರಬೇಕಿದ್ದ ಅವರು ಒಂದು ಗಂಟೆ ತಡವಾಗಿ ಬಂದರು.

ಆರಂಭದಲ್ಲಿ ಸಾಕಷ್ಟು ಜನ ಸೇರಿದ್ದರು. ಆದರೆ, ಶಾ ಅವರಿದ್ದ ತೆರೆದ ವಾಹನ ಮುಂದೆ ಸಾಗಿದಂತೆ ಜನರ ಸಂಖ್ಯೆ ಕಡಿಮೆಯಾಯಿತು. ಇದನ್ನು ಕಂಡು ವಿಚಲಿತರಾದ ಅವರು ಅರ್ಧದಲ್ಲೇ (ಬಸವೇಶ್ವರ ವೃತ್ತದ ಬಳಿ) ಪ್ರಚಾರ ವಾಹನದಿಂದ ಇಳಿದರು. ಅಲ್ಲಿಂದ ಹೆಲಿಪ್ಯಾಡ್‌ಗೆ ತೆರಳಿ, ತಿ.ನರಸೀಪುರದತ್ತ ಪ್ರಯಾಣ ಬೆಳೆಸಿದರು.

ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದರು. ಆದರೆ ಆ ಸಂಖ್ಯೆ 2 ಸಾವಿರವನ್ನೂ ದಾಟಲಿಲ್ಲ. ಈ ಬಗ್ಗೆ ಶಾ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

‘ತಿ.ನರಸೀಪುರ ಮತ್ತು ಮೈಸೂರಿನ ಪ್ರಚಾರ ಕಾರ್ಯಕ್ರಮಗಳಲ್ಲಿ ನಿಗದಿತ ಸಮಯಕ್ಕೆ ಪಾಲ್ಗೊಳ್ಳುವ ಉದ್ದೇಶದಿಂದ ಪ್ರಚಾರವನ್ನು ಅರ್ಧಕ್ಕೇ ಮೊಟಕುಗೊಳಿಸಿದರು’ ಎಂದು ಸ್ಥಳೀಯ ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.

ವರುಣಾ ಕಾರ್ಯಕ್ರಮ ರದ್ದು: ಶಾ ಅವರು ವರುಣಾ ವಿಧಾನಸಭಾ ಕ್ಷೇತ್ರದ ಹದಿನಾರು ಎಂಬ ಗ್ರಾಮದಲ್ಲಿ ಶನಿವಾರ ನಡೆಸಲು ಉದ್ದೇಶಿಸಿದ್ದ ರೋಡ್‌ ಷೋ ಮತ್ತು ಪ್ರಚಾರ ಸಭೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ಕೈತಪ್ಪಿದ್ದಕ್ಕೆ ಬಿಜೆಪಿಯ ಕೆಲ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಹದಿನಾರು ಗ್ರಾಮಕ್ಕೆ ಶಾ ಬಂದರೆ ವಿಜಯೇಂದ್ರ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಬಹುದು ಎಂಬ ಕಾರಣಕ್ಕೆ ಪ್ರಚಾರ ರದ್ದುಗೊಳಿಸಲಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗ್ರಾಮದಲ್ಲಿ ಬೆಳಿಗ್ಗೆ 11.15ರಿಂದ 12.45ರವರೆಗೆ ಪ್ರಚಾರ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕ್ರಮಕ್ಕೆ ಸಿದ್ಧತೆ ಕೂಡ ನಡೆದಿತ್ತು.

‘ವರುಣಾ ಕ್ಷೇತ್ರದಲ್ಲಿ ಪ್ರಚಾರ ರದ್ದು ಮಾಡಿಲ್ಲ. ಅದನ್ನು ಹದಿನಾರು ಗ್ರಾಮದಿಂದ ತಿ.ನರಸೀಪುರ ಪಟ್ಟಣಕ್ಕೆ ಬದಲಾಯಿಸಲಾಗಿತ್ತು. ತಿ.ನರಸೀಪುರದ ಕೆಲವು ಭಾಗಗಳು ವರುಣಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ’ ಎಂದು ಬಿಜೆಪಿ ಮುಖಂಡರು ಸಮಜಾಯಿಷಿ ನೀಡಿದರು.

ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ಮೈಸೂರು ನಗರದಲ್ಲಿ ಶನಿವಾರ ಸಂಜೆ ನಡೆದ ಅಮಿತ್‌ ಶಾ ಅವರ ರೋಡ್‌ ಷೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.

ನರಸಿಂಹರಾಜ, ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರಗಳಲ್ಲಿ ಮೂರು ಗಂಟೆಗೂ ಅಧಿಕ ಸಮಯ ಶಾ ರೋಡ್‌ ಷೋ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT