ಶನಿವಾರ, ಫೆಬ್ರವರಿ 27, 2021
31 °C
ಎಚ್‌.ಎಸ್‌.ದೊರೆಸ್ವಾಮಿ ಮನವಿ

ಸರಸ್ವತಿ ಮಂದಿರದಂತಹ ಪರಿಷತ್ತನ್ನು ಅಪವಿತ್ರಗೊಳಿಸದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಸ್ವತಿ ಮಂದಿರದಂತಹ ಪರಿಷತ್ತನ್ನು ಅಪವಿತ್ರಗೊಳಿಸದಿರಿ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತು ಸರಸ್ವತಿ ಮಂದಿರ. ಇದನ್ನು ಅಪವಿತ್ರಗೊಳಿಸುವ ಕೆಲಸ ಆಗಬಾರದು. ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ ಚುನಾವಣೆಯು ಇತರ  ಚುನಾವಣೆಗಳಂತಾಗುವುದು ಬೇಡ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅಭಿಪ್ರಾಯಪಟ್ಟರು.

ಶನಿವಾರ ಪರಿಷತ್ತಿನ 104ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ಇಲ್ಲಿ ಪದಾಧಿಕಾರಿಗಳಾಗಿ ಆಯ್ಕೆ ಆಗುವುದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದವರ ಬಗ್ಗೆ ಕೇಳಿದ್ದೇನೆ. ಈ ಆಯ್ಕೆಗೆ ಪರ್ಯಾಯ ಚಿಂತನೆ ಅಗತ್ಯ’ ಎಂದರು.

‘ಈ ಸಂಸ್ಥೆ ಕನ್ನಡಿಗರೆಲ್ಲರ ಸ್ವತ್ತು. ಎಲ್ಲ ಕನ್ನಡಿಗರು ಸದಸ್ಯರಾಗಬೇಕು’ ಎಂದರು.

ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ‘ಕನ್ನಡದ ಸ್ಥಿತಿ ಇಂದು ಸರಿ ಇಲ್ಲ. ಇದಕ್ಕೆ ಮುಖ್ಯ ಕಾರಣ ಸರ್ಕಾರಿ ಶಾಲೆಗಳು ಸರಿ ಇಲ್ಲದಿರುವುದು. ಅನೇಕರು ಕನ್ನಡ ಶಾಲೆ ಉಳಿಯಬೇಕು ಎಂದು ಹೋರಾಡಿದರೇ ಹೊರತು ಶಾಲೆಗಳನ್ನು ಉದ್ಧಾರ ಮಾಡಬೇಕು ಎಂದು ಯೋಚಿಸಿ ಕೆಲಸ ಮಾಡಿಲ್ಲ. ಇನ್ನು ಮುಂದಾದರೂ ಶಾಸಕರಾದವರು ತಮ್ಮ ಅಧಿಕಾರಾವಧಿಯಲ್ಲಿ ಹತ್ತು ಸರ್ಕಾರಿ ಶಾಲೆಗಳನ್ನಾದರೂ ಅಭಿವೃದ್ಧಿ ಮಾಡಬೇಕು. ಆಗ ಐದೇ ವರ್ಷಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳ ಪರಿಸ್ಥಿತಿ ಸುಧಾರಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

* ಬಿ.ಟಿ.ಲಲಿತಾ ನಾಯಕ್‌ ಹಾಗೂ ರಾ.ನಂ.ಚಂದ್ರಶೇಖರ ಮುಂದಾಳತ್ವ ವಹಿಸಿ ದೊರೆಸ್ವಾಮಿ ಅವರ ಕುರಿತು ಕೃತಿ ರಚಿಸಿದರೆ, ಅದನ್ನು ಪರಿಷತ್‌ ವತಿಯಿಂದ ಪ್ರಕಟಿಸುತ್ತೇವೆ.

- ಮನು ಬಳಿಗಾರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.