ಸೋಮವಾರ, ಮಾರ್ಚ್ 8, 2021
25 °C
‘ಮರ್ಯಾದೆ ಬಿಟ್ಟು ಮಾತನಾಡಿದರೆ, ನಾನೂ ಮಾತನಾಡಲೇ ಬೇಕು’

ದೇವೇಗೌಡ ನನ್ನನ್ನು ಬೆಳೆಸಲಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವೇಗೌಡ ನನ್ನನ್ನು ಬೆಳೆಸಲಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ‘ದೇವೇಗೌಡ ನನ್ನನ್ನು ಬೆಳೆಸಲಿಲ್ಲ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಅವರ ಯಾವ ಪಾತ್ರವೂ ಇಲ್ಲ. ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

‘ನನ್ನನ್ನು ಮೊದಲು ಗುರುತಿಸಿದವರು ರಾಮಕೃಷ್ಣ ಹೆಗಡೆ. ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ನಂತರ ಮಂತ್ರಿ ಮಾಡಿದರು. ಇದರಲ್ಲಿ ಗೌಡರ ಪಾತ್ರ ಇಲ್ಲ’ ಎಂದು ಅವರು ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ನಡೆದ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.

‘ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿರುವ ಜೆಡಿಎಸ್‌ ಬಗ್ಗೆ ಏನೂ ಮಾತನಾಡಲ್ಲ. ಅವರ ಬಗ್ಗೆ ಮೃದು ಧೋರಣೆಯಂತೂ ಇಲ್ಲ. ರಾಜಕೀಯ ಎದುರಾಳಿಯಾಗಿ ದೇವೇಗೌಡರ ಜತೆ ಹೇಗೆ ನಡೆದುಕೊಳ್ಳಬೇಕೊ ಹಾಗೆ ನಡೆದುಕೊಂಡಿದ್ದೇನೆ. ಆದ್ದರಿಂದ, ಹಿರಿಯರಿಗೆ ಗೌರವ ಕೊಟ್ಟಿಲ್ಲ ಎಂದು ಭಾವಿಸುವ ಅಗತ್ಯವಿಲ್ಲ. ಹಿರಿಯರು ಎನ್ನುವ ಕಾರಣಕ್ಕೆ ಅವರ ಟೀಕೆಗಳಿಗೆ ಉತ್ತರ ಕೊಡದೇ ಸುಮ್ಮನಿರಲು ಆಗುತ್ತದೆಯೆ’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

‘ಯಾರಾದರೂ ಮರ್ಯಾದೆ ಬಿಟ್ಟು ಮಾತನಾಡಿದರೆ, ನಾವೂ ಮಾತನಾಡಲೇ ಬೇಕಲ್ಲ’ ಎಂದು ದೇವೇಗೌಡರಿಗೆ ತಿರುಗೇಟು ನೀಡಿದರು.

ದೇವೇಗೌಡ ನನ್ನನ್ನು ಗೆಲ್ಲಿಸಿದ್ನಾ?: ‘ಮೊದಲ ಬಾರಿಗೆ ನಾನು ಪಕ್ಷೇತರನಾಗಿ ಗೆದ್ದೆ. ಆಗೇನು ದೇವೇಗೌಡ ನನ್ನನ್ನು ಗೆಲ್ಲಿಸಿದ್ನಾ, 1989 ರಲ್ಲೂ ಗೆದ್ದೆ; ಆಗಲೂ ಗೆಲುವಿಗೆ ದೇವೇಗೌಡನೇ ಕಾರಣನಾ, ಇವರು 1989ರ ಸಮಾಜವಾದಿ ಜನತಾ ಪಕ್ಷ (ಸಜಪ) ಅಂತ ಕಟ್ಟಿದ್ದರು. ಎಷ್ಟು ಸೀಟುಗಳನ್ನು ಗೆದ್ದರು. ಆಗ ಮೂರು ಸ್ಥಾನಗಳನ್ನು ಮಾತ್ರ ಗೆದ್ದರು. ಗೌಡ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿ ಸೋತಿಲ್ಲವಾ’ ಎಂದು ಏಕವಚನದಲ್ಲೇ ಹರಿಹಾಯ್ದರು.

‘1994 ರ ಚುನಾವಣೆಯಲ್ಲಿ ಹೆಗಡೆ, ಪಟೇಲ್‌, ಬೊಮ್ಮಾಯಿ, ನಾನು, ಸಿಂಧ್ಯ, ಪ್ರಕಾಶ್‌, ರಾಚಯ್ಯ ಒಗ್ಗಟ್ಟಾಗಿದ್ದರಿಂದಲೇ ಜನತಾದಳ ಗೆಲುವು ಸಾಧಿಸಿತು. ನಮ್ಮೆಲ್ಲರಿಂದಾಗಿಯೇ ದೇವೇಗೌಡ ಮುಖ್ಯಮಂತ್ರಿ ಆಗಿದ್ದು. ಏಕಾಂಗಿಯಾಗಿ ಪಕ್ಷವನ್ನು ಗೆಲ್ಲಿಸಲಿಲ್ಲ’ ಎಂದು ಸಿದ್ದರಾಮಯ್ಯ ಕೆಣಕಿದರು.

‘ಬಿಜೆಪಿ ಜತೆ ಸೇರಿ ಸರ್ಕಾರ ಮಾಡಲು ನಾನು ಎಲ್‌.ಕೆ. ಆಡ್ವಾಣಿಯವರನ್ನು ಭೇಟಿ ಮಾಡಿದ್ದೆ ಎಂದು ದೇವೇಗೌಡ ಹೇಳಿರುವುದು ಅಪ್ಪಟ ಸುಳ್ಳು. ಆಡ್ವಾಣಿಯವರ ಪರಿಚಯ ಚೆನ್ನಾಗಿಯೆ ಇದೆ. ಅವರು ಹಿಂದೆ ಜನತಾ ಪಕ್ಷದಲ್ಲಿದ್ದರು. ಅವರನ್ನು ನಾನೇಕೆ ಭೇಟಿ ಮಾಡಲಿ’ ಎಂದೂ ಅವರು ಪ್ರಶ್ನಿಸಿದರು.

‘ರಾಜ್ಯದಲ್ಲಿ ಜನತಾದಳ ಇಬ್ಭಾಗವಾಗಿ ಜೆಡಿಯು ಮತ್ತು ಜೆಡಿಎಸ್‌ ಹುಟ್ಟಿಕೊಂಡಾಗ, ಜೆಡಿಎಸ್ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಿದ್ದರೂ ನಾನು ಜೆಡಿಎಸ್‌ನಲ್ಲೇ ಉಳಿದೆ. ಜಾರ್ಜ್‌ಫರ್ನಾಂಡೀಸ್‌ ಆಪ್ತರಾಗಿದ್ದರು. ಅವರು ಕರೆದರೂ ಜೆಡಿಯುಗೆ ಹೋಗಲ್ಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ದೇವೇಗೌಡ ಒಬ್ಬ ನಾಯಕ ಎನ್ನುವುದನ್ನು ಒಪ್ಪುತ್ತೇನೆ. ಮುಖ್ಯಮಂತ್ರಿ, ಪ್ರಧಾನಿ ಆಗಿದ್ದವರು. ಅವರು ಏನೂ ಅಲ್ಲ ಎಂದು ಹೇಳುವುದಿಲ್ಲ. ಆದರೆ, ನನ್ನನ್ನು ಬೆಳೆಸಿದೆ ಎಂದು ಹೇಳಿಕೊಳ್ಳುವುದು ಸರಿಯಲ್ಲ’ ಎಂದರು.

‘ಬಿಜೆಪಿ ಜತೆ ಹೋದರೆ ಕುಮಾರಸ್ವಾಮಿಯನ್ನು ಮನೆಯಿಂದ ಒದ್ದು ಓಡಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಹಿಂದೆ ಬಿಜೆಪಿ ಜತೆ ಸೇರಿ ಜೆಡಿಎಸ್‌ ಸರ್ಕಾರ ಮಾಡಲು ಹೊರಟಾಗ ನನ್ನ ಹೆಣದ ಮೇಲೆ ಸರ್ಕಾರ ಮಾಡಲಿ ಎಂದು ಹೇಳಿದ್ದನ್ನೂ ನೋಡಿದ್ದೇವೆ’ ಎಂದು ಸಿದ್ದರಾಮಯ್ಯ ವಂಗ್ಯವಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.