ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠುವಾ ಪ್ರಕರಣ: ಪಠಾಣ್‌ಕೋಟ್‌ಗೆ ವರ್ಗ

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಠುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಪಂಜಾಬ್‌ನ ಪಠಾಣ್‌ಕೋಟ್‌ ನ್ಯಾಯಾಲಯಕ್ಕೆ ವರ್ಗಾಯಿಸಿದ್ದು, ಸಿಬಿಐ ವಿಚಾರಣೆಗೆ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ನಮ್ಮ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ವಕೀಲೆ ದೀಪಿಕಾ ಸಿಂಗ್ ರಾಜಾವತ್‌ ಅವರಿಗೆ ಜೀವ ಬೆದರಿಕೆ ಇದೆ. ಪ್ರಕರಣದ ವಿಚಾರಣೆಯನ್ನು ಕಠುವಾದಿಂದ ಚಂಡಿಗಡಕ್ಕೆ ವರ್ಗಾಯಿಸಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು.

ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಆರೋಪಿಗಳಲ್ಲಿ ಇಬ್ಬರು ಅರ್ಜಿ ಸಲ್ಲಿಸಿದ್ದರು.  ಪ್ರಕರಣದ ವಿಚಾರಣೆಯನ್ನು ಚಿತ್ರೀಕರಣ ಮಾಡಬೇಕು, ವಿಳಂಬ ಮಾಡದೆ ನಿತ್ಯವೂ ವಿಚಾರಣೆ ನಡೆಸಿ, ತ್ವರಿತಗತಿಯಲ್ಲಿ ಮುಗಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಅನ್ವಯವಾಗುವ ‘ರಣಬೀರ್ ದಂಡ ಸಂಹಿತೆ’ ಪ್ರಕಾರ ವಿಚಾರಣೆ ನಡೆಸಬೇಕು ಎಂದು ಅದು ನಿರ್ದೇಶಿಸಿದೆ.

ಭದ್ರತೆ ಮುಂದುವರಿಸಲು ಸೂಚನೆ: ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಕೌಟುಂಬಿಕ ಸ್ನೇಹಿತರು, ಸಂತ್ರಸ್ತೆ ಪರ ವಕೀಲರಿಗೆ ನೀಡಿರುವ ಭದ್ರತೆ ಮುಂದುವರಿಸಬೇಕು. ವಿಚಾರಣೆಗೆ ಸಂಬಂಧಿಸಿದ ಹೇಳಿಕೆಗಳು ಮತ್ತು ದಾಖಲೆಗಳನ್ನು ಉರ್ದುವಿನಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಪ್ರಕರಣದ ಬಾಲಾಪರಾಧಿಗೆ ನೀಡಿರುವ ಭದ್ರತೆಯನ್ನೂ ಮುಂದುವರಿಸಬೇಕು ಎಂದು ಪೀಠ ಸೂಚಿಸಿದೆ.  ಮುಂದಿನ ವಿಚಾರಣೆಯನ್ನು ಜುಲೈಗೆ ನಿಗದಿಪಡಿಸಿದೆ.

ಜನವರಿ 10ರಂದು ಜಮ್ಮುವಿನ ಕಠುವಾ ಜಿಲ್ಲೆಯ ರಸಾನಾ ಗ್ರಾಮದ ಅಲೆಮಾರಿ ಜನಾಂಗಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಏಳು ದಿನಗಳ ಕಾಲ ಅತ್ಯಾಚಾರ ಎಸಗಲಾಗಿತ್ತು. ಬಳಿಕ ಆಕೆಯನ್ನು ಕೊಲೆ ಮಾಡಲಾಗಿತ್ತು. ಒಂದು ವಾರದ ಬಳಿಕ ಕಾಡಿನಲ್ಲಿ ಬಾಲಕಿಯ ಶವ ದೊರೆತಿತ್ತು.

ಪ್ರಕರಣದ ತನಿಖೆ ಆರಂಭಿಸಿದ್ದ ರಾಜ್ಯ ಪೊಲೀಸ್‌ ಇಲಾಖೆಯ ಅಪರಾದ ದಳ ಕಳೆದ ವಾರ ಕಠುವಾದ ನ್ಯಾಯಾಲಯಕ್ಕೆ ಏಳು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಬಾಲಾಪರಾಧಿ ವಿರುದ್ಧ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸಿತ್ತು. ಅದರಲ್ಲಿ ಬಾಲಕಿಯ ಅಪಹರಣ, ಆಕೆಗೆ ಮಾದಕವಸ್ತು ನೀಡಿರುವುದು ಮತ್ತು ದೇವಾಲಯದ ಒಳಗೆ ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿದ ಕುರಿತು ವಿವರಗಳಿದ್ದವು.

ಹೊಸ ರಿಟ್‌

ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೊಸದಾಗಿ ಮತ್ತೆ ರಿಟ್‌ ಅರ್ಜಿ ಸಲ್ಲಿಸುವುದಾಗಿ ಆರೋಪಿಗಳ ಪರ ವಕೀಲ ಅಂಕುರ್‌ ಶರ್ಮಾ ತಿಳಿಸಿದ್ದಾರೆ. ‘ಸಿಬಿಐ ವಿಚಾರಣೆಯ ಬೇಡಿಕೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿಲ್ಲ. ಪ್ರಕರಣದ ತ್ವರಿತ ವಿಚಾರಣೆಗೆ ನಿರ್ದೇಶಿಸಿದೆ ಮತ್ತು ಪಠಾಣ್‌ಕೋಟ್‌ಗೆ ವರ್ಗಾಯಿಸಿದೆಯಷ್ಟೆ’ ಎಂದು ಹೇಳಿದ್ದಾರೆ.

‘ನ್ಯಾಯ ಸಿಗುವವರೆಗೆ ಹೋರಾಟ’

ಜಮ್ಮು : ಪ್ರಕರಣದ ವಿಚಾರಣೆಯನ್ನು ಪಠಾಣ್‌ಕೋಟ್‌ಗೆ ಸ್ಥಳಾಂತರಿಸಿದ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ಅತ್ಯಾಚಾರ ಸಂತ್ರಸ್ತೆಯ ತಂದೆ ಸ್ವಾಗತಿಸಿದ್ದಾರೆ.

‘ನಮಗೆ ನ್ಯಾಯ ಮಾತ್ರ ಬೇಕಿದೆ. ಸಿಬಿಐ ತನಿಖೆಯ ಬಗ್ಗೆ ಒಲವಿಲ್ಲ. ಸಿಬಿಐ ಬಗ್ಗೆ ಗೊತ್ತಿಲ್ಲ. ನ್ಯಾಯಾಂಗ ಮತ್ತು ಸರ್ಕಾರದ ಬಗ್ಗೆ ಸಂಪೂರ್ಣ ನಂಬಿಕೆ ಇದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಪೊಲೀಸ್‌ ತನಿಖೆಯ ಕುರಿತು ಸಮಾಧಾನವಿದೆ. ನ್ಯಾಯ ದೊರಕುವವರೆಗೂ ವಿಶ್ರಮಿಸುವುದಿಲ್ಲ. ಆರೋಪಿಗಳ ಕ್ರೌರ್ಯಕ್ಕೆ ಗರಿಷ್ಠ ಶಿಕ್ಷೆ ಆಗಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT