ಸೋಮವಾರ, ಮಾರ್ಚ್ 8, 2021
24 °C

ಬಿದಿರು ಪೈಪ್‌ನಲ್ಲಿ ಎಳನೀರು

ನವೀನ್‌ ಕುಮಾರ್‌ ಜಿ. Updated:

ಅಕ್ಷರ ಗಾತ್ರ : | |

ಬಿದಿರು ಪೈಪ್‌ನಲ್ಲಿ ಎಳನೀರು

ತ್ಯಾಜ್ಯಮುಕ್ತ ಭಾರತದ ಸಂಕಲ್ಪ ಸಾಕಾರಕ್ಕಾಗಿ ನಗರದಲ್ಲಿ ‘ಬೇರ್ ನೆಸೆಸಿಟೀಸ್’ ಶ್ರಮಿಸುತ್ತಿದೆ. ‘ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುವ ಮೂಲಕ ಮಾತ್ರ ನಗರಗಳಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’  ಎನ್ನುವುದು ಕಂಪನಿಯ ಸಂಸ್ಥಾಪಕಿ ಸಹರ್ ಮನ್ಸೂರ್ ಅವರ ವಿಶ್ವಾಸ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪರಿಸರ ಅರ್ಥಶಾಸ್ತ್ರ ಮತ್ತು ಕಾನೂನು ವಿಷಯದಲ್ಲಿ ಎಂ.ಫಿಲ್ ಪದವಿ ಪಡೆದಿರುವ ಸಹರ್ ವಿಶ್ವ ಆರೋಗ್ಯ ಸಂಸ್ಥೆಗಾಗಿ (ಡಬ್ಲ್ಯುಎಚ್ಒ) ಜಿನೀವಾದಲ್ಲಿ ಕೆಲಸ ಮಾಡಿದ್ದಾರೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ದೈನಂದಿನ ಬದುಕಿನಲ್ಲಿ ಸಾಧ್ಯವಾದಷ್ಟೂ ಕಡಿಮೆ ಬಳಸುತ್ತಾರೆ.

ಪ್ಲಾಸ್ಟಿಕ್ ವಸ್ತುಗಳ ಬದಲು ಮಣ್ಣಿನಲ್ಲಿ ಕರಗುವ ವಸ್ತುಗಳನ್ನು ಬಳಕೆ ಮಾಡಿದರೆ ಪರಿಸರದ ಮೇಲಾಗುವ ಹಾನಿಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡಬಹುದು ಎಂಬ ಆಶಯದೊಂದಿಗೆ ಸಹರ್ ಅವರ 'ಬೇರ್ ನೆಸೆಸಿಟೀಸ್' ವಾಣಿಜ್ಯ ಸಂಸ್ಥೆ ರೂಪುಗೊಂಡಿದೆ. ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಆರಂಭಿಸಿರುವ ಈ ಸಂಸ್ಥೆಯು ಇಂದು ಆನ್‌ಲೈನ್ ಮೂಲಕ ಪರಿಸರ ಸ್ನೇಹಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

‘ನಾವು ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿರುವ ಕೆಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಬಿದಿರಿನ ಸ್ಟ್ರಾ (ಬಿದಿರು ಪೈಪ್), ಸ್ಟೀಲ್ ಸ್ರ್ಟಾ, ಹಲ್ಲುಜ್ಜುವ ಬಿದಿರಿನ ಬ್ರಷ್‌, ಪೇಪರ್ ಚೀಲ ಮುಖ್ಯವಾದವುಗಳು. ರೆಸ್ಟೋರೆಂಟ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಸ್ಟ್ರಾ ಬದಲು ಸ್ಟೀಲ್ ಅಥವಾ ಬಿದಿರಿನ ಸ್ಟ್ರಾ ಬಳಸುವಂತೆ ಮನವೊಲಿಸಿ ಅವರಿಗೆ ನಾವು ಇಂತಹ ಉತ್ಪನ್ನಗಳನ್ನು ಪೂರೈಸುತ್ತಿದ್ದೇವೆ’ ಎನ್ನುತ್ತಾರೆ ಸಹರ್.

‘ಎಳನೀರು ವ್ಯಾಪಾರಿಗಳಲ್ಲಿ ಪ್ಲಾಸ್ಟಿಕ್ ಸ್ಟ್ರಾ ಬದಲು ಬಿದಿರಿನ ಸ್ಟ್ರಾ ಬಳಸುವಂತೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಆರೋಗ್ಯ ಕಾಪಾಡಲು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡಲು ಸಾಧ್ಯ. ರಾಸಾಯನಿಕ ಮುಕ್ತ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಿದ ಸೌಂದರ್ಯವರ್ಧಕ ವಸ್ತುಗಳನ್ನೂ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಅವರು.

'ಬಿದಿರು ಅತಿ ಶೀಘ್ರ ಬೆಳೆಯುವ ಸಸ್ಯ. ಇದರಿಂದ ಹೆಚ್ಚು ಉತ್ಪನ್ನಗಳನ್ನು ಪಡೆಯಲು ಸಾಧ್ಯ. ಅಲ್ಲದೆ ಈ ವಸ್ತುಗಳು ಬಿಸಾಡಿದ ಬಳಿಕ ಮಣ್ಣಿನಲ್ಲಿ ಬೇಗನೆ ಕರಗುತ್ತವೆ. ಪರಿಸರಕ್ಕೂ ಯಾವುದೇ ಹಾನಿ ಇಲ್ಲ. ರೈತರಿಂದ ನೇರವಾಗಿ ಬಿದಿರು ಖರೀದಿಸಿ ಅವರಿಗೆ ಪ್ರೋತ್ಸಾಹ ನೀಡುತ್ತೇವೆ’ ಎಂದು ಅವರು ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಬೇರ್ ನೆಸೆಸಿಟೀಸ್ ಸಂಸ್ಥೆಯು ವಿವಿಧ ಕಂಪನಿಗಳಿಗೆ ತ್ಯಾಜ್ಯ ನಿರ್ವಹಣೆ ಕುರಿತು ಮಾರ್ಗದರ್ಶನವನ್ನೂ ನೀಡುತ್ತಿದೆ. ಅಲ್ಲದೆ ಮದುವೆ ಮೊದಲಾದ ಸಮಾರಂಭಗಳಲ್ಲಿ ಹೇಗೆ ತ್ಯಾಜ್ಯ ಕಡಿಮೆ ಮಾಡಬಹುದು ಎಂಬುದರ ಬಗ್ಗೆಯೂ ಸಲಹೆ ನೀಡುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಆನ್‌ಲೈನ್ ಮೂಲಕ ಮಾತ್ರವಲ್ಲದೆ ಮುಂಬೈ, ಗೋವಾ, ಕೋಲ್ಕತ್ತ, ಕೊಚ್ಚಿ ಮೊದಲಾದ ನಗರಗಳಲ್ಲೂ ಸಂಸ್ಥೆಯು ಮಾರಾಟ ಮಳಿಗೆಗಳನ್ನು ಹೊಂದಿದೆ. ‘ಮುಂದಿನ ದಿನಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಜೊತೆ ಸೇರಿ ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಶ್ರಮಿಸುವ ಗುರಿ ಹೊಂದಿದ್ದೇವೆ’ ಎಂದು ಸಹರ್ ತಮ್ಮ ಕಂಪನಿಯ ಆಶಯಗಳನ್ನು ವಿವರಿಸುತ್ತಾರೆ.

ಸಂಪರ್ಕಕ್ಕೆ: barenecessities.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.