ಬುಧವಾರ, ಮಾರ್ಚ್ 3, 2021
25 °C

ಅಮೆರಿಕದಲ್ಲಿ ಕನ್ನಡಿಗರ ಧ್ವನಿಯಾಗಿರುವ ‘ಅಕ್ಕ’

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಅಮೆರಿಕದಲ್ಲಿ ಕನ್ನಡಿಗರ ಧ್ವನಿಯಾಗಿರುವ ‘ಅಕ್ಕ’

* ಅಮೆರಿಕದಲ್ಲಿ ‘ಅಕ್ಕ’ದ ಚಟುವಟಿಕೆ ಹೇಗೆ ನಡೆಯುತ್ತಿವೆ?

ಅಮೆರಿಕದ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ‘ಅಕ್ಕ’ ರಚನೆಯಾಗಿ 20 ವರ್ಷಗಳಾಗಿವೆ. ಈ ಅವಧಿಯಲ್ಲಿ ಅದು ಅಮೆರಿಕದಲ್ಲಿನ ಕನ್ನಡಿಗರ ಕಷ್ಟ, ಸುಖಗಳಿಗೆ ಧ್ವನಿಯಾಗಿದೆ. ಕನ್ನಡಿಗರ ಅಭಿವೃದ್ಧಿಗೂ ಕೊಡುಗೆ ನೀಡಿದೆ. ಪ್ರಮುಖವಾಗಿ ಕನ್ನಡಿಗರನ್ನು ಸಂಘಟಿಸುವುದರ ಜತೆಗೆ ಕನ್ನಡತನವನ್ನು ಅಮೆರಿಕದಲ್ಲಿ ಉಳಿಸಿ, ಬೆಳೆಸುತ್ತಿದೆ. ಕನ್ನಡ ಸಂಸ್ಕೃತಿ, ಕಲೆ, ಸಾಹಿತ್ಯ ಬೆಳವಣಿಗೆ ನಿಟ್ಟಿನಲ್ಲೂ ಕೆಲಸ ಮಾಡುತ್ತಿದೆ. ಕನ್ನಡಿಗರ ಉದ್ಯೋಗ, ಕೌಶಲವೃದ್ಧಿಯ ಜತೆಗೆ ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪ್ರೋತ್ಸಾಹ, ಸಹಕಾರ, ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಿದೆ. ಎಲ್ಲ ಕನ್ನಡಿಗರ ಸಹಕಾರದಿಂದ ಒಕ್ಕೂಟ ಬೆಳೆಯುತ್ತಿದೆ.

* 2018ರ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಎಲ್ಲಿ ಮತ್ತು ಯಾವಾಗ ನಡೆಯುತ್ತದೆ? ಸಿದ್ಧತೆ ಹೇಗಿದೆ?

ಈ ಬಾರಿಯದ್ದು 10ನೇ ವಿಶ್ವ ಕನ್ನಡ ಸಮ್ಮೇಳನ. ಟೆಕ್ಸಾಸ್‌ನ ಡಾಲಾಸ್‌ ನಗರದ ಶೆರ್ಟನ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 2ರವರೆಗೆ ಸಮ್ಮೇಳನ ನಡೆಯಲಿದೆ. ಅಗತ್ಯ ಸಿದ್ಧತಾ ಕಾರ್ಯ ನಡೆಸಲಾಗುತ್ತಿದೆ. ಸಮ್ಮೇಳನಕ್ಕೆ ಸಂಬಂಧಿಸಿದಂತೆ ಅಮೆರಿಕದ ವಿವಿಧ ರಾಜ್ಯ, ನಗರಗಳಲ್ಲಿ ವಾಕಥಾನ್‌, ಮ್ಯಾರಥಾನ್‌ಗಳನ್ನು ಆಯೋಜಿಸಲಾಗುತ್ತಿದೆ. ವಾಕಥಾನ್‌ಗೆ ಮೈಸೂರಿನಲ್ಲಿಯೇ ಚಾಲನೆ ನೀಡಲಾಗಿತ್ತು.

* ಈ ಬಾರಿಯ ಸಮ್ಮೇಳನದ ವಿಶೇಷತೆಗಳೇನು?

ಈ ಸಲ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸಲು ‘ಅಕ್ಕ’ ಪಣತೊಟ್ಟಿದೆ. ಅದಕ್ಕಾಗಿ ಕ್ಯಾನ್ಸರ್‌ ಪತ್ತೆ ಮಾಡುವ ಘಟಕವನ್ನು ಹೊಂದಿರುವ ‘ಮೆಮೊಗ್ರಾಫಿ’ ಬಸ್‌ ಅನ್ನು ಕರ್ನಾಟಕಕ್ಕೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದೇವೆ. ಇದಕ್ಕೆ ಅಂದಾಜು ₹ 2 ಕೋಟಿ ಖರ್ಚಾಗಬಹುದು. ರಾಜ್ಯದ ಯಾವುದಾದರೂ ಪ್ರತಿಷ್ಠಿತ ಆಸ್ಪತ್ರೆಯ ಸಹಯೋಗದೊಂದಿಗೆ ಈ ಯೋಜನೆ ಕೈಗೊಳ್ಳಲು ಯೋಜಿಸಲಾಗಿದೆ. ಈ ವಾಹನದ ಮೂಲಕ ರಾಜ್ಯದ ಗ್ರಾಮೀಣ ಭಾಗದವರ ಆರೋಗ್ಯ ರಕ್ಷಣೆಗೆ ‘ಅಕ್ಕ’ ಒತ್ತು ನೀಡಲಿದೆ.

* ಸಮ್ಮೇಳನಕ್ಕೆ ಅತಿಥಿಗಳು, ಕಲಾವಿದರ ಆಯ್ಕೆ ಆಗಿದೆಯಾ?

ಇನ್ನೂ ಅಂತಿಮವಾಗಿಲ್ಲ. ಈ ಕಾರ್ಯಕ್ಕೆ ರಾಜ್ಯ ಸರ್ಕಾರದ ಸಹಯೋಗವನ್ನು ನಾವು ಬಯಸುತ್ತೇವೆ. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಅತಿಥಿಗಳು, ಕಲಾವಿದರ ಆಯ್ಕೆ ಇನ್ನೂ ಆಗಿಲ್ಲ. ಚುನಾವಣೆ ಮುಗಿದು, ಹೊಸ ಸರ್ಕಾರ ರಚನೆಯಾದ ಬಳಿಕ ಈ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೇವೆ. ಸಾಮಾನ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರತಿ ಬಾರಿ 30ರಿಂದ 40 ಕಲಾವಿದರನ್ನು ಸಮ್ಮೇಳನಕ್ಕೆ ಕಳುಹಿಸುತ್ತದೆ. ಅದರ ಆಯ್ಕೆ ಆಗಬೇಕಿದೆ. ಎರಡು ಮೂರು ಪುಸ್ತಕ ಬಿಡುಗಡೆ ಮಾಡುವ ಯೋಜನೆಯೂ ಇದೆ.

* ಅಮೆರಿಕದಲ್ಲಿ ಕನ್ನಡತನ ಉಳಿದು, ಬೆಳೆಯಲು ‘ಅಕ್ಕ’ ಏನು ಮಾಡುತ್ತಿದೆ?:

ಕನ್ನಡ ಸಂಸ್ಕೃತಿ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ‘ಅಕ್ಕ’, ಕನ್ನಡ ಚಿತ್ರೋದ್ಯಮಕ್ಕೆ ಅಮೆರಿಕದಲ್ಲಿ ಮಾರುಕಟ್ಟೆ ಸೃಷ್ಟಿಸಿದೆ. ವಾರಕ್ಕೆ ಎರಡರಿಂದ ಮೂರು ದಿನ ಇಲ್ಲಿನ ಕೆಲ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನ ಕಾಣುವಂತೆ ಮಾಡುವಲ್ಲಿ ಅಕ್ಕ ಯಶಸ್ವಿಯಾಗಿದೆ. ‘ರಂಗಿತರಂಗ’, ‘ಮೈತ್ರಿ’, ‘ದೃಶ್ಯ’, ‘ಒಂದು ಮೊಟ್ಟೆ ಕತೆ’, ’ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಗಳೂ ಸೇರಿದಂತೆ ಕೆಲ ಕನ್ನಡ ಚಿತ್ರಗಳು ಇಲ್ಲಿ ಯಶಸ್ವಿ ಪ್ರದರ್ಶನ ಕಂಡು, ಲಕ್ಷಾಂತರ, ಕೋಟ್ಯಂತರ ರೂಪಾಯಿ ಆದಾಯವನ್ನೂಗಳಿಸಿವೆ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳು ವಾರದ ಏಳೂ ದಿನವೂ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ಇನ್ನಷ್ಟು ವಿಸ್ತರಿಸಿ, ವಾರದ ಏಳು ದಿನವೂ ಕನ್ನಡ ಚಿತ್ರಗಳು ಪ್ರದರ್ಶನ ಕಾಣುವಂತೆ ಮಾಡುವ ನಿಟ್ಟಿನಲ್ಲಿ ‘ಅಕ್ಕ’ ಪ್ರಯತ್ನ ಮುಂದುವರೆಸಿದೆ. ಹೀಗಾಗಿ ಕನ್ನಡದ ಚಿತ್ರೋದ್ಯಮಿಗಳು, ಕಲಾವಿದರು ‘ಅಕ್ಕ’ ಸಮ್ಮೇಳನಕ್ಕೆ ಸ್ವಯಂ ಪ್ರೇರಿತರಾಗಿ ಭಾಗವಹಿಸುವ ಔದಾರ್ಯ ತೋರಬೇಕು.

ಇದೇ ಅಲ್ಲದೆ, ಉನ್ನತ ವ್ಯಾಸಂಗಕ್ಕೆಂದು ಅಮೆರಿಕಕ್ಕೆ ಬರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ, ಸಲಹೆ, ಸೂಚನೆಯನ್ನು ‘ಅಕ್ಕ’ ನೀಡುತ್ತಿದೆ. ವಿಶ್ವವಿದ್ಯಾಲಯ, ಕಾಲೇಜು, ಕೋರ್ಸ್‌ ಆಯ್ಕೆ, ಊಟ, ವಸತಿ ಸೌಕರ್ಯ ಸೇರಿದಂತೆ ಇತರ ಸಲಹೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಅಲ್ಲದೆ ಡಾಕ್ಯುಮೆಂಟೇಷನ್‌ ಕುರಿತು ಮಾಹಿತಿ ಒದಗಿಸುತ್ತಿದೆ. ವೀಸಾ ಪಡೆಯುವುದು ಮತ್ತು ಅದರ ವಿಸ್ತರಣೆಗೆ ಮಾರ್ಗದರ್ಶನವನ್ನೂ ನೀಡುತ್ತಿದೆ. ಅಮೆರಿಕದಲ್ಲಿ ವೀಸಾ ನೀತಿಗಳು ಬದಲಾದಾಗ, ಅದಕ್ಕೆ ತಕ್ಕಂತೆ ನಾವೇನು ಪರ್ಯಾಯವಾಗಿ ಮಾಡಬಹುದು ಎಂಬುದರ ಕುರಿತ ಮಾರ್ಗದರ್ಶನವನ್ನೂ ಅಕ್ಕ ನೀಡುತ್ತಿದೆ.

ಶಿವಮೂರ್ತಿ ಪರಿಚಯ

ಶಿವಮೂರ್ತಿ ಕೀಲಾರ ಅವರು ಮಂಡ್ಯದ ಕೀಲಾರ ಗ್ರಾಮದವರು. ಕಾನೂನು ಪದವೀಧರರಾಗಿರುವ ಅವರು ಅಮೆರಿಕಕ್ಕೆ ಹೋಗಿ 20 ವರ್ಷಗಳಾಗಿವೆ. ಅವರಿಗೂ ಮೊದಲು ಅವರ ಪತ್ನಿ ವೀಣಾ ಅವರು (ಸಾಫ್ಟ್‌ವೇರ್‌ ಎಂಜಿನಿಯರ್‌) ಅಮೆರಿಕಕ್ಕೆ ಹೋಗಿದ್ದರು. ಈ ದಂಪತಿಗೆ ಸೂರ್ಯ, ಮೌರ್ಯ ಎಂಬ ಇಬ್ಬರು ಮಕ್ಕಳಿದ್ದಾರೆ.

ಉದ್ಯೋಗಕ್ಕೆಂದು ಅಮೆರಿಕಕ್ಕೆ ಬರುವವರಿಗೆ, ಅಮೆರಿಕದಲ್ಲಿ ಉದ್ಯೋಗ ಬದಲಿಸುವವರಿಗೆ, ವೀಸಾ ವಿಸ್ತರಣೆಗೆ ಸಂಬಂಧಿಸಿದಂತೆ ‘ಕನ್ಸಲ್ಟೆಂಟ್‌’ ಆಗಿಯೂ ಕೆಲಸ ಮಾಡತ್ತಿರುವ ಅವರು, ಅಮೆರಿಕದಲ್ಲಿ ಡೈಯಾಗ್ನಾಸ್ಟಿಕ್‌ ಸೆಂಟರ್‌ ಅನ್ನೂ ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.