ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ದೈವನಿಷ್ಠೆ

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಅಧ್ಯಾತ್ಮ ಸಾಧನೆಯಲ್ಲಿ ಭಕ್ತಿಗೆ ಪರಮೋಚ್ಚಸ್ಥಾನವನ್ನು ಕಲ್ಪಿಸಲಾಗಿದ್ದರೂ, ಆ ಭಕ್ತಿಯಲ್ಲಿ ಶ್ರದ್ಧೆ ಮತ್ತು ನಿಷ್ಠೆಗಳಿರಬೇಕಾದುದು ಅತ್ಯವಶ್ಯ. ವಾಸ್ತವದಲ್ಲಿ ಭಕ್ತಿಗೆ ಶ್ರದ್ಧೆಯೇ ಆಧಾರ. ಆದರೆ ಶ್ರದ್ಧೆಯಲ್ಲಿ ನಿಷ್ಠೆ ನೆಲೆಗೊಳ್ಳದಿದ್ದರೆ ಭಕ್ತಿಯು ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಶ್ರದ್ಧೆಯುಳ್ಳ ಭಕ್ತನನ್ನು ಭಗವಂತನು ಹಲವು ರೀತಿಯಲ್ಲಿ ಪರೀಕ್ಷಿಸುತ್ತಾನೆ. ‘ಹರ ತನ್ನ ಭಕ್ತರ ತಿರಿವಂತೆ ಮಾಡುವ, ಅರೆದು ನೋಡುವ ಕಬ್ಬಿನ ಕೋಲಿನಂತೆ, ಒರೆದು ನೋಡುವ ಸುವರ್ಣದ ಚಿನ್ನದಂತೆ’ ಎನ್ನುವ ಶರಣರು ಭಗವಂತನು ಭಕ್ತರನ್ನು ಕಾಡಿ ನೋಡುತ್ತಾನೆ, ಬೇಡಿ ನೋಡುತ್ತಾನೆ, ಹಾಗೆಯೇ ತನು ಮನ ಧನಗಳನ್ನು ಅಲ್ಲಾಡಿಸಿ ನೋಡುತ್ತಾನೆ ಎನ್ನುತ್ತಾರೆ. ಭಕ್ತಿಯಾದರೂ ಸುಲಭವಾದುದಲ್ಲ, ಅದು ಕರಗಸದಂತೆ ಹೋಗುತ್ತ ಕೊಯ್ವುದು, ಬರುತ್ತ ಕೊಯ್ವುದು. ಇಂಥ ಪರೀಕ್ಷೆಯಲ್ಲಿ ಭಕ್ತನು ವಿಚಲಿತನಾಗದೆ ಉಳಿದರೆ ಅದು ನಿಷ್ಠೆ ಎನಿಸುವುದು, ಅವನು ನಿಷ್ಠಾಭಕ್ತನೆನಿಸುವನು.

ನಿಷ್ಠೆಯ ಅಭಾವದಲ್ಲಿ ಭಕ್ತಿಯು ಅರೆಭಕ್ತಿಯಾಗುವುದು. ಭಕ್ತನು ಅರೆಭಕ್ತನಾಗುವನು. ‘ಬರಬರ ಭಕ್ತಿಯರೆಯಾಯಿತ್ತು ನೋಡಿರಣ್ಣ, ಮೊದಲ ದಿನ ಹಣೆಮುಟ್ಟಿ, ಮರುದಿನ ಕೈಮುಟ್ಟಿ, ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣ’ ಎಂಬ ಶರಣವಾಣಿಯಲ್ಲಿ ಶ್ರದ್ಧೆಯಿದ್ದು ನಿಷ್ಠೆ ಇಲ್ಲದ ಭಕ್ತನ ಭಕ್ತಿ ನಿರರ್ಥಕವೆನಿಸುವುದೆಂಬ ಭಾವ ಸ್ಪಷ್ಟವಾಗಿದೆ. ‘ಹಿಡಿದುದ ಬಿಡದಿದ್ದರೆ ಕಡೆಗೆ ಚಾಚುವ, ಅಲ್ಲದಿದ್ದಡೆ ನಡುನೀರಲದ್ದುವ ನಮ್ಮ ಕೂಡಲಸಂಗಮದೇವ ಎನ್ನುತ್ತಾರೆ ಬಸವಣ್ಣನವರು. ಭಕ್ತನು ಶ್ರದ್ಧೆಯನ್ನು ಹಿಡಿಯಬೇಕು, ಹಿಡಿದ ಶ್ರದ್ಧೆಯನ್ನು ಬಿಡದಿರಬೇಕು ಅಂದರೆ ನಿಷ್ಠೆಯುಳ್ಳವನಾಗಬೇಕು. ಆಗ ಮಾತ್ರ ಭಕ್ತನು ಭಗವಂತನನ್ನು ತಲುಪಲು ಸಾಧ್ಯವಾಗುತ್ತದೆ. ಭಕ್ತನು ಭಗವಂತನಿಗೆ ಒಲಿದು ಒಲಿಸಿಕೊಳ್ಳಬೇಕು, ಒಲಿದಲ್ಲದೆ ಭಗವಂತನ ಒಲುಮೆ ಸಾಧ್ಯವಿಲ್ಲ. ಮನಸ್ಸಿನಲ್ಲಿ ಸ್ಥಿರತೆ ಬೇಕು. ಮನವನಂದಂದಿಗೆ ಅತ್ತಿತ್ತ ಹರಿಯಲೀಯದೆ ಚಿತ್ತದಲ್ಲಿ ಧರಿಸಬೇಕು. ಮನದಲ್ಲಿ ನಿಷ್ಠೆ ಇಲ್ಲದಿದ್ದಡೆ ಭಗವಂತನ ಒಲುಮೆ ಸಾಧ್ಯವಾಗದು. ಭಗವಂತನು ಭಕ್ತನನ್ನು- ‘ಅಟ್ಟಿ ನೋಡುವ, ಮುಟ್ಟಿ ನೋಡುವ, ತಟ್ಟಿ ನೋಡುವ, ಒತ್ತಿ ನೋಡುವ, ಅಟ್ಟಿದಡೆ ಒತ್ತಿದಡೆ ನಿಷ್ಠೆಯ ಬಿಡದಿರ್ದಡೆ ತನ್ನನೀವ ಮಹಾಲಿಂಗ ಕಲ್ಲೇಶ್ವರ’ ಎಂದು ಶರಣ ಹಾವಿನಹಾಳ ಕಲ್ಲಯ್ಯ ನಿಷ್ಠೆಯ ಫಲಶ್ರುತಿಯನ್ನು ಸುರಿದ್ದಾನೆ.

ಭಕ್ತನಲ್ಲಿ ನುಡಿದಂತೆ ನಡೆವ ಛಲ, ಎಲ್ಲರನ್ನೂ ಸಮಾನ ಗೌರವದಿಂದ ಕಾಣುವ ಗುಣ ಹಾಗೂ ಭೌತಿಕ ಸಂಪತ್ತಿನ ಬಗ್ಗೆ ನಿರ್ಲಿಪ್ತತೆ ಇದ್ದರೆ ನಿಷ್ಠೆ ಕರಿಗೊಳ್ಳಲು ಸಾಧ್ಯವಾಗುತ್ತದೆ. ‘ಭಕ್ತಿ ಸುಭಾಷೆ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ’ ಎನ್ನುತ್ತಾರೆ ಬಸವಣ್ಣನವರು. ಲೌಕಿಕ ಸುಖದ ಆಶೆಯನ್ನು ಹರಿಯಬೇಕು. ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಭಗವಂತನನ್ನಲ್ಲದೆ ಮತ್ತೊಂದು ನೆನೆಯದಿರಬೇಕು. ಎಲ್ಲ ತ್ಯಾಗಕ್ಕೂ ಸಿದ್ಧವಾದ, ಯಾವುದಕ್ಕೂ ಅಂಜದ ಅಳುಕದ, ಕ್ರಿಯಾತ್ಮಕವಾದ ಶ್ರದ್ಧೆಯೇ ನಿಷ್ಠೆ ಎನಿಸಿಕೊಳ್ಳುವುದು. ಇಂತಹ ನಿಷ್ಠೆಯು ತನುವಿನ ಆಶೆ-ಆಮಿಷಗಳನ್ನು ಹರಿಯುವುದು, ಮನಸ್ಸಿನ ಮೋಹವನ್ನು ಅಳಿಯುವುದು, ಅಜ್ಞಾನದ ಕತ್ತಲೆಯನ್ನು ಸರಿಸಿ ಜ್ಞಾನದ ಮಾರ್ಗವನ್ನು ತೋರುವುದು. ಭಗವಂತನ ಒಲುಮೆಗೆ ಇಂಥ ನಿಷ್ಠೆ ಬೇಕು. ‘ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ, ಎಲುದೋರಿದಡೆ, ನರ ಹರಿದಡೆ, ಕರುಳು ಕುಪ್ಪಳಿಸಿದಡೆ ನಾ ಧೃತಿಗೆಡೆನಯ್ಯಾ. ಶಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆ, ನಾಲಗೆ ‘ಕೂಡಲಸಂಗಾ’ ಶರಣೆನ್ನುತ್ತಿದ್ದೀತಯ್ಯಾ’ ಎನ್ನುವ ಬಸವಣ್ಣನವರ ವಚನದಲ್ಲಿ ತಲೆ ಕತ್ತರಿಸಿ ನೆಲಕ್ಕೆ ಬಿದ್ದರೂ ನನ್ನ ನಾಲಗೆ ಭಗವಂತನನ್ನೇ ಸ್ಮರಿಸುತ್ತದೆ ಎಂಬ ಅಚಲ ನಿಷ್ಠೆ ಕಂಡುಬರುತ್ತದೆ. ಭಕ್ತಿಯ ಸಾಧನೆಯಲ್ಲಿ ಏನೇ ಕಷ್ಟಗಳು ಬಂದರೂ ಅಣುಮಾತ್ರವೂ ಅಂಜದಿರುವ ಇಂಥ ನಿಷ್ಠೆ ಭಕ್ತನಿಗೆ ಬೇಕೇ ಬೇಕು. ಆಗ ಅವನ ಭಕ್ತಿಯು ಸಾರ್ಥಕ. ಇಲ್ಲದಿದ್ದರೆ ‘ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ, ಲಿಂಗದ ಮೇಲೆ ನಿಷ್ಠೆ ಇಲ್ಲದ ಭಕ್ತ, ಇದ್ದರೇನೋ ಶಿವ ಶಿವಾ ಹೋದರೇನೋ? ಎಂಬಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT