ಭಾನುವಾರ, ಮಾರ್ಚ್ 7, 2021
19 °C
ಬಾಯಾರಿಕೆ ನೀಗಿಸಿಕೊಳ್ಳಲು ಹೋಗಿ ಮೇಲೆ ಬರಲಾರದೇ ಪೇಚಾಟ

ಬಾವಿಯಲ್ಲಿ ಸಿಲುಕಿದ 32 ಮಂಗಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾವಿಯಲ್ಲಿ ಸಿಲುಕಿದ 32 ಮಂಗಗಳ ರಕ್ಷಣೆ

ಕುಮಟಾ: ತಾಲ್ಲೂಕಿನ ತಲಗೇರಿಯಲ್ಲಿ ಈಚೆಗೆ ನೀರು ಕುಡಿಯಲು ತೋಟದ ಬಾವಿಯೊಳಗೆ ಇಳಿದು ಮೇಲೆ ಬರಲಾರದೆ ಒದ್ದಾಡುತ್ತಿದ್ದ ಮಂಗಗಳನ್ನು ತೋಟದ ಮಾಲೀಕರು ಹಾಗೂ ಊರಿನವರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಕಾಡಿನಿಂದ ಸುತ್ತುವರಿದ ತಲಗೇರಿ ಗ್ರಾಮದ ಪ್ರಗತಿಪರ ಕೃಷಿಕ ವಿ.ಜಿ.ಹೆಗಡೆ ಅವರು ಈಚೆಗೆ ತಮ್ಮ ತೋಟದಲ್ಲಿ ಹೊಸದಾಗಿ ಬಾವಿ ತೋಡಿಸಿದ್ದರು. ಅದರಲ್ಲಿ ನೀರು ಕುಡಿಯಲು ಮೊದಲು ಒಂದೆರಡು ಮಂಗಗಳು ಇಳಿದವು. ಅವು ಮೇಲೆ ಬರಲಾಗದೇ ಒದ್ದಾಡಿದಾಗ ಅವುಗಳನ್ನು ನೋಡಿದ ಗುಂಪಿನ ಮತ್ತಷ್ಟು ಮಂಗಗಳೂ ಕೆಳಗಿಳಿದು ಅವು ಸಿಕ್ಕಿಹಾಕಿಕೊಂಡವು.

ಹೆಗಡೆ ಅವರು ಎಂದಿನಂತೆ ತೋಟಕ್ಕೆ ಹೋಗಿ ಬಾವಿ ಬಳಿ ತಲುಪಿದಾಗ ಬಾವಿ ದಂಡೆಯಲ್ಲಿದ್ದ ಇನ್ನುಳಿದ ಮಂಗಗಳು ಅವರನ್ನು ಅಟ್ಟಿಸಿಕೊಂಡು ಬಂದವು. ಏನೋ ಸಂಭವಿಸಿದೆ ಎಂದು ಅನುಮಾನಿಸಿದ ಅವರು ಊರಿನ ಪರಿಚಯಸ್ಥರಿಗೆ ಫೋನ್ ಮಾಡಿ ಕರೆಸಿದರು. ಬಾವಿ ಬಳಿ ಹೋದಾಗ ಕೆಲವು ಮರಿಗಳು ಸೇರಿದಂತೆ ಒಟ್ಟು 32 ಮಂಗಗಳು ಬಾವಿಯೊಳಗೆ ಒದ್ದಾಡುತ್ತಿದ್ದವು.

‘ಸಣ್ಣ ಮರಿಗಳು ರಕ್ಷಣೆಗಾಗಿ ತಮ್ಮ ತಾಯಂದಿರ ಹೆಗಲೇರಿ ಕುಳಿತಿದ್ದವು. ಹತ್ತಾರು ಜನರು ಸೇರಿ ಹಗ್ಗ ಹಾಗೂ ಕೋಲನ್ನು ಬಾವಿಯೊಳಗೆ ಇಳಿಬಿಟ್ಟೆವು. ಕೆಲವು ಮಂಗಗಳು ಮಾತ್ರ ಮೇಲೆ ಬಂದವು. ಉಳಿದವು ಹೆದರಿ ಬಾವಿಯ ಪೊಟರೆಯೊಳಗೆ ಅಡಗಿ ಕುಳಿತವು. ಇನ್ನೊಂದು ಕೋಲನ್ನು ಇಳಿಬಿಟ್ಟ ಮೇಲೆ ಅವು ಮೇಲೇರಿ ಬಂದವು. ಎಲ್ಲ ಮಂಗಗಳೂ ಸುರಕ್ಷಿತವಾಗಿ ಮೇಲೆ ಬಂದು ಕಾಡು ಸೇರಿದಾಗ ನಾವು ನಿಟ್ಟುಸಿರುಬಿಟ್ಟೆವು’ ಎಂದು ಹೆಗಡೆ ತಮ್ಮ ಪರಿಶ್ರಮವನ್ನು ವಿವರಿಸಿದರು.

‘ತಲಗೇರಿ ಊರಿನ ಸುತ್ತ ದಟ್ಟ ಕಾಡು ಇದೆ. ಇದರಿಂದ ಕಾಡುಪ್ರಾಣಿಗಳು ಓಡಾಟ ಸಾಮಾನ್ಯವಾಗಿದೆ. ಹೀಗಾಗಿ ನಾನು ಹಲವಾರು ವರ್ಷಗಳಿಂದ ಇಂಥ ಪ್ರಾಣಿಗಳಿಗಾಗಿಯೇ ರಸ್ತೆ ಬದಿ ಒಂದು ತೊಟ್ಟಿ ನಿರ್ಮಿಸಿ ಅದರೊಳಗೆ ನೀರು ತುಂಬಿಸಿಡುತ್ತಿದ್ದೆ. ನರಿ, ಮೊಲ, ಮಂಗ, ದನ ಮುಂತಾದ ಪ್ರಾಣಿಗಳು ಬಂದು ನೀರು ಕುಡಿದು ಹೋಗುತ್ತಿದ್ದವು. ಕಳೆದ ವರ್ಷ ಹುಲಿಗಳೂ ನೀರು ಕುಡಿದದ್ದನ್ನು ನೋಡಿದ್ದೇನೆ. ಅನೇಕ ಮೊಲಗಳು ನಮ್ಮ ತೋಟದಲ್ಲಿಯೇ ಬೀಡು ಬಿಟ್ಟಿವೆ. ನೀರು ಕುಡಿದು ನಮ್ಮ ತೋಟದ ಉತ್ಪನ್ನಗಳನ್ನು ಅವು ತಿಂದು ಹೋಗುತ್ತಿವೆ. ಆದರೆ, ಅವುಗಳ ಜತೆಗೇ ಜೀವಿಸುವುದು ನಮಗೆ ಅನಿವಾರ್ಯ’ ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.