ಬುಧವಾರ, ಫೆಬ್ರವರಿ 24, 2021
23 °C
ಉಡುಪಿಗೆ ನೀರು ಪೂರೈಕೆ–ಪೈಪ್‌ಲೈನ್‌ ಅಳವಡಿಕೆ ಪ್ರಶ್ನಿಸಿ ಅರ್ಜಿ

ಟೆಂಡರ್‌ಗೆ ತಡೆ ನೀಡಲು ಹೈಕೋರ್ಟ್‌ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಂಡರ್‌ಗೆ ತಡೆ ನೀಡಲು ಹೈಕೋರ್ಟ್‌ ನಕಾರ

ಬೆಂಗಳೂರು: ವಾರಾಹಿ ನದಿಯಿಂದ ಉಡುಪಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಸಂಬಂಧಿಸಿದಂತೆ ಪೈಪುಗಳನ್ನು ಅಳವಡಿಸಲು ಕರೆಯಲಾಗಿರುವ ಟೆಂಡರ್‌ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ಉಡುಪಿ ಜಿಲ್ಲಾ ರೈತಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ರಜಾಕಾಲದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಕಾರ್ಯಪಾಲಕ ಎಂಜಿನಿಯರ್‌, ಉಡುಪಿ ನಗರಸಭೆ ಆಯುಕ್ತರು, ಕರ್ನಾಟಕ ನೀರಾವರಿ ನಿಗಮದ ಶಿವಮೊಗ್ಗ ವಲಯದ ಮುಖ್ಯ ಎಂಜಿನಿಯರ್‌ಗೆ ನೋಟಿಸ್‌ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಅರ್ಜಿಯಲ್ಲಿ ಏನಿದೆ?: ‘ಉಡುಪಿ ನಗರಕ್ಕೆ 40 ಕಿ.ಮೀನಷ್ಟು ದೂರ ಪೈಪ್ ಲೈನ್‌ ಅಳವಡಿಸಿ ನೀರು ತರುವ ಅಗತ್ಯವಿಲ್ಲ. ಸೀತಾನದಿ ಅಥವಾ ಸ್ವರ್ಣಾ ನದಿಯಿಂದಲೇ ತರಬಹುದು. ಆದರೆ ವಾರಾಹಿ ನದಿಯಿಂದ 41 ಎಂಎಲ್‌ಡಿ ನೀರು ತರಲು ಉದ್ದೇಶಿಸಿರುವುದು ಸರಿಯಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

‘2016ರಲ್ಲಿಯೇ ಉಡುಪಿ ನಗರಕ್ಕೆ ವಾರಾಹಿ ನದಿಯಿಂದ ಸುಮಾರು ₹ 122 ಕೋಟಿ ವೆಚ್ಚದಲ್ಲಿ ಅಮೃತ್ ಯೋಜನೆಯಡಿ ಕೊಳವೆ ಮಾರ್ಗ ಅಳವಡಿಸಿ ಕುಡಿಯುವ ನೀರು ಒದಗಿಸಲು ಉದ್ದೇಶಿಸಲಾಗಿತ್ತು. ಈ ಯೋಜನೆ ಕಾರ‍್ಯಸಾಧುವಲ್ಲ ಎಂದು ಕೈಬಿಡಲಾಗಿತ್ತು. ಆದರೆ, ಈಗ ಪುನಃ ಪೈಪ್‌ಲೈನ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಇದರಿಂದ ವೃಥಾ ಹಣ ಪೋಲಾಗಲಿದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.