ಭಾನುವಾರ, ಮಾರ್ಚ್ 26, 2023
31 °C
ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಬೈಕ್‌ ರ‍್ಯಾಲಿ, ನಾಯಕರ ರೋಡ್‌ ಷೋ

ಕೊನೆ ದಿನ ರಂಗೇರಿದ ಬಹಿರಂಗ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊನೆ ದಿನ ರಂಗೇರಿದ ಬಹಿರಂಗ ಪ್ರಚಾರ

ದಾವಣಗೆರೆ: ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಗುರುವಾರ ನಗರದಲ್ಲಿ ಮತದಾರರ ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸಿದವು.

ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಪ್ರತ್ಯೇಕವಾಗಿ ಬೈಕ್‌ ರ‍್ಯಾಲಿ ನಡೆಸಿದರು. ನಗರದ ಪ್ರತಿ ಬೀದಿಗಳಲ್ಲೂ ತೆರಳಿದ ಕಾರ್ಯಕರ್ತರು, ಅಭ್ಯರ್ಥಿಗಳ ಪರ ಘೋಷಣೆ ಕೂಗಿದರು. ಮುಖಂಡರ ಜತೆಗೂಡಿ ರೋಡ್‌ ಷೋ ನಡೆಸಿದ ಅಭ್ಯರ್ಥಿಗಳು, ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು.

ಪ್ರಭಾ ಮಲ್ಲಿಕಾರ್ಜುನ ನೇತೃತ್ವ:

ಪತಿ ಮಲ್ಲಿಕಾರ್ಜುನ ಪರ ಡಾ. ಪ್ರಭಾ ಬೈಕ್‌ ರ‍್ಯಾಲಿ ನಡೆಸಿದರು. ನೂರಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತೆಯರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಮಾಜಿ ಮೇಯರ್‌ಗಳಾದ ರೇಖಾ ನಾಗರಾಜ್, ಅನಿತಾಬಾಯಿ ಮಾಲತೇಶ್‌ ಪಾಲ್ಗೊಂಡಿದ್ದರು.

ಮೂಡ್ನಾಳ್‌ ಬಸವಣ್ಣ ದೇವಸ್ಥಾನ, ರಿಂಗ್‌ ರಸ್ತೆ, ಬಕ್ಕೇಶ್ವರ ಕಲ್ಯಾಣ ಮಂಟಪ ರಸ್ತೆ, ರೆಡ್ಡಿ ಬಿಲ್ಡಿಂಗ್‌, ತೊಗಟವೀರ ಕಲ್ಯಾಣ ಮಂಟಪ, ಬಾಯ್ಸ್‌ ಹಾಸ್ಟೆಲ್‌ ರೋಡ್, ಆಂಜನೇಯ ದೇವಸ್ಥಾನ ರಸ್ತೆ, ಹಳೆ ಆರ್‌ಟಿಒ ಕಚೇರಿ ರಸ್ತೆ, ನೂತನ್‌ ಕಾಲೇಜು ರಸ್ತೆ, ವಿನಾಯಕ ಬಡಾವಣೆ, ಬನಶಂಕರಿ ಲೇಔಟ್‌, ವಿದ್ಯಾನಗರದಲ್ಲಿ ಬೈಕ್‌ ರ‍್ಯಾಲಿ ಸಾಗಿತು.

ಸಚಿವ ಮಲ್ಲಿಕಾರ್ಜುನ್‌ ರೋಡ್‌ ಷೋ:

ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್‌ ಷೋ ಆರಂಭಿಸಿದರು.

ಆರ್.ಎಸ್. ಶೇಖರಪ್ಪ ಅವರ ಮನೆ ಮುಖಾಂತರ ಎಚ್.ಕೆ.ಆರ್. ವೃತ್ತ, ಪೊಲೀಸ್‌ ಸ್ಟೇಷನ್ ರಸ್ತೆ, ಡಾಂಗೆ ಪಾರ್ಕ್, ಶಿವಪ್ಪಯ್ಯ ಸರ್ಕಲ್, ಪಿ.ಜೆ. ಬಡಾವಣೆ 6ನೇ ಅಡ್ಡರಸ್ತೆ, ರಾಂ ಟಂಡ್‌ ಕೋ ವೃತ್ತ, ಚರ್ಚ್ ರಸ್ತೆ, ವಿನೋಬನಗರ 2ನೇ ಮುಖ್ಯ ರಸ್ತೆ ಮುಖಾಂತರ ಯಲ್ಲಮ್ಮನಗರ 10ನೇ ಕ್ರಾಸ್‌ಗೆ ರೋಡ್‌ ಷೋ ಸಾಗಿತು. ರಿಂಗ್ ರಸ್ತೆ ಮುಖಾಂತರ ಪಿ.ಬಿ. ರಸ್ತೆ, ಅರುಣ ಸರ್ಕಲ್, ರೈತರ ಬೀದಿ ಮೂಲಕ ಹೈಸ್ಕೂಲ್ ಮೈದಾನದವರೆಗೆ ಮೆರವಣಿಗೆ ನಡೆಸಿ ಮತಯಾಚಿಸಿದರು.

ರೋಡ್‌ ಷೋನಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ಕಾಂಗ್ರೆಸ್‌ ಮುಖಂಡರಾದ ಕೆ.ಜಿ. ಶಿವಕುಮಾರ್, ಬಿ.ಎಚ್‌. ವೀರಭದ್ರಪ್ಪ ಅವರೂ ಭಾಗವಹಿಸಿದ್ದರು.

ನಟಿ ಮಯೂರಿ ಭಾಗಿ:

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ.ರವೀಂದ್ರನಾಥ್‌ ಪರ ಚಿತ್ರನಟಿ ಮಯೂರಿ ಪ್ರಚಾರ ನಡೆಸಿದರು. ಬಿಜೆಪಿ ಮುಖಂಡರೊಂದಿಗೆ ಅವರು ರೋಡ್‌ ಷೋನಲ್ಲಿ ಭಾಗವಹಿಸಿದ್ದರು.

ಬಿಜೆಪಿ ಮುಖಂಡ ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಸ್ಲಂ ಮೋರ್ಚಾ ರಾಜ್ಯ ಅಧ್ಯಕ್ಷ ಜಯಪ್ರಕಾಶ್‌ ಅಂಬರ್ಕರ್‌, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಯಮ್ಮ, ಪಿ.ಸಿ. ಶ್ರೀನಿವಾಸ್‌ಭಟ್, ಜಯಪ್ರಕಾಶ್‌ ಕೊಂಡಜ್ಜಿ ಅವರೂ ಪಾಲ್ಗೊಂಡಿದ್ದರು.

ದುರ್ಗಾಂಬಿಕಾ ದೇಗುಲದಲ್ಲಿ ಪೂಜೆ:

ನಗರದ ದುರ್ಗಾಂಬಿಕಾ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್ ಕೊನೆದಿನದ ಬಹಿರಂಗ ಪ್ರಚಾರ ಆರಂಭಿಸಿದರು. ಕ್ಷೇತ್ರದ ವಿವಿಧೆಡೆ ಅವರು ರೋಡ್‌ ಷೋ ನಡೆಸಿದರು. ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಮುಖಂಡರಾದ ಎಚ್‌.ಎಸ್. ನಾಗರಾಜ್, ರಮೇಶ್‌ ನಾಯ್ಕ ಅವರೂ ಇದ್ದರು. ಬಿಜೆಪಿ ಕಾನೂನು ಘಟಕದ ಸದಸ್ಯರು ಪಕ್ಷದ ಅಭ್ಯರ್ಥಿಗಳ ಪರ ಪ್ರತ್ಯೇಕವಾಗಿ ಪ್ರಚಾರ ನಡೆಸಿದರು.

ಸುಗಮ ಸಂಚಾರಕ್ಕೆ ಅಡ್ಡಿ

ನಗರದಲ್ಲಿ ಬೈಕ್‌ ರ‍್ಯಾಲಿ, ರೋಡ್‌ ಷೋ ನಡೆದಿದ್ದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಶಾಮನೂರು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಬದಲಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರಚಾರದಿಂದಾಗಿ ಈ ರಸ್ತೆಗಳಲ್ಲೂ ವಾಹನ ಸಂಚಾರ ಕಿಕ್ಕಿರಿದಿತ್ತು. ಹೀಗಾಗಿ ವಾಹನ ಚಾಲಕರು ಪ್ರಯಾಸ ಪಡಬೇಕಾಯಿತು. ಮಧ್ಯಾಹ್ನದ ನಂತರ ಸಂಚಾರ ವ್ಯವಸ್ಥೆ ಯಥಾಸ್ಥಿತಿಗೆ ಬಂದಿತು.

ಮನೆ ಮನೆ ಭೇಟಿಗೆ ಅವಕಾಶ

ಬಹಿರಂಗ ಪ್ರಚಾರದ ಕಾಲಾವಕಾಶ ಮುಗಿದಿದ್ದರೂ ಮನೆ ಮನೆಗೆ ಭೇಟಿ ನೀಡಿ ಮತಯಾಚನೆಗೆ ಅವಕಾಶವಿದೆ. ಐದರಿಂದ ಆರು ಮಂದಿ ಪ್ರಚಾರ ನಡೆಸಬಹುದು. ಆದರೆ, ಧ್ವನಿ ವರ್ಧಕ, ವಾಹನಗಳ ಬಳಕೆಗೆ ಅವಕಾಶ ಇರುವುದಿಲ್ಲ.

ಕ್ಷೇತ್ರ ತೊರೆದ ಪ್ರಚಾರಕರು:

ಬಹಿರಂಗ ಪ್ರಚಾರದ ಅವಧಿ ಮುಗಿದ ಕಾರಣ ಗುರುವಾರ ಸಂಜೆ 5 ಗಂಟೆಯ ಒಳಗೆ ಪ್ರಮುಖ ಪಕ್ಷಗಳ ಪ್ರಚಾರಕರು ಕ್ಷೇತ್ರ ವ್ಯಾಪ್ತಿಯಿಂದ ಹೊರಟು ಹೋದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.