ಸೋಮವಾರ, ಮಾರ್ಚ್ 8, 2021
22 °C

ಪ್ರೇಕ್ಷಾ ಎಂಬ ದೇವದೂತಳ ಕತೆ

ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಪ್ರೇಕ್ಷಾ ಎಂಬ ದೇವದೂತಳ ಕತೆ

ನ ರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ‘ಆಟಿಸಂ’ ಎಂದು ಗುರುತಿಸಲಾಗುತ್ತದೆ. ಇಂಥ ಸಮಸ್ಯೆ ಎದುರಿಸುತ್ತಿರುವ ಮಗಳ ತಾಯಿ ನಾನು. ಹೆಸರು ವಾಣಿ ರಾಜೇಂದ್ರ. ಮಗಳ ಹೆಸರು ಪ್ರೇಕ್ಷಾ. ಅವಳಿಗೀಗ 27 ವರ್ಷ. ‘ಆಟಿಸಂ’ ಪೂರ್ಣ ಪ್ರಮಾಣದಲ್ಲಿ ಗುಣವಾಗುವುದಿಲ್ಲ. ಮಧುಮೇಹ, ರಕ್ತದೊತ್ತಡವನ್ನು ಹೇಗೆ ನಿಯಂತ್ರಣದಲ್ಲಿಡಬಹುದೋ, ಹಾಗೆ ಇದನ್ನೂ ನಿಯಂತ್ರಣದಲ್ಲಿಡಬಹುದಷ್ಟೇ. ಇಂಥ ಮಕ್ಕಳ ಲಾಲನೆ, ಪಾಲನೆ, ಪೋಷಣೆಯೂ ಸವಾಲು. ಈ ರೀತಿಯ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಬೇಕು.

ಮಗಳ ಜೀವನದೊಂದಿಗೆ ನನ್ನ ಜೀವನ, ನನ್ನ ಜೀವನದೊಂದಿಗೆ ಮಗಳ ಜೀವನ ಬೆರತು ಹೋಗಿದೆ. ಇಡೀ ಜೀವನ ಮಗಳಿಗಾಗಿ ಮುಡುಪಿಟ್ಟಿದ್ದೇನೆ.

ನನ್ನ ತಂದೆ ವೇಣುಗೋಪಾಲ್‌, ಭೂಪಾಲ್‌ನಲ್ಲಿ ಬಿಎಚ್‌ಇಎಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ವಸಂತಾ. ಅಪ್ಪ, ಅಮ್ಮ ಇಬ್ಬರೂ ಶಿವಮೊಗ್ಗದವರು. ತಂದೆ ಭೂಪಾಲ್‌ನ ಲ್ಲಿದ್ದಾಗಲೇ ನಾನು ಜನಿಸಿದ್ದು. ಅಲ್ಲಿಯೇ ಶಾಲಾ, ಕಾಲೇಜು ಶಿಕ್ಷಣ ಪೂರೈಸಿದೆ. ಬಿ.ಕಾಂ ಪದವೀಧರೆಯಾದ ನನಗೆ ಅಲ್ಲಿಯೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್‌ಬಿಐ) ಉದ್ಯೋಗ ಸಿಕ್ಕಿತು. ನಂತರ ಬೆಂಗಳೂರಿನ ವಿಪ್ರೊ ಕಂಪನಿಯ ಉದ್ಯೋಗಿ ಎಚ್‌.ಬಿ.ರಾಜೇಂದ್ರ (ಸಾಫ್ಟ್‌ವೇರ್‌ ಎಂಜಿನಿಯರ್‌) ಅವರ ಜತೆಗೆ 1987ರಲ್ಲಿ ವಿವಾಹವಾಯಿತು. ನಾನು ಬೆಂಗಳೂರಿಗೆ ಬಂದೆ. 1990ರ ಏಪ್ರಿಲ್‌ನಲ್ಲಿ ಪ್ರೇಕ್ಷಾ ಜನಿಸಿದಳು.

ಪ್ರೇಕ್ಷಾಗೆ ಆರು ತಿಂಗಳಾಗಿದ್ದಾಗ ನನ್ನ ಪತಿ ಉದ್ಯೋಗದ ಮೇಲೆ ಅಮೆರಿಕಕ್ಕೆ ಹೋಗಬೇಕಾಯಿತು. ನನ್ನನ್ನು ಮತ್ತು ಪ್ರೇಕ್ಷಾಳನ್ನು ಅಲ್ಲಿಗೆ ಕರೆದೊಯ್ದರು. ಪತಿಗೆ ಮಗಳ ಕಂಡರೆ ಬಹಳಾ ಪ್ರೀತಿ. ಮನೆಯಲ್ಲಿದ್ದಾಗ ಅವಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಪ್ರೇಕ್ಷಾಗೂ ಅಪ್ಪನ ಮೇಲೆಯೇ ಹೆಚ್ಚು ಪ್ರೀತಿಯಿತ್ತು. ಪ್ರೇಕ್ಷಾಗೆ ಒಂದು ವರ್ಷ ಎರಡು ತಿಂಗಳಾಗಿದ್ದಾಗ ‘ಫಿಟ್ಸ್‌’ ಬಂದಿತು. ಅಮೆರಿಕದಲ್ಲಿಯೇ ವೈದ್ಯರ ಬಳಿ ತೋರಿಸಿ, ಔಷಧಿ ಕೊಡಿಸಿದೆವು. ಮಗಳಿಗೆ ಮೂರು ವರ್ಷ ಆಗುವ ತನಕ ಅಮೆರಿಕದಲ್ಲೇ ಇದ್ದೆವು. ಇದೇ ವೇಳೆ ಪ್ರೇಕ್ಷಾಳಿಗೆ ಮಾತು ಬರುವುದೂ ತಡವಾಯಿತು. ಇದೆಲ್ಲದ್ದರಿಂದ ಗಾಬರಿಗೊಂಡು, ವಾಪಸು ಬೆಂಗಳೂರಿಗೆ ಬಂದೆವು.

ಫಿಟ್ಸ್‌ಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿನಲ್ಲಿ ವೈದ್ಯರ ಬಳಿ ಹೋದೆವು. ವೈದ್ಯರು ಒಮ್ಮೆ ನರರೋಗ ತಜ್ಞರನ್ನು ಸಂಪರ್ಕಿಸುವಂತೆ ಹೇಳಿದರು. ಅದರಂತೆ ನರರೋಗ ತಜ್ಞರನ್ನು ಸಂಪರ್ಕಿಸಿದಾಗ ಪ್ರೇಕ್ಷಾಗೆ ‘ಆಟಿಸಂ’ ಇದೆ ಎಂಬುದು ಗೊತ್ತಾಯಿತು. ದಿಕ್ಕೇ ತೋಚದಂತಾದ ನನಗೆ ಪತಿ, ಪೋಷಕರು ಧೈರ್ಯ ತುಂಬಿದರು. ಪತಿ ರಾಜೇಂದ್ರ ಅವರಂತೂ ಪ್ರೇಕ್ಷಾಳನ್ನು ದೇವರೇ ನಮ್ಮ ಬಳಿ ಕಳುಹಿಸಿದ್ದಾರೆ ಎನ್ನುತ್ತಿದ್ದರು. ಅವಳನ್ನು ಏಂಜೆಲ್‌, ಪ್ರಿನ್ಸೆಸ್‌ ಎಂದೆಲ್ಲ ಕರೆದು ಪ್ರೀತಿಸುತ್ತಿದ್ದರು.

ಎ‌ರಡೂ ಶಾಲೆಗಳಲ್ಲಿ ಶಿಕ್ಷಣ: ಮಗಳನ್ನು ಶಾಲೆಗೆ ಸೇರಿಸುವ ಸಮಯ ಬಂದಾಗ ಸಾಕಷ್ಟು ಯೋಚಿಸಿದೆವು. ಅವಳನ್ನು ರೆಗ್ಯುಲರ್‌ ಶಾಲೆಗೆ ಸೇರಿಸಿದೆವು. ಅದರ ಜತೆಗೆ ವಿಶೇಷ ಶಾಲೆಗೂ ಸೇರಿಸಿದೆವು. ಬೆಳಿಗ್ಗೆ ಎರಡು ಗಂಟೆ ವಿಶೇಷ ಶಾಲೆಯಲ್ಲಿ ಕಲಿಯುತ್ತಿದ್ದ ಪ್ರೇಕ್ಷಾ, ನಂತರ ರೆಗ್ಯುಲರ್‌ ಶಾಲೆಯಲ್ಲಿ ಕಲಿಯುತ್ತಿದ್ದಳು. ಹೀಗೆ ಮೂರನೇ ತರಗತಿಯವರೆಗೂ ಎರಡೂ ಶಾಲೆಗಳಲ್ಲಿ ಮಗಳ ಕಲಿಕೆ ನಡೆಯಿತು. ಕ್ರಮೇಣ ರೆಗ್ಯುಲರ್‌ ಶಾಲೆಯಲ್ಲಿನ ಕನ್ನಡ, ಸಮಾಜ ವಿಜ್ಞಾನ ಸೇರಿದಂತೆ ಕೆಲ ವಿಷಯಗಳು ಕಷ್ಟವಾದಾಗ, ವಿಶೇಷ ಶಾಲೆಗೆ ಸೇರಿಸಿದೆವು. ಪಜಲ್‌ಗಳ ಜತೆ ಚೆನ್ನಾಗಿ ಆಡುತ್ತಿದ್ದ ಪ್ರೇಕ್ಷಾಳ ಸ್ಮರಣಶಕ್ತಿ ಕ್ರಮೇಣ ಹೆಚ್ಚಾಗ ತೊಡಗಿತು. ಒಮ್ಮೆ ನೋಡಿದ್ದನ್ನು, ಗ್ರಹಿಸಿದ್ದನ್ನು ಮರೆಯುತ್ತಿರಲಿಲ್ಲ. ಈ ಗುಣವನ್ನು ಗಮನಿಸಿ ಮನೆಯಲ್ಲಿ ಪಜಲ್ ಮೂಲಕ ಕಲಿಕೆಗೆ ಹೆಚ್ಚು ಒತ್ತು ನೀಡಿದೆವು.

ಮಗಳಿಗೆ ಕುದುರೆ ಸವಾರಿ ಮಾಡುವುದನ್ನು ರಾಜೇಂದ್ರ ‌ಕಲಿಸಿದರು. 16ರಿಂದ 20 ವರ್ಷದವರೆಗೆ ಅವಳು ಕುದುರೆ ಸವಾರಿ ಮಾಡಿದಳು. ಪ್ರೇಕ್ಷಾ 20ನೇ ವಯಸ್ಸಿಗೆ ಬಂದಾಗ ರಾಜೇಂದ್ರ ಅಸುನೀಗಿದರು. ಇದು ಪ್ರೇಕ್ಷಾ ಮತ್ತು ನನ್ನನ್ನು ಮಾನಸಿಕವಾಗಿ ಕುಗ್ಗಿಸಿತು. ಅಪ್ಪನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮಗಳಂತೂ ಒಂದು ವರ್ಷ ಮೌನಿಯಾದಳು. ಈ ಅವಧಿಯಲ್ಲಿ ಅವಳನ್ನು ಸಂಭಾಳಿಸುವುದು, ಪೋಷಿಸುವುದು ತುಂಬಾ ಕಷ್ಟ ಮತ್ತು ಸವಾಲಿನದ್ದಾಗಿತ್ತು.

ಅಮ್ಮ ಮತ್ತು ತಮ್ಮನ ನೆರವಿನಿಂಡದ ಮಗಳನ್ನು ಬೆಳೆಸಿದೆ. ಪ್ರೇಕ್ಷಾ ಗ್ಯಾಜೆಟ್‌ಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಳು. ನಾವೂ ಪ್ರೋತ್ಸಾಹಿಸಿದೆವು. ಆಟಿಸಂ ಸೋಸೈಟಿ ಆಫ್‌ ಇಂಡಿಯಾದ ‘ಪ್ರಯಾಸ್‌’ನಲ್ಲಿ (ಆಟಿಸಂ ಹೊಂದಿರುವವರಿಗೆ ಕಂಪ್ಯೂಟರ್‌ ಮತ್ತು ಐ–ಪಾಡ್‌ ತರಬೇತಿ ನೀಡುವ ಕೇಂದ್ರ) ತರಬೇತಿ ಕೊಡಿಸಿದೆವು. ಅವಳ ಬುದ್ಧಿಮತ್ತೆ ಮತ್ತು ಸ್ಮರಣ ಸಾಮರ್ಥ್ಯದಿಂದ ಆಕರ್ಷಿತವಾದ ಬೆಂಗಳೂರಿನ ವೈಟ್‌ಫೀಲ್ಡ್‌ನ ‘ಎಸ್‌ಎಪಿ ಸಾಫ್ಟ್‌ವೇರ್‌’ ಕಂಪನಿಯು ಅವಳನ್ನು ಕೆಲಸಕ್ಕೆ ಸೇರಿಸಿಕೊಂಡಿತು. ಮೊದಲ ಒಂದು ವಾರ ನಾನೇ ಅವಳನ್ನು ಕಂಪನಿಯ ವಾಹನದಲ್ಲಿ ಹೋಗಿ, ವಾಪಸು ಮನೆಗೆ ಕರೆದುಕೊಂಡು ಬರುತ್ತಿದ್ದೆ. ಬಳಿಕ ಮನೆಯಿಂದ ವಾಹನಕ್ಕೆ ಹತ್ತಿಸುವ ಮತ್ತು ವಾಹನದಿಂದ ಮನೆಗೆ ಕರೆತರುವುದು ನನ್ನ ಕೆಲಸವಾಯಿತು.

ಮತ್ತೊಂದು ಆಘಾತ: ದಿನೇ ದಿನೇ ಕೆಲಸದ ಒತ್ತಡವೂ ಪ್ರೇಕ್ಷಾಗೆ ಹೆಚ್ಚಾಯಿತು. ಅದರ ನಡುವೆ ಶನಿವಾರ, ಭಾನುವಾರ ಕುದುರೆ ಸವಾರಿಗೂ ಹೋಗುತ್ತಿದ್ದಳು. ಗ್ರಹಚಾರ ನೋಡಿ, ಒಂದು ದಿನ ಅವಳನ್ನು ಹೊತ್ತಿದ್ದ ಕುದುರೆ ಜೋರಾಗಿ ಓಡಿ, ಆಕೆಯನ್ನು ಕೆಳಕ್ಕೆ ಎಸೆದುಬಿಟ್ಟಿತು. ಈ ಅಪಘಾತದಲ್ಲಿ ಪ್ರೇಕ್ಷಾಳ ಎಡಗೈನ ಮೊಣಕೈಗೆ ತೀವ್ರಗಾಯವಾಗಿತ್ತು. ವೈದ್ಯರು ಸತತ ನಾಲ್ಕೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿದರು. ಅಲ್ಲಿಂದ ಅವಳು ಹೆಚ್ಚು ನೊಂದುಕೊಂಡಳು. ಅಪ್ಪನ ಸಾವು, ಕುದುರೆ ಸವಾರಿ ಅಪಘಾತಗಳು ಅವಳನ್ನು ಮತ್ತಷ್ಟು  ಕುಗ್ಗುವಂತೆ ಮಾಡಿತು. ಅವಳು ಕೆಲಸಕ್ಕೆ ಹೋಗುವುದು ಬೇಡ ಎಂದು ನಾನೇ ತಡೆದೆ.

ಹೊಸ ಉತ್ಸಾಹ: ಸ್ನೇಹಿತರು ಓಡುವುದರಿಂದ ಜೀವನದಲ್ಲಿ ಉತ್ಸಾಹ, ಉಲ್ಲಾಸ ಬರುತ್ತದೆ ಎಂದು ಹೇಳಿದರು. ಬಳಿಕ ’ಜಯನಗರ ಜಾಗ್ವಾರ್ಸ್‌’ ಗುಂಪಿನ ಪರಿಚಯವಾಯಿತು. ಅಲ್ಲಿ ನಾನು ಮತ್ತು ನನ್ನ ಮಗಳು ನಿತ್ಯ ಬೆಳಿಗ್ಗೆ 5 ಗಂಟೆಯಿಂದ ಓಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಒಂದೂವರೆ ಗಂಟೆಯ ಓಟವು ಪ್ರೇಕ್ಷಾಳ ಜೀವನದಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಇದರ ನಡುವ ಜಯನಗರ ಜಾಗ್ವಾರ್ಸ್‌ಗೆ ‘ಆ್ಯಪ್‌’ ರೂಪಿಸಿರುವ ಸಂಸ್ಥೆಯೇ ಪ್ರೇಕ್ಷಾಗೆ ಕೆಲಸವನ್ನೂ ನೀಡಿದೆ. ನಾನೇ ಈಗಲೂ ಅವಳನ್ನು ಕಚೇರಿ ತನಕ ಬಿಟ್ಟು ಮತ್ತು ಕೆಲಸ ಮುಗಿದ ನಂತರ ಕಚೇರಿಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದೇನೆ.

‘ಆಟಿಸಂ’ ಹೊಂದಿರುವ ಮಕ್ಕಳಲ್ಲಿ ಹೆದರಿಕೆ, ಅಂಜಿಕೆ ಹೆಚ್ಚಿರುತ್ತದೆ. ಜನರ ಗುಂಪನ್ನು ನೋಡಿದರೆ ಅಲ್ಲಿಗೆ ಹೋಗಲು ಹೆದರುತ್ತಾರೆ. ಜನರೊಡನೆ ಬೆರೆಯುವುದಿಲ್ಲ. ತಮ್ಮದೇ ಲೋಕದಲ್ಲಿ ಇರುತ್ತಾರೆ. ಇಂಥ ಮಕ್ಕಳ ಪೋಷಣೆಗೆ ತಾಯಂದಿರು ಹೆಚ್ಚು ಒತ್ತು ನೀಡುವುದರ ಜತೆಗೆ ಕಾಳಜಿ ತೋರಬೇಕು. ಇದನ್ನೆಲ್ಲಾ ನಿಭಾಯಿಸುವುದು ದೊಡ್ಡ ಸವಾಲು. ಪತಿಯ ಮರಣದ ನಂತರ ನನ್ನ ತಾಯಿ ಮತ್ತು ತಮ್ಮ (ವಿವೇಕ್‌) ನನ್ನ ಬೆನ್ನೆಲುಬಾಗಿದ್ದಾರೆ.

ಪ್ರೇಕ್ಷಾಳಂತೆಯೇ ಹಲವರು ‘ಆಟಿಸಂ’ನಿಂದ ಬಳಲುತ್ತಿದ್ದಾರೆ. ಅವರಿಗೆ ಮತ್ತು ಅವರ ಪೋಷಕರಿಗೆ ನನ್ನ ಅನುಭವ ಅನುಕೂಲಕ್ಕೆ ಬರಲೆಂದು ಇತ್ತೀಚೆಗೆ ಕೋರಮಂಗಲದಲ್ಲಿ ‘ರೇನ್‌ಬೋ ಹಟ್‌’ ಎಂಬ ಸ್ವಯಂ ಸೇವಾ ಸಂಸ್ಥೆ ತೆರೆದಿದ್ದೇನೆ. ವಿಶೇಷ ಮಗುವಿನ ಪೋಷಕರಾದ ರಮೇಶ್‌ ಮೇದಾ ಅವರೂ ಇದರಲ್ಲಿ ಪಾಲುದಾರರು. ವಿಶೇಷ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಗುರುತಿಸಿ, ಅದಕ್ಕೆ ಅಗತ್ಯ ತರಬೇತಿ ನೀಡುವ ಕಾರ್ಯವನ್ನು ಇಲ್ಲಿ ಮಾಡುತ್ತಿದ್ದೇವೆ.

ಮಾಹಿತಿಗೆ: 98450–11135

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.