ವರುಣನ ಆರ್ಭಟ;  ಕೋಳಿಫಾರಂ ಹಾನಿ

7
ಕೋಳಿಫಾರಂ, ಭತ್ತದ ಗದ್ದೆಗೆ ಹಾನಿ; ಶಿಕಾರಿಪುರ ಸುತ್ತಮುತ್ತ ಆಲಿಕಲ್ಲು ಮಳೆ

ವರುಣನ ಆರ್ಭಟ;  ಕೋಳಿಫಾರಂ ಹಾನಿ

Published:
Updated:
ವರುಣನ ಆರ್ಭಟ;  ಕೋಳಿಫಾರಂ ಹಾನಿ

ಭದ್ರಾವತಿ: ಗುರುವಾರ ರಾತ್ರಿ ಸುರಿದ  ಗಾಳಿ ಸಹಿತ ಮಳೆಗೆ ಗ್ರಾಮಾಂತರ ಭಾಗದಲ್ಲಿ ತೊಂದರೆಯಾಗಿದೆ. ಮಸರಹಳ್ಳಿ ಸೀತಾರಾಮ ಎಂಬುವರ ಮನೆಯ ಪಕ್ಕದಲ್ಲಿನ ಹಳ್ಳದ  ನೀರಿನ ಪ್ರವಾಹ ಹೆಚ್ಚಾಗಿ ಮನೆಯು ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿ ಹೋಗಿದೆ. ಕುಟುಂಬದ ಎಂಟು ಮಂದಿ ಸದಸ್ಯರು ಎಚ್ಚರವಾಗಿದ್ದ ಪರಿಣಾಮ ಹಳ್ಳದ ನೀರು ಏರುತ್ತಲೇ ಆಶ್ರಯಕ್ಕಾಗಿ ಬೇರೆಡೆ ತೆರಳಿದ್ದರಿಂದ ಯಾವುದೇ ಜೀವಹಾನಿ ಉಂಟಾಗಿಲ್ಲ ಎಂದು ಪ್ರತ್ಯಕ್ಷದರ್ಶಿ ಶ್ರೀಧರ್ ‘ಪ್ರಜಾವಾಣಿಗೆ’ ತಿಳಿಸಿದರು.

ಮಾವಿನಕೆರೆ ಗ್ರಾಮದ ಮಂಜೇಶ ಅವರಿಗೆ ಸೇರಿದ್ದ ಕೋಳಿಫಾರಂ ಸಂಪೂರ್ಣ ಜಲಾವೃತವಾಗಿದ್ದು, ಐದು ಸಾವಿರಕ್ಕೂ ಅಧಿಕ ಕೋಳಿಗಳು ಸತ್ತಿವೆ. ಏಕಾಏಕಿ ಸುರಿದ ಮಳೆ ಹಾಗೂ ಹಳ್ಳದ ನೀರಿನ ಹರಿವಿನ ಪ್ರವಾಹದಿಂದ ಈ ತೊಂದರೆ ಎದುರಾಗಿದೆ ಎಂದು ಮಂಜೇಶ  ತಿಳಿಸಿದರು.

ಬಾರಂದೂರು ಉಮಾರಾವ್ ಸಾವಂತ್ ಅವರ ಭತ್ತದ ಗದ್ದೆಗೆ ಮಳೆಯಿಂದಾಗಿ ಹಾನಿಯಾಗಿದೆ.

ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆ

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಗುರುವಾರ ಗುಡುಗು ಸಹಿತ ಭಾರಿ ಮಳೆಯಾಗಿದೆ. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಶಿವಮೊಗ್ಗ ನಗರದಲ್ಲಿ ಸಂಜೆಯ ಹೊತ್ತಿಗೆ ಗುಡುಗು, ಮಿಂಚು, ಗಾಳಿ ಸಹಿತ ಜೋರು ಮಳೆಯಾಗಿದೆ. 1 ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದ ಆವೃತವಾಗಿದ್ದವು. ಕೆಲವೆಡೆ ರಸ್ತೆಯಲ್ಲೂ ನೀರು ನಿಂತ ಕಾರಣ ಪ್ರಯಾಣಿಕರು ಸಂಚರಿಸಲು ಹರಸಾಹಸ ಪಟ್ಟರು.

ಆಲಿಕಲ್ಲು ಮಳೆ: ಶಿಕಾರಿಪುರ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಅಲ್ಲದೇ ಸೊರಬ ಹಾಗೂ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೂ ಕೆಲಕಾಲ ಗುಡುಗು ಸಹಿತ ಭಾರಿ ಮಳೆಯಾಗಿದೆ. ಗಾಳಿಗೆ ತಾಲ್ಲೂಕಿನ ಕೆಲವೆಡೆ ಮರಗಿ ಡಗಳು ಮುರಿದು ಬಿದ್ದಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ.

ಉಳಿದಂತೆ ಸಾಗರ, ಹೊಸನಗರ, ತಾಲ್ಲೂಕಿನಾದ್ಯಂತ ಮೋಡಕವಿದ ವಾತಾವರಣ ಇದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry