ಶನಿವಾರ, ಮಾರ್ಚ್ 6, 2021
21 °C

ತಳವಂದಿಗ

ಸದಾನಂದ ಗಂಗನಬೀಡು Updated:

ಅಕ್ಷರ ಗಾತ್ರ : | |

ತಳವಂದಿಗ

ನಾರಾಯಣಪ್ಪನ ಮನೆಯ ಮುಂದೆ ಇಡೀ ಮಾದಿಗರ ಕೇರಿಯೇ ಸಾಗರದಂತೆ ನೆರೆದಿತ್ತು. ಒಂದು ಕಾಲದಲ್ಲಿ ಘನತೆಯ, ಕೆಚ್ಚಿನ ಬದುಕನ್ನು ಬದುಕಿದ್ದ ನಾರಾಯಣಪ್ಪ ತನ್ನ ಅಂತಿಮ ದಿನಗಳಲ್ಲಿ ಸನ್ನಿಗೊಳಗಾದಂತೆ‌ ವರ್ತಿಸುತ್ತಿದ್ದ. ಇದನ್ನು ಕಂಡ ಆತನಿಗೆ ಆಗದವರು, ‘ಹುಚ್ಚು ಹಿಡಿದಿದೆ’ ಎಂದು ಒಳಗೊಳಗೇ ಸಂಭ್ರಮಿಸಿದರೆ, ಆತನ ಗತಕಾಲದ ಘನತೆಯ ಬದುಕನ್ನು ಕಂಡವರು, ‘ಗಾಳಿ ಮೆಟ್ಟಿಕೊಂಡಿದೆ’, ‘ದೇವರು ಮೈಮೇಲೆ ಬರುತ್ತಿದ್ದಾನೆ’ ಎಂದು ಅನುಕಂಪದ ಮಾತುಗಳನ್ನು ತಮ್ಮಲ್ಲೇ ಹರಟಿಕೊಳ್ಳುತ್ತಿದ್ದರು. ಈ ಎಲ್ಲ ಗುಲ್ಲುಗಳಿಗೆ, ಗಾಳಿಮಾತುಗಳಿಗೆ ಶಾಶ್ವತ ತೆರೆ ಎಳೆದಿದ್ದ ನಾರಾಯಣಪ್ಪ, ನೇಣಿಗೆ ಶರಣಾಗಿದ್ದ. ಆ ಮೂಲಕ ತನ್ನ ಘನತೆಯ, ಕೆಚ್ಚಿನ ತನ್ನ ಬದುಕನ್ನು ಕೊನೆಗಾಣಿಸಿಕೊಂಡಿದ್ದ.

ನಾರಾಯಣಪ್ಪ ಮೂಲತಃ ಕನಕಪುರದ ಹಾರೋಹಳ್ಳಿಯವನು. ಒಂಬತ್ತು ಜನ ಅಣ್ಣ-ಅಕ್ಕ-ತಂಗಿಯರ ನಡುವೆ ಏಳನೆಯವನಾಗಿ ಹುಟ್ಟಿದ್ದ ನಾರಾಯಣಪ್ಪ, ತನ್ನ ಬಾಲ್ಯದ ದಿನಗಳಲ್ಲೇ ಚೂಟಿಯಾಗಿದ್ದ. ಅದರೊಂದಿಗೆ ಸಿಟ್ಟು, ಸೆಡವು, ಹಟ, ರೋಷ, ಅಹಂಕಾರವನ್ನೆಲ್ಲ ಮೈಗೂಡಿಸಿಕೊಂಡೇ ಬೆಳೆದಿದ್ದ. ಆತನ ಸಮಕಾಲೀನರ ಪ್ರಕಾರ ಅದು‌ ಆತನ ತಂದೆಯಿಂದ ಬಂದಿದ್ದ ಬಳುವಳಿ.

***
ಪೇಟೆಯ ವೆಂಕಟಪ್ಪ ತಾನು ವಾಸಿಸುತ್ತಿದ್ದ ಬೆಂಗಳೂರಿನ ವಾಲ್ಮೀಕಿ ನಗರದಲ್ಲಿ ಸಾಂಕ್ರಾಮಿಕ ಪ್ಲೇಗ್ ಕಾಣಿಸಿಕೊಂಡು, ಅಲ್ಲಿನ ಜನರು ಹುಳುಗಳಂತೆ ಉದುರಿ ಬೀಳುತ್ತಿರುವುದನ್ನು ಕಂಡು ಕಂಗಾಲಾದ. ತನ್ನ ಪತ್ನಿ ಹಾಗೂ ಒಂಬತ್ತು ಪುಟ್ಟ ಮಕ್ಕಳೊಂದಿಗೆ ಪತ್ನಿಯ ತವರಾದ ಹಾರೋಹಳ್ಳಿಗೆ ಒಂದು ವಾರ ಕಾಲ ಕಾಲ್ನಡಿಗೆಯಲ್ಲೇ ನಡೆದು ಅಲ್ಲಿಗೆ ತಲುಪಿದ.

ಇಂತಹ ವೆಂಕಟಪ್ಪ ಪೇಟೆಯ ಪ್ರಭಾವ ಹಾಗೂ ಹಿನ್ನೆಲೆಯ ಕಾರಣಕ್ಕೆ ಊರ ಪಂಚಾಯ್ತಿಗಳಲ್ಲಿ ಭಾಗವಹಿಸಿ, ನಿಭಾಯಿಸಬಲ್ಲ ಛಾತಿ ಗಳಿಸಿದ. ಕುಲಸ್ಥರ ನ್ಯಾಯ ಪಂಚಾಯ್ತಿ ಮಾತ್ರವಲ್ಲದೆ, ಊರ ಗೌಡರ ಪಂಚಾಯ್ತಿಗಳಲ್ಲೂ ಒಬ್ಬನಾಗಿ ಅವರಿಂದ ಪೇಟೆ ವೆಂಕಟಪ್ಪ ಎಂದೇ ಬಿರುದನ್ನು ಸಂಪಾದಿಸಿದ.

ಪೇಟೆ ವೆಂಕಟಪ್ಪನ ತುಂಬು ಕುಟುಂಬ ಕಡುಬಡತನದಲ್ಲಿಯೇ ಜೀವನ ಸಾಗಿಸತೊಡಗಿತು. ಹೀಗಿದ್ದೂ ತನ್ನ ಪೇಟೆ ಹಿನ್ನೆಲೆಯಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜರುಗುತ್ತಿದ್ದ ವ್ಯಾಜ್ಯ ಪಂಚಾಯ್ತಿಗಳಲ್ಲಿ ಕಾಯಂ ಆಹ್ವಾನಿತನಾಗಿರುತ್ತಿದ್ದ. ತನ್ನ ನ್ಯಾಯ ನಿಷ್ಠುರತೆ, ನಿಷ್ಪಕ್ಷಪಾತ ಹಾಗೂ ನಿರ್ದಾಕ್ಷಿಣ್ಯದ ಕಾರಣಕ್ಕೆ ಕುಲಸ್ಥರಿಂದ ಮೊದಲ್ಗೊಂಡು ಗೌಡರವರೆಗೆ ಆದರ- ಮನ್ನಣೆಗೆ ಪಾತ್ರನಾದ.

ಬೆಂಗಳೂರಿನ ವಾಲ್ಮೀಕಿ ನಗರದಲ್ಲಿದ್ದಾಗ ಚಪ್ಪಲಿ ಹೊಲೆದು, ಹೊಟ್ಟೆ ಹೊರೆಯುತ್ತಿದ್ದ ವೆಂಕಟಪ್ಪ. ಅಲ್ಲದೆ ಆ ಕಾಲಕ್ಕೇ ಮೂರನೆಯ ಇಯತ್ತೆವರೆಗೆ ಓದಿದ್ದ ಆತ, ತನ್ನ ಕುಲದೈವಗಳಾದ ಮಾತಂಗಿಯಿಂದ ಮೊದಲ್ಗೊಂಡು ಅರುಂಧತಿವರೆಗಿನ ಕತೆಗಳನ್ನು ರಸವತ್ತಾಗಿ ವಿವರಿಸಬಲ್ಲವನಾಗಿದ್ದ. ವಾಲ್ಮೀಕಿ ನಗರದಲ್ಲಿದ್ದಾಗ ಹರಿಕತೆಗಳನ್ನೂ ಮಾಡಿ, ಅದರಿಂದಲೂ ಕೊಂಚ ಮಟ್ಟಿನ ಆದಾಯ ಗಳಿಸುತ್ತಿದ್ದ.

ಇವೆಲ್ಲ ಆದಾಯ ಮೂಲಗಳಿಗೆ ಪತ್ನಿಯ ತವರೂರಿನಲ್ಲಿ ಖೋತಾ ಆಗಿತ್ತು. ತನಗಿಂತಲೂ ಕಡುಬಡತನದ ಬದುಕು ಸವೆಸುತ್ತಿದ್ದ ಕುಲಸ್ಥರ ನಡುವೆ ಆತನ ಹರಿಕತೆ ಪ್ರಾವೀಣ್ಯ ಯಾವುದೇ ಬಗೆಯ ಆದಾಯ ಹೊಂಚಿಕೊಡಲು ಸಾಧ್ಯವಿರಲಿಲ್ಲ.

ವಾಲ್ಮೀಕಿ ನಗರದಲ್ಲಿದ್ದಾಗ ಚಪ್ಪಲಿ ಹೊಲೆಯುವುದು, ಹರಿಕತೆ ಹಾಡುವುದರ ಮೂಲಕ ಸಂಪಾದಿಸಿ ತನ್ನ ತುಂಬು ಕುಟುಂಬವನ್ನು ಸಾಗಿಸುತ್ತಿದ್ದ ವೆಂಕಟಪ್ಪ, ಹಾರೋಹಳ್ಳಿಯಲ್ಲಿ ತನ್ನ ವೃತ್ತಿಯನ್ನು ಅನಿವಾರ್ಯವಾಗಿ ಬದಲಿಸಬೇಕಾಗಿ ಬಂದಿತು. ಚಮ್ಮಾರಿಕೆ ಕಸುಬನ್ನು ಸಂಪೂರ್ಣವಾಗಿ ತೊರೆದ ವೆಂಕಟಪ್ಪ ನೇಗಿಲು ಹಿಡಿದು ರೈತನಾದ.

ಆ ಕಾಲಕ್ಕೆ ಹಾರೋಹಳ್ಳಿಯಲ್ಲಿ ದೃಷ್ಟಿ ಹಾಯಿಸಿದಷ್ಟೂ ದೂರ ಸರ್ಕಾರಿ ಗೋಮಾಳ ಹರಡಿಕೊಂಡಿತ್ತು. ಕಲ್ಲು- ಮುಳ್ಳುಗಂಟಿ, ಮರಳು- ಕೆಂಪು ಮಣ್ಣು ಮಿಶ್ರಿತವಾಗಿದ್ದ ಆ ಬಂಜರು ಭೂಮಿಯಲ್ಲಿ ರಾಗಿ, ಹುಚ್ಚೆಳ್ಳು, ಅವರೆಕಾಯಿ, ಸ್ಯಾಮೆ, ನವಣೆಯಂತಹ ಧಾನ್ಯಗಳನ್ನು ಮಾತ್ರ ಬೆಳೆಯಲು ಸಾಧ್ಯವಿತ್ತು. ಅಂತಹ ಭೂಮಿಯನ್ನು ತನ್ನ ಹಿರಿಮಗ ಶಂಕ್ರಪ್ಪನೊಂದಿಗೆ ಉಳುಮೆ ಮಾಡಲು ಶುರು ಮಾಡಿದ. ಸಾಲದ್ದಕ್ಕೆ ಆಗಷ್ಟೇ ಪ್ರೌಢಾವಸ್ಥೆ ತಲುಪಿದ್ದ ತನ್ನ ಐದು ಹಿರಿಯ ಪುತ್ರಿಯರನ್ನೂ ಸಾಗುವಳಿಗೆ ತೊಡಗಿಸಿಕೊಂಡ. ಆದರೆ, ತನ್ನ ಏಳನೆಯ ಮಗನಾದ ನಾರಾಯಣಪ್ಪನ ಬಗ್ಗೆ ವೆಂಕಟಪ್ಪನಿಗೆ ಅದೆಂಥದೊ ವಿಶೇಷ ಪ್ರೀತಿ, ಮಮಕಾರ. ಆತ ಆರನೆಯ ವಯಸ್ಸಿಗೆ ಬರುತ್ತಿದ್ದಂತೆಯೇ ತನ್ನ ಕೇರಿಯಿಂದ ಅರ್ಧ ಕಿಲೋಮೀಟರ್ ದೂರವಿದ್ದ ಸರ್ಕಾರಿ ಶಾಲೆಗೆ ಸೇರಿಸಿದ.

ಓದಿನಲ್ಲಿ ಭಾರೀ ಚೂಟಿಯಾಗಿದ್ದ ನಾರಾಯಣಪ್ಪ, ಗಣಿತದಲ್ಲೂ ವಿಶೇಷ ಹಿಡಿತ ಸಾಧಿಸಿದ. ನಾರಾಯಣಪ್ಪ ಓದುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಲಿಂಗಾಯತರ ಸಿದ್ದಲಿಂಗಪ್ಪನವರಲ್ಲಿ ಇದು ಅಚ್ಚರಿ, ಮೆಚ್ಚುಗೆ ಎರಡನ್ನೂ ಮೂಡಿಸಿತು. ವಿದ್ಯಾಭ್ಯಾಸದಲ್ಲಿ ಸದಾ  ಚುರುಕಾಗಿದ್ದ ನಾರಾಯಣಪ್ಪ ನಾಲ್ಕನೆಯ ಇಯತ್ತೆಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ, ಐದನೆಯ ಇಯತ್ತೆಗೆ ಸೇರಲು ಖುಷಿಯಿಂದ ಅಣಿಯಾದ. ಆಗ ಮುಖ್ಯೋಪಾಧ್ಯಾಯ ಸಿದ್ದಲಿಂಗಪ್ಪನವರ ಬಳಿ ಮಗನೊಂದಿಗೆ ಸರಸರ ಬಂದ ವೆಂಕಟಪ್ಪ, ‘ಸ್ವಾಮೆ, ನನ್ನ ಮೊದಲ್ನೆ ಮಗಳ‌ ಲಗ್ಣ ನಿಶ್ಚಯ ಆಗೈತೆ. ಹಂಗಾಗಿ ಇನ್ನು ಮುಂದೆ ಇವನನ್ನು ಓದಿಸಲು ಆಗಲ್ಲ’ ಎಂದು‌ ‌ವಿನಮ್ರನಾಗಿ ಮನವಿ‌ ಮಾಡಿಕೊಂಡ.

ಸಿದ್ದಲಿಂಗಪ್ಪನವರ ಕರುಳು ಚುರ್ರ್ ಎಂದಿತು. ಕಲಿಕೆಯಲ್ಲಿ ಮುಂದಿದ್ದ ನಾರಾಯಣಪ್ಪನನ್ನು ಅಕಾಲಿಕವಾಗಿ ಶಾಲೆಯಿಂದ ಬಿಡಿಸಲು‌ ವೆಂಕಟಪ್ಪ ಮುಂದಾಗಿದ್ದು ಅವರಲ್ಲಿ ಅಪಾರ ಸಂಕಟ ಉಂಟುಮಾಡಿತು.

ಅವರು, ‘ವೆಂಕ್ಟಪ್ಪ, ಹುಡ್ಗ ತುಂಬಾ ಸೂಟಿಯಾಗಿದ್ದಾನೆ. ಈ‌ ಹೊತ್ನಲ್ಲಿ‌ ಅವ್ನ‌ ಶಾಲೆ ಬಿಡಿಸ್ಬ್ಯಾಡ. ಅವ್ನ ಭವಿಷ್ಯಕ್ಕೆ ನೀನೆ ಅಡ್ಡಿ ಮಾಡ್ದಂಗಾಯ್ತದೆ. ಇನ್ನು ಅವ್ನ ವಿದ್ಯಾಭ್ಯಾಸದ ಖರ್ಚಿನ ಬಗ್ಗೆ ಚಿಂತಿಸ್ಬ್ಯಾಡ. ಅವನ ವಿದ್ಯಾಭ್ಯಾಸದ ಖರ್ಚನ್ನು ನಾನೇ ನೋಡ್ಕಂತೀನಿ. ನೀನು ಅವ್ನ ಶಾಲೆಯನ್ನು ಮಾತ್ರ ತಪ್ಪಿಸ್ಬ್ಯಾಡ’ ಎಂದು ಸ್ಪಷ್ಟವಾಗಿ ತಾಕೀತು ಮಾಡಿದರು. ವೆಂಕಟಪ್ಪ ಕೂಡಾ ಮೂರನೇ ಇಯತ್ತೆವರೆಗೆ ಓದಿದ್ದುದರಿಂದ ಹಾಗೂ ನಾರಾಯಣಪ್ಪನ ಬಗ್ಗೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದರಿಂದ ಅವರ ಮಾತಿಗೆ ಎದುರಾಡದೆ ನಾರಾಯಣಪ್ಪನನ್ನು ಕರೆದುಕೊಂಡು ಮನೆಗೆ ಮರಳಿ ಬಂದ.

ಇದಾದ ನಂತರ ನಾರಾಯಣಪ್ಪ ಸಿದ್ದಲಿಂಗಪ್ಪ ಮೇಷ್ಟರ ಅಚ್ಚುಮೆಚ್ಚಿನ ಶಿಷ್ಯನಾದ. ಅದಾಗಲೇ ಗಣಿತದಲ್ಲಿ ಮುಂದಿದ್ದ ನಾರಾಯಣಪ್ಪ, ಇದೀಗ ಇಂಗ್ಲಿಷ್ ಭಾಷೆಯ ಮೇಲೂ ಹಿಡಿತ ಸಾಧಿಸಿದ. ಅಲ್ಲದೆ ಸಿದ್ದಲಿಂಗಪ್ಪ ಮೇಷ್ಟ್ರು ನಾರಾಯಣಪ್ಪನಿಗೂ ಇಷ್ಟವಾದ್ದರಿಂದ ಬೆಳಗಾನೆ ಎದ್ದು, ಅವರ ಮನೆಗೋಗಿ ಪಾತ್ರೆ-ಸಾಮಾನು ತೊಳೆಯುವುದು, ಬಟ್ಟೆ ಒಗೆದು ಕೊಡುವುದನ್ನೆಲ್ಲ ಮಾಡತೊಡಗಿದ. ಸಿದ್ದಲಿಂಗಪ್ಪ ಮೇಷ್ಟ್ರೂ ಆತನಿಗೆ ಬೆಳಗಿನ ಉಪಾಹಾರ, ಕಾಫಿಯೊಂದಿಗೆ ಗಣಿತ, ಇಂಗ್ಲಿಷ್ ಪಾಠವನ್ನು ಪ್ರತ್ಯೇಕ ಮುತುವರ್ಜಿಯಿಂದ ಹೇಳಿಕೊಡತೊಡಗಿದರು. ಇದು ನಾರಾಯಣಪ್ಪನ ಜೀವನ ಪಥವನ್ನೇ ಬದಲಿಸಿಬಿಟ್ಟಿತು.

ಎಂಟನೇ ತರಗತಿಯಿಂದ ಹತ್ತನೆಯ ತರಗತಿವರೆಗೆ ಹಾಸ್ಟೆಲ್‌ನಲ್ಲಿದ್ದುಕೊಂಡು ಓದಿದ ನಾರಾಯಣಪ್ಪ, ಹತ್ತನೆ ತರಗತಿಯನ್ನು ಒಂದೇ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ. ಇದು ಆತನ ಪಾಲಿಗೆ ಅಸಾಮಾನ್ಯ ಸಾಧನೆಯೇ ಆಗಿತ್ತು. ಇದರ ಬೆನ್ನಿಗೇ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕ ನೌಕರಿಯೂ ದೊರಕಿಬಿಟ್ಟಿತು.

ಅಪ್ಪ- ಅಮ್ಮ ಆ ನೌಕರಿಗೆ ಸೇರುವುದು ಬೇಡ ಎಂದು ಎಷ್ಟೇ ಅಡ್ಡಿಪಡಿಸಿದರೂ ಪಟ್ಟು ಬಿಡದ ನಾರಾಯಣಪ್ಪ, ತನ್ನ ಹುಟ್ಟೂರಿನಿಂದ ಸುಮಾರು ಐವತ್ತು ಕಿಲೋಮೀಟರ್ ದೂರವಿದ್ದ ಬಿದರಳ್ಳಿಗೆ ಶಿಕ್ಷಕನಾಗಿ ಹೊರಟೇಬಿಟ್ಟ. ಅಮ್ಮನ ಕಣ್ಣೀರು, ತಂದೆಯ ಅಸಮಾಧಾನ- ಇವ್ಯಾವುದೂ ಆತನನ್ನು ತನ್ನ ನಿರ್ಧಾರದಿಂದ ಕದಲಿಸಲು ಸಾಧ್ಯವಾಗಲಿಲ್ಲ. ಭಾರವಾದ ಮನಸ್ಸಿನಿಂದಲೇ ವೆಂಕಟಪ್ಪ ದಂಪತಿ ನಾರಾಯಣಪ್ಪನನ್ನು ದೂರದ ಬಿದರಳ್ಳಿಗೆ ಕಳಿಸಿಕೊಟ್ಟರು. ಈ ಹೊತ್ತಿನಲ್ಲಿ ನಾರಾಯಣಪ್ಪನ ತಾಯಿ ಮುತ್ತಮ್ಮನ ಕಣ್ಣೀರ ಕಟ್ಟೆಯೊಡೆದು ಕೋಡಿಯಂತೆ ಹರಿಯಿತು.

ಬಿದರಳ್ಳಿಯಲ್ಲಿ ಸಂಬಂಧಿಕರೇ ಇರುವ ಜಾಗವನ್ನು ಹುಡುಕಿ, ನಾರಾಯಣಪ್ಪನಿಗೆ ಅಲ್ಲೊಂದು ರೂಮಲ್ಲಿ ವಾಸ್ತವ್ಯ ಮಾಡಿಕೊಟ್ಟ ವೆಂಕಟಪ್ಪ. ಊರಿಗೆ ಹಿಂದಿರುಗುವಾಗ ವೆಂಕಟಪ್ಪನೂ ಕಣ್ಣೀರ ನದಿಯಾಗಿದ್ದ. ಆದರೆ, ಹೊಸ ಬದುಕಿನ ಉತ್ಸಾಹದಲ್ಲಿದ್ದ ನಾರಾಯಣಪ್ಪ ಅದನ್ನೆಲ್ಲ ಪೋಷಕರ ಸಹಜ ಭಾವುಕತೆ ಎಂದೇ ಭಾವಿಸಿ, ವಿಶೇಷ ಪ್ರತಿಕ್ರಿಯೆ ತೋರಲಿಲ್ಲ.

***

ವೆಂಕಟಪ್ಪ ಹಾರೋಹಳ್ಳಿಗೆ ಮರಳುತ್ತಿದ್ದಂತೆಯೇ ಎಂದಿನಂತೆ ಬೇಸಾಯ, ನ್ಯಾಯ- ಪಂಚಾಯ್ತಿಗಳಲ್ಲಿ ಮುಳುಗಿ ಹೋದ. ನೌಕರಿಗೆ ಸೇರಿದ್ದ ನಾರಾಯಣಪ್ಪ, ಮನೆ ಖರ್ಚಿಗೆ ತನ್ನ ಕೈಲಾದಷ್ಟು ಹಣ ನೀಡುತ್ತಿದ್ದುದರಿಂದ ಆತನ ತುಂಬು ಕುಟುಂಬ ಒಂದಿಷ್ಟು ಚೇತರಿಸಿಕೊಂಡಿತು. ಮನೆಯಲ್ಲಿ ಹಿಂದೆಂದೂ ಇಲ್ಲದ ಲವಲವಿಕೆ, ಸಂತೋಷ ಮನೆ ಮಾಡಿತ್ತು.

ಈ ನಡುವೆ ಇಡೀ ಮಾದಿಗರ ಕೇರಿಯಲ್ಲೇ ನಾರಾಯಣಪ್ಪ ಎಸ್.ಎಸ್.ಎಲ್.ಸಿ. ತೇರ್ಗಡೆಯಾಗಿದ್ದರಿಂದಲೂ, ಅದರ ಬೆನ್ನಿಗೇ ಸರ್ಕಾರಿ ನೌಕರಿ ಕೂಡಾ ದೊರೆತದ್ದರಿಂದಲೂ ವೆಂಕಟಪ್ಪನ ವಜನು ತನ್ನ ಕೇರಿಯಲ್ಲಿ ಮಾತ್ರವಲ್ಲದೆ, ಊರ ಗೌಡರ ಪೈಕಿಯೂ ಹೆಚ್ಚಿತು. ಆದರೆ, ಈ ಸಂಭ್ರಮ ವೆಂಕಟಪ್ಪನ ಪಾಲಿಗೆ ಹೆಚ್ಚು ದಿನ ಉಳಿಯಲಿಲ್ಲ.

ಆಸ್ತಿ ವ್ಯಾಜ್ಯದಲ್ಲಿ ಪರ್ಯಾವಸಾನಗೊಂಡು ಪೇಟೆಯಿಂದ ವಲಸೆ ಬಂದಿದ್ದ ವೆಂಕಟಪ್ಪ ಹಾಗೂ ತಂಗಿಯನ್ನು ಆತನ ಭಾಮೈದುನರು ಮನೆಯಿಂದ ಹೊರ ಹಾಕಿದರು. ಅದಕ್ಕೆ ಗೌಡರ ಹಟ್ಟಿಯಲ್ಲೇ ವೆಂಕಟಪ್ಪನ ಏಳಿಗೆ ಕಂಡು ಕರುಬುತ್ತಿದ್ದ ಕೆಲವರ ಕುಮ್ಮಕ್ಕೂ ಇತ್ತು.

ಹುಟ್ಟಿನಿಂದಲೇ ಛಲ, ರೋಷ, ಸಿಟ್ಟುಗಳನ್ನು ಮೈಗೂಡಿಸಿಕೊಂಡೇ ಬೆಳೆದಿದ್ದ ವೆಂಕಟಪ್ಪ, ತನಗಾದ ಅವಮಾನಕ್ಕೆ ತಿರುಗೇಟು ನೀಡಲು ತನ್ನ ಭಾಮೈದುನರ ಮನೆಯೆದುರಿಗೇ ಗುಡಿಸಲು ಹಾಕಿ, ತನ್ನ ತುಂಬು ಕುಟುಂಬವನ್ನು ಅಲ್ಲಿ ಸಲಹತೊಡಗಿದ. ನೌಕರಿಯಲ್ಲಿದ್ದ ನಾರಾಯಣಪ್ಪ ಕೂಡಾ ತನ್ನ ಕುಟುಂಬಕ್ಕೆ ಆರ್ಥಿಕ ಆಸರೆ ಒದಗಿಸಿದ್ದರಿಂದ ವೆಂಕಟಪ್ಪ ತನ್ನ ಬೆನ್ನಿಗೆ ಬಿದ್ದಿದ್ದ ಇಬ್ಬರು ತಮ್ಮಂದಿರನ್ನು ಕೂಡಿಸಿಕೊಂಡು ದೊಡ್ಡದೊಂದು ಭತ್ತದ ಹುಲ್ಲಿನ ವಠಾರದಂತಹ ಗುಡಿಸಲನ್ನೇ ಕಟ್ಟಿದ. ವಠಾರದ ಮಾದರಿಯಲ್ಲಿದ್ದ ಆ ಗುಡಿಸಿಲಿನ ಎರಡು ಕೋಣೆಯಲ್ಲಿ ತನ್ನ ತಮ್ಮಂದಿರನ್ನೂ, ಮಧ್ಯದಲ್ಲಿ ಹಜಾರವನ್ನೂ, ಗುಡಿಸಿಲಿನ ಬಲಬದಿಯಲ್ಲಿ ಕೊಟ್ಟಿಗೆಯನ್ನೂ ನಿರ್ಮಿಸಿ, ಆ ಕಾಲಕ್ಕೇ ಹೆಂಚಿನ ಮನೆ ಕಟ್ಟಿಸಿ ಕೇರಿಯಲ್ಲಿ ಸಾಹುಕಾರರೆನ್ನಿಸಿಕೊಂಡಿದ್ದ ಭಾಮೈದುನರಿಗೆ ಸೆಡ್ಡು ಹೊಡೆದ.

ವೆಂಕಟಪ್ಪ ನ್ಯಾಯ- ಪಂಚಾಯ್ತಿಗಳಲ್ಲಿ ಕುಲೀನರಿಂದಲೇ ಮೆಚ್ಚುಗೆ, ಗೌರವಕ್ಕೆ ಪಾತ್ರನಾಗಿದ್ದ. ಆತನ ನಿಷ್ಠುರ ನ್ಯಾಯ ತೀರ್ಮಾನಗಳಿಗೆ ಇಡೀ ಗೌಡರ ಹಟ್ಟಿಯೇ ಮರುಮಾತಾಡದೆ ತಲೆದೂಗುತ್ತಿತ್ತು. ಇಂತಹ ಉತ್ಕರ್ಷದ ಕಾಲದಲ್ಲಿಯೇ ವೆಂಕಟಪ್ಪನ ಕೇರಿಗೆ ಗ್ರಾಮ ಪಂಚಾಯ್ತಿ ಚುನಾವಣೆ ಕಾಲಿಟ್ಟಿತು. ಕೆಲವು ಸಹಮನಸ್ಕರ ಒತ್ತಡದ ಕಾರಣಕ್ಕೆ ಚುನಾವಣೆಗೂ ಸ್ಪರ್ಧಿಸಿದ.

ಇದು ವೆಂಕಟಪ್ಪನ ಭಾಮೈದುನರಲ್ಲಿ ಅಸೂಯೆಯ ರಣಕಿಚ್ಚನ್ನೇ ಹುಟ್ಟಿಸಿತು. ವೆಂಕಟಪ್ಪನ ಎದುರಿಗೆ ಆತನ ಹಿರಿಯ ಭಾಮೈದುನ ಕರಿಯಣ್ಣ ಕೂಡಾ ಸ್ಪರ್ಧೆಗಿಳಿದ. ಇದರಿಂದ ವೆಂಕಟಪ್ಪನೇನೂ ಕಂಗೆಡಲಿಲ್ಲ. ಇಡೀ ಕುಲಸ್ಥರಲ್ಲೇ ನಿಷ್ಠುರ ನ್ಯಾಯಸ್ಥ ಎಂದು ಹೆಸರು ಗಳಿಸಿದ್ದ ಆತನಿಗೆ ತಾನು ಗೆಲ್ಲುವ ಅದಮ್ಯ ವಿಶ್ವಾಸವಿತ್ತು. ಅದಕ್ಕೆ ತಕ್ಕಂತೆ ಕುಲಸ್ಥರೂ ವೆಂಕಟಪ್ಪನ ಪರವಾಗಿಯೇ ನಿಂತಿದ್ದರು. ಆದರೆ, ಚುನಾವಣೆಯ ಹಿಂದಿನ ರಾತ್ರಿ ಹೊತ್ತಿಗೆ ಎಲ್ಲವೂ ತಲೆಕೆಳಗಾಗಿತ್ತು.

ಭಾವನ ಏಳಿಗೆಯಿಂದ ಕನಲಿ ಹೋಗಿದ್ದ ಭಾಮೈದುನರ ಕುಟುಂಬಗಳು, ಇಡೀ ಕೇರಿಯಲ್ಲಿ ‘ವೆಂಕಟಪ್ಪ ತಳವಂದಿಗನಲ್ಲ; ಆತ ಪ್ಯಾಟೆಯಿಂದ ವಲಸೆ ಬಂದವನು. ಈ ಚುನಾವಣೆಯಲ್ಲಿ ತಳವಂದಿಗರು ಮಾತ್ರ ಗೆಲ್ಲಬೇಕು’ ಎಂದು ವ್ಯವಸ್ಥಿತ ಪ್ರಚಾರ ಮಾಡಿದವು. ತಳವಂದಿಗತನವನ್ನು ಅಗತ್ಯಕ್ಕಿಂತ ಹೆಚ್ಚೇ ಭಾವನಾತ್ಮಕ ವಿಷಯವಾಗಿಸಿಕೊಂಡ ಕೇರಿಯ ಜನ, ನ್ಯಾಯ ನಿಷ್ಠುರಿ ವೆಂಕಟಪ್ಪನ ಬದಲಿಗೆ ತಳವಂದಿಗ ಕರಿಯಣ್ಣನನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡರು. ವೆಂಕಟಪ್ಪನ ಬೆಳವಣಿಗೆ ಕಂಡು ಮೊದಲಿನಿಂದಲೂ ಕರುಬುತ್ತಿದ್ದ ಕೆಲ ಗೌಡರೂ ಅದಕ್ಕೆ ತಮ್ಮ ಕೈಲಾದ ಕುಮ್ಮಕ್ಕು ನೀಡಿದರು. ತನ್ನ ಕೇರಿಯ ಕುಲಸ್ಥರ ಎಲ್ಲ ನ್ಯಾಯ- ಪಂಚಾಯ್ತಿಗಳನ್ನು ಶ್ರದ್ಧೆಯಿಂದ, ನ್ಯಾಯವಂತಿಕೆಯಿಂದ ಮಾಡಿ, ಅವರ ಮೆಚ್ಚುಗೆ, ವಿಶ್ವಾಸಕ್ಕೆ ಪಾತ್ರನಾಗಿದ್ದ ವೆಂಕಟಪ್ಪನಿಗೆ ಚುನಾವಣೆಯ ಸೋಲು ತೀರಾ ಆಘಾತವನ್ನುಂಟು ಮಾಡಿತು. ತನ್ನ ಕಡೆಯ ದಿನಗಳಲ್ಲಿ ಅದೇ ಕೊರಗನ್ನು ಅನುಭವಿಸಿದ ವೆಂಕಟಪ್ಪ, ತನ್ನ ತೊಂಬತ್ತನೆಯ ವಯಸ್ಸಿನಲ್ಲಿ ಕೊನೆಯುಸಿರೆಳೆದ.

***

ಅಪ್ಪನ ತದ್ರೂಪಿನಂತೆಯೇ ಇದ್ದ ನಾರಾಯಣಪ್ಪ, ತಾನು ವಾಸಿಸುತ್ತಿದ್ದ ಕೇರಿಯಲ್ಲೇ ನ್ಯಾಯ- ಪಂಚಾಯ್ತಿ, ಸರ್ಕಾರಿ ಸವಲತ್ತುಗಳಿಗಾಗಿ ಕಚೇರಿಗಳಿಗೆ ಅಲೆದಾಟ, ದುರ್ಬಲರ ಸಂಘಟನೆ ಇತ್ಯಾದಿಗಳೊಂದಿಗೆ ರಾಜಕೀಯ ಬೆಳವಣಿಗೆಯ ಮಹತ್ವಾಕಾಂಕ್ಷೆಯನ್ನೂ ತನ್ನೆದೆಯೊಳಗೆ ಹುದುಗಿಸಿಕೊಂಡ.

ಬಿದರಳ್ಳಿಯಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಿದಾಗ ತನ್ನದೇ ಕೇರಿಯ ರಾಜಕುಮಾರನೆದುರು ವೀರೋಚಿತ ಸೋಲನ್ನಪ್ಪಿದ. ಅದು ನಾರಾಯಣಪ್ಪನನ್ನು ಕಂಗೆಡಿಸುವ ಬದಲು ಮತ್ತಷ್ಟು ಹುಮ್ಮಸ್ಸು ಮೂಡಿಸಿತು. ತನ್ನ ಕೇರಿಯ ಜನರ ಕೆಲಸ, ಸಂಘಟನೆಯ ಕೆಲಸದಲ್ಲಿ ಆಳವಾಗಿ ತೊಡಗಿಸಿಕೊಂಡರು. ಮುಂದೊಮ್ಮೆ ತಾನು ತನ್ನ ಜನರ ನಾಯಕನಾಗಿಯೇ ತೀರುತ್ತೇನೆ ಎಂಬ ವಿಶ್ವಾಸದಲ್ಲಿ ಜನಾನುರಾಗ ಗಳಿಸತೊಡಗಿದ. ವಿದ್ಯಾವಂತ, ಅಪಾರ ಜನಸಂಪರ್ಕಗಳಿದ್ದ ನಾರಾಯಣಪ್ಪನನ್ನು ಕೇರಿಯ ಜನರೂ ಗೌರವಿಸುತ್ತಿದ್ದರು. ***

ಬಿದರಳ್ಳಿಯ ಮಾದಿಗರ ಕೇರಿಯಲ್ಲಿ ಊರ ಹಬ್ಬಕ್ಕೆ ಸಕಲ ತಯಾರಿಯೂ ನಡೆದಿತ್ತು. ಕೇರಿಯ ರಸ್ತೆಗಳೆಲ್ಲ ರಂಗೋಲಿಯಿಂದ ಕಂಗೊಳಿಸುತ್ತಿದ್ದವು. ಕೇರಿಯ ಎಲ್ಲ ಮನೆಗಳೂ ತಳಿರು- ತೋರಣ, ಹೂವುಗಳಿಂದ ಸಿಂಗಾರಗೊಂಡಿದ್ದವು. ಊರ ದೇವರಿಗೆ ಕೇರಿಯ ಹೆಂಗಳೆಯರು ಆರತಿಯನ್ನು ಹೊತ್ತು ಶಿಸ್ತಿನಿಂದ ದೊಡ್ಡಮ್ಮ ದೇವಸ್ಥಾನದೆದುರು ಸಾಲುಗಟ್ಟಿ ನಿಂತಿದ್ದರು. ಕುರಿ, ಮೇಕೆಗಳನ್ನು ಬಲಿ ಕೊಡಲು ಮಂತ್ರಿಸಿದ ಆಯುಧಗಳನ್ನಿಡಿದು, ಆವೇಶವನ್ನು ಮೈಮೇಲೆ ಆವಾಹಿಸಿಕೊಂಡಿದ್ದ ಯುವ ಕಟುಕರು ಸನ್ನದ್ಧರಾಗಿ ನಿಂತಿದ್ದರು. ಊರ ದೇವಸ್ಥಾನದ ಪೂಜಾರಿ ಹನುಮಂತಪ್ಪ ದೇವರಿಗೆ ಆರತಿ ಬೆಳಗಿ, ಮಂತ್ರಿಸಿದ ನೀರನ್ನು ಕುರಿ, ಮೇಕೆಗಳ ತಲೆಗೆ ಸಿಂಪಡಿಸುತ್ತಿದ್ದಂತೆಯೇ ಅವು ತಲೆಯನ್ನು ಭೀತಿಯಿಂದ ಒದರಿದವು. ಇದು ತಮ್ಮನ್ನು ಬಲಿ ನೀಡಲು ಕುರಿ, ಮೇಕೆಗಳ ಸಮ್ಮತಿ ಎಂದೇ ಪ್ರತೀತಿ.

ದೇವರನ್ನು ಅಕ್ಷರಶಃ ಮೈಮೇಲೆ ಆವಾಹಿಸಿಕೊಂಡು ಆವೇಶದಿಂದ ಕುಣಿಯುತ್ತಿದ್ದ ಕಟುಕರು, ತಮ್ಮ ಹುರಿಗಟ್ಟಿದ ರಟ್ಟೆಗಳಿಗೆ ಶಕ್ತಿಯನ್ನೆಲ್ಲ ತುಂಬಿಕೊಂಡು ರಭಸದಿಂದ ಕುರಿ- ಮೇಕೆಗಳ ರುಂಡ- ಮುಂಡಗಳನ್ನು ಚೆಂಡಾಡಿದರು. ಈ ಎದೆ ಝಲ್ಲೆನ್ನಿಸುವ ರಕ್ತತರ್ಪಣದ ಅಂಕ ಮುಗಿಯುತ್ತಿದ್ದಂತೆಯೇ ಕುರಿ-ಮೇಕೆಗಳ ಚರ್ಮ ಸುಲಿದು, ಅವುಗಳ ಅಂಗ, ಖಂಡಗಳನ್ನೆಲ್ಲ ಚೂರಿಯಿಂದ ಬೇರ್ಪಡಿಸಿ, ಅವುಗಳನ್ನು ನಿರ್ದಿಷ್ಟ ಗಾತ್ರದ ತುಂಡುಗಳನ್ನಾಗಿ ತುಂಡರಿಸುವ ಕೆಲಸವನ್ನು ನುರಿತ ಕೆಲಸಗಾರರು ಮಾಡುತ್ತಿದ್ದರು. ಮಾಂಸವನ್ನು ತುಂಡರಿಸುವ ಕೆಲಸ ಪೂರ್ಣಗೊಂಡ ನಂತರ ಎಲ್ಲವನ್ನೂ ಒಟ್ಟುಗೂಡಿಸಿ, ದೇವಸ್ಥಾನದ ಎದುರಿದ್ದ, ಗುಡ್ಡೆ ಬಾಡು ಹಾಕಲೆಂದೇ ಆಗಷ್ಟೆ ತೊಳೆದು ಶುಚಿಗೊಳಿಸಿದ್ದ ಚಪ್ಪಡಿಯ ಮೇಲೆ ಗುಡ್ಡೆ ಹಾಕಲಾಗುತ್ತಿತ್ತು. ಅದು ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ಸಂಪ್ರದಾಯವಾಗಿತ್ತು.

ಊರ ಹಬ್ಬದ ಮುಂದಾಳುಗಳಲ್ಲಿ ಒಬ್ಬನಾಗಿದ್ದ ನಾರಾಯಣಪ್ಪನಿಗೆ ಈ ಬಾರಿ ಅದೇಕೋ ಸರಿ ಕಾಣಲಿಲ್ಲ. ಸಾಕಷ್ಟು ಓದಿಕೊಂಡಿದ್ದ, ಆರೋಗ್ಯ, ವಿಜ್ಞಾನದ ಬಗ್ಗೆ ಆಗಲೇ ತಕ್ಕಮಟ್ಟಿನ ಅರಿವು ಬೆಳೆಸಿಕೊಂಡಿದ್ದ ನಾರಾಯಣಪ್ಪ, ‘ಚಪ್ಪಡಿಯ ಮೇಲೆ ಮಾಂಸದ ಗುಡ್ಡೆ ಹಾಕುವುದರಿಂದ ಮಾಂಸ ಗಲೀಜಾಗುತ್ತದೆ. ಅಲ್ಲದೆ ಅದನ್ನು ತಿನ್ನುವುದರಿಂದ ರೋಗ ಬರುವ ಸಾಧ್ಯತೆಯಿದ್ದು, ಸಾಂಕ್ರಾಮಿಕ ರೋಗಕ್ಕೂ ಕಾರಣವಾಗಬಹುದು. ಆದ್ದರಿಂದ ಮಾಂಸವನ್ನು ಚಪ್ಪಡಿಯ ಬದಲು ಹಲಗೆಗಳ ಮೇಲೆ ಗುಡ್ಡೆ ಹಾಕೋಣ’ ಎಂದು ತನ್ನೊಂದಿಗಿನ ಇತರ ಮುಂದಾಳುಗಳಿಗೆ ಸಲಹೆ ನೀಡಿದ.

ಊರ ಹಬ್ಬದ ಮುಂದಾಳುಗಳ ಪೈಕಿ ನಾರಾಯಣಪ್ಪನಷ್ಟೇ ಮುಖ್ಯವಾಗಿದ್ದ, ತಾನೂ ಪ್ರಾಥಮಿಕ ಶಾಲೆಯ ಮೇಷ್ಟ್ರಾಗಿದ್ದ, ಮಹಾನ್ ದೈವಭಕ್ತನೂ ಆಗಿದ್ದ ದೊಡ್ಡಪ್ಪನಿಗೆ ನಾರಾಯಣಪ್ಪನ ಸಲಹೆ ಊರ ದೇವತೆಗೆ ಮಾಡುವ ಅಪಚಾರದಂತೆಯೇ ಕಂಡಿತು. ‘ಹಂಗೇನಾದರೂ ಮಾಡಿದರೆ ದೊಡ್ಡಮ್ಮ ನಮ್ಮ ಮೇಲೆ ಮುನಿದಾಳು’ ಎಂದು ಖಚಿತವಾದ ಧ್ವನಿಯಲ್ಲಿ ನಾರಾಯಣಪ್ಪನ ಸಲಹೆಯನ್ನು ತಳ್ಳಿ ಹಾಕಿದ ದೊಡ್ಡಪ್ಪ. ನಾರಾಯಣಪ್ಪನ ಬಗ್ಗೆ ಅದೆಷ್ಟೇ ವಿಶ್ವಾಸ-ಆದರವಿರಿಸಿಕೊಂಡಿದ್ದರೂ, ದೊಡ್ಡಮ್ಮನ ಬಗ್ಗೆ ವಿಪರೀತ ಭಕ್ತಿ- ಶ್ರದ್ಧೆಯಿಟ್ಟುಕೊಂಡಿದ್ದ ಇತರ ಮುಂದಾಳುಗಳಿಗೆ ದೊಡ್ಡಪ್ಪ ಮೇಷ್ಟ್ರ ಮಾತೇ ಸರಿ ಎನಿಸಿತು. ಹೀಗಾಗಿ ಅವರೂ ದೊಡ್ಡಪ್ಪ ಮೇಷ್ಟ್ರ ಮಾತನ್ನು ಬಲವಾಗಿ ಸಮರ್ಥಿಸಿದರು.

ನಾರಾಯಣಪ್ಪ ಈ ಅನಿರೀಕ್ಷಿತ ಪ್ರತಿರೋಧವನ್ನು ನಿರೀಕ್ಷಿಸಿರಲಿಲ್ಲ. ಅದಕ್ಕೆ ಕಾರಣವೂ ಇತ್ತು. ಆರೋಗ್ಯದ ಕಾಳಜಿಯಿಂದ ನೀಡಿರುವ ತನ್ನ ಸಲಹೆಯನ್ನು ನನ್ನ ಬಗ್ಗೆ ಅಪಾರ ವಿಶ್ವಾಸವಿರಿಸಿಕೊಂಡಿರುವ ಕೇರಿಯ ಜನ ಒಪ್ಪುತ್ತಾರೆ ಎಂದೇ ಆತ ಬಲವಾಗಿ ನಂಬಿಕೊಂಡಿದ್ದ. ಆದರೆ, ತುಂಬಿದೂರಿನ ಎದುರು ತನ್ನ ಸಲಹೆ ತಿರಸ್ಕೃತಗೊಂಡಾಗ ಅದನ್ನು ತನಗೆ ಉದ್ದೇಶಪೂರ್ವಕವಾಗಿಯೇ ಮಾಡಲಾದ ಅವಮಾನ ಎಂದು ಬಗೆದ. ಅಲ್ಲಿಂದಾಚೆಗೆ ಇಡೀ ಕೇರಿಯ ವ್ಯವಹಾರಗಳಿಂದಲೇ ದೂರವಾದ ನಾರಾಯಣಪ್ಪ. ಈ ಘಟನೆಯ ನಂತರ ಸಣ್ಣಪುಟ್ಟ ವಿಷಯಗಳಿಗೆಲ್ಲ ನೆರೆಹೊರೆಯವರೊಂದಿಗೆ ಜಗಳಕ್ಕಿಳಿಯತೊಡಗಿದ. ಇದು ಹೊಸ ತಲೆಮಾರಿನ ಜನಾಂಗ ತನ್ನ ಕಣ್ಣೆದುರು ಬೆಳೆದು ನಿಂತಾಗಲೂ ನಿಲ್ಲಲಿಲ್ಲ; ಬದಲಿಗೆ ದುಪ್ಪಟ್ಟಾಗುತ್ತಲೇ ಹೋಯಿತು. ಇಡೀ ಕೇರಿಯ ಜನ ನಾರಾಯಣಪ್ಪನನ್ನು ‘ಕಿತಾಪತಿ’ ನಾರಾಯಣಪ್ಪ ಎಂದು ಅಡ್ಡ ಹೆಸರಿನಲ್ಲಿ ಗೇಲಿ ಮಾಡಿ, ಕಟಕಿಯಾಡತೊಡಗಿದರು. ನಾರಾಯಣಪ್ಪ ಇಡೀ ಕೇರಿಯಲ್ಲಿ ಅಕ್ಷರಶಃ ದ್ವೀಪವಾದ.

***

ಎರಡು ತಿಂಗಳಿನಿಂದ ನಾರಾಯಣಪ್ಪ ಸನ್ನಿಗೊಳಗಾದವನಂತೆ ವರ್ತಿಸತೊಡಗಿದ್ದ. ಮಾತಿಗೆ ಮೊದಲು, ‘ನಾನ್ಯಾರಿಗೂ ದ್ರೋಹ ಮಾಡಿಲ್ಲ; ನಾನ್ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದು ಬಡಬಡಿಸತೊಡಗಿದ್ದ. ಇದರಿಂದ ಕಂಗಾಲಾದ ನಾರಾಯಣಪ್ಪನ ಕುಟುಂಬ, ಆತನಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲು ಶುರು ಮಾಡಿತು. ಆ ಚಿಕಿತ್ಸೆ ಫಲಕಾರಿಯಾಗದೆ, ಉನ್ಮಾದ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಕೇರಿಯ ಜನ ‘ಹುಚ್ಚು ಹಿಡಿದೈತಂತೆ’, ‘ಗ್ಯಾನ ತಪ್ಪೈತಂತೆ’, ‘ದೇವರು ಮೈಮೇಲೆ ಬಂದವ್ನಂತೆ’, ‘ಮೈಯೊಳಕ್ಕೆ ದೆವ್ವ ಹೊಕ್ಕೈತಂತೆ’ ಎಂದು ತಮಗೆ ತೋಚಿದಂತೆ ಮಾತನಾಡಿಕೊಳ್ಳತೊಡಗಿದರು.

ನಾರಾಯಣಪ್ಪ ಅಂದು ಬೆಳಿಗ್ಗೆ ಕೂಡಾ ತನ್ನ ಕಿರಿಯ ಮಗ ಚಿದಾನಂದನೊಂದಿಗೆ, ‘ನಾನು ಯಾರ್ಗೂ ಏನೂ ಮಾಡಿಲ್ಲವಾ? ಯಾಕೆ ಯಾರೂ ನನ್ನ ಕಷ್ಟ-ಸುಖ ಕೇಳುವುದಿಲ್ಲ? ನನ್ನ ಸಂಬಂಧಿಗಳ್ಯಾಕೆ ನನ್ನನ್ನು ನೋಡಲು ಬರುವುದಿಲ್ಲ?’ ಎಂದು ಬಡಬಡಿಸಿದ್ದ. ಮಗ ‘ನಿನ್ನನ್ನು ನೋಡಿಕೊಳ್ಳಲು ನಾವಿದ್ದೀವಲ್ಲ? ಎಲ್ಲವನ್ನೂ ಮರೆತು ಬೇಗ ಹುಷಾರಾಗು. ಇರುವಷ್ಟು ದಿನ ಸುಖ- ನೆಮ್ಮದಿಯಿಂದ ಬದುಕುವಿಯಂತೆ’ ಎಂದು ಸಮಾಧಾನ ಹೇಳಿ ತನ್ನ ಅಂಗಡಿಗೆ ತೆರಳಿದ್ದ.

ಈಗ ಎರಡು ತಿಂಗಳಿಂದ ನಾರಾಯಣಪ್ಪನ ಉನ್ಮಾದ ಸ್ಥಿತಿಯನ್ನು ಸಂಭಾಳಿಸುವುದರಲ್ಲೇ ಸೋತು ಹೈರಾಣಾಗಿದ್ದ ಪತ್ನಿ ಕೆಂಚಮ್ಮ, ಆತನ ಯಾವ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳದೆ, ಮಟಮಟ ಮಧ್ಯಾಹ್ನ ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಹಿಡಿಯಲು ಕೊಡ ತೆಗೆದುಕೊಂಡು ಹೋದಳು. ಅಲ್ಲಿಯವರೆಗೆ ನಡುಮನೆಯಲ್ಲಿ ಕೂತು ಬಾಯಿಗೆ ಬಂದಿದ್ದನ್ನು ಬಡಬಡಿಸುತ್ತಿದ್ದ ನಾರಾಯಣಪ್ಪ, ದಿಢೀರನೆ ತನ್ನ ಕೋಣೆ ಸೇರಿ ಚಿಲಕ ಹಾಕಿಕೊಂಡ. ಇದು ಕೆಂಚಮ್ಮನ ಗಮನಕ್ಕೆ ಬರಲಿಲ್ಲ.

ಸೊಂಟಕ್ಕೆ ಕಟ್ಟಿಕೊಂಡಿದ್ದ ಪಂಚೆಯನ್ನು ಕಳಚಿ, ‘ನಾನ್ಯಾರಿಗೂ ಮೋಸ ಮಾಡಿಲ್ಲ; ನಾನ್ಯಾರಿಗೂ ಅನ್ಯಾಯ ಮಾಡಿಲ್ಲ’ ಎಂದು ಮತ್ತೆ ಬಡಬಡಿಸಿ ಮಂಚವೇರಿದ. ಮಂಚದ ನೇರಕ್ಕಿದ್ದ ಫ್ಯಾನಿಗೆ ಕುಣಿಕೆ ಬಿಗಿದ ನಾರಾಯಣಪ್ಪ, ‘ನನಗಿನ್ನು ಬದುಕು ಸಾಕು’ ಎಂದು ತೊದಲುತ್ತಾ ನೇಣಿಗೆ ಕೊರಳನ್ನು ಒಡ್ಡಿಯೇ ಬಿಟ್ಟ. ಇದು ಕೆಂಚಮ್ಮನ ಗಮನಕ್ಕೆ ಬರಲು ಅರ್ಧ ತಾಸಿಗೂ ಹೆಚ್ಚೇ ಹಿಡಿಯಿತು.

ಕೊಡದಲ್ಲಿ ನೀರಿಡಿದು ಒಳಗೆ ಬಂದ ಕೆಂಚಮ್ಮ, ನಡುಮನೆಯಲ್ಲಿ ನಾರಾಯಣಪ್ಪ ಇಲ್ಲದಿರುವುದನ್ನು ಗಮಸಿದಳಾದರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ, ಎಷ್ಟೇ ಹೊತ್ತಾದರೂ ಗಂಡನ ಬಡಬಡಿಕೆಯೇ ಇಲ್ಲದಿರುವುದನ್ನು ಕಂಡು ಸಂಶಯದಿಂದ ಕೋಣೆಯತ್ತ ತೆರಳಿದಳು. ಬಾಗಿಲು ಬಡಿದರೂ ನಾರಾಯಣಪ್ಪನ ಸದ್ದೇ ಹೊರಡದಾಗ ಗಾಬರಿಯಿಂದ ನೆರೆಹೊರೆಯವರನ್ನು ಕೂಗಿ ಕರೆದಳು. ಆತನ ತಳವಂದಿಗನಲ್ಲದ ತಲ್ಲಣ ಕೆನ್ನೆಯ ಮೇಲೆ ಹರಿದು, ಹರಳುಗಟ್ಟಿದ್ದ ಕಣ್ಣೀರಿನಲ್ಲಿ ಢಾಳಾಗಿ ಕಾಣಿಸುತ್ತಿತ್ತಾದರೂ ಅದನ್ನು ಗಮನಿಸುವ ವ್ಯವಧಾನ ಯಾರಲ್ಲೂ ಇರಲಿಲ್ಲ. ಕೆಂಚಮ್ಮನಂತೂ ಈ ಅನಿರೀಕ್ಷಿತ ಆಘಾತದಿಂದ ಕಲ್ಲಾಗಿ ಹೋಗಿದ್ದಳು.

ಮನೆಯ ತುಂಬೆಲ್ಲ ತುಂಬಿಕೊಂಡಿದ್ದ ‘ತಳವಂದಿಗರು’ ತಳವಂದಿಗನಲ್ಲದ ನಾರಾಯಣಪ್ಪನ ಅಂತ್ಯಕ್ರಿಯೆ ಕೆಲಸಗಳಲ್ಲಿ ಲಗುಬಗೆಯಿಂದ ತೊಡಗಿಸಿಕೊಂಡಿದ್ದರು… 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.