ಭಾನುವಾರ, ಮಾರ್ಚ್ 7, 2021
30 °C
5 ಕಡೆ ಅಹಿತಕರ ಘಟನೆಯಲ್ಲಿ ನಾಲ್ವರಿಗೆ ಗಾಯ, ಉಳಿದಂತೆ ಶಾಂತಿಯುತ

ಶೇ 70ರಷ್ಟು ಮತ ಚಲಾವಣೆ ಅಂದಾಜು: ಚುನಾವಣಾ ಆಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೇ 70ರಷ್ಟು ಮತ ಚಲಾವಣೆ ಅಂದಾಜು: ಚುನಾವಣಾ ಆಯೋಗ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಷ್ಟು ಮತ ಚಲಾವಣೆ ಆಗಿವೆ ಎಂದು ಈಗಲೇ ನಿಖರವಾಗಿ ಹೇಳಲು ಆಗಲ್ಲ. ಈಗ ಲಭ್ಯವಿರುವ ಮಾಹಿತಿ ಅನ್ವಯ ಸಂಜೆ 6ರ ವರೆಗೆ ಶೇ 66.84ರಷ್ಟು ಮತ ಚಲಾವಣೆಯಾಗಿವೆ. ಒಟ್ಟಾರೆ ಶೇಕಡಾ 70ರಷ್ಟು ಮತದಾನ ನಡೆದಿದೆ ಎಂದು ಅಂದಾಜಿಸಲಾಗಿದೆ. ಅಂತಿಮ ಲೆಕ್ಕ ಬಂದ ಬಳಿಕ ಅದು ಇನ್ನೂ ಹೆಚ್ಚಾಗಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ಶನಿವಾರ ನಡೆದ ಮತ ಚಲಾವಣೆಯ ಪ್ರಕ್ರಿಯೆ ಕುರಿತು ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಳ್ಳಹಳ್ಳಿಯ ಆರ್‌ಎಂ.ವಿ ಎರಡನೇ ಹಂತದ ಗಾಂಧಿ ವಿದ್ಯಾಲಯ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಯ ಎರಡನೇ ಮತಗಟ್ಟೆಯಲ್ಲಿ (158/2) ಮತಯಂತ್ರದಲ್ಲಿ ಲೋಪವಿದ್ದ ಕಾರಣ ಮತದಾನ ಪ್ರಕ್ರಿಯೆಯನ್ನು ಮುಂದೂಡಲಾಯಿತು. ಇಲ್ಲಿ ಮೇ 14ರ ಸೋಮವಾರ ಮರುಮತದಾನ ನಡೆಯಲಿದೆ ಎಂದು ತಿಳಿಸಿದರು.

ಇವಿಎಂ ಹಾಗೂ ವಿವಿ ಪ್ಯಾಟ್ ಬೆಳಿಗ್ಗೆ ಸರಿಯಾಗಿಯೇ ಇತ್ತು. 44 ಜನ ಮತ ಚಲಾಯಿಸಿದರು. ಆ ನಂತರ ತಾಂತ್ರಿಕ ಸಮಸ್ಯೆ ಉಂಟಾಗಿ ಮತದಾನ ಸ್ಥಗಿತ ಆಯಿತು. ಮೇ 14ರಂದು ಆ 44 ಮಂದಿಯೂ ಪುನಃ ಮತದಾನ ಮಾಡಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ 100 ಸೇರಿದಂತೆ ರಾಜ್ಯದಲ್ಲಿ 600 ಪಿಂಕ್ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಅವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

2,65,731 ಪೋಸ್ಟಲ್ ಬ್ಯಾಲೆಟ್‌ಗಳು ಬಳಕೆಯಾಗಿವೆ. ಸಂಜೆ 6ರ ಒಳಗೆ ಮತಗಟ್ಟೆಗೆ ಬಂದು ಸಾಲಿನಲ್ಲಿ ನಿಂತಿದ್ದ ಅಷ್ಟೂ ಮಂದಿಗೆ ಮತದಾನ ಮಾಡಲು ಅವಕಾಶ ಮಾಡಿದ್ದೆವು. ಕೆಲವೆಡೆ ರಾತ್ರಿ 8ರ ವರೆಗೂ ಮತದಾನ ನಡೆದಿದೆ. ಹೀಗಾಗಿ ಶೇಕಡಾವಾರು ಪ್ರಮಾಣ ನಿಖರವಾಗಿ ಸಿಕ್ಕಿಲ್ಲ ಎಂದು ಸಂಜೀವ್ ಕುಮಾರ್ ಹೇಳಿದರು.

5 ಕಡೆ ಅಹಿತಕರ ಘಟನೆಗಳು ನಡೆದು, 4 ಮಂದಿ ಗಾಯಗೊಂಡಿದ್ದಾರೆ. ಅದನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ಆಗಿದೆ. ಕ್ಷೇತ್ರದಲ್ಲಿ ಅಭಿವೃದ್ದಿ ಆಗಿಲ್ಲ ಎಂದು ಹಾವೇರಿ ಜಿಲ್ಲೆ ದೇವಗಿರಿ ಗ್ರಾಮದ 58 ವರ್ಷದ ಮಹಿಳೆಯೊಬ್ಬರು ಅಲ್ಲಿನ ಮತಗಟ್ಟೆ ಬಳಿಯೇ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ರು. ಸಿಬ್ಬಂದಿ ಅವರನ್ನು ರಕ್ಷಿಸಿದರು ಎಂದು ತಿಳಿಸಿದರು.

ಬೆಳ್ತಂಗಡಿಯಲ್ಲಿ 58 ವರ್ಷದ ವ್ಯಕ್ತಿಯೊಬ್ಬರಿಗೆ ಮತಗಟ್ಟೆಯಲ್ಲಿ ಹೃದಯಾಘಾತ ಆಯಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಬದುಕುಳಿಯಲಿಲ್ಲ ಎಂದು ಹೇಳಿದರು.

ಕೆಲ ಅಹಿತಕರ ಘಟನೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆದಿದೆ. ಯುವ ಸಮೂಹ, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮತದಾನಕ್ಕೂ ಮುಂಚೆ ಯಂತ್ರಗಳ ಅಣಕು ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ಮಾಡಲಾದ 64,897 ಬ್ಯಾಲೆಟ್ ಯೂನಿಟ್‌ಗಳಲ್ಲಿ 212 ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. 57,782 ಕಂಟ್ರೋಲ್ ಯೂನಿಟ್‌ಗಳಲ್ಲಿ 340 ಹಾಗೂ 57,786 ವಿವಿ ಪ್ಯಾಟ್‌ಗಳಲ್ಲಿ 698 ಯಂತ್ರಗಳು ಹಾಳಾಗಿದ್ದವು. ಅವುಗಳನ್ನು ನುರಿತ ತಜ್ಞರು ಸರಿಪಡಿಸುತ್ತಾರೆ ಎಂದು ವಿವರಿಸಿದರು.

₹182.39 ಕೋಟಿ ಮೌಲ್ಯದ ಆಸ್ತಿ ಜಪ್ತಿ

ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ನಗದು, ಮದ್ಯ, ಗಾಂಜಾ, ಇತರೆ ಸರಕುಗಳು ಸೇರಿ ₹182.39 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.