ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳ ಪ್ರಜಾಮಿತ್ರ ಮಂಡಲಿ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಮೈಸೂರು ಸಂಸ್ಥಾನ ಹಿಂದುಳಿದ ವರ್ಗಗಳ ಚಳವಳಿಯನ್ನು ಕಂಡ ಅನೇಕ ಪ್ರಾಂತ್ಯಗಳಲ್ಲಿ ಒಂದಾಗಿದ್ದು, ಸರ್ಕಾರ ತನ್ನ ರಾಜಕೀಯ ಸಾಮಾಜಿಕ ತುರ್ತಿನಿಂದಾಗಿ ಆ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಬಹುಶಃ ಬೇರೆಲ್ಲಾ ಪ್ರಾಂತ್ಯಗಳಿಗೂ ಮೊದಲೇ ಕ್ರಮ ಕೈಗೊಂಡಿತೆಂಬುದು ವಿಶೇಷ.

ಸಮಾಜ ಮತ್ತು ರಾಜಕೀಯ ಪರಸ್ಪರ ಪೂರಕ ಮತ್ತು ಅವಲಂಬಿತ. ರಾಜಕೀಯವು ವಿಭಿನ್ನ ಸಾಮಾಜಿಕ ಸಂಘರ್ಷಗಳಿಂದ ಬೆಳೆಯುವಂಥದು. ಎರಡೂ ಸಂಸ್ಕೃತಿಯ ಅವಿಭಾಜ್ಯ ಅಂಗಗಳು.‌ 19 ಮತ್ತು 20ನೆಯ ಶತಮಾನಗಳಲ್ಲಿ ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹಲವಾರು ಸಾಮಾಜಿಕ ಸಂಘರ್ಷಗಳಾದವು. ಈ ಸಂಘರ್ಷಗಳಲ್ಲಿ ಪ್ರಮುಖವಾದವು–ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಚಳವಳಿ ಹಾಗೂ ದಲಿತ ಚಳವಳಿ. ಇವು ಸಮಾಜದಲ್ಲಿ ಪ್ರಭುತ್ವ ಸಾಧಿಸಿದ ಮೇಲ್ವರ್ಗಗಳ ವಿರುದ್ಧವಾಗಿಯೇ ನಡೆದವು. ದಕ್ಷಿಣ ಭಾರತದ ಇತರ ದೇಶೀ ಸಂಸ್ಥಾನಗಳಲ್ಲಿ ಬೆಳೆಯುವ ಹಿಂದುಳಿದ ವರ್ಗಗಳ ಚಳವಳಿ–ಮೈಸೂರಿನಲ್ಲಿ ಬೆಳೆಯಿತು ಹಾಗೂ ಈ ಚಳವಳಿ ದೀರ್ಘಕಾಲ ಉಳಿಯುವಷ್ಟು ಸಶಕ್ತವಾಗಿತ್ತು ಎಂಬುದು ಗಮನಾರ್ಹ ಅಂಶ.

ಹಿಂದುಳಿದ ವರ್ಗದ ಚಳವಳಿಗೆ ಕಾರಣ; ಮೈಸೂರು ಸಂಸ್ಥಾನದಲ್ಲಿ 1881ರಿಂದ ರಾಜ್ಯ ಸೇವೆಗೆ ನೇಮಕವಾದವರಲ್ಲಿ ಬಹುಪಾಲು ಬ್ರಾಹ್ಮಣ ವರ್ಗಕ್ಕೆ ಸೇರಿದವರಾಗಿದ್ದದು. ಶಾನುಭೋಗರಿಂದ ಹಿಡಿದು ದಿವಾನರವರೆಗೆ ಬ್ರಾಹ್ಮಣ ಕೋಮಿಗೆ ಸೇರಿದವರೇ ಆಗಿದ್ದರು. ಗ್ರಾಮದ ರಾಜಕೀಯ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ, ಸರ್ಕಾರಿ ಆಡಳಿತದಲ್ಲಿ ಅಧಿಕಾರವು ಕೇಂದ್ರೀಕೃತವಾಗಿತ್ತು. ಹೀಗಾಗಿ, ಅಧಿಕಾರವೆಂದರೆ ಸರ್ಕಾರಿ ಸೇವೆಯಾಗಿತ್ತು. ದಕ್ಷ ಆಡಳಿತಗಾರರು ಬ್ರಾಹ್ಮಣೇತರರಲ್ಲಿ ಇಲ್ಲವೆಂಬ ಕುಂಟುನೆಪ ಇವರದಾಗಿತ್ತು. ಕೆಳದರ್ಜೆ ಹುದ್ದೆಗಳಲ್ಲಿ ಮಾತ್ರ ಬ್ರಾಹ್ಮಣೇತರರಿದ್ದರು. ಈ ಕಾರಣದಿಂದ ಬ್ರಾಹ್ಮಣರ ಏಕಸ್ವಾಮ್ಯವನ್ನು ಪ್ರಶ್ನಿಸಿ, ತಮಗೆ ದೊರಕಬೇಕಾದ ಅಧಿಕಾರ ಮತ್ತು ಗೌರವಕ್ಕಾಗಿ ಹಿಂದುಳಿದ ವರ್ಗಗಳು ಒಗ್ಗಟ್ಟಾಗಿ ಪ್ರಯತ್ನ ನಡೆಸಿದವು. ಬ್ರಾಹ್ಮಣೇತರರ ನಾಯಕತ್ವವನ್ನು ಸಿ.ಆರ್‌. ರೆಡ್ಡಿ ಮತ್ತು ಎಂ.ಬಸವಯ್ಯನವರು ವಹಿಸಿಕೊಂಡರು. ಬ್ರಾಹ್ಮಣೇತರರ ಮುಖಂಡ
ರಾದ ಬಸವಯ್ಯನವರು, ಹಿಂದುಳಿದ ವರ್ಗಗಳ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ರೂಪಾಯಿಗಳ ವಿಶೇಷ ಅನುದಾನವನ್ನು ತೆಗೆದಿಡುವ ನಿರ್ಣಯವನ್ನು ನ್ಯಾಯವಿಧಾಯಕ ಸಭೆಯಲ್ಲಿ ಮಂಡಿಸಿದಾಗ ನಿರ್ಣಯದ ಬಗ್ಗೆ ಚರ್ಚೆಗೆ ಆಗಿನ ಅಧ್ಯಕ್ಷರಾದ ದಿವಾನರು ಅವಕಾಶ ಮಾಡಿಕೊಡಲಿಲ್ಲ. ದಿವಾನರ ದಿವ್ಯಮೌನ, ಹಿಂದುಳಿದ ವರ್ಗಗಳ ವಿರೋಧಿನೀತಿಯೆಂಬ ಟೀಕೆಗೆ ಒಳಗಾಯಿತು. ಆದರೆ, ಈ ನಿರ್ಣಯಲ್ಲಿನ ಗುಣಾಂಶಗಳನ್ನು ಅರಿತ ಮಹಾರಾಜರು ಈ ಮೊತ್ತವನ್ನು ತೆಗೆದಿಡಲು ಒಪ್ಪಿದರೆಂಬುದು ಅಂದಿನ ಮೈಸೂರು ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲುವಂಥದು.

ವಿಶ್ವೇಶ್ವರಯ್ಯನವರು ಮೈಸೂರು ಪಕ್ಷದವರು ಬಯಸಿದಂತೆ ಸರ್ಕಾರಿ ಸೇವೆಯನ್ನು ಬೇಡಿಕೆಗೆ ಒಪ್ಪಿ ಆಜ್ಞೆ ಹೊರಡಿಸಿದರಾದರೂ, ಬ್ರಾಹ್ಮಣೇತರರು ಸಮಾಧಾನಗೊಳ್ಳದೆ ವಿಶ್ವೇಶ್ವರಯ್ಯನವರ ಯೋಜನೆಗಳು ಪಟ್ಟಣದ, ವಿದ್ಯಾವಂತ ಬ್ರಾಹ್ಮಣರಿಗೆ ಮಾತ್ರವೆಂದು ಟೀಕಿಸಲಾರಂಭಿಸಿದರು.

ಅವರನ್ನು ತೃಪ್ತಿಪಡಿಸಲೆಂಬಂತೆ ವಿಶ್ವೇಶ್ವರಯ್ಯನವರು ಕನಿಷ್ಠ ವಿದ್ಯಾರ್ಹತೆಯುಳ್ಳ ಬ್ರಾಹ್ಮಣೇತರರಿಗೆ ಸರ್ಕಾರಿ ಸೇವೆಯಲ್ಲಿ ಶೇಕಡ 25ರಷ್ಟು ಹುದ್ದೆಯನ್ನು ನೀಡಬೇಕೆಂಬ ನಿರ್ಣಯ ತಳೆದು, 19 ಜನಬ್ರಾಹ್ಮಣೇತರರನ್ನು ಗೆಜೆಟೆಡ್‌ ಹುದ್ದೆಗೆ ನಾಮಕರಣ ಮಾಡಿದರೂ ಬ್ರಾಹ್ಮಣೇತರರು ಸಮಾಧಾನಗೊಳ್ಳಲಿಲ್ಲ. ಈ ಅಸಮಾಧಾನವೇ ‘ಪ್ರಜಾಮಿತ್ರ ಮಂಡಲಿ’ ಹುಟ್ಟಿಗೆ ಕಾರಣವಾಯಿತು.

ಹಿಂದುಳಿದ ವರ್ಗಗಳ ಧ್ವನಿಯಾಗಿ, ತಮ್ಮ ಬೇಡಿಕೆಗಳನ್ನು ಸಮರ್ಥವಾಗಿ ಮಂಡಿಸಲು ರಾಜಕೀಯ ವೇದಿಕೆಯ ಅವಶ್ಯಕತೆಯಿದೆಯೆಂಬುದನ್ನು ಹಿಂದು
ಳಿದ ವರ್ಗಗಳು ಮನಗಂಡವು. ತತ್ವರಿಣಾಮವಾಗಿ ಮೈಸೂರಿನಲ್ಲಿ ಪ್ರಪ್ರಥಮವಾಗಿ ಬ್ರಾಹ್ಮಣೇತರ ರಾಜಕೀಯ ಪಕ್ಷ ‘ಪ್ರಜಾಮಿತ್ರ ಮಂಡಲಿ’ಯು 1917ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಸ್ವಲ್ಪ ತಿಂಗಳ ಹಿಂದೆ ಮದರಾಸಿನಲ್ಲಿ ಇದೇ ಉದ್ದೇಶಗಳಿಗಾಗಿ ‘ಜಸ್ಟೀಸ್‌ ಪಾರ್ಟಿ’ಯೆಂಬ ರಾಜಕೀಯ ಪಕ್ಷ
ವೊಂದು ಸ್ಥಾ‍ಪಿತವಾಗಿತ್ತು. ಇದೇ ಆಧಾರದ ಮೇಲೆ ಮೈಸೂರಿನಲ್ಲಿ ಬ್ರಾಹ್ಮಣೇತರರ ಚಳವಳಿಗೆ ಅಂಕುರಾರ್ಪಣ ಮಾಡಿದವರು ಬಸವಯ್ಯನ
ವರು. ಈ ರಾಜಕೀಯ ಪಕ್ಷದ ಪ್ರಮುಖ ಉದ್ದೇಶ, ಸರ್ಕಾರಿ ಸೇವೆಯಲ್ಲಿ ಕೋಮುವಾರು ಮತ್ತು ಜಾತಿವಾರು ನ್ಯಾಯವನ್ನು ಸಂಪಾದಿಸುವುದಾಗಿತ್ತು.

1926ರವರೆಗೆ ಒಗ್ಗಟ್ಟಾಗಿ ರಾಜ್ಯದಲ್ಲಿ ಮೊದಲ ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಚಳವಳಿಯ ಮೂಲಕ ಗಣನೀಯ ಸವಲತ್ತುಗಳನ್ನು ಪಡೆಯಿತು ‘ಪ್ರಜಾಮಿತ್ರ ಮಂಡಲಿ’. ಈ ಪಕ್ಷ ತರುವಾಯ ಭಿನ್ನಮತ ಮತ್ತು ಒಡಕುಗಳಿಂದ ಸ್ವಲ್ಪ ಶಕ್ತಿಗುಂದಿತು. ಇದಕ್ಕೆ ಚಳವಳಿಯಲ್ಲಿನ ಹಲವು ಬೆಳವಣಿಗೆಗಳು, ರಾಜ್ಯದ ಹೊರಗಿನ ಪರಿಸ್ಥಿತಿಯ ಪರಿಣಾಮವೆನ್ನಬಹುದು. ಮೊದಲನೆಯದಾಗಿ ಬ್ರಾಹ್ಮಣೇತರರಲ್ಲಿ ಅಸ್ಪೃಶ್ಯರನ್ನು ಒಂದು ಪಂಗಡವೆಂದು ಒಪ್ಪಿಕೊಳ್ಳದೇ ಇದ್ದುದು. ಸ್ಪೃಶ್ಯ ಬ್ರಾಹ್ಮಣೇತರರು ಲಾಭದಾಯಕ ದೃಷ್ಟಿಯಿಂದ ಒಪ್ಪಿಕೊಂಡರೂ ತಮ್ಮ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳದಿದ್ದುದು. ಮಿಲ್ಲರ್‌ ಸಮಿತಿಯೂ ಅಸ್ಪೃಶ್ಯರನ್ನು ಪ್ರತ್ಯೇಕವಾಗಿಯೇ ಪರಿಗಣಿಸಿತ್ತು. ಎರಡನೆಯದಾಗಿ ಬ್ರಾಹ್ಮಣ ವರ್ಗ ಸಂಖ್ಯಾಬಲದ ದೃಷ್ಟಿ
ಯಿಂದ ಅಲ್ಪಸಂಖ್ಯಾತರಾಗಿದ್ದರಿಂದ ಸರ್ಕಾರ ಹಾಗೂ ಹಿಂದುಳಿದ ವರ್ಗದವರ ನಡುವಿನ ಐಕಮತ್ಯದಿಂದಾಗಿ ಅವಕಾಶಕ್ಕಾಗಿ ಕಾಯುತ್ತಿತ್ತು.

–ವೈ.ಎಸ್‌. ವಿಜಯಲಕ್ಷ್ಮಿ, ಪ್ರಜಾಪಕ್ಷ ಮತ್ತು ಪ್ರಜಾ ಮಿತ್ರ, ಮಂಡಲಿ ಲೇಖನದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT