ಮಂಗಳವಾರ, ಮಾರ್ಚ್ 9, 2021
18 °C
ಚುನಾವಣಾ ಕರ್ತವ್ಯಕ್ಕೆ 182 ಸರ್ಕಾರಿ ಬಸ್‌ಗಳ ಬಳಕೆ

ಬಸ್‌ ಕೊರತೆ: ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್‌ ಕೊರತೆ: ಪ್ರಯಾಣಿಕರ ಪರದಾಟ

ರಾಮನಗರ: ವಿಧಾನಸಭೆ ಚುನಾವಣೆಗಾಗಿ ಸರ್ಕಾರಿ ಬಸ್‌ಗಳನ್ನು ಬಳಸಿಕೊಂಡಿರುವುದರಿಂದ ಜಿಲ್ಲೆಯಿಂದ ವಿವಿಧ ಭಾಗಗಳಿಗೆ ತೆರಳುವ ಪ್ರಯಾಣಿಕರು ಶನಿವಾರ ಪರದಾಡುವಂತಾಯಿತು.

ರಾಮನಗರ ಜಿಲ್ಲೆ ಒಂದರಲ್ಲಿಯೇ 182 ಸರ್ಕಾರಿ ಬಸ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿತ್ತು, ಚುನಾವಣೆ ನಿಮಿತ್ತ ಬಸ್‌ಗಳು ಮತಗಟ್ಟೆಗಳಿಗೆ ತೆರಳಿರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಸ್ ಸಂಪರ್ಕ ವಿರಳವಾಗಿತ್ತು. ದೂರದ ಊರುಗಳಿಗೆ ತೆರಳಲು ಬಸ್‌ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಗಂಟೆಗಟ್ಟಲೆ ಕಾದು ಕಾದು ಹೈರಾಣಾದರು. ಪೂರ್ವ ಮಾಹಿತಿ ಇಲ್ಲದೇ ಬಸ್‌ನಿಲ್ದಾಣಕ್ಕೆ ಬಂದ ವೃದ್ಧರು, ಮಹಿಳೆಯರೂ ತಮ್ಮ ಊರಿಗೆ ತಲುಪಲು ಹರಸಾಹಸ ಪಟ್ಟರು.

ನಗರಕ್ಕೆ ಬಂದಿದ್ದ ಬಹುತೇಕ ಜನ ಬಸ್‌ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮತ್ತೆ ಕೆಲವು ಪ್ರಯಾಣಿಕರು ಹೆಚ್ಚಿನ ಹಣ ನೀಡಿ ಖಾಸಗಿ ಬಸ್‌, ಜೀಪ್, ಆಟೋಗಳ ಮೊರೆ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್‌ ನಿಲ್ದಾಣಗಳು ಶನಿವಾರ ಬೆಳಿಗ್ಗೆ ಭಣಗುಡುತ್ತಿದ್ದವು. ಚುನಾವಣಾ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡು ಖಾಸಗಿ ವಾಹನದವರು ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಟಾಪ್‌ ಮೇಲೆ ಕುಳಿತರು: ಖಾಸಗಿ ಬಸ್‌ ಗಳ ಟಾಪ್‌ನಲ್ಲಿ ಕುಳಿತು ಜನರು ಪ್ರಯಾಣಿಸಿದರು. ಬೆಂಗಳೂರಿನಿಂದ ರಾಮನಗರದ ಕಡೆಗೆ ಬಂದ ಹಲವು ಖಾಸಗಿ ಬಸ್‌ಗಳು ಭರ್ತಿಯಾಗಿ, ಜನರು ಬಸ್ಸಿನ ಮೇಲ್ಭಾಗದಲ್ಲಿ ಕುಳಿತು ಪ್ರಯಾಣಿಸಿದರು.

ಸಂಚಾರ ದಟ್ಟಣೆ: ಶನಿವಾರ ರಜೆ ಇದ್ದುದ್ದರಿಂದ ಬೆಂಗಳೂರಿನಿಂದ ಮೈಸೂರು ಕಡೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳು ಸಂಚರಿಸಿದವು. ಇಲ್ಲಿನ ಐಜೂರು ವೃತ್ತದಲ್ಲಿ ಕಾರ್‌ಗಳ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಜನರು ಪ್ರಯಾಣಕ್ಕಾಗಿ ಆಟೋಗಳನ್ನು ಹೆಚ್ಚಾಗಿ ಅವಲಂಬಿಸಿದ್ದರು.

ಬಸ್‌ ದರ ದುಪ್ಪಟ್ಟು

ವಿಧಾನಸಭೆ ಚುನಾವಣೆ, ರಜೆ ಹಾಗೂ ಸರ್ಕಾರಿ ಬಸ್‌ಗಳ ಕೊರತೆಯ ಲಾಭ ಪಡೆಯಲು ಮುಂದಾಗಿರುವ ಕೆಲ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಏಕಾಏಕಿ ಏರಿಸಿದ್ದವು. ಊರಿಗೆ ತೆರಳುವ ಅನಿವಾರ್ಯದಲ್ಲಿರುವ ಪ್ರಯಾಣಿಕರು ಖಾಸಗಿ ಬಸ್‌ಗಳಿಗೆ ಹಿಡಿಶಾಪ ಹಾಕುತ್ತಲೇ ಪ್ರಯಾಣಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.