ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತರ ಭಾಗಕ್ಕೆ ಬಸ್‌ ಕೊರತೆ

Last Updated 14 ಮೇ 2018, 6:40 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ದಕ್ಷಿಣ ಭಾಗದಲ್ಲಿರುವ ಶ್ರೀಮಂತರ ಪ್ರದೇಶವೆಂದೇ ಕರೆಯುವ 7ನೇ ವಾರ್ಡ್‌ದಲ್ಲಿ ಬಹುತೇಕ ರಸ್ತೆಗಳು ಡಾಂಬರೀಕರಣ, ಅನೇಕ ಕಡೆ ವಿಭಜಕಗಳನ್ನು ಹೊಂದಿವೆ. ಆದರೆ ಬಹುತೇಕ ರಸ್ತೆಗಳಿಗೆ ಚರಂಡಿಗಳೇ ಇಲ್ಲ. ಇತರ ಪ್ರದೇಶಗಳಿಗೆ ಹೋಲಿಸಿದರೆ ತುಸು ಎತ್ತರ ಭಾಗದ ಇಲ್ಲಿ ರಸ್ತೆ ಜೊತೆ ಚರಂಡಿ ನಿರ್ಮಿಸದಿರುವುದು ಸಮಸ್ಯೆಗೆ ಕಾರಣವಾಗಿದೆ.

ಭಾಗ್ಯನಗರ, ಆದರ್ಶನಗರದ ಹೊರವಲಯದಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಸುಂದರ ರಸ್ತೆಗಳೇನೋ ಇವೆ. ಆದರೆ, ಚರಂಡಿ ಮತ್ತು ಸ್ವಚ್ಛತೆ ಸಮಸ್ಯೆ ಕಾಡುತ್ತಿದೆ. ಬಿರುಬಿಸಿಲಿನಲ್ಲಿ ಇಲ್ಲಿಯ ನೆರಳು ಹಿತಾನುಭ ನೀಡುತ್ತದೆ. ಆದರೆ, ಮರಗಳಿಂದ ಉದುರಿರುವ ಒಣ ಎಲೆಗಳನ್ನು ಸ್ವಚ್ಛಗೊಳಿಸುವುದು ಸವಾಲಿನ ಕೆಲಸವಾಗಿದೆ.

ಈ ಭಾಗದಲ್ಲಿ ಸಮರ್ಪಕ ಸಾರಿಗೆ ಸೌಲಭ್ಯ, ಗಟಾರ–ಒಳಚರಂಡಿ ವ್ಯವಸ್ಥೆಗಳು ಇಲ್ಲ. ‘ಅಮೃತ ಸಿಟಿ’ ಯೋಜನೆಯಡಿ ಇಲ್ಲಿನ ಮಹಾಲಕ್ಷ್ಮಿ ಕಾಲೊನಿ, ಆದರ್ಶನಗರ, ಅನಗೋಳ ಪೂರ್ವಭಾಗದ ಕೆಲ ಗಲ್ಲಿಗಳು ಡಾಂಬರೀಕರಣ ಮಾಡಲಾಗಿದೆ. ಅಲ್ಲಲ್ಲಿ ಚರಂಡಿ ನಿರ್ಮಾಣ ಮಾಡುತ್ತಿರುವುದು ಕಾಣಿಸುತ್ತಿದೆ.

ಸಾವಿರಾರು ಜನರಿಗೆ ಉದ್ಯೋಗ ಒದಗಿಸುವ ಕಾಟವಾ ಸಿಮೆಂಟ್‌, ಭಾತಖಾಂಡೆ ಕ್ರಾಕರ್ಸ್‌, ರಾಯಬಾಗಿ ವೈನ್ಸ್‌, ಟೆಕ್ಸಟೈಲ್‌ ಮಾಲೀಕರು ಹಾಗೂ ಹಲವು ಕ್ಲಾಸ್‌ 1 ಗುತ್ತಿಗೆದಾರರು ವಾಸವಾಗಿರುವ ಈ ವಾರ್ಡ್‌ದಲ್ಲಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಹಂತದವರೆಗೆ ಶಿಕ್ಷಣ ನೀಡುವ ರಾಣಿ ಪಾರ್ವತಿದೇವಿ ಕಾಲೇಜು, ಗೋಗಟೆ ವಿಜ್ಞಾನ ಕಾಲೇಜು, ಜೈನ್‌ ಕಾಲೇಜು, ಗೋಮಟೇಶ ವಿದ್ಯಾಪೀಠಗಳಿವೆ. ಹೀಗಾಗಿ, ಇದು ಶ್ರೀಮಂತರಷ್ಟೇ ಅಲ್ಲ, ಶಿಕ್ಷಣ ಸಂಸ್ಥೆಗಳ ತಾಣವಾಗಿಯೂ ಹೆಸರು ಪಡೆದಿದೆ.

‘ಈ ಪ್ರದೇಶದಲ್ಲಿ ಮನೆಗೆ ಒಂದೆರಡು ಕಾರು, ಬೈಕ್‌ಗಳು ಇರುವುದರಿಂದ ಸಾರಿಗೆ ಬಸ್‌ಗಳ ಅಗತ್ಯ ಶ್ರೀಮಂತರಿಗಿಲ್ಲ. ಆದರೆ ಸಾಮಾನ್ಯ ಜನರಿಗೆ ಇವುಗಳ ಕೊರತೆ ಕಾಡಿದೆ. ಇಲ್ಲಿ 24x7 ನೀರು ಪೂರೈಕೆ ಇದೆ. ಹೆಚ್ಚಾದ ನೀರು ಕಾಲವೆ ಮೂಲಕ ಹರಿದುಹೋಗಲು ದೊಡ್ಡ ಚರಂಡಿಗಳಿಲ್ಲ. ಅನೇಕ ಕಡೆ ರಸ್ತೆ ಮೇಲೆಯೇ ನೀರು ಹರಿಯುವಂತಾಗಿದೆ’ ಎಂದು ಅನಗೋಳದ ಸಂಜಯ ವಡಗಾಂವಕರ ಹೇಳಿದರು.

‘ಮೊದಲು ಸಿಬಿಟಿಯಿಂದ 7ನೇ ವಾರ್ಡ್‌ನ ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಸ್‌ ಸಾರಿಗೆ ಇದ್ದವು. ನಿರೀಕ್ಷಿತ ಮಟ್ಟದಲ್ಲಿ ಜನ ಅದರಲ್ಲಿ ಸಂಚರಿಸದೇ ಇರುವುದರಿಂದ ನಾಲ್ಕು ವರ್ಷಗಳಿಂದ ಅವು ಬಂದ್‌ ಆಗಿವೆ. ಇದರಿಂದ ಸಾಮಾನ್ಯ ಜನರು ಸಂಚರಿಸುವುದು ಕಷ್ಟವಾಗಿದೆ’ ಎಂದು ಕಿರಾಣಿ ವರ್ತಕ ಸಚಿನ್‌ ಆಜರೇಕರ ಹೇಳಿದರು.

ಭಾಗ್ಯನಗರ 10 ನೇ ಕ್ರಾಸ್‌ನ ಮುಖ್ಯ ರಸ್ತೆಗೆ ಗಟಾರ ಇಲ್ಲ. ಮಳೆಯಾದರೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಸುನಿತಾ ಮಾಧವ.

‘ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಚೇರಿ ಇಲ್ಲಿದೆ. ಆದರೆ, ಜನರಿಗೆ ಆರೋಗ್ಯ ಸೇವೆ ಒದಗಿಸಲು ಪ್ರತ್ಯೇಕ ವಿಭಾಗ ಮಾಡಿಲ್ಲ. ಇದರಿಂದ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳನ್ನೇ ಆಶ್ರಯಿಸಿದ್ದಾರೆ’ ಎಂದು ತರಕಾರಿ ವರ್ತಕರಾದ ಬೇಬಿ ಬಾಬಲೆ ದೂರಿದರು.

ಸ್ವಚ್ಛತೆಗೆ ಆದ್ಯತೆ:

‘ಮರಗಳ ಎಲೆ ಉದುರುವುದರಿಂದ ಸಹಜವಾಗಿ ಪರಿಸರ ಮಾಲಿನ್ಯವಾಗುತ್ತದೆ. ಪ್ರತಿದಿನ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆಗಾಗ ಎಲ್ಲ ಗಲ್ಲಿಗಳಲ್ಲಿ ಸಂಚರಿಸಿ, ಜನರ ಸಮಸ್ಯೆ ಕೇಳಲಾಗುತ್ತದೆ. ಅಲ್ಲಲ್ಲಿ ದೊಡ್ಡ ಪ್ರಮಾಣದ ಚರಂಡಿ ಪೈಪ್‌ ಅಳವಡಿಕೆ ಕಾರ್ಯ ನಡೆದಿದೆ. ಒಂದೆರಡು ತಿಂಗಳಲ್ಲಿ ಅದು ಪೂರ್ಣಗೊಳ್ಳಲಿದೆ’ ಎಂದು ಪಾಲಿಕೆ ಸದಸ್ಯ ಕಿರಣ ಸಾಯಿನಾಥ ಹೇಳಿದರು.

ವಾರ್ಡ್‌ ವ್ಯಾಪ್ತಿ

ಶ್ರೀಧನ ಅಪಾರ್ಟ್‌ಮೆಂಟ್‌, ಆರ್‌ಪಿಡಿ ರಸ್ತೆ, ದೊಡ್ಡಣ್ಣವರ ಕಟ್ಟಡ, ಭಾಗ್ಯನಗರ 11ನೇ ಕ್ರಾಸ್‌, ದೇಸಾಯಿ ಫಾರ್ಮ್‌ ಹೌಸ್‌, ಅನಗೋಳ– ವಡಗಾವಿ ರಸ್ತೆ ಸಹ್ಯಾದ್ರಿ ಕಾಲೊನಿ, ಭಾಗ್ಯನಗರ 2 ನೇ ಕ್ರಾಸ್‌ನ ಎರಡೂ ಬದಿ ಕಟ್ಟಡಗಳು, ಮಹಾಲಕ್ಷ್ಮಿ ಕಾಲೊನಿ, ಸುಖಕರ್ತಾ ಕಾಲೊನಿ, ಭಾಗ್ಯನಗರ, ಆದರ್ಶನಗರ

ಆರ್‌.ಎಲ್‌. ಚಿಕ್ಕಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT