ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ ಮತದಾರ!

7

ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ ಮತದಾರ!

Published:
Updated:
ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ ಮತದಾರ!

ಬೆಳಗಾವಿ: ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಂತೆ ಜಿಲ್ಲೆಯ ದಕ್ಷಿಣ ಭಾಗದ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಮತದಾರರು ತೀರ್ಪು ನೀಡಿದ್ದಾರೆ. ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕೈ ಹಿಡಿದಿದ್ದರೆ, ನಾಲ್ಕು ಕ್ಷೇತ್ರಗಳಲ್ಲಿ ಕಮಲವನ್ನು ಅರಳಿಸಿದ್ದಾರೆ. ಗಡಿ ಸಮಸ್ಯೆಯನ್ನೇ ಚುನಾವಣಾ ವಿಷಯವನ್ನಾಗಿಟ್ಟುಕೊಂಡು, ಅಭಿವೃದ್ಧಿಯನ್ನು ಮರೆಮಾಚುತ್ತಿದ್ದ ಎಂಇಎಸ್‌ ಅನ್ನು ದೂಳೀಪಟ ಮಾಡಿದ್ದಾರೆ.

ಅತ್ಯಂತ ಕಡಿಮೆ ಮತದಾನವಾಗಿದ್ದ ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಡಿಮೆ ಮತದಾನವಾದರೆ ಕಾಂಗ್ರೆಸ್‌ಗೆ ಲಾಭ, ಹೆಚ್ಚು ಮತದಾನವಾದರೆ ಬಿಜೆಪಿಗೆ ಲಾಭ ಎನ್ನುವ ಮಾತನ್ನು ಸುಳ್ಳಾಗಿಸಿದ್ದಾರೆ. ಇವೆರಡು ಕ್ಷೇತ್ರಗಳಿಂದ ಕ್ರಮವಾಗಿ ಬಿಜೆಪಿಯ ಅನಿಲ ಬೆನಕೆ ಹಾಗೂ ಅಭಯ ಪಾಟೀಲ ಜಯಗಳಿಸಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಳೆದ ವರ್ಷ ಕೋಮು ಗಲಭೆಗಳು ಸಂಭವಿಸಿದ್ದವು. ಭಡಕಲ್‌ ಗಲ್ಲಿ, ಖಡಕ್‌ ಗಲ್ಲಿ, ಖಂಜರ್‌ ಗಲ್ಲಿಯಲ್ಲಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಹಾಗೂ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ವೇಳೆ ಕಲ್ಲು ತೂರಾಟ ಸಂಭವಿಸಿತ್ತು. ಆ ಸಂದರ್ಭದಲ್ಲಿ ಶಾಸಕರಾಗಿದ್ದ ಕಾಂಗ್ರೆಸ್‌ನ ಫಿರೋಜ್‌ ಸೇಠ್‌ ಒಂದು ಕೋಮಿನ ಪರವಾಗಿದ್ದರೆನ್ನುವ ಮಾತು ಕೇಳಿಬಂದಿತ್ತು. ಇದು ಫಿರೋಜ್‌ ವಿರುದ್ಧ ಇತರ ಸಮುದಾಯದವರ ಮತಗಳು ಕ್ರೋಢೀಕರಣವಾಗಲು ಸಹಕಾರಿಯಾಯಿತು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಬಾರಿ ಜಯಗಳಿಸಿದ್ದ ಎಂಇಎಸ್‌ನ ಸಂಭಾಜಿ ಪಾಟೀಲ ಅಭಿವೃದ್ಧಿ ಕಾಮಗಾರಿ

ಗಳನ್ನು ಕೈಗೊಳ್ಳಲಿಲ್ಲ. ಜಯಗಳಿಸಿದ ನಂತರ ಕ್ಷೇತ್ರದತ್ತ ತಿರುಗಿಯೂ ನೋಡಲಿಲ್ಲ ಎನ್ನುವ ಅಸಮಾಧಾನ ಜನರಲ್ಲಿ ಮನೆ ಮಾಡಿತ್ತು. ಸಂಭಾಜಿ ವಿರುದ್ಧದ ಅಸಮಾಧಾನವು ಎಂಇಎಸ್‌ ಅಭ್ಯರ್ಥಿಗಳತ್ತ ತಿರುಗಿತು. ಈ ಸಲ ಎಂಇಎಸ್‌ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕಿಳಿಯಬೇಕಾಯಿತು. 2008ರಲ್ಲಿ ಶಾಸಕರಾಗಿದ್ದಾಗ ಬಿಜೆಪಿಯ ಅಭಯ ಪಾಟೀಲ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿದ ಮತದಾರರು, ಈ ಸಲ ಮತ್ತೊಮ್ಮೆ ಅವಕಾಶ ನೀಡಿದ್ದಾರೆ.

ಕಳೆದ ಸಲ ಸ್ಪರ್ಧಿಸಿ ಸೋತಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಈ ಸಲ ಆಶೀರ್ವದಿಸಿದ್ದಾರೆ. ಅನುಕಂಪದ ಅಲೆ ಹಾಗೂ ಕ್ಷೇತ್ರದ ಜನರ ಜೊತೆ ಹೊಂದಿದ್ದ ನಿರಂತರ ಸಂಪರ್ಕವು ಅವರ ಸಹಾಯಕ್ಕೆ ಬಂದಿದೆ.

ಎಸ್‌.ಟಿ ಮೀಸಲು ಕ್ಷೇತ್ರ ಯಮಕನ ಮರಡಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಕಾಂಗ್ರೆಸ್‌ನ ಸತೀಶ  ಜಾರಕಿಹೊಳಿ ಅವರ ಕೈ ಹಿಡಿದಿವೆ. ಕ್ಷೇತ್ರದ ಜನರ ಜೊತೆಗೆ ನಿರಂತರ ಒಡನಾಟ ಇಟ್ಟುಕೊಂಡಿರುವ ಅವರು, ಚುನಾವಣಾ ಪ್ರಚಾರ ನಡೆಸದೇ ಗೆದ್ದುಬಂದಿದ್ದಾರೆ. ಬಿಜೆಪಿಯ ಮಾರುತಿ ಅಷ್ಟಗಿ ಪರವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಡೆಸಿದ್ದ ಪ್ರಚಾರವೂ ಫಲ ನೀಡಲಿಲ್ಲ. ಆದಾಗ್ಯೂ, ಅಷ್ಟಗಿ ಕಳೆದ ಚುನಾವಣೆಗಿಂತಲೂ ಈ ಸಲ ತೀವ್ರ ಸ್ಪರ್ಧೆ ನೀಡಿದ್ದು ಗಮನಾರ್ಹ. ಕಳೆದ ಬಾರಿ ಸುಮಾರು 24,000 ಮತಗಳ ಅಂತರದಿಂದ ಪರಾಭವಗೊಂಡಿದ್ದ ಅವರು, ಈ ಸಲ ಸೋಲಿನ ಅಂತರವನ್ನು 2,850 ಮತಗಳಿಗೆ ತಗ್ಗಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಖಾನಾಪುರದಲ್ಲೂ ಎಂಇಎಸ್‌ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಎಂಇಎಸ್‌ನಲ್ಲಿ ಮೂಡಿದ ಒಡಕಿನ ಲಾಭ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಅವರಿಗೆ ದಕ್ಕಿತು. ಬಿಜೆಪಿಯ ವಿಠ್ಠಲ ಹಲಗೇಕರ ಅವರು ಎರಡನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಿತ್ತೂರು ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಮಹಾಂತೇಶ ದೊಡ್ಡಗೌಡರ ಜನರ ಒಲವು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್‌ನ ಡಿ.ಬಿ. ಇನಾಮದಾರ ಹಾಗೂ ಬಿಜೆಪಿಯಿಂದ ಹೊರಬಂದು ಜೆಡಿಎಸ್‌ನಿಂದ ಕಣಕ್ಕಿಳಿದ ಸುರೇಶ ಮಾರಿಹಾಳ ಅವರನ್ನು ಬಿಟ್ಟು, ಹೊಸ ಮುಖ ದೊಡ್ಡಗೌಡರ ಅವರಿಗೆ ಮತ

ದಾರರು ಅವಕಾಶ ನೀಡಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಉಂಟಾದ ಬಂಡಾಯದ ಲಾಭ ದೊಡ್ಡ

ಗೌಡರಿಗೆ ದೊರೆಯಿತು.

ಬೈಲಹೊಂಗಲ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿಶ್ವನಾಥ ಪಾಟೀಲ ಹಾಗೂ ಬಂಡಾಯ ಅಭ್ಯರ್ಥಿ ಜಗದೀಶ ಮೆಟಗುಡ್ಡ ಅವರ ನಡುವಿನ ತಿಕ್ಕಾಟದ ಲಾಭವು ಕಾಂಗ್ರೆಸ್‌ನ ಮಹಾಂತೇಶ ಕೌಜಲಗಿ ದಕ್ಕಿತು. ಅವರ ತಂದೆ ಮಾಜಿ ಸಚಿವ, ಶಿವಾನಂದ ಕೌಜಲಗಿ ಅವರು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದು ಪುತ್ರನ ಕೈ ಹಿಡಿಯಿತು.

ಸವದತ್ತಿಯಲ್ಲಿ ಬಿಜೆಪಿಯ ವಿಶ್ವನಾಥ (ಆನಂದ) ಮಾಮನಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಕಾಂಗ್ರೆಸ್‌ನ ಬಂಡಾಯದಿಂದಾಗಿ ಅವರ ಗೆಲುವು ಸುಲಭವಾಯಿತು. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಆನಂದ ಚೋಪ್ರಾ ಅವರ ಬದಲು ಹೊಸ ಮುಖ ವಿಶ್ವಾಸ ವೈದ್ಯ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಇವರಿಬ್ಬರ ನಡುವೆ ಮತಗಳು ವಿಭಜನೆಯಾದವು. ಇದು ಮಾಮನಿ ಅವರಿಗೆ ಲಾಭ ತಂದುಕೊಟ್ಟಿತು.

ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದ ರಾಮದುರ್ಗದ ಅಶೋಕ ಪಟ್ಟಣ ಆಸೆ ನಿರಾಸೆಯಾಯಿತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಹಾದೇವಪ್ಪ ಯಾದವಾಡ ಅವರು ಜಯಗಳಿಸಿದರು. ಪಕ್ಷ ಬಿಟ್ಟುಹೋಗಿದ್ದ ಹಲವು ಮುಖಂಡರನ್ನು ವಾಪಸ್ ಕರೆಸಿಕೊಂಡಿದ್ದು ಹಾಗೂ ಎಲ್ಲರೂ ಒಗ್ಗಟ್ಟಾಗಿ ದುಡಿದುದರ ಫಲವಾಗಿ ಯಾದವಾಡ ಅವರಿಗೆ ಜಯ ಲಭಿಸಿತು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಜಾವೇದ್‌ ಅವರು ಅಲ್ಪಸಂಖ್ಯಾತರ ಮತಗಳನ್ನು ಕಸಿದಿದ್ದು ಕೂಡ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದಂತಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry