ಸೋಮವಾರ, ಮಾರ್ಚ್ 1, 2021
20 °C

ಗೇಮಿಂಗ್ ಮತ್ತು ಡೆವೆಲಪರ್ ಲ್ಯಾಪ್‌ಟಾಪ್

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಗೇಮಿಂಗ್ ಮತ್ತು ಡೆವೆಲಪರ್ ಲ್ಯಾಪ್‌ಟಾಪ್

ಈಗೀಗ ಗಣಕ ಅಂದರೆ ಲ್ಯಾಪ್‌ಟಾಪ್ ಅನ್ನುವಂತಾಗಿದೆ. ಈ ಲ್ಯಾಪ್‌ಟಾಪ್‌ಗಳಲ್ಲೂ ಹಲವು ನಮೂನೆ ಇವೆ. ಸಾಮಾನ್ಯ ಕೆಲಸಗಳಿಗೆ, ಸ್ವಲ್ಪ ಜಾಸ್ತಿ ಶಕ್ತಿ ಬೇಕು ಎನ್ನುವ ಡೆವೆಲಪರ್‌ಗಳಿಗೆ (ಪ್ರೋಗ್ರಾಮ್ಮರ್), ಇನ್ನೂ ಅಧಿಕ ಶಕ್ತಿ ಬೇಕಾಗುವ ಗೇಮಿಂಗ್, ಹೀಗೆ ಹಲವು ನಮೂನೆಯಲ್ಲಿ ಲ್ಯಾಪ್‌ಟಾಪ್‌ಗಳು ದೊರೆಯತ್ತವೆ. ಡೆವೆಲಪರ್ ಲ್ಯಾಪ್‌ಟಾಪ್‌ಗಳನ್ನು ಗಣಕ ತಂತ್ರಾಂಶ ಕೇತ್ರದಲ್ಲಿ ಕೆಲಸ ಮಾಡುವವರು ಅಂದರೆ ಪ್ರೋಗ್ರಾಮ್ಮರ್‌ಗಳು ಬಳಸುತ್ತಾರೆ. ಇವುಗಳಲ್ಲಿ ಶಕ್ತಿಶಾಲಿಯಾದ ಪ್ರೋಸೆಸರ್, ಅಧಿಕ ಮೆಮೊರಿ, ಸ್ವಲ್ಪ ಜಾಸ್ತಿ ಶಕ್ತಿಯ ಗ್ರಾಫಿಕ್ಸ್ ಮತ್ತು ಗ್ರಾಫಿಕ್ಸ್ ಮೆಮೊರಿ, ಹೆಚ್ಚು ಸಂಗ್ರಹ ಶಕ್ತಿಯ ಹಾರ್ಡ್‌ಡಿಸ್ಕ್ ಇತ್ಯಾದಿಗಳಿರುತ್ತವೆ. ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಅದು ಗೇಮಿಂಗ್ ಲ್ಯಾಪ್‌ಟಾಪ್ ಆಗುತ್ತದೆ. ಈ ವಾರದ ನಮ್ಮ ಗ್ಯಾಜೆಟ್ ಅಂತಹ ಒಂದು ಲ್ಯಾಪ್‌ಟಾಪ್. ಅದುವೇ ಲೆನೊವೊ ಲೀಜನ್ 520 (Lenovo Legion Y520).

ಇದರ ರಚನೆ ಮತ್ತು ವಿನ್ಯಾಸ ಚೆನ್ನಾಗಿದೆ. ನೋಡಲು ಸುಂದರವಾಗಿದೆ. ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ಉತ್ತಮವಾಗಿದೆ. ದೇಹ ಗಡುಸಾಗಿದೆ. 2.6 ಸೆ.ಮೀ. ದಪ್ಪ ಎಂದರೆ ತೆಳ್ಳಗಿನ ಲ್ಯಾಪ್‌ಟಾಪ್ ಅಲ್ಲ ಎನ್ನಬಹುದು. 15.6 ಇಂಚು ಗಾತ್ರದ ಪರದೆ ಕೂಡ ದೊಡ್ಡದೇ. ಚಿಕ್ಕ ಲ್ಯಾಪ್‌ಟಾಪ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ವಿಮಾನದಲ್ಲಿ ಪ್ರಯಾಣಿಸುವಾಗ ಇದರಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇದನ್ನು ಅಷ್ಟು ಸೀಮಿತ ಸ್ಥಳದಲ್ಲಿ ಬಳಸುವಂತಿಲ್ಲ. ಶಕ್ತಿಶಾಲಿಯಾದ ಡೆವೆಲಪರ್ ಲ್ಯಾಪ್‌ಟಾಪ್ ಬೇಕು ಎನ್ನುವವರು ಇದನ್ನು ಬಳಸಬಹುದು. ಇದರ ದೇಹ ಗಡುಸಾಗಿದೆ. ನಮ್ಮ ದೇಶದ ಹಳ್ಳಿಗಳಲ್ಲಿ, ಬಸ್ಸುಗಳಲ್ಲಿ ಇದನ್ನು ಕೊಂಡೊಯ್ಯಬಹುದು ಮತ್ತು ಬಳಸಬಹುದು.

ಲೆನೊವೊದವರು ಇದನ್ನು ಗೇಮಿಂಗ್ ಲ್ಯಾಪ್‌ಟಾಪ್ ಎಂದು ಮಾರುತ್ತಿದ್ದಾರೆ. ಆದರೆ ನನ್ನ ಪ್ರಕಾರ ಮುಖ್ಯವಾಗಿ ಇದು ಪ್ರೋಗ್ರಾಮ್ಮರ್‌ಗಳಿಗಾಗಿರುವ ಲ್ಯಾಪ್‌ಟಾಪ್. ನನ್ನ ಮಗ ಇದನ್ನು ಪ್ರೋಗ್ರಾಮ್ಮಿಂಗ್‌ಗೇ ಬಳಸುತ್ತಿರುವುದು. ಆತ ಇದರಲ್ಲಿ ವಿಶುವಲ್ ಸ್ಟುಡಿಯೋ, ಯುನಿಟಿ ಹಾಗೂ ಕೆಲವು ಸರ್ವರ್‌ಗಳನ್ನು ಹಾಕಿದ್ದಾನೆ. ಪ್ರಾಥಮಿಕ ಡ್ರೈವ್ ಎಸ್‌ಎಸ್‌ಡಿ ಆಗಿರುವುದರಿಂದ ವಿಶುವಲ್ ಸ್ಟುಡಿಯೋ ಮತ್ತು ಇತರೆ ಕಂಪೈಲರ್‌ಗಳು ವೇಗವಾಗಿ ಲೋಡ್ ಆಗುತ್ತವೆ. ತುಂಬ ಪ್ರೋಸೆಸಿಂಗ್ ಶಕ್ತಿಯನ್ನು ಬೇಡುವ ಹಲವು ತಂತ್ರಾಂಶಗಳನ್ನು ಏಕಕಾಲದಲ್ಲಿ ಬಳಸಿಯೂ ನೋಡಲಾಗಿದೆ. ಪ್ರೋಗ್ರಾಮ್ಮರ್‌ಗಳು ಬಳಸುವಾಗ ಸಾಮಾನ್ಯವಾಗಿ ಹಲವು ತಂತ್ರಾಂಶಗಳು ಮತ್ತು ಸರ್ವರ್‌ ಏಕಕಾಲದಲ್ಲಿ ಕೆಲಸ ಮಾಡುತ್ತಿರುತ್ತವೆ. ಅಂತಹ ಸಂದರ್ಭಗಳಲ್ಲಿ ಯಾವ ಅಡೆತಡೆ ಎಂದು ಅನ್ನಿಸಲಿಲ್ಲ.

ಗೇಮಿಂಗ್‌ಗೆಂದಿರುವುದರಿಂದ ಇದರಲ್ಲಿರುವ ಗ್ರಾಫಿಕ್ಸ್ ಉತ್ತಮವಾಗಿದೆ. ಅದಕ್ಕೆಂದೇ 4 ಗಿಗಾಬೈಟ್ ಅಧಿಕ ಮೆಮೊರಿ ಇದೆ. ಆದುದರಿಂದ ಗ್ರಾಫಿಕ್ಸ್ ಕೆಲಸ ಮಾಡುವವರಿಗೂ ಇದು ಬಳಸಬಹುದಾದ ಲ್ಯಾಪ್‌ಟಾಪ್. ಫೋಟೋಶಾಪ್, ವಿಡಿಯೋ ಎಡಿಟಿಂಗ್, ಮೂರು ಆಯಾಮದ ಪ್ರತಿಕೃತಿ ತಯಾರಿ, ಇತ್ಯಾದಿಗಳನ್ನು ತೊಂದರೆಯಿಲ್ಲದೇ ಮಾಡಬಹುದು. ಪರದೆಯ ಗುಣಮಟ್ಟ ಪರವಾಗಿಲ್ಲ. ವ್ಯೂವಿಂಗ್ ಆ್ಯಂಗಲ್ ಚೆನ್ನಾಗಿದೆ. ಇದರ ಪರದೆ ಮ್ಯಾಟ್ ಫಿನಿಷ್, ಅಂದರೆ ನಯವಾಗಿಲ್ಲ. ಎಲ್ಲ ಬಣ್ಣಗಳ ಪುನರುತ್ಪತ್ತಿ ತೃಪ್ತಿದಾಯಕವಾಗಿದೆ. ಪ್ರಖರತೆಯೂ ಚೆನ್ನಾಗಿದೆ. ಸಿನಿಮಾ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಆಟ ಆಡಲೆಂದೇ ತಯಾರಾದ ಲ್ಯಾಪ್‌ಟಾಪ್ ಇದು. ಆಡಿಯೊ ಕೂಡ ತೃಪ್ತಿದಾಯಕವಾಗಿದೆ. ಇದರಲ್ಲಿ ಮೇಲ್ದರ್ಜೆಯ ಹಾರ್ಮನ್ ಕಾರ್ಡನ್ ಸ್ಪೀಕರುಗಳಿವೆ.

ಈ ಲ್ಯಾಪ್‌ಟಾಪ್‌ನಲ್ಲಿರುವುದು ಶಕ್ತಿಶಾಲಿಯಾದ ಬ್ಯಾಟರಿ ಅಲ್ಲ. ಶಕ್ತಿಶಾಲಿಯಾದ ಲ್ಯಾಪ್‌ಟಾಪ್ ಆಗಿರುವ ಕಾರಣ ಬ್ಯಾಟರಿ ಸುಮಾರು 3 ರಿಂದ 4 ಗಂಟೆ ಕಾಲ ಮಾತ್ರ ಬಾಳಿಕೆ ಬರುತ್ತದೆ.

ತುಂಬ ಶಕ್ತಿಶಾಲಿಯಾದ ಲ್ಯಾಪ್‌ಟಾಪ್‌ಗಳ ಬಗ್ಗೆ ಒಂದು ಪ್ರಮುಖ ದೂರು ಎಂದರೆ ಅವು ತುಂಬ ಬಿಸಿಯಾಗುತ್ತವೆ ಎಂದು. ಈ ಲ್ಯಾಪ್‌ಟಾಪ್ ಅಷ್ಟೇನೂ ಬಿಸಿಯಾಗುವುದಿಲ್ಲ. ಆದುದರಿಂದ ತೊಡೆ ಮೇಲೆ ಇಟ್ಟುಕೊಂಡೂ ಕೆಲಸ ಮಾಡಬಹುದುದು.

ಈ ಲ್ಯಾಪ್‌ಟಾಪ್‌ನಲ್ಲಿ ಡಿವಿಡಿ ಡ್ರೈವ್ ಮತ್ತು ವಿಜಿಎ ಪೋರ್ಟ್‌ಗಳು ಇಲ್ಲ. ಅವೆಲ್ಲ ಈಗ ಹಳೆಯದಾಗಿವೆ. ಒಂದು ವಿಶೇಷ ಯುಎಸ್‌ಬಿ-ಸಿ ಕಿಂಡಿ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀವು ಡೆವೆಲಪರ್ ಆಗಿದ್ದಲ್ಲಿ ನಿಮಗೆ ಇದು ಸೂಕ್ತ ಲ್ಯಾಪ್‌ಟಾಪ್ ಎನ್ನಬಹುದು. ಫೆಬ್ರವರಿ 1, 2018 ರ ಗ್ಯಾಜೆಟ್‌ಲೋಕದಲ್ಲಿ ವಿಮರ್ಶೆ ಮಾಡಿದ್ದ ಏಸುಸ್ ವಿವೊಬುಕ್ ಎಸ್ 510 ಗಿಂತ ಇದು ಉತ್ತಮ ಲ್ಯಾಪ್‌ಟಾಪ್ ಎಂದು ಹೇಳಬಹುದು. ಆದರೆ ಇದರ ಬೆಲೆಯೂ ಅದರ ಬೆಲೆಗಿಂತ ಹೆಚ್ಚು.

*ವಾರದ ಆಪ್ (app): ಮೋಟೋ ಟ್ರಾಫಿಕ್ ರೇಸ್ (Moto Traffic Race)

ಮೋಟರ್ ಸೈಕಲ್ ರೇಸ್ ಹುಚ್ಚು ನಿಮಗಿದೆಯೇ? ಹೌದಾದಲ್ಲಿ ಅಂತಹ ಆಟಗಳು ಗೂಗ್ಲ್ ಪ್ಲೇ ಸ್ಟೋರಿನಲ್ಲಿ ಹಲವಾರಿವೆ. ಅವುಗಳಲ್ಲಿ ಕೆಲವು ಎರಡು ಆಯಾಮದವುಗಳು, ಇನ್ನು ಕೆಲವು ಮೂರು ಆಯಾಮದವುಗಳು. ಈ ಸಲ ನಾನು ತಿಳಿಸುತ್ತಿರುವುದು ಮೂರು ಆಯಾಮದ ಆಟ. ಇದರಲ್ಲಿ ಹಲವು ನಮೂನೆಯ ರೇಸ್ ಬೈಕ್‌ಗಳಿವೆ. ಪ್ರಾರಂಭದಲ್ಲಿ ಒಂದು ಮಾತ್ರ ಉಚಿತ. ಆಡುತ್ತ ಆಡುತ್ತ ಹೆಚ್ಚು ಅಂಕ ಗಳಿಸಿದರೆ ಉಳಿದವುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸರಳ ಆಟ. ಈ ಆಟ ಬೇಕಿದ್ದರೆ ನೀವು ಗೂಗ್ಲ್ ಪ್ಲೇ ಸ್ಟೋರಿಗೆ ಭೇಟಿ ನೀಡಿ Moto Traffic Race ಎಂದು ಹುಡುಕಬೇಕು ಅಥವಾ http://bit.ly/gadgetloka329 ಜಾಲತಾಣಕ್ಕೆ ಭೇಟಿ ನೀಡಬೇಕು.

*

ಗ್ಯಾಜೆಟ್ ಪದ

Database = ದತ್ತಸಂಚಯ

ಒಂದು ವಿಷಯದ ಬಗೆಗಿನ ಮಾಹಿತಿಯ ತುಣುಕುಗಳ ಸಂಗ್ರಹ, ಅರ್ಥಾತ್ ದತ್ತಾಂಶಗಳ ಸಂಗ್ರಹ. ಕೆಲವು ಉದಾಹರಣೆಗಳು – ಉದ್ಯೋಗಿಗಳ ವಿವರಗಳ ಸಂಗ್ರಹ, ಗ್ರಂಥಾಲಯದಲ್ಲಿರುವ ಪುಸ್ತಕಗಳ ಮಾಹಿತಿಯ ಸಂಗ್ರಹ, ರಾಜ್ಯದಲ್ಲಿರುವ ಹಳ್ಳಿಗಳ ವಿವರಗಳ ಸಂಗ್ರಹ, ಇತ್ಯಾದಿ.

*

ಗ್ಯಾಜೆಟ್ ಸುದ್ದಿ

ವಸ್ತುಗಳ ಅಂತರಜಾಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಂಪೆನಿ ಸ್ಮಾರ್ಟ್ರೋನ್ ಹೊಸ ಆರೋಗ್ಯ ಪಟ್ಟಿ ಬಿಡುಗಡೆ ಮಾಡಿದೆ. ಟಿ.ಬ್ಯಾಂಡ್ ಹೆಸರಿನ ಈ ಪಟ್ಟಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಎಲ್ಲ ಆರೋಗ್ಯ ಪಟ್ಟಿಗಳಂತೆ ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಸಮಯ ನಿದ್ದೆ ಮಾಡಿದ್ದೀರಿ ಎಂಬುದನ್ನೆಲ್ಲ ತಿಳಿಸುವುದಲ್ಲದೆ ಧರಿಸಿದವರ ಹೃದಯಬಡಿತ, ರಕ್ತದೊತ್ತಡ, ಇಸಿಜಿ, ಇತ್ಯಾದಿಗಳನ್ನೂ ತಿಳಿಸುತ್ತದೆ. ಇದರ ಬೆಲೆ ₹4,999. ಇದು ಸದ್ಯಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯ.

*

ಗ್ಯಾಜೆಟ್ ಸಲಹೆ

ಸುಜಿತ್ ಭಾರದ್ವಾಜರ ಪ್ರಶ್ನೆ:
ಶಿಯೋಮಿ ರೆಡ್‌ಮಿ ನೋಟ್ 4 ಮತ್ತು ನೋಟ್ 5 ಇವುಗಳಲ್ಲಿ ಯಾವುದು ಉತ್ತಮ? ಯಾವುದರಲ್ಲಿಯ ಕ್ಯಾಮರ ಉತ್ತಮ?

ಉ: ನೋಟ್ 5.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.