ಗುರುವಾರ , ಫೆಬ್ರವರಿ 25, 2021
29 °C
ಅಗತ್ಯ ಆರೋಗ್ಯ ತಪಾಸಣೆ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭ: ಆಗಸ್ಟ್‌ನಲ್ಲಿ ಮುಂದಿನ ಸಭೆ

ವೈದ್ಯಕೀಯ ಪರೀಕ್ಷೆ ದರಕ್ಕೂ ಅಂಕುಶ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯಕೀಯ ಪರೀಕ್ಷೆ ದರಕ್ಕೂ ಅಂಕುಶ?

ನವದೆಹಲಿ: ಅತ್ಯಂತ ಅಗತ್ಯವಾದ ವೈದ್ಯಕೀಯ ಪರೀಕ್ಷೆಗಳು ಯಾವುವು ಎಂಬುದನ್ನು ಪಟ್ಟಿ ಮಾಡಿ ಅವುಗಳ ದರವನ್ನು ನಿಯಂತ್ರಿಸುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸುತ್ತಿದೆ.

ಅಗತ್ಯ ಔಷಧಗಳ ಪಟ್ಟಿಯನ್ನು ಇತ್ತೀಚೆಗೆ ಸಿದ್ಧಪಡಿಸಲಾಗಿತ್ತು. ಸರ್ಕಾರದ ಆದೇಶದ ಪ್ರಕಾರ, ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಈ ಔಷಧಗಳ ಗರಿಷ್ಠ ಮಾರಾಟ ಬೆಲೆಯನ್ನು ನಿಗದಿ ಮಾಡಿತ್ತು. ಅದೇ ರೀತಿಯಲ್ಲಿ, ಅಗತ್ಯ ಪರೀಕ್ಷೆಗಳ ಪಟ್ಟಿ ಸಿದ್ಧವಾದ ಬಳಿಕ ಈ ಪರೀಕ್ಷೆಗಳ ದರದ ಮೇಲೆ ನಿಯಂತ್ರಣ ಹೇರುವ ಬಗ್ಗೆ ಯೋಚಿಸಲಾಗುತ್ತಿದೆ.

ಜಗತ್ತಿನಾದ್ಯಂತ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸಾ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಅಗತ್ಯ ವೈದ್ಯಕೀಯ ಪರೀಕ್ಷೆಗಳ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿತ್ತು.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 58 ಪರೀಕ್ಷೆಗಳ ಸೌಲಭ್ಯ ಇರಬೇಕು; ನಂತರದ ಹಂತದ ಆಸ್ಪತ್ರೆಯಲ್ಲಿ 55 ಪರೀಕ್ಷೆಗಳಿಗೆ ವ್ಯವಸ್ಥೆ ಇರಬೇಕು ಎಂದು ಡಬ್ಲ್ಯುಎಚ್‌ಒ ತನ್ನ ಪಟ್ಟಿಯಲ್ಲಿ ಸ್ಪಷ್ಟಪಡಿಸಿದೆ.

ಆರೋಗ್ಯ ಸಚಿವಾಲಯವು ಅಗತ್ಯ ಔಷಧಗಳ ಪಟ್ಟಿಯ ರೀತಿಯಲ್ಲಿಯೇ ಅಗತ್ಯ ಪರೀಕ್ಷೆಗಳ ಪಟ್ಟಿಯನ್ನು ಸಿದ್ಧಪಡಿಸಬಹುದು. ಅದನ್ನು ನಿಯಮಿತವಾಗಿ ಪರಿಷ್ಕರಿಸಬಹುದು. ವೈದ್ಯಕೀಯ ಪರೀಕ್ಷೆಗಳು ಜನರ ಕೈಗೆಟುಕುವಂತಿರಬೇಕು ಎಂಬುದು ಇದರ ಉದ್ದೇಶ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ ಹಿರಿಯ ವಿಜ್ಞಾನಿ ಕಾಮಿನಿ ವಾಲಿಯಾ ಅವರು ಪ್ರಜಾವಾಣಿಗೆ ತಿಳಿಸಿದ್ದಾರೆ. ಡಬ್ಲ್ಯುಎಚ್‌ಒದ ಸಲಹಾ ಸಮಿತಿಯೊಂದರಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಬೇಕಾದ 58 ಪರೀಕ್ಷೆಗಳು ಸಾಮಾನ್ಯವಾಗಿ ಉಂಟಾಗುವ ರೋಗಗಳಿಗೆ ಸಂಬಂಧಿಸಿದ್ದಾಗಿವೆ. ಎಚ್‌ಐವಿ, ಕ್ಷಯ, ಹೆಪಟೈಟಿಸ್‌ ಬಿ ಮತ್ತು ಸಿ, ಮಲೇರಿಯಾ, ಸಿಫಿಲಿಸ್‌ನಂತಹ ರೋಗ ಪತ್ತೆ ಮತ್ತು ನಿಗಾ ಪರೀಕ್ಷೆಗಳು ನಂತರದ ಹಂತದ ಆರೋಗ್ಯ ಕೇಂದ್ರಗಳಲ್ಲಿ ಇರಬೇಕು ಎಂದು ಡಬ್ಲ್ಯುಎಚ್‌ಒ ಹೇಳಿದೆ.

*

ವರ್ಷದ ಕೊನೆಗೆ ಪಟ್ಟಿ ಸಿದ್ಧ?

ಭಾರತದಲ್ಲಿ ಅಗತ್ಯ ವೈದ್ಯಕೀಯ ಪರೀಕ್ಷೆಗಳ ಪಟ್ಟಿ ತಯಾರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ವಿಜ್ಞಾನಿಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು ಮತ್ತು ಡಬ್ಲ್ಯುಎಚ್‌ಒ ಅಧಿಕಾರಿಗಳ ಸಭೆಯನ್ನು ಮಾರ್ಚ್‌ನಲ್ಲಿಯೇ ನಡೆಸಲಾಗಿದೆ. ಮುಂದಿನ ಸಭೆ ಆಗಸ್ಟ್‌ನಲ್ಲಿ ನಡೆಯಲಿದೆ. 2018ರ ಕೊನೆಯ ಹೊತ್ತಿಗೆ ಅಗತ್ಯ ಪರೀಕ್ಷೆಗಳ ಪಟ್ಟಿ ಸಿದ್ಧವಾಗುವ ನಿರೀಕ್ಷೆ ಇದೆ.

*

ಜನರಿಗೆ ₹11,350 ಕೋಟಿ ಲಾಭ

ರಾಷ್ಟ್ರೀಯ ಔಷಧ ದರ ನಿಯಂತ್ರಣ ಪ್ರಾಧಿಕಾರವು 2017ರ ಡಿಸೆಂಬರ್‌ನಲ್ಲಿ 851 ಔಷಧಗಳ ದರದ ಮೇಲೆ ನಿಯಂತ್ರಣ ಹೇರಿದೆ. ಇದರಲ್ಲಿ ಎರಡು ಸ್ಟೆಂಟ್‌ಗಳು ಕೂಡ ಸೇರಿವೆ. ಕೃತಕ ಮಂಡಿ ಚಿಪ್ಪನ್ನು ಕೂಡ ಇತ್ತೀಚೆಗೆ ಈ ವ್ಯಾಪ್ತಿಗೆ ತರಲಾಗಿದೆ. 2011ರಲ್ಲಿ ಅಗತ್ಯ ಔಷಧಗಳ ಪಟ್ಟಿ ಸಿದ್ಧಪಡಿಸಿ ಅವುಗಳ ಬೆಲೆಯನ್ನು ನಿಯಂತ್ರಣಕ್ಕೆ ಒಳಪಡಿಸಿದ್ದರಿಂದಾಗಿ ಜನರಿಗೆ ₹11,350 ಕೋಟಿ ಹಣ ಉಳಿತಾಯವಾಗಿದೆ ಎಂದು ಸಂಸತ್ತಿಗೆ ಸರ್ಕಾರವು ಇತ್ತೀಚೆಗೆ ಮಾಹಿತಿ ನೀಡಿದೆ.

*

60%

ಒಟ್ಟು ವೈದ್ಯಕೀಯ ವೆಚ್ಚದಲ್ಲಿ ಔಷಧ ಮತ್ತು ಪರೀಕ್ಷೆಗೆ ಬೇಕಾಗುವ ಮೊತ್ತದ ಪ್ರಮಾಣ

62%

ಭಾರತೀಯರ ಮೇಲೆ ವೈದ್ಯಕೀಯ ವೆಚ್ಚವು ಪ್ರತಿಕೂಲ ಪರಿಣಾಮ ಬೀರುತ್ತದೆ

(2018ರ ಆರ್ಥಿಕ ಸಮೀಕ್ಷೆ ವರದಿ)

*


ಡಬ್ಲ್ಯುಎಚ್‌ಒ ಪಟ್ಟಿಯನ್ನು ಮಾರ್ಗದರ್ಶಿಯಾಗಿ ಇರಿಸಿಕೊಂಡು ವಿವಿಧ ದೇಶಗಳು ಅಗತ್ಯ ಪರೀಕ್ಷೆಗಳ ಪಟ್ಟಿಯನ್ನು ಸಿದ್ಧಪಡಿಸಲಿವೆ.

          –ಕಾಮಿನಿ ವಾಲಿಯಾ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ ಹಿರಿಯ ವಿಜ್ಞಾ‌ನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.