ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಟಿ ಪ್ರಿಯೆ ಲೇಡಿ ಬೌನ್ಸರ್ ಆದ ಕಥೆ..

Last Updated 17 ಮೇ 2018, 19:30 IST
ಅಕ್ಷರ ಗಾತ್ರ

ನಗರದ ಪಬ್‌, ಬಾರ್‌ಗಳಲ್ಲಿ ಕೀಟಲೆ ಇಲ್ಲವೇ ದಾಂಧಲೆ ಮಾಡುವವರನ್ನು ನಿಯಂತ್ರಿಸಲು ಬೌನ್ಸರ್‌ಗಳಿರುವುದು ಸಾಮಾನ್ಯ. ಅಜಾನುಬಾಹು, ಕಪ್ಪು ಟೀ ಶರ್ಟ್ ಇಲ್ಲವೇ ಸಫಾರಿ ತೊಟ್ಟ ಈ ಬೌನ್ಸರ್‌ಗಳು ಕಣ್ಣಿನಲ್ಲೇ ಭಯದ ನೋಟ ಬಿತ್ತುತ್ತಾರೆ.

ಸಾಮಾನ್ಯವಾಗಿ ಬೌನ್ಸರ್‌ಗಳ ಕೆಲಸಗಳನ್ನು ಪುರುಷರೇ ನಿರ್ವಹಿಸುವುದು ವಾಡಿಕೆ. ಆದರೆ, ಇದನ್ನು ಮುರಿದು ಲೇಡಿ ಬೌನ್ಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ ನಗರದ ಕಾಲೇಜು ವಿದ್ಯಾರ್ಥಿನಿ ವನೆಸ್ಸಾ ಜಾರ್ಜ್.

19ರ ಹರೆಯದ ವನೆಸ್ಸಾ ಕಾಲೇಜು ಶಿಕ್ಷಣದ ಜತೆಜತೆಗೇ ಈ ಬೌನ್ಸರ್ ಆಗಿಯೂ ಕೆಲಸ ಮಾಡುತ್ತಿರುವುದು ವಿಶೇಷ. ಲೇಡಿ ಬೌನ್ಸರ್ ಆದ ಮೇಲೆ ವನೆಸ್ಸಾ ತಮ್ಮ ಉದ್ಯೋಗದಲ್ಲಿ ಕಂಡುಕೊಂಡ ಅನುಭವ ಮತ್ತು ಸವಾಲುಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಲೇಡಿ ಬೌನ್ಸರ್ ಆಗಲು ನಿಮಗೆ ಏನು ಸ್ಫೂರ್ತಿ?

ಸ್ಫೂರ್ತಿ ಅಂತೇನೂ ಇಲ್ಲ. ಬೌನ್ಸರ್‌ಗಳು ಮಾಡುವ ಕೆಲಸವನ್ನು ನೋಡುತ್ತಿದ್ದೆ. ಅದೊಂಥರ ಆಕರ್ಷಕ ಅನಿಸಿತು. ಕಪ್ಪು ಬಟ್ಟೆ ಧರಿಸಿದ ಪುರುಷರು ಸುತ್ತಲೂ ನಿಗಾ ವಹಿಸುವುದನ್ನು ಇಷ್ಟಪಟ್ಟು ನೋಡುತ್ತಿದ್ದೆ. ಯಾರಾದರೂ ಅನುಚಿತವಾಗಿ ವರ್ತಿಸಿದರೆ ಅವರನ್ನು ಎಗ್ಗಿಲ್ಲದೇ ಹೊರಗೆ ಎತ್ತಿ ಬಿಸಾಡುತ್ತಿದ್ದರು. ಆ ಬೌನ್ಸರ್‌ಗಳ ಸ್ಥಾನದಲ್ಲಿ ನಾನಿದ್ದರೆ ಹೇಗಿರುತ್ತದೆ ಅಂತ ನಾನು ಕಲ್ಪಿಸಿಕೊಳ್ಳುತ್ತಿದ್ದೆ.

ಕೊನೆಗೂ ನನಗೆ ಆ ಅವಕಾಶ ಸಿಕ್ಕಿಯೇ ಬಿಟ್ಟಿತು. ಜೀವನವನ್ನು ಮನಪೂರ್ವಕವಾಗಿ ಅನುಭವಿಸಬೇಕು ಅನ್ನುವವಳು ನಾನು. ನನ್ನ ಹಾದಿಯಲ್ಲಿ ಏನು ಬರುತ್ತದೋ ಅದನ್ನು ಸ್ವೀಕರಿಸುವ ಮನೋಭಾವ ನನ್ನದು. ಹಾಗಾಗಿ, ಈ ಅವಕಾಶ ಸಿಕ್ಕಾಗ ಹಿಂದೆಮುಂದೆ ನೋಡದೇ ಒಪ್ಪಿಕೊಂಡೆ.

ಬೌನ್ಸರ್‌ ಆಗಲು ತರಬೇತಿ ಅಗತ್ಯವಿದೆಯೇ?

ಹೌದು. ಬೌನ್ಸರ್ ಆಗಲು ತರಬೇತಿಯ ಅಗತ್ಯ ಖಂಡಿತಾ ಇದೆ. ಇದಕ್ಕಾಗಿ ನಾನು ಏಳು ತಿಂಗಳು ಬಾಕ್ಸಿಂಗ್‌ ತರಬೇತಿ ಪಡೆದೆ. ಆ ನಂತರವೇ ನಾನು ಬೌನ್ಸರ್ ಆಗಿದ್ದು.

ಬೌನ್ಸರ್ ಆಗಲೇಬೇಕು ಅನ್ನೋದಕ್ಕೆ ಏನಾದರೂ ಕಾರಣವಿದೆಯೇ?

ನನಗೆ ಪಾರ್ಟಿಗಳೆಂದರೆ ಇಷ್ಟ. ಪಾರ್ಟಿಗಳಿಗೆ ಹೋದಾಗ ಆದ ಅನುಭವಗಳೇ ನಾನು ಬೌನ್ಸರ್ ವೃತ್ತಿಗೆ ಬರಲು ಕಾರಣ.

ಪಾರ್ಟಿಗಳಲ್ಲಿ ಕೆಲ ಪುರುಷರು ನನ್ನ ಮತ್ತು ಅನೇಕ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು. ಕೆಲ ಪುರುಷರು ಬೇಕಂತಲೇ ತೀರಾ ನನ್ನ ಸನಿಹದಲ್ಲೇ ಹಾದು ಹೋಗುತ್ತಿದ್ದರು ಮತ್ತೆ ಕೆಲವರು ಮೈಮುಟ್ಟುತ್ತಿದ್ದರು.

ಆಗೆಲ್ಲಾ ನನಗೆ ತುಂಬಾ ಇರಿಸುಮುರಿಸು ಮತ್ತು ಹಿಂಸೆ ಅನಿಸುತ್ತಿತ್ತು. ಇತರ ಹೆಣ್ಣುಮಕ್ಕಳಿಗೂ ಇದೇ ರೀತಿಯ ಅನುಭವ ಆಗುತ್ತಿದ್ದುದ್ದನ್ನು ಗಮನಿಸಿದ್ದೆ. ಪಾರ್ಟಿಗಳಲ್ಲಿ ಬರುವ ಮಹಿಳೆಯರನ್ನು ಮುಟ್ಟುವುದು ಕೆಲ ಪುರುಷರಿಗೆ ಸಹಜ ಅನಿಸಬಹುದು. ಆದರೆ, ಮಹಿಳೆಯರಿಗೆ ಇದು ಇಷ್ಟವಾಗದ ಸಂಗತಿ. ನಾನೇ ಬೌನ್ಸರ್ ಆದರೆ ಹೇಗೆ ಎಂಬ ಆಲೋಚನೆ ಬಂದದ್ದೇ ಆಗ.

ಈ ವೃತ್ತಿಯಲ್ಲಿ ನಿಮಗಿರುವ ಸವಾಲುಗಳೇನು?

ಬೌನ್ಸರ್ ವೃತ್ತಿಯಲ್ಲಿ ನನಗೆ ಅಷ್ಟೇನೂ ಸವಾಲುಗಳು ಎದುರಾಗಿಲ್ಲ. ಏಕೆಂದರೆ ಅನುಚಿತವಾಗಿ ವರ್ತಿಸುವವರಿಗೆ ಎಚ್ಚರಿಕೆ ನೀಡಿ ಅವರನ್ನು ಸರಿದಾರಿಗೆ ತರುವುದಷ್ಟೇ ನಮ್ಮ ಕೆಲಸ. ಇದರಲ್ಲಿ ನನಗೆ ಯಾವುದು ಸವಾಲು ಅನಿಸುವ ಸಂಗತಿ ಕಂಡುಬಂದಿಲ್ಲ.

ಬೌನ್ಸರ್ ಆದಾಗ ನಿಮ್ಮ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು?

ಪ್ರೋತ್ಸಾಹದಾಯಕವಾಗಿತ್ತು. ನಮ್ಮ ತಂದೆ ಚಟಮುಕ್ತ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿದ್ದಾರೆ. ನನ್ನ ತಾಯಿ ಗೃಹಿಣಿ.

ಅಪ್ಪ–ಅಮ್ಮ ಇಬ್ಬರಿಗೂ ನನ್ನ ಮೇಲೆ ನಂಬಿಕೆ ಇದೆ. ಹಾಗಾಗಿ, ಅವರು ನನ್ನ ಕೆಲಸಗಳನ್ನು ಸದಾ ಬೆಂಬಲಿಸುತ್ತಾರೆ.

ನೀವು ಬರೀ ಮಹಿಳೆಯರನ್ನು ಮಾತ್ರ ನಿಯಂತ್ರಿಸುತ್ತೀರಾ ಅಥವಾ ಪುರುಷರನ್ನೂ?

ಇದು ಆಯಾ ಸ್ಥಳದಲ್ಲಿರುವ ದಟ್ಟಣೆಯನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆ ಪುರುಷ ಮತ್ತು ಮಹಿಳಾ ಬೌನ್ಸರ್ ಇಬ್ಬರೂ ಜತೆಗೂಡಿ ಕೆಲಸ ಮಾಡುತ್ತೇವೆ. ಹುಡುಗಿಯರ ನೈಟ್ ಔಟ್ ಪಾರ್ಟಿಗಳಲ್ಲಿ ಲೇಡಿ ಬೌನ್ಸರ್‌ಗಳು ಇದ್ದೇ ಇರುತ್ತಾರೆ.

ನಿಮ್ಮ ಮುಂದಿನ ಗುರಿಗಳೇನು?

ನನಗೆ ಇಡೀ ಪ್ರಪಂಚವನ್ನು ಸುತ್ತಬೇಕೆಂಬ ಆಸೆ ಇದೆ. ಜೀವನದ ಪ್ರತಿಕ್ಷಣವನ್ನೂ ಸುಖವಾಗಿ ಅನುಭವಿಸಬೇಕೆಂಬ ಆಸೆ ನನ್ನದು. ನಾನು ಪದವೀಧರೆಯಾಗಿ ಜೀವನದಲ್ಲಿ ಉತ್ತಮವಾದುದ್ದನ್ನೇ ಸಾಧಿಸಬೇಕೆಂಬ ಹಂಬಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT