ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಪಾಳಯದ ಇಬ್ಬರನ್ನು ಕೂಡಿಟ್ಟಿರುವ ಬಿಜೆಪಿ: ಡಿ.ಕೆ.ಶಿವಕುಮಾರ್ ಆರೋಪ

ಕಾಂಗ್ರೆಸ್‌ ಶಾಸಕರ ಸ್ಥಳಾಂತರ ಸಾಧ್ಯತೆ
Last Updated 17 ಮೇ 2018, 19:30 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಇಲ್ಲಿನ ಈಗಲ್‌ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಕಾಂಗ್ರೆಸ್ ಶಾಸಕರನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ಕೇರಳದ ಕೊಚ್ಚಿಗೆ ಶುಕ್ರವಾರ ಮುಂಜಾನೆ ವಿಶೇಷ ವಿಮಾನದ ಮೂಲಕ ಶಾಸಕರನ್ನು ಕರೆದೊಯ್ಯಲಾಗುವುದು ಎಂದು ಹೇಳಲಾಗುತ್ತಿದೆ. ಗುರುವಾರ ರಾತ್ರಿ ರೆಸಾರ್ಟ್‌ನಲ್ಲಿ ನಡೆದಿರುವ ಸಭೆಯಲ್ಲಿ ಈ ತೀರ್ಮಾನ ಅಂತಿಮಗೊಂಡಿರುವ ಸಾಧ್ಯತೆ ಇದೆ.

ರೆಸಾರ್ಟ್‌ ಮುಂಭಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಡಿ.ಕೆ.ಶಿವಕುಮಾರ್ ಶಾಸಕರ ಸ್ಥಳಾಂತರ ಪ್ರಕ್ರಿಯೆ ಖಚಿತಪಡಿಸಿದರು. ಆದರೆ, ಎಲ್ಲಿಗೆ ಕರೆದೊಯ್ಯಲಾಗುವುದು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.

‘ಯಡಿಯೂರಪ್ಪ ಬಹಳ ಆತುರದಲ್ಲಿ ಇದ್ದಾರೆ. ಪ್ರಮಾಣ ವಚನದ ಘಟನೆಯಿಂದ ಅವರಿಗೆ ಅಧಿಕಾರ ದಾಹ ಎಷ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ನಾವು ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಸುರಕ್ಷಿತ ಪ್ರದೇಶದಲ್ಲಿ ಕರೆದುಕೊಂಡು ಹೋಗಬೇಕಿದೆ’ ಎಂದು ಹೇಳಿದರು.

‘ನಮ್ಮ ಇಬ್ಬರು ಶಾಸಕರನ್ನು ಬಿಜೆಪಿಯವರು ಕೂಡಿಟ್ಟುಕೊಂಡಿದ್ದಾರೆ. ಅವರನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಎನ್ನುವುದೂ ಗೊತ್ತಿದೆ. ನಾನು ಮನಸ್ಸು ಮಾಡಿದರೆ 24ಗಂಟೆಯಲ್ಲಿ ಅವರನ್ನು ಕರೆದುಕೊಂಡು ಬರುತ್ತೇನೆ. ಇಬ್ಬರ ಬೆಂಬಲ ಸಿಕ್ಕಿದೆ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಈ ಬಗ್ಗೆ ಎಲ್ಲೂ ಅವರಿಬ್ಬರೂ ಹೇಳಿಲ್ಲ, ಒಂದು ವೇಳೆ ಅವರು ಹೋಗುವುದೇ ಆದರೆ ಅವರಿಂದ ರಾಜೀನಾಮೆ ಪಡೆದುಕೊಳ್ಳುತ್ತೇವೆ’ ಎಂದರು.

ರಾಮನಗರ ಎಸ್‍ಪಿ ವರ್ಗಾವಣೆ ವಿಚಾರಕ್ಕೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಿವಕುಮಾರ್, ‘ಆತುರದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದರು.

ತಡರಾತ್ರಿವರೆಗೆ ಚರ್ಚೆ: ಬುಧವಾರ ತಡರಾತ್ರಿವರೆಗೂ ರೆಸಾರ್ಟ್ ಅಂಗಳದಲ್ಲಿ ರಾಜಕೀಯ ಚರ್ಚೆ ನಡೆಯಿತು. ಕಾಂಗ್ರೆಸ್–ಜೆಡಿಎಸ್‌ನ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕೈ ಪಾಳಯದ ನಾಯಕರೊಂದಿಗೆ ಚರ್ಚೆ ನಡೆಸಿದರು. ಮಧ್ಯರಾತ್ರಿ ನಂತರವೂ ಸುಪ್ರೀಂ ಕೋರ್ಟ್ ವಿಚಾರಣೆ ಮುಂದುವರಿದಿದ್ದ ಕಾರಣ ಶಾಸಕರಿಗೆ ನಿದ್ದೆ ಹತ್ತಲಿಲ್ಲ. ಗುರುವಾರ ಮುಂಜಾನೆ ಕೊಂಚ ತಡವಾಗಿಯೇ ಎದ್ದ ಶಾಸಕರು ಉಪಾಹಾರ ಮುಗಿಸಿ ಲಘುಬಗೆಯಲ್ಲಿಯೇ ಸಿದ್ಧರಾಗಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಸಾರಥ್ಯದಲ್ಲಿ ಬೆಂಗಳೂರಿಗೆ ಹೊರಟರು. ಅಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಳಿಕ ಸಿದ್ದರಾಮಯ್ಯ ಹೊರತುಪಡಿಸಿ ಉಳಿದ ನಾಯಕರು ರೆಸಾರ್ಟ್‌ಗೆ ವಾಪಸ್ ಆದರು.

ಇಡೀ ರೆಸಾರ್ಟ್‌ನ ಚಟುವಟಿಕೆಗಳು ಶಾಸಕ ಡಿ.ಕೆ. ಶಿವಕುಮಾರ್ ಹಿಡಿತದಲ್ಲಿ ಇದೆ. ಕೆಲವು ಕಿರಿಯ ಹಾಗೂ ಅನ್ಯ ಪಕ್ಷಗಳಿಂದ ವಲಸೆ ಬಂದು ಶಾಸಕರಾದವರಿಗೆ ಮೊಬೈಲ್ ಬಳಕೆಗೆ ನಿರ್ಬಂಧ ಹೇರಲಾಗಿದೆ.

ಸುಮಾರು 70 ಶಾಸಕರು ರೆಸಾರ್ಟ್‌ನಲ್ಲಿ ಇದ್ದಾರೆ ಎನ್ನಲಾಗಿದೆ. ಇವರೊಟ್ಟಿಗೆ ಎಐಸಿಸಿಯ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸಹ ಇದ್ದಾರೆ. ಸಂಸದರಾದ ಡಿ.ಕೆ. ಸುರೇಶ್‌, ಧ್ರುವನಾರಾಯಣ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರವಿ, ಸಿ.ಎಂ. ಲಿಂಗಪ್ಪ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಒಳಗಿನ ಆತಿಥ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶಾಸಕರ ಚಟುವಟಿಕೆಗಳ ಮೇಲೆ ನಿಗಾ ಇಡಲು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಬಳಸಿಕೊಳ್ಳಲಾಗುತ್ತಿದೆ.

ಮಾಮೂಲಿ ಊಟದ ಮೆನು: ಪಂಚತಾರ ಹೋಟೆಲ್‌ಗಳಲ್ಲಿ ಇರುವಂತೆ ಮಾಮೂಲಿ ಊಟದ ಮೆನುವನ್ನೇ ಇಲ್ಲಿಯೂ ಸಿದ್ಧಪಡಿಸಲಾಗಿದೆ. ಗುರುವಾರ ಬೆಳಿಗ್ಗೆ ಉಪಾಹಾರಕ್ಕೆ ಎಂದಿನಂತೆ ಬ್ರೆಡ್‌, ದೋಸೆ, ಉಪ್ಪಿಟ್ಟು, ಪೊಂಗಲ್‌, ಮೊಟ್ಟೆ ಮೊದಲಾದ ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು.

ಮಧ್ಯಾಹ್ನ ರೆಸಾರ್ಟ್‌ಗೆ ವಾಪಸ್ ಆದ ಶಾಸಕರಿಗೆ ರೋಟಿ, ದಾಲ್‌, ವೆಜ್‌ ಪುಲಾವ್‌, ಮೊಸರನ್ನದ ವ್ಯವಸ್ಥೆ ಮಾಡಲಾಗಿತ್ತು. ಮಾಂಸಾಹಾರಿಗಳಿಗಾಗಿ ಚಿಕನ್ ಪುಲಾವ್‌, ಮಟನ್‌ ಕರಿಯೂ ಇತ್ತು. ರಾತ್ರಿಯೂ ಸಸ್ಯಾಹಾರ, ಮಾಂಸಾಹಾರ ಎರಡೂ ಬಗೆಯ ಆಹಾರ ಒದಗಿಸಲಾಗಿತ್ತು.

ಎಚ್‌ಡಿಕೆ–ಜಮೀರ್‌ ದೋಸ್ತಿ: ಹಳೆಯ ಗೆಳೆಯರಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್‌ ರೆಸಾರ್ಟ್‌ನಲ್ಲಿ ನಗುನಗುತ್ತಾ ಮಾತನಾಡಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರು.

ಬುಧವಾರ ತಡರಾತ್ರಿ ಕುಮಾರಸ್ವಾಮಿ ಭೇಟಿ ನೀಡಿದ ಸಂದರ್ಭ ಅವರಿಗೆ ಜಮೀರ್‌ ಹಸ್ತಲಾಘವ ಮಾಡಿದ್ದಲ್ಲದೆ ರೆಸಾರ್ಟ್‌ನ ಒಳಗೆ ಎಚ್‌ಡಿಕೆ ಜೊತೆ ಓಡಾಡುತ್ತಾ ಹಳೆಯ ಜೋಡಿ ನೆನಪಿಸಿದರು. ಈ ಸಂದರ್ಭ ಡಿ.ಕೆ.ಶಿವಕುಮಾರ್ ಪಕ್ಕದಲ್ಲೇ ಇದ್ದರು.

ಭದ್ರತೆ ವಾಪಸ್: ರೆಸಾರ್ಟ್‌ಗೆ ನೀಡಿದ್ದ ಭದ್ರತೆಯನ್ನು ಪೊಲೀಸರು ಗುರುವಾರ ಸಂಜೆ 4.30ರ ಸುಮಾರಿಗೆ ವಾಪಸ್ ಪಡೆದಿದ್ದು ಅಚ್ಚರಿ ಮೂಡಿಸಿತು.

ಶಾಸಕರ ಭದ್ರತೆಗಾಗಿ ಒಂದು ಡಿಎಆರ್‌ ತುಕಡಿ ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಮುಖ್ಯಮಂತ್ರಿ ಕಾರ್ಯಾಲಯದ ಸೂಚನೆ ಮೇರೆಗೆ ಈ ಭದ್ರತೆ ಹಿಂಪಡೆದದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಸಂಜೆ ನಂತರ ಕಾಂಗ್ರೆಸ್ ಕಾರ್ಯಕರ್ತರೇ ರೆಸಾರ್ಟ್ ಭದ್ರತೆಯನ್ನು ನಿರ್ವಹಿಸಿದರು. ತಾವೇ ವಾಹನಗಳ ತಪಾಸಣೆಯನ್ನೂ ಮಾಡಿದರು. ರೆಸಾರ್ಟ್‌ನ ಭದ್ರತಾ ಸಿಬ್ಬಂದಿ ಅವರಿಗೆ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT