ಗುರುವಾರ , ಫೆಬ್ರವರಿ 25, 2021
29 °C

ಬೂಮ್ರಾ ಸಾಮರ್ಥ್ಯ ಸಾಬೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೂಮ್ರಾ ಸಾಮರ್ಥ್ಯ ಸಾಬೀತು

ನವದೆಹಲಿ (ರಾಯಿಟರ್ಸ್‌): ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್‌ಪ್ರೀತ್ ಬೂಮ್ರಾ ಐಪಿಎಲ್‌ನಲ್ಲಿ ತಮ್ಮ ನೈಜ ಸಾಮರ್ಥ್ಯವನ್ನು ಬುಧವಾರ ಸಾಬೀತು ಮಾಡಿದರು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗಳಿಸಿದ್ದ 186 ರನ್‌ಗಳ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತುವ ಹಾದಿಯಲ್ಲಿದ್ದ ಕಿಂಗ್ಸ್ ಇಲೆವನ್‌ ಪಂಜಾಬ್ ತಂಡವನ್ನು ನಿಯಂತ್ರಿಸಿದ ಅವರ ಹೀರೊ ಆಗಿ ಬೆಳಗಿದರು.

ಕಿಂಗ್ಸ್ ಇಲೆವನ್ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್‌.ರಾಹುಲ್‌ (94; 60 ಎ, 3 ಸಿ, 10 ಬೌಂ) ಅವರನ್ನು 19ನೇ ಓವರ್‌ನಲ್ಲಿ ಔಟ್ ಮಾಡಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದರು. ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಮುಂಬೈ ಮೂರು ರನ್‌ಗಳ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತ್ತು. ಈ ಮೂಲಕ ಪ್ಲೇ ಆಫ್ ಹಂತದ ಆಸೆಯನ್ನು ಜೀವಂತವಾಗಿರಿಕೊಂಡಿತ್ತು.

ಪಂದ್ಯದ ಎರಡನೇ ಓವರ್ ಮಾಡಿದ್ದ ಬೂಮ್ರಾ ಅಪಾಯಕಾರಿ ಕ್ರಿಸ್‌ ಗೇಲ್ ಮತ್ತು ಕೆ.ಎಲ್‌. ರಾಹುಲ್ ಅವರನ್ನು ಬಿಯಂತ್ರಿಸಿ ಕೇವಲ ಒಂದು ರನ್ ನೀಡಿದ್ದರು. ಅಂತಿಮವಾಗಿ ನಾಲ್ಕು ಓವರ್‌ಗಳಲ್ಲಿ 15 ರನ್‌ ನೀಡಿ ಮೂರು ವಿಕೆಟ್ ಉರುಳಿಸಿದ್ದರು. ಅವರ ಬೌಲಿಂಗ್‌ನಲ್ಲಿ ಒಟ್ಟು 11 ಡಾಟ್ ಬಾಲ್‌ಗಳಿದ್ದವು. ಆ್ಯರನ್ ಫಿಂಚ್‌ ಮತ್ತು ಮಾರ್ಕಸ್ ಸ್ಟೋಯಿನಿಸ್‌ ಕೂಟ ಬೂಮ್ರಾ ಬೌಲಿಂಗ್‌ನಲ್ಲಿ ಔಟಾಗಿದ್ದರು.

‘ಎರಡು ವರ್ಷಗಳಿಂದ ಬೂಮ್ರಾ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಇದರ ಫಲ ಈಗ ಸಿಗುತ್ತಿದೆ. ನಿರ್ಣಾಯಕ ಹಂತದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆಯುವುದು ಸುಲಭವಲ್ಲ. ಆದರೆ ಬೂಮ್ರಾ ಅದನ್ನು ಮಾಡುತ್ತಿದ್ದಾರೆ’ ಎಂದು ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.

‘ಯಾರ್ಕರ್‌ ಎಸೆತಗಳನ್ನು ಹಾಕಲು ಸಾಧ್ಯವಾಗುತ್ತಿರುವುದು ಬೂಮ್ರಾ ಅವರ ದೊಡ್ಡ ಗುಣ. ಅನಿರೀಕ್ಷಿತ ಬೌನ್ಸರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳ ಲೆಕ್ಕಾಚಾರವನ್ನು ತಪ್ಪಿಸುತ್ತವೆ’ ಎಂದು ರೋಹಿತ್ ಅಭಿಪ್ರಾಯಿಪಟ್ಟರು.

‘ಉತ್ತಮ ತಂತ್ರಗಳು ಫಲ ನೀಡಿದವು’: ‘ಕೆ.ಎಲ್.ರಾಹುಲ್ ಅವರಂಥ ಸ್ಫೋಟಕ ಬ್ಯಾಟ್ಸ್‌ಮನ್‌ ವಿಕೆಟ್ ಕಬಳಿಸಲು ಉತ್ತಮ ತಂತ್ರಗಳನ್ನು ಹೂಡಿದ್ದೆ. ಅವು ಫಲ ನೀಡಿದವು’ ಎಂದು ಜಸ್‌ಪ್ರೀತ್ ಬೂಮ್ರಾ ಹೇಳಿದರು.

ಯಾವುದೇ ಪಂದ್ಯದಲ್ಲಿ ಸರಿಯಾದ ತಂತ್ರಗಳನ್ನು ಹೆಣೆಯುವುದು ಮುಖ್ಯ. ಕಿಂಗ್ಸ್ ಇಲೆವನ್‌ ಎದುರಿನ ಪಂದ್ಯದಲ್ಲಿ ಅದನ್ನು ನಾನು ಮಾಡಿದೆ. ತಂಡದ ಕೋಚ್ ಮತ್ತು ಬೌಲಿಂಗ್ ಕೋಚ್‌ ಜೊತೆ ನಡೆಸಿದ ಮಾತುಕತೆ ನನಗೆ ಫಲ ನೀಡಿತು’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.