ಗುರುವಾರ , ಫೆಬ್ರವರಿ 25, 2021
29 °C

ಕರ್ನಾಟಕ ಚುನಾವಣೆ: ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ರಚಿಸಿದ ತಂತ್ರಗಾರಿಕೆ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಚುನಾವಣೆ: ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ರಚಿಸಿದ ತಂತ್ರಗಾರಿಕೆ ಏನು?

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸುತ್ತೇವೆ ಎಂದು ಹೇಳುತ್ತಿದ್ದರೂ ಅದು ಕಷ್ಟ ಎಂಬುದು ಕಾಂಗ್ರೆಸ್‍ಗೆ ತಿಳಿದಿತ್ತು. ಹಾಗಾಗಿಯೇ ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ತೆಗೆದುಕೊಂಡಿತ್ತು.

78 ಶಾಸಕರಿರುವ ಕಾಂಗ್ರೆಸ್, 38 ಶಾಸಕರಿರುವ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದರ ಹಿಂದೆ ಸೋನಿಯಾ ಗಾಂಧಿ, ಸೀತಾರಾಂ ಯೆಚೂರಿ, ಮಮತಾ ಬ್ಯಾನರ್ಜಿ, ಮಾಯಾವತಿ ಮೊದಲಾದವರ 'ಸಲಹೆ'ಗಳಿವೆ ಎಂದು ಹೇಳಲಾಗುತ್ತಿದೆ.

ಬಹುಮತ ಸಿಗದೇ ಇದ್ದರೆ ಸಮಯ ವ್ಯರ್ಥ ಮಾಡದೆ ಜೆಡಿಎಸ್ ಜತೆ ಕೈ ಜೋಡಿಸಿ ಅಧಿಕಾರಕ್ಕೇರುವ ಬಗ್ಗೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಸೋನಿಯಾಗಾಂಧಿ, ರಾಹುಲ್, ಪ್ರಿಯಾಂಕಾ, ಅಹಮದ್ ಪಟೇಲ್ ಭಾಗಿಯಾಗಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಸೋನಿಯಾ, ಪ್ರಿಯಾಂಕಾ, ಗುಲಾಂ ನಬೀ ಆಜಾದ್, ಅಶೋಕ್ ಗೆಲ್ಹೋಟ್ ಮೊದಲಾದ ಕಾಂಗ್ರೆಸ್ ನಾಯಕರು ಸೇರಿದಂತೆ ಟಿಡಿಪಿ,ಟಿಆರ್‍ಎಸ್,ಬಿಎಸ್‍ಪಿ, ತೃಣಮೂಲ ಕಾಂಗ್ರೆಸ್,  ಸಿಪಿಎಂ ಪಕ್ಷಗಳ ನಾಯಕರು ಕೂಡಾ ಬಿಜೆಪಿ ವಿರುದ್ಧದ ತಂತ್ರಗಾರಿಕೆಯಲ್ಲಿ ಭಾಗಿಯಾಗಿದ್ದರು.

ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಕಾಂಗ್ರೆಸ್ ಎಚ್.ಡಿ.ದೇವೇಗೌಡರಿಗೆ ಫೋನ್ ಮಾಡಿ ಮೈತ್ರಿ ಮಾತುಕತೆ ನಡೆಸಿತ್ತು. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಅಧಿಕಾರ ಕೈ ತಪ್ಪಿ ಹೋಗಬಾರದು ಎಂಬ ಉದ್ದೇಶದಿಂದಲೇ ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಒಪ್ಪಿಕೊಂಡಿತ್ತು. ಇದಾದ ಕೂಡಲೇ ತಮ್ಮೊಂದಿಗಿದ್ದ ಶಾಸಕರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು.

ತಮ್ಮ ಶಾಸಕರು ಬಿಜೆಪಿಯತ್ತ ಹಾರುವುದನ್ನು ತಡೆಯುವುದಕ್ಕಾಗಿಯೇ ಗುಲಾಂ ನಬೀ ಆಜಾದ್, ಅಶೋಕ್ ಗೆಲ್ಹೋಟ್ ಬೆಂಗಳೂರಿಗೆ ಆಗಮಿಸಿದ್ದರು. ಜೆಡಿಎಸ್ ಜತೆ ಸೇರಿ ಸರ್ಕಾರ ರೂಪಿಸುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ ಕೂಡಲೇ ರಾಜ್ಯಪಾಲರು ಸರ್ಕಾರ ರೂಪಿಸಲು ಬಿಜೆಪಿಗೆ ಆಹ್ವಾನ ನೀಡಿದ್ದರು. ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದ್ದಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರವನ್ನು ಪ್ರಶ್ನಿಸಿ ಅಭಿಶೇಕ್ ಮನು ಸಾಂಘ್ವಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.
'ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು’ ಎಂದು ಕೋರಿ ಕಾಂಗ್ರೆಸ್‌–ಜೆಡಿಎಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಶುಕ್ರವಾರ ಬೆಳಿಗ್ಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ನಾಳೆ(ಶನಿವಾರ) ಸಂಜೆ 4ಕ್ಕೆ ಬಹುಮತ ಸಾಬೀತುಪಡಿಸುವಂತೆ ಆದೇಶ ನೀಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.