ಸೋಮವಾರ, ಮಾರ್ಚ್ 8, 2021
19 °C

ಬೌದ್ಧಮತದ ಮೂರು ಘಟ್ಟಗಳು

ಹಾರಿತಾನಂದ Updated:

ಅಕ್ಷರ ಗಾತ್ರ : | |

ಬೌದ್ಧಮತದ ಮೂರು ಘಟ್ಟಗಳು

ಎಸ್‌. ಶ್ರೀಕಂಠಶಾಸ್ತ್ರೀ ಅವರ ‘ಭಾರತೀಯ ಸಂಸ್ಕೃತಿ’ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ಬೌದ್ಧದರ್ಶನದ ಬಗ್ಗೆ ಅಲ್ಲಿಯ ಅವರ ಕೆಲವೊಂದು ಮಾತುಗಳನ್ನು ಇಲ್ಲಿ ನೋಡಬಹುದು:

‘ಬೌದ್ಧಸಂಪ್ರದಾಯದ ಪ್ರಕಾರ ಗೌತಮಬುದ್ಧನಿಗೆ ಹಿಂದೆಯೇ ಅನೇಕ ಬೋಧಿಸತ್ವರೂ ಕ್ರಕುಚನ್ದ, ಕನಕಮುನಿ, ಕಾಶ್ಯಪರೇ ಮುಂತಾದ ಇಪ್ಪತ್ತುನಾಲ್ಕು ಬುದ್ಧರೂ ಈ ಮತವನ್ನು ಪ್ರಚಾರ ಮಾಡಿದರೆಂದು ತಿಳಿದುಬರುವುದು. ಅನಂತರ ಕ್ರಿಸ್ತಪೂರ್ವ ಆರನೆಯ ಶತಾಬ್ದದಲ್ಲಿ ಶುದ್ಧೋದನ ಮತ್ತು ಮಾಯಾದೇವಿಯರ ಪುತ್ರನಾದ ಗೌತಮನು ಸಂಬೋಧಿಯನ್ನು ಪಡೆದು ಮತಪ್ರವರ್ತಕನಾದನು.’

ಇಪ್ಪತ್ತುನಾಲ್ಕು ಬುದ್ಧರು ಯಾರೆಂಬ ಪಟ್ಟಿಯನ್ನೂ ಶ್ರೀಕಂಠಶಾಸ್ತ್ರೀ ನೀಡಿದ್ದಾರೆ; ಅವರೇ: ‘ದೀಪಂಕರ, ಕೊಣ್ಢನ್ನ, ಮಂಗಲ, ಸಮನ, ರೆವತ, ಸೊಭಿತ, ಅನೋಮದಸ್ಸೀ, ಪದುಮ, ನಾರದ, ಪದುಮುತ್ತರ, ಸುಮೇಧ, ಸುಜಾತ, ಪಿಯದಸ್ಸೀ, ಅತ್ಥದಸ್ಸೀ, ಥಮ್ಮದಸ್ಸೀ, ಸಿದ್ಧತ್ಥ, ತಿಸ್ಸ, ಫುಸ್ಸ, ವಿಪಸ್ಸಿ, ಸಿಖಿ, ವೆಸ್ಸಭು, ಕಕುಸನ್ದ, ಕೊಣಾಗಮನ, ಕಸ್ಸಪ’.

‘ಗೌತಮಬುದ್ಧನು ತನ್ನ ತಂದೆಯಾದ ಶುದ್ಧೋದನನಿಗೆ ಕುಲಗುರುವಾಗಿದ್ದ ಮತ್ತು ಬ್ರಹ್ಮವೇತ್ತನೂ ಯೋಗಿಯೂ ಆದ ಅಸಿತದೇವಲನಿಂದ ವೇದಾಂತತತ್ತ್ವಗಳನ್ನು ತಿಳಿದು ವಿರಕ್ತಿಹೊಂದಿ ಸರ್ವವನ್ನೂ ತ್ಯಜಿಸಿ ಬುದ್ಧನಾಗಿ ವೈದಿಕಮತದ ಒಂದಂಶವನ್ನೇ ಮುಖ್ಯವಾಗಿಟ್ಟುಕೊಂಡು ಶಿಷ್ಯರಿಗೆ ಬೋಧಿಸಿದುದರಿಂದ ಪ್ರಾಚೀನ ಬೌದ್ಧಮತವು ವೈದಿಕವೇ ಆಗಿದೆ’ ಎನ್ನುವುದನ್ನು ‘ಭಾರತೀಯ ಸಂಸ್ಕೃತಿ’ಯಲ್ಲಿ ಪ್ರತಿಪಾದಿಸಿದ್ದಾರೆ.

‘ಮಹಾಪರಿನಿರ್ವಾಣವಾದ ಕೂಡಲೇ ಬುದ್ಧನ ಶಿಷ್ಯರೆಲ್ಲರೂ ಮೊದಲನೆಯ ಮಹಾಸಂಘವನ್ನು ಸೇರಿಸಿ ಬುದ್ಧವಚನಗಳನ್ನು ಕ್ರೋಡೀಕರಿಸಿದರು. ಆದರೆ ಸ್ವಲ್ಪಕಾಲದಲ್ಲಿಯೇ ಶಿಷ್ಯರಲ್ಲಿ ಭಿನ್ನಾಭಿಪ್ರಾಯಗಳು ಉಂಟಾದವು. ಆದುದರಿಂದ ಮಗಧದೇಶದ ರಾಜನಾದ ಕಾಲಾಶೋಕನು ಎರಡನೆಯ ಸಂಘವನ್ನು ಸೇರಿಸಿ ವ್ಯವಸ್ಥೆಮಾಡಿದನು. ಆದರೂ ಸ್ವಯೂಧ್ಯರಲ್ಲಿಯೇ ಕಲಹಗಳುಂಟಾದುದರಿಂದ ಧರ್ಮಾಶೋಕನು ಕ್ರಿಸ್ತಪೂರ್ವ ಮೂರನೆಯ ಶತಾಬ್ದದಲ್ಲಿ ಪುನಃ ಸಂಘವನ್ನನುಕರಿಸಿದನೆಂದು ಸಿಂಹಳಗ್ರಂಥಗಳು ಹೇಳುವುವು’ ಎಂದಿದ್ದಾರೆ, ಶ್ರೀಕಂಠಶಾಸ್ತ್ರೀ. ಜೊತೆಗೆ, ಅಶೋಕನ ಕಾಲಕ್ಕೆ ಬೌದ್ಧಮತದಲ್ಲಿ ಹದಿನೆಂಟು ಪಂಗಡಗಳಾಗಿದ್ದವು ಎನ್ನುವುದನ್ನೂ ಅವರ ‘ಅಟ್ಟಕಥೆ’ಯ ಆಧಾರದಿಂದ ಹೇಳುತ್ತಾರೆ.

ಬೌದ್ಧಮತದ ಬೆಳವಣಿಗೆಯಲ್ಲಿ ಅವರು ಮೂರು ಘಟ್ಟಗಳನ್ನು ಗುರುತಿಸಿದ್ದಾರೆ. ‘ಸಂಸಾರನಿರೋಧವೇ ನಿರ್ವಾಣ’ ಎಂದು ಪ್ರತಿಪಾದಿಸಿದ್ದು ಮೊದಲನೆಯ ಘಟ್ಟ. ‘ನಿರ್ವಾಣದ ಸಾಧನೆಗಾಗಿ ನಾಲ್ಕು ಆರ್ಯಸತ್ಯಗಳನ್ನು ತಿಳಿಯಬೇಕಿತ್ತು’ ಎನ್ನುವ ಅವರು ‘ಈ ಕಾಲದಲ್ಲಿ ಸಂಘದಲ್ಲಿ ತುರೀಯಾಶ್ರಮ, ಎಂದರೆ ಸನ್ಯಾಸಿಗಳು ಮಾತ್ರವೇ ಇದ್ದರು, ಗೃಹಸ್ಥರು ಇರಲಿಲ್ಲ. ಕೆಲವರು ಭಿಕ್ಷುಗಳು ಆಗಾಗ ಪ್ರಾಯಶ್ಚಿತ್ತಕ್ಕಾಗಿ ಒಂದು ಕಡೆ ಸೇರುತ್ತಿದ್ದರು. ಚೈತ್ಯವಂದನೆ, ಬುದ್ಧವಿಗ್ರಹಪೂಜೆ, ಮಠಗಳೇ ಮುಂತಾದವು ಇರಲಿಲ್ಲ. ಬೌದ್ಧಮತವು ಅಶೋಕನ ಕಾಲದವರೆಗೂ ಮಧ್ಯಪ್ರದೇಶದಿಂದ ಹೊರಗೆ ಪ್ರಚಾರವಾಗಲಿಲ್ಲ’ ಎಂದೂ ತಿಳಿಸಿದ್ದಾರೆ.

ಮಹಾಯಾನಪಂಥ ಹುಟ್ಟಿದ್ದು ಬೌದ್ಧಮತದ ಎರಡನೆಯ ಘಟ್ಟ ಎಂದು ಅವರು ಅಭಿಪ್ರಾಯಿಸಿದ್ದಾರೆ. ‘ಈ ಮಹಾಯಾನಪಂಥದಲ್ಲಿ ಸರ್ವಮುಕ್ತಿವಾದವು ಹೊರಟಿತು. ಜ್ಞಾನದ ಪರಾಕಾಷ್ಠದಶೆಯಾದ ಪ್ರಜ್ಞಾಪಾರಮಿತಾ ಎಂಬುದು ಬುದ್ಧನ ಜ್ಞಾನಕಾಯ. ವ್ಯಾವಹಾರಿಕ ದಶೆಯಲ್ಲಿ ಬುದ್ಧನಿಗೆ ಸ್ವಭಾವಕಾಯವಿದೆ. ಇವೆರಡಕ್ಕೂ ಅತಿಶಯವಾದುದೂ, ಲೋಕೋತ್ತರವಾದುದೂ ಸುಖಸ್ವರೂಪವಾದುದೂ ಬುದ್ಧನ ಸಂಭೋಗಕಾಯ’ ಎನ್ನುತ್ತ, ಈ ಘಟ್ಟದಲ್ಲಿಯೇ ಬುದ್ಧನನ್ನು ದೇವತೆಯಂತೆ ಪರಿಗಣಿಸಿ, ವಿಗ್ರಹಾರಾಧನೆ ಆರಂಭವಾದದ್ದು ಎನ್ನುತ್ತಾರೆ. ಬುದ್ಧನ ಶಿಲ್ಪಗಳನ್ನು ಕೆತ್ತುವುದು ಈ ಕಾಲದಲ್ಲಿಯೇ ತೋರಿಕೊಂಡದ್ದು ಎನ್ನಬಹುದು.

ಬೌದ್ಧಮತಕ್ಕೆ ತಾರ್ಕಿಕತೆಯ ಆಯಾಮ ಒದಗಿದ ಕಾಲವನ್ನು ಅದರ ಮೂರನೆಯ ಘಟ್ಟ ಎಂದು ಗುರುತಿಸಬಹುದು ಎನ್ನುವುದು ಶ್ರೀಕಂಠಶಾಸ್ತ್ರೀ ಅವರ ಅಭಿಮತ. ಈ ಹಂತದಲ್ಲಿ ಆಲಯವಿಜ್ಞಾನದ ಕಲ್ಪನೆ ಸೇರಿಕೊಂಡಿತು. ವಿಜ್ಞಾನವಾದ, ಯೋಗಾಚಾರಪಂಥಗಳು ಈ ಕಾಲದ ಬೆಳವಣಿಗೆಗಳು.

‘ಕ್ರಿಶ್ತಶಕ ಎಂಟನೆಯ ಶತಮಾನದಿಂದ ಬೌದ್ಧಮತದಲ್ಲಿ ಶೈವ–ಶಾಕ್ತರ ಆಚಾರಗಳು ಸೇರಿಕೊಂಡು ವಜ್ರಯಾನ, ಮಂತ್ರಯಾನ ಮುಂತಾದ ಪಂಗಡಗಳು ಉಂಟಾದವು. ಶೂನ್ಯವೇ ವಜ್ರ. ಬೌದ್ಧಮತದ ಈ ರೂಪವು ಪೂರ್ವದೇಶಗಳಲ್ಲಿ ಪ್ರಚಾರವಾಯಿತು. ಬೌದ್ಧಮತದ ಪತನಹೇತುವೂ ಆಯಿತು. ಹೀಗೆ ಬುದ್ಧನಿರ್ವಾಣದ ನಂತರ ಮೂಲಮತವು ಅಶೋಕ, ಕನಿಷ್ಕ, ಹರ್ಷವರ್ಧನರ ಕಾಲಗಳಲ್ಲಿ ಬೇರೆ ಬೇರೆ ರೂಪಗಳನ್ನು ಪಡೆಯಿತು’ ಎನ್ನುತ್ತಾರೆ, ಅವರು.

ಬೌದ್ಧಮತದ ಈ ಬೇರೆ ಬೇರೆ ಕಾಲಘಟ್ಟಗಳ ಸೂಕ್ಷ್ಮ ಅವಲೋಕನದಿಂದ ಆ ದರ್ಶನದ ಸ್ವಾರಸ್ಯಗಳನ್ನು ಕಂಡುಕೊಳ್ಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.