ಸೋಮವಾರ, ಮಾರ್ಚ್ 8, 2021
31 °C
ನಿರ್ವಹಣೆ ಕೊರತೆ: ಶಿಥಿಲಗೊಂಡ ಬ್ರಿಟಿಷ್ ಕಾಲದ ಕಟ್ಟಡ

ಶತಮಾನದ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶತಮಾನದ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ

ಅರಸೀಕೆರೆ: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್‌ ಬದಿಯಲ್ಲಿ ಬ್ರಿಟಿಷರ ಕಾಲ ಹಳೆಯ ಕಟ್ಟಡವಿದ್ದು ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಗರದಲ್ಲಿ ತಾಲ್ಲೂಕು ಕಚೇರಿ ಎಂದೇ ಕರೆಯಲಾಗುವ ಈ ಕಟ್ಟಡ ಶತಮಾನ ಕಳೆದಿದ್ದರೂ ಸುಣ್ಣ ಹಾಗೂ ಗಾರೆಯಿಂದ ಅಚ್ಚುಕಟ್ಟಾಗಿ ನಿರ್ಮಿಸಿದ್ದರಿಂದ ಬಿಸಿಲು, ಮಳೆ, ಗಾಳಿಯ ಹೊಡೆತಕ್ಕೂ ಸಿಕ್ಕರೂ ಇನ್ನೂ ಸ್ವಲ್ಪ ಗಟ್ಟಿಯಾಗಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸರಿಯಾದ ಬಳಕೆ ಹಾಗೂ ನಿರ್ವಹಣೆಯಿಲ್ಲದೆ ಶಿಥಿಲಗೊಳ್ಳುತ್ತಿದೆ ಎಂದು ಹಿರಿಯ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕು ಕಚೇರಿ, ಖಜಾನೆ, ಹಾಗೂ ಬಂದಿಖಾನೆ ಇಲಾಖೆಗಳು ಈ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದವು. ಆದರೆ ತಾಲ್ಲೂಕು ಕಚೇರಿ ಹಾಗೂ ಖಜಾನೆ ಇಲಾಖೆ ಮಿನಿ ವಿಧಾನಸೌಧಕ್ಕೆ ಸ್ಥಳಾಂತರವಾದ ನಂತರ ಕಸಬಾ ಕಂದಾಯ ಇಲಾಖೆ ಕಚೇರಿ, ಕಂದಾಯ ನಿರೀಕ್ಷಕರ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಗ್ರಾಮಾಂತರ

ಪೊಲೀಸ್‌ ಠಾಣೆ ಹಾಗೂ ಉಪ ಬಂದಿಖಾನೆ ಇಲಾಖೆಗಳ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಗ್ರಾಮಾಂತರ ಪೊಲೀಸ್‌ ಠಾಣೆ ಅಧಿಕಾರಿಗಳು ತಾವು ಬಳಸುವ ಕೊಠಡಿಗಳಿಗೆ ಸುಣ್ಣ– ಬಣ್ಣ ಬಳಸಿಕೊಂಡು ಇದ್ದುದರಲ್ಲಿಯೇ ನಿರ್ವಹಣೆ ಮಾಡಿಕೊಂಡಿದ್ದಾರೆ. ಆದರೆ, ಉಳಿದ ಇಲಾಖೆಗಳು ಬಳಕೆಗೆ ಮಾತ್ರ ಸಿಮೀತವಾಗಿವೆ.

ನಿರ್ವಹಣೆಯ ಕೊರತೆಯಿಂದ ಕಟ್ಟಡದ ಚಾವಣಿಯ ಮೇಲೆ ಎಲೆಗಳು ಬಿದ್ದು ಮಳೆಯ ನೀರಿಗೆ ಕೊಳೆತು ಚಾವಣಿ ಶಿಥಿಲಗೊಂಡಿದೆ. ಇದಕ್ಕೆ ಮಳೆ ಬಂದಾಗ ಕಟ್ಟಡದ ಅಲ್ಲಲ್ಲಿ ನೀರು ತೊಟ್ಟಿಕ್ಕುತ್ತಿರುವುದೇ ಸಾಕ್ಷಿ.

ಈ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳ ಅಧಿಕಾರಿಗಳು ಕಾಳಜಿವಹಿಸಿ ಸೂಕ್ತ ನಿರ್ವಹಣೆ ಮಾಡಿದರೆ ಮಾತ್ರ ಕಟ್ಟಡ ಸುಭದ್ರವಾಗಿ, ಶತಮಾನದ ನೆನಪಾಗಿ ಉಳಿಯಬಹುದು. ಅಲ್ಲದೇ ಮುಂದಿನ ಪೀಳಿಗೆಗೂ ನೋಡಲು ಸಿಗಬಹುದು ಎಂದು ಎಚ್‌.ಟಿ.ಮಹದೇವ್‌ ಅಭಿಪ್ರಾಯಪಟ್ಟಿದ್ದಾರೆ.

ಜನಪ್ರತಿನಿಧಿಗಳಿಗೆ  ಹೊಸ ಕಟ್ಟಡಗಳನ್ನು ನಿರ್ಮಿಸುವಲ್ಲಿ ಇರುವ ಕಾಳಜಿ ಹಳೆಯ ಕಟ್ಟಡಗಳ ಜೀರ್ಣೋದ್ಧಾರದ ಬಗ್ಗೆ ಇಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಈ ಕಟ್ಟಡ ನಿರ್ವಹಣೆ ಮುಂದಾಗಬೇಕು ಎಂಬುದು ಹಲವು ಹಿರಿಯ ನಾಗರಿಕರ ಆಶಯವಾಗಿದೆ.

**

ಕಟ್ಟಡ ದುರಸ್ತಿಗೊಳಿಸಲು ಅನುದಾನ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಆರು ತಿಂಗಳ ಹಿಂದೆಯೇ ಪತ್ರ ಬರೆಯಲಾಗಿದೆ. ಅವರಿಂದ ಅನುದಾನ ಬಂದರೆ ಕಟ್ಟಡಕ್ಕೆ ಕಾಯಕಲ್ಪ ನೀಡಿ, ಸುಸ್ಥಿತಿಯಲ್ಲಿಡಲಾಗುವುದು

– ಎನ್‌.ವಿ.ನಟೇಶ್‌, ತಹಶೀಲ್ದಾರ್ 

ಮಾಡಾಳು ಶಿವಲಿಂಗಪ್ಪ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.