ಶನಿವಾರ, ಮೇ 15, 2021
25 °C

ಕಾಡುವ ಕದಂಬ ರುಚಿ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ಕಾಡುವ ಕದಂಬ ರುಚಿ

ಭಾನುವಾರದ ಮುಸ್ಸಂಜೆ. ರಾಜಾಜಿನಗರ ಮುಖ್ಯರಸ್ತೆಯಲ್ಲಿ ಸಾಗುವಾಗಲೇ ಆಕರ್ಷಿಸಿದ್ದು ಹಸಿರು ದೀಪಗಳಿಂದ ಅಲಂಕೃತಗೊಂಡಿದ್ದ ‘ಕದಂಬ ವೆಜ್‌ ಪಾರ್ಟಿ ಹಾಲ್‌’ ಬೋರ್ಡ್‌. ಒಳಾಂಗಣ ತುಂಬಿ ಹೋಟೆಲ್‌ ಮುಂಭಾಗದಲ್ಲಿಯೂ ನಿಂತು ಕಾಫಿ ಹೀರುತ್ತಿದ್ದ ಜನಜಂಗುಳಿಯೇ ಹೋಟೆಲ್‌ ಖಾದ್ಯಗಳ ಜನಪ್ರಿಯತೆಯನ್ನು ಸಾರುತ್ತಿತ್ತು.

ಹೋಟೆಲ್‌ ಪ್ರಾಂಗಣ ಪ್ರವೇಶಿಸುತ್ತಿದ್ದಂತೆ ಬಿಸಿಬೇಳೆಬಾತ್, ಪುಳಿಯೋಗರೆ ಘಮ ಸ್ವಾಗತಿಸಿತು. ಆದರದಿಂದ ಬರಮಾಡಿಕೊಂಡ ಮಳಿಗೆಯ ಮಾಲೀಕರಾದ ರಾಘವೇಂದ್ರ ಎಂ.ವಿ. ನಗುಮೊಗದೊಂದಿಗೆ ತಮ್ಮ ಹೋಟೆಲ್‌ನ ವಿಶೇಷ ಖಾದ್ಯಗಳನ್ನು ಪರಿಚಯಿಸಿದರು. ಬೆಳಿಗ್ಗೆ 7 ರಿಂದ ರಾತ್ರಿ 11 ಗಂಟೆಗೆವರೆಗೆ ದಕ್ಷಿಣ ಭಾರತದ ಸಾಂಪ್ರದಾಯಿಕ ರುಚಿಯ 11 ವಿವಿಧ ಖಾದ್ಯಗಳು ಇಲ್ಲಿ ದೊರೆಯುತ್ತವೆ. ಆದಾಗ್ಯೂ ಪುಳಿಯೋಗರೆ, ಬಿಸಿಬೇಳೆಭಾತ್‌, ಸಕ್ಕರೆ ಪೊಂಗಲ್ ಇಲ್ಲಿನ ವಿಶೇಷ. ಮೆದು ಇಡ್ಲಿ, ಮಿನಿ ದೋಸೆಗೂ ವಿಶೇಷ ಕದಂಬ ರುಚಿಯ ಸ್ಪರ್ಶವಿದೆ.

ಯಾವ ಖಾದ್ಯದ ರುಚಿ ನೋಡುತ್ತೀರಾ? ಎಂದು ಕೇಳುತ್ತಲೇ ಬಾಳೆಎಲೆ ಹಾಸಿದ ಪ್ಲೇಟ್‌ನಲ್ಲಿ ಪುಳಿಯೊಗರೆ ಜೊತೆಗೆ ಮೊಸರನ್ನು ತಂದು ನೀಡಿದರು ಹೋಟೆಲ್‌ ಸರ್ವರ್‌. ಶೇಂಗಾ, ಗೋಡಂಬಿ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿಗಳಿಂದ ಅಲಂಕೃತಗೊಂಡ ಆಕರ್ಷಕ ವರ್ಣದ ಪುಳಿಯೋಗರೆ ನೋಡುತ್ತಿದ್ದಂತೆ ಬಾಯಲ್ಲಿ ನೀರೂರಿಸಿತ್ತು. ಪುಳಿಯೋಗರೆ ತಟ್ಟೆ ಕೈಸೇರುತ್ತಿದ್ದಂತೆ ಹೆಚ್ಚು ಸಮಯ ಕಾಯಲಾರದೆ ಬಾಯಿಗಿಟ್ಟರೆ, ಕರಿಬೇವು, ಜೀರಿಗೆ, ಸಾಸಿವೆ ಹಾಗೂ ಎಳ್ಳಿನ ಘಮ ಬಾಯಿಯನ್ನು ಆವರಿಸಿತ್ತು. ಬೆಲ್ಲ ಹಾಗೂ ಹುಣಸೆಹಣ್ಣಿನ ಹದವಾದ ಮಿಶ್ರಣ, ನಡುವಿನಲ್ಲಿ ಸಿಗುವ ತುಪ್ಪದಲ್ಲಿ ಕರಿದ ಗೋಡಂಬಿ ಮತ್ತು ಶೇಂಗಾಗಳು ಕಣ್ಮುಚ್ಚಿ ಉಣ್ಣುವ ಸುಖ ನೀಡಿದವು.

ಉಪ್ಪು, ಕಾರ ಮತ್ತು ಹುಳಿಗಳ ಹದವಾದ ಮಿಳಿತದಂತಿದ್ದ ಪುಳಿಯೋಗರೆಯನ್ನು ತಿಂದು ಮುಗಿಸುತ್ತಿದ್ದಂತೆ, ‘ಕದಂಬ ವಿಶೇಷ ಸಿಹಿ ಪೊಂಗಲ್ ರುಚಿ ನೋಡ್ರಿ’ ಎಂದರು ಸರ್ವರ್‌. ತುಪ್ಪದ ಸುವಾಸನೆಯಿಂದ ಘಮಿಸುತ್ತಿದ್ದ ಸಿಹಿ ಪೊಂಗಲ್‌ ಅನ್ನು ಬೇಡ ಎನ್ನಲು ಮನಸ್ಸಾಗದೆ ಬಾಯಿಗಿಟ್ಟರೆ, ಏಲಕ್ಕಿ ಘಮ, ಹದವಾದ ಸಿಹಿ, ಹೆಸರು ಬೇಳೆಯ ಸವಿ, ತಿನ್ನುವಾಗ ನಡುವೆ ಸಿಗುವ ಒಣಕೊಬ್ಬರಿ ಚೂರು ಮತ್ತು ಗೋಡಂಬಿಯು ಪೊಂಗಲ್‌ನ ಸವಿಯನ್ನು ಮತ್ತಷ್ಟು ಹೆಚ್ಚಿಸಿದ್ದವು. ‌

ಕಾರ ಬೂಂದಿಯಿಂದ ಶೃಂಗಾರಗೊಂಡಿದ್ದ ಅತ್ತ ಕ್ರಿಸ್ಪಿಯೂ ಅಲ್ಲದ, ಇತ್ತ ಮೆದುವೂ ಅಲ್ಲದ ಬಿಸಿಬೇಳೆಭಾತ್‌ ಆಹ್ಲಾದಕರ ಸ್ವಾದದಿಂದ ಕೂಡಿತ್ತು. ಹಬೆಯಾಡುತ್ತಿದ್ದ ಬೇಳೆಭಾತ್‌ನಲ್ಲಿ ತುಪ್ಪದ ಘಮವಿತ್ತು. ಸಾಮಾನ್ಯ ಬಿಸಿಬೇಳೆಭಾತ್‌ ತಳ್ಳಗಿರುತ್ತದೆ. ಆದರೆ ತುಸು ಗಟ್ಟಿಯಾಗಿರುವುದು ಕದಂಬ ಬೇಳೆಭಾತ್‌ ವಿಶೇಷ. ಬಿಸಿಯಾರಿಸಿ ಮೆಲ್ಲಗೆ ಮೊದಲನೇ ತುತ್ತನ್ನು ಬಾಯಿಗಿಟ್ಟರೆ ಬೇಳೆಯ ಘಮ ಬಾಯಿಯನ್ನು ಆವರಿಸಿತ್ತು. ಹದವಾಗಿ ಬೇಯಿಸಿದ ತರಕಾರಿಗಳ ನಡುವೆ ಬೇಯಿಸಿದ ಹಾಗೂ ಕರಿದ ಶೇಂಗಾ ಸಿಗುತ್ತಿತ್ತು. ಉಪ್ಪು, ಕಾರ, ಹುಳಿಗಳ ಹದಮಿಳಿತ, ಕೊತ್ತಂಬರಿ ಸೊಪ್ಪಿನ ಸ್ವಾದವೂ ಭಾತಿನ ರುಚಿಗೆ ಮೆರಗು ನೀಡಿತ್ತು.

ಅಕ್ಕಿ, ರವಾ, ಮೇತಿ, ಬಟರ್‌ ರೊಟ್ಟಿ, ಚೆನ್ನಾ ಬಟೂರಾ, ಬಗೆಬಗೆ ಪರೋಟಾ, ನಾನ್‌, ಕುಲ್ಚಾಗಳು ತರಹೇವಾರಿ ಪಲ್ಯಗಳು, ಸೂಪ್‌, ಸಲಾಡ್‌, ರಾಯಿತಾ, ವಿವಿಧ ದೋಸೆಗಳು ಇಲ್ಲಿ ಲಭ್ಯ. ದಕ್ಷಿಣ ಭಾರತದ ಅಡುಗೆಗಳಿಗೆ ಈ ಹೋಟೆಲ್‌ ಪ್ರಸಿದ್ಧಿಯಾದರೂ ಅನೇಕ ಉತ್ತರ ಭಾರತೀಯ ಆಹಾರಗಳ ಸವಿಯನ್ನು ಸವಿಯಬಹುದು.

1998ರಲ್ಲಿ ರಾಜಾಜಿನಗರದಲ್ಲಿ ಆರಂಭವಾದ ಕದಂಬ ಹೋಟೆಲ್‌ ಅಂದಿನಿಂದ ಇಂದಿನವರೆಗೂ ಸಾಂಪ್ರದಾಯಿಕ ರುಚಿಯನ್ನು ಕಾಪಾಡಿಕೊಂಡಿದೆ. ಕುಂದಾಪುರದವರಾದ ರಾಘವೇಂದ್ರ ಅವರಿಗೆ ಹೋಟೆಲ್ ಉದ್ಯಮ ತಂದೆಯಿಂದ ಬಂದ ಬಳುವಳಿ.

‘ಕದಂಬ ಎನ್ನುವುದು ಒಂದು ಒಳ್ಳೆಯ ಸಾಮ್ರಾಜ್ಯ ಎಂಬುದರ ಸೂಚಕವೂ ಹೌದು. ಜೊತೆಗೆ ಕದಂಬಂ ಎಂದರೆ ವಿವಿಧ ತರಕಾರಿ ಬಳಸಿ ತಯಾರಿಸುವ ಖಾದ್ಯವೂ  ಹೌದು. ಇದರ ಸೂಚಕವಾಗಿ ಕದಂಬ ಎಂದು ಹೆಸರಿಡಲಾಗಿದೆ’ ಎನ್ನುತ್ತಾರೆ ರಾಘವೇಂದ್ರ.

ಹೋಟೆಲ್‌ನ ನೆಲಮಹಡಿಯಲ್ಲಿ ಬಫೆ ಇದೆ. ಮೊದಲನೇ ಮಹಡಿಯಲ್ಲಿ ವಿಶಾಲವಾದ ರೆಸ್ಟೋರೆಂಟ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಎರಡು ಮತ್ತು ಮೂರನೇ ಮಹಡಿಯಲ್ಲಿ ಪಾರ್ಟಿ ಹಾಲ್‌ಗಳಿವೆ. ನೆಲಮಹಡಿಯಲ್ಲಿಯೇ ಸ್ವೀಟ್‌ ಕೌಂಟರ್‌ ಇರುವುದು ಹೋಟೆಲ್‌ನ ಮತ್ತೊಂದು ವಿಶೇಷ. ಬಾಯಿಗಿಟ್ಟೊಡನೆ ಕರಗಿ ರುಚಿಮೊಗ್ಗುಗಳನ್ನು ಅರಳಿಸುವ ಸ್ಪೆಷಲ್‌ ಮೈಸೂರು ಪಾಕ್‌. ರಂಗಾದ ಮೃದು ಜಾಮೂನು, ಕೋವಾ ಸ್ವೀಟ್, ಸೇರಿದಂತೆ ತುಪ್ಪದಿಂದ ತಯಾರಾದ ವಿವಿಧ ಸಿಹಿ ತಿನಿಸುಗಳು, ಗರಿಗರಿ ಮಿಕ್ಚರ್‌ ಇಲ್ಲಿ ದೊರೆಯುತ್ತವೆ.

ಮೈಸೂರು ರಸ್ತೆಯಲ್ಲಿಯೂ ಕದಂಬ ವೆಜ್‌ನ ಶಾಖೆ ಇದೆ. ಪ್ರವಾಸಕ್ಕೆ ಹೋಗುವವರು ರುಚಿಕರ ತಿಂಡಿಗಾಗಿ ಅಲ್ಲಿಯೂ ನಿಲುಗಡೆ ಮಾಡಬಹುದು. 

ಹೋಟೆಲ್: ಕದಂಬ ಹೋಟೆಲ್‌
ವಿಶೇಷ: ಪುಳಿಯೋಗರೆ, ಬಿಸಿಬೇಳೆಬಾತ್, ಸಿಹಿ ಪೊಂಗಲ್‌.
ದಕ್ಷಿಣ ಭಾರತೀಯ ಉಟ ಒಬ್ಬರಿಗೆ: ₹90 ಬಿಸಿಬೇಳೆಬಾತ್‌–₹60
ವಿಳಾಸ:ಕದಂಬ ವೆಜ್‌ ಪಾರ್ಟಿ ಹಾಲ್‌, ಮೋದಿ ಆಸ್ಪತ್ರೆ ರಸ್ತೆ, ರಾಜಾಜಿನಗರ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.