ರಂಜಾನ್‌ಗೆ ವಿಶೇಷ ಅಡುಗೆ

7

ರಂಜಾನ್‌ಗೆ ವಿಶೇಷ ಅಡುಗೆ

Published:
Updated:
ರಂಜಾನ್‌ಗೆ ವಿಶೇಷ ಅಡುಗೆ

ಷೀರ್‌ ಕೂರ್ಮ

ಸಾಮಗ್ರಿಗಳು: ಕೊಬ್ಬು ಇರುವ ಹಾಲು– 1 ಲೀಟರ್‌, ಶ್ಯಾವಿಗೆ– 80ಗ್ರಾಂ, ತುಪ್ಪ– 50 ಗ್ರಾಂ, ಸಕ್ಕರೆ– 100 ಗ್ರಾಂ, ಏಲಕ್ಕಿ ಪೌಡರ್‌– 1 ಗ್ರಾಂ, ಒಣಹಣ್ಣುಗಳು– 50 ಗ್ರಾಂ, ಖರ್ಜೂರ– 100ಗ್ರಾಂ, ಕೇಸರಿ– ಸ್ವಲ್ಪ (ಬೇಕಿದ್ದರೆ ಮಾತ್ರ), ಒಣದ್ರಾಕ್ಷಿ– 15 ಗ್ರಾಂ.

ಮಾಡುವ ವಿಧಾನ: ಪ್ಯಾನ್‌ನಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ, ಶ್ಯಾವಿಗೆಯನ್ನು ಹುರಿದುಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ, ಅದಕ್ಕೆ ಹುರಿದ ಶ್ಯಾವಿಗೆಯನ್ನು ಹಾಕಬೇಕು. ಬಳಿಕ ಅದಕ್ಕೆ ಸಕ್ಕರೆ ಸೇರಿಸಿ.  ಕುದಿಯುತ್ತಿರುವ ಶಾವಿಗೆ ಪಾಯಸಕ್ಕೆ ಈಗ ಏಲಕ್ಕಿ ಪೌಡರ್‌, ಒಣಹಣ್ಣುಗಳು, ಖರ್ಜೂರ, ದ್ರಾಕ್ಷಿ,  ಉಳಿದಿರುವ ತುಪ್ಪ ಹಾಕಬೇಕು. ನಂತರ ತಳ ಹಿಡಿಯದಂತೆ ಸೌಟು ಹಾಕುತ್ತಿರಬೇಕು. ಕುದಿದ ಮೇಲೆ ಕೆಳಗಿಳಿಸಿ. ಇದನ್ನು ಬಿಸಿಯಾಗಿಯೂ, ತಣ್ಣಗಾದ ಮೇಲೂ ಕುಡಿಯಬಹುದು.

ಸಿಕಂಪುರಿ ಕಬಾಬ್‌

ಸಾಮಗ್ರಿಗಳು: ಕುರಿ ಮಾಂಸ– 1 ಕೆ.ಜಿ, ಕಡ್ಲೆಬೇಳೆ– 100 ಗ್ರಾಂ, ಅರಿಶಿನ– 2 ಚಮಚ, ಕಾಶ್ಮೀರಿ ಮೆಣಸಿನ ಹುಡಿ– 1 ಚಮಚ, ಗರಂ ಮಸಾಲ– 1 ಚಮಚ, ಶುಂಠಿ– 1 ಚಮಚ, ಬೆಳ್ಳುಳ್ಳಿ ಪೇಸ್ಟ್‌– 1ಚಮಚ, ಕೊತ್ತಂಬರಿ– 2 ಚಮಚ, ಜೀರಿಗೆ– 1 ಚಮಚ,  ಹಸಿ ಮೆಣಸು– 3, ತುಪ್ಪ– ಕರಿಯಲು, ಉಪ್ಪು– ರುಚಿಗೆ ತಕ್ಕಷ್ಟು, ಲವಂಗದ ಎಲೆ– 2, ಮೆಣಸು– 2, ಲವಂಗ– 6, ಚಕ್ಕೆ– 2, ಈರುಳ್ಳಿ– 2, ಮೊಸರು, ಕ್ರೀಂ– ಅಲಂಕಾರಕ್ಕೆ.

ಮಾಡುವ ವಿಧಾನ: ಒಂದು ಪ್ಯಾನ್‌ಗೆ ಎಣ್ಣೆ ಹಾಕಿ, ಅದಕ್ಕೆ ಎಲ್ಲಾ ಮಸಾಲ ಪದಾರ್ಥ, ಈರುಳ್ಳಿಯನ್ನು ಹಾಕಿ ಈರುಳ್ಳಿ ಕೆಂಪು ಬಣ್ಣಕ್ಕೆ ಬರುವ ತನಕ ಹುರಿಯಬೇಕು. ಇದಕ್ಕೆ ಕಡ್ಲೆ ಬೇಳೆ, ಮಾಂಸ ಸೇರಿಸಬೇಕು. ಅದಕ್ಕೆ ಸ್ವಲ್ಪ ನೀರು, ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಬಳಿಕ ಕೆಳಗಿಳಿಸಿ, ಅದರಲ್ಲಿದ್ದ ಎಲ್ಲಾ ಮಸಾಲೆಗಳು, ಮಾಂಸದ ತುಂಡುಗಳು ಪ್ರತ್ಯೇಕವಾಗಿ ಆರಿಸಿ, ತಣ್ಣಗಾಗಲು ಬಿಡಬೇಕು. ಸ್ವಲ್ಪ ಹೊತ್ತಾದ ಬಳಿ ಬೆಂದಿರುವ ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರ ಮಾಡಬೇಕು.  ಮತ್ತೊಂದು ಪಾತ್ರೆಯಲ್ಲಿ ಮೊಸರು, ಕತ್ತರಿಸಿಟ್ಟ ಈರುಳ್ಳಿ, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಕ್ರೀಂ ಹಾಕಿ ಮಿಶ್ರ ಮಾಡಬೇಕು. ಮಾಂಸದ ಮಿಶ್ರಣದ ಮಧ್ಯಭಾಗದಲ್ಲಿ ಮೊಸರು ಮಿಶ್ರಣವನ್ನು ಇಟ್ಟು ಚಪ್ಪಟೆಯಾಕಾರದಲ್ಲಿ ತಟ್ಟಬೇಕು. ನಂತರ ತುಪ್ಪದಲ್ಲಿ ಕರಿಯಬೇಕು. ಕೊತ್ತಂಬರಿ ಚಟ್ನಿ ಅಥವಾ ಪುದೀನಾ ಚಟ್ನಿ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.

ಹಲೀಂ

ಸಾಮಗ್ರಿಗಳು: ಬೋನ್‌ಲೆಸ್‌ ಮಟನ್‌ ಮಾಂಸ– 1 ಕೆ.ಜಿ, ಗೋಧಿ ರವೆ– 150 ಗ್ರಾಂ, ಕಡ್ಲೆಬೇಳೆ, ಉದ್ದು ಬೇಳೆ– 300ಗ್ರಾಂ(ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು). ಮೊಸರು– 1/4 ಲೀಟರ್‌, ಶುಂಠಿ– ಬೆಳ್ಳುಳ್ಳಿ ಪೇಸ್ಟ್‌– 1 ಚಮಚ, ಗರಂ ಮಸಾಲ– 1ಚಮಚ, ಎಲ್ಲಾ ಮಸಾಲ ಪದಾರ್ಥ– 1 ಚಮಚ, ಈರುಳ್ಳಿ ಸಣ್ಣಗೆ ಹೆಚ್ಚಿದ್ದು– 1 ಬಟ್ಟಲು, ಕರಿಮೆಣಸು– 8, ಚಕ್ಕೆ–2, ಲವಂಗ– 4, ಟೊಮೆಟೊ– 2, ಹಸಿಮೆಣಸು ಸಣ್ಣಗೆ ಹೆಚ್ಚಿದ್ದು– 5. ತುಪ್ಪ ಬೇಕಾದಷ್ಟು, ಕರಿದ ಗೋಡಂಬಿ– ಅಲಂಕಾರಕ್ಕೆ, ಕೊತ್ತಂಬರಿ ಸೊಪ್ಪು– 1/2 ಕಪ್‌, ಪುದೀನಾ ಎಲೆ– 1/2 ಕಪ್‌

ಮಾಡುವ ವಿಧಾನ: ಗೋಧಿ ರವೆ, ಕಡ್ಲೆಬೇಳೆ, ಉದ್ದಿನ ಬೇಳೆಯನ್ನು ತೊಳೆದು ನೀರಿನಲ್ಲಿ 2–3 ಗಂಟೆ ನೆನೆಸಿಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪು ಬಣ್ಣ ಬರುವ ತನಕ ಹುರಿಯಬೇಕು. ಇದಕ್ಕೆ ಎಲ್ಲಾ ಮಸಾಲ ಪದಾರ್ಥಗಳನ್ನು ಸೇರಿಸಿ, ಹುರಿಯಬೇಕು. ಕೊನೆಯಲ್ಲಿ ಶುಂಠಿ– ಬೆಳ್ಳುಳ್ಳಿ ಪೇಸ್ಟ್‌ ಹಾಕಿ ತಿರುಗಿಸಬೇಕು.

ಮಟನ್‌ ಮಾಂಸಕ್ಕೆ ಉಪ್ಪು, ಖಾರದ ಪುಡಿ, ಅರಿಶಿನ ಪುಡಿ ಹಾಕಿ ಮಿಶ್ರ ಮಾಡಬೇಕು.  ಮಟನ್‌ ತುಂಡುಗಳು ಚೆನ್ನಾಗಿ ಬೇಯುವವರೆಗೂ ಬೇಯಿಸಬೇಕು. ಇದಕ್ಕೆ ಮೊಸರು, ಗರಂ ಮಸಾಲ, ಟೊಮೆಟೊ, ಪುದೀನಾ ಸೊಪ್ಪುಗಳನ್ನು ಹಾಕಿ ಬೇಯಿಸಿ. ಈಗ ಮತ್ತೊಂದು ಪಾತ್ರೆಯಲ್ಲಿ ನೆನಸಿಟ್ಟ ರವೆ ಹಾಗೂ ಬೇಳೆಗಳನ್ನು ಸ್ವಲ್ಪ ಅರಿಶಿನ ಹಾಗೂ ಕರಿಮೆಣಸು ಹಾಕಿ ಹುರಿಯಬೇಕು. ಈಗ ಇದಕ್ಕೆ ಬೇಯಿಸಿದ ಮಟನ್‌ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಸಣ್ಣ ಉರಿಯಲ್ಲಿ ಒಂದು ಗಂಟೆ ಕಾಲ ಬೇಯಿಸಿ. ತಳ ಹಿಡಿಯಬಾರದು. ಬಳಿಕ ಕರಿದ ಈರುಳ್ಳಿ, ಗೋಡಂಬಿಯಿಂದ ಅಲಂಕರಿಸಿ, ತಿನ್ನಿ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry