ಗುರುವಾರ , ಜೂನ್ 24, 2021
22 °C

ಮನುಷ್ಯ ಜಾತಿಗೆ ಜಾತಿಯೇ ಮಹಾಬಲಂ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಮನುಷ್ಯ ಜಾತಿಗೆ ಜಾತಿಯೇ ಮಹಾಬಲಂ!

ಬಹುಸಂಖ್ಯಾತ ಜಾತಿಗಳು ಒಗ್ಗಟ್ಟಾದ ಹಾಗೆ ಸಣ್ಣ ಸಣ್ಣ ಜಾತಿಗಳಲ್ಲಿ ನಡುಕ ಹುಟ್ಟುತ್ತದೆ. ಆ ಜಾತಿಗಳು ಅನಿವಾರ್ಯವಾಗಿ ಯಾವುದಾದರೂ ಒಂದು ಛತ್ರಿಯ ಕೆಳಗೆ ನುಸುಳಲು ಪ್ರಯತ್ನ ಪಡುತ್ತವೆ. ದೇಶ ಮತ್ತು ರಾಜ್ಯದಲ್ಲಿ ಈಗ ಸಣ್ಣ ಸಣ್ಣ ಜಾತಿಗಳಿಗೆ ಭಾರತೀಯ ಜನತಾ ಪಕ್ಷ ಅಪ್ಯಾಯಮಾನವಾಗಿ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಜಾತಿಯ ಯುವಕರ ಕಣ್ಣಿನಲ್ಲಿ ಹೊಸ ಕನಸನ್ನು ಬಿತ್ತಿದ್ದಾರೆ. ಅದಕ್ಕಾಗಿಯೇ ಅವರು ಧೈರ್ಯದಿಂದಲೇ ‘ನಾವು ಜಾತಿವಾದಿಗಳಲ್ಲ ಕೋಮುವಾದಿಗಳು’ ಎಂದು ಕರೆದುಕೊಳ್ಳುತ್ತಿದ್ದಾರೆ. ಜಾತಿವಾದಿಗಳಾಗುವುದಕ್ಕಿಂತ ಕೋಮುವಾದಿಗಳಾಗುವುದು ಹೆಚ್ಚು ಸುರಕ್ಷಿತ, ಹೆಚ್ಚು ಪ್ರಗತಿಪರ ಎಂದು ಅವರು ಅಂದುಕೊಂಡಿದ್ದಾರೆ.

‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಮಹಾಕವಿ ಪಂಪ. ಆದರೆ ನಮ್ಮ ರಾಜಕಾರಣಿಗಳು ಚುನಾವಣೆಯಲ್ಲಿ ‘ಜಾತಿ ಬಲವೇ ಸರ್ವತ್ರ ಸಾಧನಂ’ ಎನ್ನುತ್ತಾರೆ. ವಿಪರ್ಯಾಸ ಎಂದರೆ 1952ರಿಂದ 2018ರವರೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಬದಲಾವಣೆಯಾಗಿದೆ. ಕಿರಾಣಿ ಅಂಗಡಿಗಳು ಬಾಗಿಲು ಮುಚ್ಚಿ, ಸೂಪರ್ ಮಾರ್ಕೆಟ್‌ಗಳು ಬಂದಿವೆ. ಈಗಂತೂ ಹಾದಿಗೊಂದು ಬೀದಿಗೊಂದು ಮಾಲ್‌ಗಳಿವೆ. ಕನ್ನಡ ಶಾಲೆಗಳು ಬಂದ್ ಆಗಿ ಎಲ್ಲೆಂದರಲ್ಲಿ ಅಂತರರಾಷ್ಟ್ರೀಯ ಶಾಲೆಗಳು ಒಕ್ಕರಿಸಿವೆ. ಉದಾರೀಕರಣ, ಜಾಗತೀಕರಣದ ಫಲವಾಗಿ ನಮ್ಮ ಆಲೋಚನಾ ಕ್ರಮಗಳೇ ಬದಲಾಗಿವೆ. ನಗದು ಚಲಾವಣೆಯಿಂದ ನಾವು ಕ್ಯಾಶ್‌ಲೆಸ್ ವಹಿವಾಟಿನ ಜಮಾನಕ್ಕೆಬಂದುಬಿಟ್ಟಿದ್ದೇವೆ. ಆದರೆ ನಮ್ಮ ಚುನಾವಣಾ ರೀತಿ-ನೀತಿಯಲ್ಲಿ ಮಾತ್ರ ಇನ್ನೂ ಅಂತಹ ಬದಲಾವಣೆ ಏನಿಲ್ಲ. ಆಗಲೂ ಜಾತಿಯ ಆಧಾರದಲ್ಲಿಯೇ ಚುನಾವಣೆ ನಡೆಯುತ್ತಿತ್ತು. ಈಗಲೂ ಅದೇ ನಡೆಯುತ್ತಿದೆ.

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ನೋಡಿದರೂ ಅದು ಸ್ಪಷ್ಟವಾಗುತ್ತದೆ. ಲಿಂಗಾಯತರಲ್ಲಿ ಬಹುತೇಕ ಮಂದಿ ಬಿಜೆಪಿಯನ್ನು, ಒಕ್ಕಲಿಗರಲ್ಲಿ ಹೆಚ್ಚು ಜನ ಜಾತ್ಯತೀತ ಜನತಾ ದಳವನ್ನು, ಕುರುಬರಲ್ಲಿ ಹೆಚ್ಚಿನ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಮುಸ್ಲಿಮರಿಗೆ ಆಯ್ಕೆಯೇ ಇರಲಿಲ್ಲ. ಪಕ್ಷದ ಹೆಸರಿನಲ್ಲಿಯೇ ‘ಜಾತ್ಯತೀತ’ ಎಂದು ಇದ್ದರೂ ಆ ಪಕ್ಷಕ್ಕೆ ಜಾತಿಯ ಮಿತಿ ದಾಟಲು ಸಾಧ್ಯವಾಗಿಲ್ಲ. ಚುನಾವಣೆ ಮಾತ್ರ ಅಲ್ಲ. ಕಳೆದ ಐದು ವರ್ಷ ಕರ್ನಾಟಕದ ಆಡಳಿತ ಕೂಡ ಜಾತಿ ಆಧಾರದಲ್ಲಿಯೇ ಇತ್ತು ಎಂದು ವಾದಿಸುವವರೂ ಇದ್ದಾರೆ. ಅಹಿಂದ ಹೆಸರಿನಲ್ಲಿ ರಾಜಕೀಯ ನಡೆಸಿದ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಬಹುಪಾಲನ್ನು ಅಹಿಂದ ವರ್ಗಕ್ಕೇ ಮೀಸಲಿಟ್ಟಿದ್ದರು. ಸಿದ್ದರಾಮಯ್ಯ ಸರ್ಕಾರ ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರ ವಿರೋಧಿಯಾಗಿತ್ತು ಎಂದೇ ಜನಸಾಮಾನ್ಯರು ಭಾವಿಸಿದ್ದರು. ಇದು ವಿಧಾನಸಭೆಯಲ್ಲಿಯೂ ಪ್ರಸ್ತಾಪವಾಗಿತ್ತು. ‘ಜಿಲೇಬಿ’ (ಗೌಡ, ಲಿಂಗಾಯತ, ಬ್ರಾಹ್ಮಣ) ಸಮುದಾಯಕ್ಕೆ ಸೇರಿದ ಯಾವುದೇ ಕಡತಗಳಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮುಕ್ತಿ ಸಿಗುವುದಿಲ್ಲ ಎಂದು ಆಗಿನ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದರು. ಅಧಿಕಾರಿಗಳ ನೇಮಕದಲ್ಲಿ, ಗುತ್ತಿಗೆ ನೀಡುವಾಗ, ಆಯಕಟ್ಟಿನ ಜಾಗದಲ್ಲಿ ಒಂದೇ ಜಾತಿಯವರು ಹೆಚ್ಚಿದ್ದರು ಎಂಬ ಭಾವನೆ ಇತ್ತು. ಈ ಆರೋಪ ಸಿದ್ದರಾಮಯ್ಯ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ. ಹಿಂದಿನ ಸರ್ಕಾರಗಳ ಮೇಲೂ ಇಂತಹ ಆರೋಪಗಳಿದ್ದವು. ಮುಖ್ಯಮಂತ್ರಿ ಜಾತಿಯ ವ್ಯಕ್ತಿಗಳು ಆಯಾಕಾಲಕ್ಕೆ ಪ್ರಬಲರಾಗುತ್ತಾರೆ. ಸಿದ್ದರಾಮಯ್ಯ ಸರ್ಕಾರ ಬಡವರಿಗಾಗಿಯೇ ಹಲವಾರು ಭಾಗ್ಯಗಳನ್ನು ಜಾರಿಗೆ ತಂದಿದ್ದರೂ ಸಾಮಾನ್ಯ ಜನರ ಭಾವನೆ ಮಾತ್ರ ಇದು ಮೇಲ್ವರ್ಗದ ವಿರೋಧಿ ಎಂದೇ ಇತ್ತು.

ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ನನ್ನ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿದರು. ಅವರು ಕಾಲೇಜಿನಲ್ಲಿ ಪ್ರಾಧ್ಯಾಪಕರು. ಸಾಹಿತ್ಯದ ವಿದ್ಯಾರ್ಥಿಯೂ ಹೌದು. ವಿಚಾರವಾದಿಯೂ ಹೌದು. ಈ ಬಾರಿ ಚುನಾವಣೆಯಲ್ಲಿ ಅವರು ಕೆಲವರನ್ನು ಸೋಲಿಸಲು, ಕೆಲವರನ್ನು ಗೆಲ್ಲಿಸಲು ಯತ್ನಿಸಿದ್ದರು. ಫೋನಿನಲ್ಲಿ ಮಾತನಾಡುತ್ತಿದ್ದಾಗ ‘ಏನ್ ಸ್ವಾಮಿ ನೀವು, ಯಾರನ್ನೋ ಗೆಲ್ಲಿಸುತ್ತೀರಿ, ಯಾರನ್ನೋ ಸೋಲಿಸುತ್ತೀರಿ’ ಎಂದೆ. ಅದಕ್ಕೆ ಅವರು ‘ಏನ್ ಮಾಡೋದು ಸ್ವಾಮಿ. ಎಲ್ಲ ಪಕ್ಷಗಳೂ ಜಾತಿ ಮೇಲೇ ನಿಂತಿವೆ. ಎಲ್ಲ ರಾಜಕಾರಣಿಗಳೂ ಜಾತಿವಾದಿಗಳಾಗಿದ್ದಾರೆ. ಲಿಂಗಾಯತರಿಗೆ ಒಂದು ಪಕ್ಷ. ಕುರುಬರಿಗೆ ಇನ್ನೊಂದು ಪಕ್ಷ. ಒಕ್ಕಲಿಗರಿಗಂತೂ ಕಾಯಂ ಪಕ್ಷ. ಹೀಗಿರುವಾಗ ನಮ್ಮಂತಹ ಚಿಕ್ಕಪುಟ್ಟ ಜಾತಿಯ ಜನ ಏನು ಮಾಡಬೇಕು. ಅದಕ್ಕೇ ನಾವು ಕೋಮುವಾದಿಗಳಾಗಿದ್ದೇವೆ’ ಎಂದರು. ಎರಡೂ ಕೆಟ್ಟದ್ದೇ. ಒಂದು ಕ್ಯಾನ್ಸರ್ ಆದರೆ ಇನ್ನೊಂದು ಏಡ್ಸ್.

ಹೌದು ಇಂತಹ ಒಂದು ಗಂಡಾಂತರ ಕ್ರಿಯೆ ಕರ್ನಾಕಟದಲ್ಲಿ ನಡೆಯುತ್ತಿದೆ. ಇದು ಭಾರತದಾದ್ಯಂತ ಇದೆ. ಬಹುಸಂಖ್ಯಾತ ಜಾತಿಗಳು ಒಗ್ಗಟ್ಟಾದ ಹಾಗೆ ಸಣ್ಣ ಸಣ್ಣ ಜಾತಿಗಳಲ್ಲಿ ನಡುಕ ಹುಟ್ಟುತ್ತದೆ. ಆ ಜಾತಿಗಳು ಅನಿವಾರ್ಯವಾಗಿ ಯಾವುದಾದರೂ ಒಂದು ಛತ್ರಿಯ ಕೆಳಗೆ ನುಸುಳಲು ಪ್ರಯತ್ನ ಪಡುತ್ತವೆ. ದೇಶ ಮತ್ತು ರಾಜ್ಯದಲ್ಲಿ ಈಗ ಸಣ್ಣ ಸಣ್ಣ ಜಾತಿಗಳಿಗೆ ಭಾರತೀಯ ಜನತಾ ಪಕ್ಷ ಅಪ್ಯಾಯಮಾನವಾಗಿ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಜಾತಿಯ ಯುವಕರ ಕಣ್ಣಿನಲ್ಲಿ ಹೊಸ ಕನಸನ್ನು ಬಿತ್ತಿದ್ದಾರೆ. ಅದಕ್ಕಾಗಿಯೇ ಅವರು ಧೈರ್ಯದಿಂದಲೇ ‘ನಾವು ಜಾತಿವಾದಿಗಳಲ್ಲ ಕೋಮುವಾದಿಗಳು’ ಎಂದು ಕರೆದುಕೊಳ್ಳುತ್ತಿದ್ದಾರೆ. ಜಾತಿವಾದಿಗಳಾಗುವುದಕ್ಕಿಂತ ಕೋಮುವಾದಿಗಳಾಗುವುದು ಹೆಚ್ಚು ಸುರಕ್ಷಿತ, ಹೆಚ್ಚು ಪ್ರಗತಿಪರ ಎಂದು ಅವರು ಅಂದುಕೊಂಡಿದ್ದಾರೆ. ಈ ಭಾವನೆಯನ್ನು ಹೊರ ತೆಗೆಯುವವರೆಗೂ ಬಿಜೆಪಿ ಮತ್ತು ನರೇಂದ್ರ ಮೋದಿ ಅವರಿಗೆ ಕೆಟ್ಟ ಕಾಲವಿಲ್ಲ.

ಹಿಂದಿನ ದಿನಗಳಲ್ಲಿ ಚಿಕ್ಕಪುಟ್ಟ ಜನಾಂಗಗಳಿಗೆ ಕಾಂಗ್ರೆಸ್ ಪಕ್ಷ ಆಶಾಕಿರಣವಾಗಿತ್ತು. ಇಂದಿರಾ ಗಾಂಧಿ ಅವರು ಚೈತನ್ಯದ ಚಿಲುಮೆಯಾಗಿದ್ದರು. ಈಗ ಆ ಸ್ಥಾನದಲ್ಲಿ ಬಿಜೆಪಿ ಇದೆ. ನರೇಂದ್ರ ಮೋದಿ ಅವರೇ ಸುರಕ್ಷಿತ ಎನ್ನಿಸುತ್ತಿದೆ. ನಮ್ಮ ಜಾತ್ಯತೀತವಾದಿಗಳು, ಪ್ರಗತಿಪರರು ಈ ಬಗ್ಗೆ ಗಂಭೀರವಾಗಿ ಯೋಚಿಸದಿದ್ದರೆ ಇದು ಇನ್ನೂ ಮುಂದುವರಿಯುತ್ತದೆ. ಬಾಯಲ್ಲಿ ಮಾತ್ರ ಸಮಾಜವಾದಿ ತತ್ವ, ಸಾಮಾಜಿಕ ನ್ಯಾಯ ಎಂದೆಲ್ಲಾ ಬರಿ ಬಡಾಯಿ ಕೊಚ್ಚದೇ ನಿಜವಾದ ಅಂತರಂಗದಿಂದ ಕೈಂಕರ್ಯ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುವವರು ಎಲ್ಲರ ವಿಕಾಸ ಮಾಡುತ್ತಾರೆ ಎಂದಲ್ಲ. ಆದರೆ ಅಂತಹ ನಂಬಿಕೆಯನ್ನು ಹುಟ್ಟಿಸಿದ್ದಾರೆ.

ಕರ್ನಾಟಕದಲ್ಲಿ ದೇವರಾಜ ಅರಸು ಅವರು ಇಂತಹ ಪ್ರಯತ್ನ ಮಾಡಿದ್ದರು. ಸಮಾಜದಲ್ಲಿ ಇರುವ ಸಣ್ಣ ಸಣ್ಣ ಸಮುದಾಯಗಳ ಯುವಕರನ್ನು ಗುರುತಿಸಿ ರಾಜಕೀಯ ಸ್ಥಾನಮಾನ ನೀಡಿದ್ದರು. ಆ ಮೂಲಕ ಆಯಾ ಜಾತಿಗಳಲ್ಲಿ ಆತ್ಮವಿಶ್ವಾಸ ತುಂಬಿದ್ದರು. ಅವರ ಕಾಲದಲ್ಲಿಯೇ ಹಿಂದುಳಿದ ವರ್ಗದ ಜನರಿಗೆ ಅಧಿಕಾರ ಸಿಕ್ಕಿತ್ತು. ಸಾಮಾಜಿಕ ನ್ಯಾಯದ ರುಚಿಯೂ ಲಭಿಸಿತ್ತು.

1971ರ ಲೋಕಸಭಾ ಚುನಾವಣೆಯಲ್ಲಿ ದೇವರಾಜ ಅರಸು ಅವರು ವಿಳಾಸವೇ ಗೊತ್ತಿಲ್ಲದ, ಜಾತಿಯ ಹಂಗಿಲ್ಲದ ಹಲವಾರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಗೆಲ್ಲಿಸಿದ್ದರು. ಇಂದಿರಾ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದ್ದವರನ್ನು ಯಾರೆಂದು ಪತ್ತೆ ಮಾಡಿ ಬರೆಯುವುದು ಪತ್ರಕರ್ತರಿಗೆ ಕಷ್ಟವೇ ಆಯಿತು. ಉತ್ತರಕನ್ನಡದಿಂದ ಸ್ಪರ್ಧಿಸಿದ್ದ ಬಿ.ವಿ. ನಾಯ್ಕ, ಬೀದರ್ ನಿಂದ ಕಣಕ್ಕೆ ಇಳಿದಿದ್ದ ಶಂಕರದೇವ ಯಾರೆಂದೇ ಜನಕ್ಕೆ ಗೊತ್ತಿರಲಿಲ್ಲ. ಕನಕಪುರದಲ್ಲಿಯೂ ನಿಜಲಿಂಗಪ್ಪ ಅವರ ಅಳಿಯ ಎಂ.ವಿ. ರಾಜಶೇಖರನ್ ಅವರ ವಿರುದ್ಧ ಜಾಫರ್ ಷರೀಫ್ ಅವರಿಗೆ ಟಿಕೆಟ್ ನೀಡಿದ್ದೂ ಕ್ರಾಂತಿಕಾರಕ ಹೆಜ್ಜೆ. ಅರಸು ನಿಲ್ಲಿಸಿದ ಎಲ್ಲರೂ ಗೆದ್ದರು. ಹೊಸ ಮುಖಗಳಿಗೆ ರಾಜಕೀಯ ಪ್ರಾತಿನಿಧ್ಯವೂ ಸಿಕ್ಕಿತು. ಆಗ ನಾಯಿ ಬಾಲ ನೆಟ್ಟಗಾಗುವ ಲಕ್ಷಣ ಕಂಡಿತ್ತು. ಆದರೆ ಈಗ ಮತ್ತೆ ನಾಯಿಬಾಲ ಡೊಂಕು. ಕರ್ನಾಟಕ ಒಬ್ಬ ನಿಜವಾದ ಅರಸನಿಗಾಗಿ ಕಾಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.