‘ಪ್ಲಾಸ್ಟಿಕ್‌ ಬಳಸಿದರೆ ಭೂಮಿಗೆ ಆಪತ್ತು’

7
ಮಡಿಕೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ, ಸಸಿ ನೆಡುವ ಕಾರ್ಯಕ್ರಮ

‘ಪ್ಲಾಸ್ಟಿಕ್‌ ಬಳಸಿದರೆ ಭೂಮಿಗೆ ಆಪತ್ತು’

Published:
Updated:

ಮಡಿಕೇರಿ: ‘ಪ್ಲಾಸ್ಟಿಕ್ ಬಳಕೆಯಿಂದ ಭೂಮಿಗೆ ಆಪತ್ತು ಎದುರಾಗಿದೆ. ಜತೆಗೆ, ವಾತಾವರಣವನ್ನು ಸ್ವಚ್ಛವಾಗಿಡಲು ಪ್ಲಾಸ್ಟಿಕ್‌ನಿಂದ ದೂರವಿರಬೇಕು’ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಕೋರಿದರು.

ಜಿಲ್ಲಾಡಳಿತದಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ‘ವಿಶ್ವ ಪರಿಸರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ, ಹೋಂಸ್ಟೇ, ರೆಸಾರ್ಟ್, ಹೋಟೆಲ್‌ ಗಳೂ ಸೇರಿದಂತೆ ಎಲ್ಲಿಯೂ ಪ್ಲಾಸ್ಟಿಕ್ ಬಳಸಬಾರದು. ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆ ನಮ್ಮ ಮನೆ ಮತ್ತು ಕಚೇರಿಯಿಂದಲೇ ಆರಂಭವಾಗಬೇಕು’ ಎಂದು ಹೇಳಿದರು.

‘ಪರಿಸರ ಶುಚಿತ್ವ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರತಿನಿತ್ಯವೂ ಅರಿವು ಇರಬೇಕು. ಕೇವಲ ಪರಿಸರ ದಿನಾಚರಣೆಯಂದು ಪರಿಸರ ಸಂರಕ್ಷಣೆ ಬಗ್ಗೆ ಹೇಳಿದರಷ್ಟೇ ಸಾಲದು’ ಎಂದು ಎಚ್ಚರಿಸಿದರು.

‘ಮಿಲಿಯನ್ ವರ್ಷವಾದರೂ ಪ್ಲಾಸ್ಟಿಕ್ ತನ್ನ ಸ್ಥಿತಿಯನ್ನು ಕಳೆದುಕೊಳ್ಳು ವುದಿಲ್ಲ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಬಟ್ಟೆ ಬ್ಯಾಗ್ ಉಪಯೋಗಿಸಬೇಕು. ಹಸಿ ಕಸ – ಒಣ ಕಸ ಬೇರ್ಪಡಿಸಿ ನೀಡ ಬೇಕು. ಬದಲಾವಣೆ ನಮ್ಮಿಂದಲೇ ಆರಂಭವಾದಾಗ ಮಾತ್ರ ಪರಿಸರ ಕಾಪಾಡಲು ಸಾಧ್ಯ’ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ‘ವಿಶ್ವದಲ್ಲಿ 100 ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, 7 ಸಾವಿರ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯವಾಗುತ್ತಿದೆ. ಇದು ಹಳ್ಳಕೊಳ್ಳ, ಕಾಲುವೆ, ನದಿ, ಸಮುದ್ರ ಸೇರಿ ಇಡೀ ಜೀವಜಲದ ಪ್ರಾಣವನ್ನೇ ಹಿಂಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರತಿ ವರ್ಷ ಜಿಲ್ಲೆಗೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ಪ್ಲಾಸ್ಟಿಕ್‌ ಅನ್ನು ತರುತ್ತಾರೆ. ಈ ಪ್ಲಾಸ್ಟಿಕ್‌ ಅನ್ನು ಮರು ಬಳಕೆ ಮಾಡುವಂತಾಗಲು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಮಂಜುನಾಥ್, ಅರಣ್ಯ ಮತ್ತು ಪರಿಸರ ಸಂಪತ್ತು ಸಂರಕ್ಷಣೆಯಾದಲ್ಲಿ ಮಾತ್ರ ಕಾಲ ಕಾಲಕ್ಕೆ ಮಳೆ, ಬೆಳೆ ಆಗಲಿದೆ ಎಂದು ಹೇಳಿದರು.

ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಮಾತನಾಡಿ, ‘ಪ್ಲಾಸ್ಟಿಕ್‌ ಅನ್ನು ಮರು ಬಳಕೆ ಮಾಡುವಂತಾಗಬೇಕು. ಇಲ್ಲದಿದ್ದಲ್ಲಿ ಪರಿಸರದ ಅಸಮತೋಲನ ಉಂಟಾಗಲಿದೆ’ ಎಂದು ಹೇಳಿದರು.

ಪರಿಸರ ಸಂರಕ್ಷಣೆ ಕುರಿತು ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ಜಯ, ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆಂಚಪ್ಪ, ತಹಶೀಲ್ದಾರ್‌ ಶಾರದಾಂಬ ಹಾಜರಿದ್ದರು.

ಪರಿಸರ ಸಂರಕ್ಷಣೆ ಮತ್ತು ಮಹತ್ವ ಕುರಿತು ಶಾಲಾ -ಕಾಲೇಜುಗಳಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ, ಚಿತ್ರಕಲೆ ಹಾಗೂ ಘೋಷ ವಾಕ್ಯ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪ್ಲಾಸ್ಟಿಕ್‌ ಅನ್ನು ಒಂದಲ್ಲಾ ಒಂದು ರೀತಿ ಬಳಸುತ್ತಿದ್ದೇವೆ. ಮರುಬಳಕೆಯನ್ನೂ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಬಿಸಾಡು ವುದು, ಒಲೆಗೆ ಬಳಸುವ ಕ್ರಮ ಸರಿಯಲ್ಲ

ಪಿ.ಐ. ಶ್ರೀವಿದ್ಯಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry