ಹುಟ್ಟೂರಲ್ಲೇ ಸ್ವಂತ ಕಂಪನಿ ಆರಂಭಿಸಿ

7
ಬಿವಿಬಿ ತಾಂತ್ರಿಕ ಕಾಲೇಜು ಪದವಿ ಪ್ರದಾನ ಸಮಾರಂಭದಲ್ಲಿ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಲಹೆ

ಹುಟ್ಟೂರಲ್ಲೇ ಸ್ವಂತ ಕಂಪನಿ ಆರಂಭಿಸಿ

Published:
Updated:

ಹುಬ್ಬಳ್ಳಿ: ‘ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ, ಹುಟ್ಟಿ ಬೆಳೆದ ಊರು ಹಾಗೂ ಅಕ್ಷರ ಕಲಿಸಿದ ಶಾಲಾ–ಕಾಲೇಜುಗಳನ್ನು ಮರೆಯಬಾರದು. ಉದ್ಯಮ, ಕಂಪನಿ ಆರಂಭಿಸಿ, ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ತಾಯ್ನಾಡಿಗೆ ಕೊಡುಗೆ ನೀಡಬೇಕು’ ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ಹೇಳಿದರು.

ಇಲ್ಲಿನ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಎಂಜಿನಿಯರಿಂಗ್ ಸೇರಿದಂತೆ, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಮನೆಯಲ್ಲಿ ತಂದೆ–ತಾಯಿ ಬಿಟ್ಟರೆ ಬೇರಾರೂ ಇಲ್ಲ. ಕೆಲಸ ನಿಮಿತ್ತ ವಿದೇಶ ಅಥವಾ ದೂರದ ಊರಿನಲ್ಲಿ ನೆಲೆಸುವ ವಿದ್ಯಾರ್ಥಿಗಳು, ತಮ್ಮ ಊರು ಮತ್ತು ಕುಟುಂಬ

ವನ್ನು ಮರೆಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘268 ಅಂಗಸಂಸ್ಥೆಗಳನ್ನು ಹೊಂದಿರುವ ಕೆಎಲ್‌ಇ ಸಂಸ್ಥೆಯಲ್ಲಿ 1.26 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇನ್ಫೊಸಿಸ್‌ನ ಸುಧಾಮೂರ್ತಿ ಸೇರಿದಂತೆ ದೊಡ್ಡ ವ್ಯಕ್ತಿಗಳು ಈ ಸಂಸ್ಥೆಯಲ್ಲಿ ಓದಿದ್ದಾರೆ. ದೇಶದ ಯಾವುದೇ ಉನ್ನತ ಸಂಸ್ಥೆ ಅಥವಾ ಕಂಪನಿಗೆ ಹೋದರೂ, ಅಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಿಗುತ್ತಾರೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

‘ಈ ವರ್ಷ ಪದವಿ ಪಡೆದಿರುವ ಸಾವಿರ ವಿದ್ಯಾರ್ಥಿಗಳ ಪೈಕಿ 900 ಮಂದಿ ವಿವಿಧ ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಇದು ಕಾಲೇಜಿನ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಉಪ ಕುಲಪತಿ ಡಾ.ವಿವೇಕ್ ಎ. ಸಾವೋಜಿ ಮಾತನಾಡಿ, ‘ತರಗತಿಯೊಳಗಿನ ಪರೀಕ್ಷೆಯಲ್ಲಿ ಪಾಸಾಗಿರುವ ವಿದ್ಯಾರ್ಥಿಗಳು, ವಾಸ್ತವ ಜಗತ್ತಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಬದುಕಿನಲ್ಲಿಯೂ ಯಶಸ್ವಿಯಾಗಬೇಕು’ ಎಂದರು.

‘ಪದವಿ ಬಳಿಕ, ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಳ್ಳುವ ಈ ಹಂತದಲ್ಲಿ ಕಠಿಣ ಶ್ರಮ ವಹಿಸಬೇಕು. ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ಅಗತ್ಯ ಕೌಶಲಗಳನ್ನು ಬೆಳೆಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಕಲಿಕೆ ನಿರಂತರವಾಗಿರಬೇಕಲ್ಲದೆ,

ಹೊಸ ಆವಿಷ್ಕಾರಗಳತ್ತ ಚಿತ್ತ ಹರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗದೆ, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ್, ರಿಜಿಸ್ಟ್ರಾರ್ ಪ್ರೊ.ಬಿ.ಎಲ್. ದೇಸಾಯಿ, ಪ್ರಾಂಶುಪಾಲ ಡಾ.ಪಿ.ಜಿ. ತಿವಾರಿ ಹಾಗೂ ಪರೀಕ್ಷಾ ನಿಯಂತ್ರಕ ಡಾ. ಅನಿಲ್ ನಂದಿ ಇದ್ದರು.

ಅನುರಣಿಸಿದ ‘ಮೋದಿ’ ಹೆಸರು

ಕೆಎಲ್‌ಎ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರು ತಮ್ಮ ಭಾಷಣದ ಮಧ್ಯೆ, ‘ಎಷ್ಟು ಮಂದಿ ರಾಜಕಾರಣಿಗಳಾಗುತ್ತೀರಿ?’ ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ, ಕೆಲವರು ಕೈ ಎತ್ತಿದರು. ಆಗ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರ ಹೆಸರನ್ನು ಜೋರಾಗಿ ಕೂಗಿದರು.

ಮೋಡಿ ಮಾಡಿದ ಮಂಗ

ಸಮಾರಂಭ ಆರಂಭಕ್ಕೂ ಮುಂಚೆ ಮಂಗವೊಂದು ಪ್ರೇಕ್ಷಕರ ಗ್ಯಾಲರಿ ಹಾಗೂ ವೇದಿಕೆಯ ಮುಂಭಾಗ ಓಡಾಡುವ ಮೂಲಕ ಗಮನ ಸೆಳೆಯಿತು. ಮಂಗನ ಮೋಡಿಗೆ ಒಳಗಾದ ಕೆಲವರು, ತಮ್ಮ ಮೊಬೈಲ್‌ನಲ್ಲಿ ಮಂಗನ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry