7

ತೆಳ್ಳೇವು ಬೆಲ್ಲವು ಎಂಥ ಒಳ್ಳೆ ಫ್ರೆಂಡು...

Published:
Updated:
ತೆಳ್ಳೇವು ಬೆಲ್ಲವು ಎಂಥ ಒಳ್ಳೆ ಫ್ರೆಂಡು...

ತೆಳ್ಳೇವು ಬೆಲ್ಲವು ಎಂಥ ಒಳ್ಳೆ ಫ್ರೆಂಡು, ಒಬ್ರನೊಬ್ರು ಬಿಟ್ಟು ಅವ್ವು ಇರ್ತ್ವೇ ಇಲ್ಲೆ...(ಇದನ್ನು ‘ಹೆಬ್ಬುಲಿ’ ಚಿತ್ರದ ಎಣ್ಣೆನು ಸೋಡನು ಎಂಥ ಒಳ್ಳೆ ಫ್ರೆಂಡು... ಹಾಡಿನ ರಾಗಕ್ಕೆ ಹಾಡಿಕೊಳ್ಳಬೇಕು). ಹೀಗೆ ಜನಪ್ರಿಯ ಸಿನಿಮಾ ಹಾಡುಗಳಿಗೆ ಬೇರೆಯದೇ ಸಾಹಿತ್ಯ ರಚಿಸಿ, ಆ ಮೂಲಕ ಮನರಂಜನೆಯ ಜತೆಗೆ ಜಾಗೃತಿ ಮೂಡಿಸುವಂಥ ಹಲವಾರು ಪ್ರಯೋಗಗಳು ನಮ್ಮ ನಡುವೆ ಇವೆ.

ಇದೇ ಹಾದಿಯಲ್ಲಿ ಬೆಂಗಳೂರು ವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಬೊಪ್ಪನಳ್ಳಿಯ ಅಜಿತ್‌ ಹೆಗಡೆ ಬೊಪ್ಪನಳ್ಳಿ, ಹವ್ಯಕ ಸಮುದಾಯದ ತೊಂದರೆ, ಆಚಾರ–ವಿಚಾರಗಳ ಬಗ್ಗೆ ಹಾಸ್ಯ ಪೂರಿತ ಸಾಹಿತ್ಯ ಬರೆಯುತ್ತಾರೆ. ಅವರ ಸಾಹಿತ್ಯವನ್ನು ಅವರೇ ಹಾಡಿ ವಿಡಿಯೊ ಮಾಡಿ ಫೇಸ್‌ಬುಕ್‌ ಮತ್ತು ವ್ಯಾಟ್ಸಾಪ್‌ನಲ್ಲಿ ಹಾಕುತ್ತಾರೆ. ಅವರ ಈ ಹವ್ಯಾಸ ಅವರನ್ನು ಪ್ರಸಿದ್ಧವಾಗಿಸಿದೆ. ಈಗ ಅವರು ಯೂಟ್ಯೂಬ್‌ನಲ್ಲಿ ತಮ್ಮದೇ ಚಾನೆಲ್‌ ತೆರೆದಿದ್ದಾರೆ. ಹಾಡುವುದರ ಜತೆಗೆ ‘ಹವ್ಯಕಾತ್ಮ’ ಎಂಬ ಫೇಸ್‌ಬುಕ್‌ ಸಿರೀಸ್‌ ಅನ್ನೂ ಬರೆಯುತ್ತಿದ್ದಾರೆ. ಹಾಗೆ ಹವ್ಯಕ ಭಾಷೆಯ ಜೋಕ್ಸ್‌ ಹಾಗೂ ಮೀಮ್ಸ್‌ಗಳನ್ನು ಸಹ ರಚಿಸುತ್ತಾರೆ. ಅವರ ಹವ್ಯಾಸದ ಕುರಿತ ಅವರೊಂದಿಗಿನ ಮಾತುಕತೆ ಇಲ್ಲಿದೆ.

ಮೊದಲಿನಿಂದಲೂ ನನಗೆ ಹಾಡುವುದು ಎಂದರೆ ಆಸಕ್ತಿ. ಹಾಗೆ ಬರವಣೆಗೆ ಕೂಡ. ನಮ್ಮ ಹವ್ಯಕ ಭಾಷೆ ಅಂದರೆ ನನಗೆ ಬಹಳ ಇಷ್ಟ ಮತ್ತು ಅಭಿಮಾನ. ಈಗ ನೋಡಿ, ಕುಂದಾಪುರ ಉಡುಪಿ ಭಾಷೆಯಲ್ಲಿ ಸಿನಿಮಾ ಹಾಡುಗಳು ಬಂದು, ಅವು ಪ್ರಸಿದ್ಧಿಯನ್ನೂ ಕಂಡಿವೆ. ಈ ಭಾಷೆಗಳು ಈಗ ಎಲ್ಲರಿಗೂ ಪರಿಚಿತ. ಹೀಗೆ ನಮ್ಮ ಹವ್ಯಕ ಭಾಷೆಯೂ ಆಗಬೇಕೆನ್ನುವುದು ನನ್ನ ಆಶಯ. ಈಗ ಹವ್ಯಕ ಭಾಷೆ ಮಾತನಾಡುವ ಮನೆಗಳಲ್ಲೇ ನಮ್ಮ ಭಾಷೆಯನ್ನು ಮಾತನಾಡುತ್ತಿಲ್ಲ. ಹೀಗೆ ಆದರೆ, ನಮ್ಮ ಭಾಷೆ ನಶಿಸಿ ಹೋಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಈ ಉದ್ದೇಶದಿಂದಲೇ ಹಾಡು ರಚಿಸುತ್ತೇನೆ.

ಯೂಟ್ಯೂಬ್‌ನಲ್ಲಿ ಚಾನೆಲ್‌ ಮಾಡಬೇಕು ಎನ್ನುವ ಯೋಚನೆ–ಯೋಜನೆ ಇರಲಿಲ್ಲ. ವಾರಕ್ಕೆ ಮೂರು ನಾಲ್ಕು ಹಾಡು ರಚಿಸುತ್ತೇನೆ. ಇದನ್ನು ವರ್ಷದಿಂದ ಮಾಡುತ್ತಿದ್ದೇನೆ. ಹೀಗಾಗಿ ಈ ಎಲ್ಲವನ್ನೂ ಸಂಗ್ರಹಿಸೋ ದೃಷ್ಟಿಯಿಂದ ಚಾನೆಲ್ ತೆರೆದಿದ್ದೇನೆ ಅಷ್ಟೇ.  ನನ್ನ ಮೊಬೈಲ್‌ನಲ್ಲೇ ಚಿತ್ರೀಕರಿಸಿಕೊಳ್ಳುತ್ತೀನಿ. ನಾನೇ ಸ್ವಲ್ಪ ಮಟ್ಟಿನ ಸಂಕಲನವನ್ನೂ ಮಾಡಿ ಅಪ್‌ಲೋಡ್‌ ಮಾಡುತ್ತೇನೆ. ಇದುವರೆಗೆ ಈ ಚಾನೆಲ್‍ಗೆ ಸಾವಿರಕ್ಕೂ ಹೆಚ್ಚು ಚಂದಾದಾರರು ಇದ್ದಾರೆ. 3,000ಕ್ಕೂ ಹೆಚ್ಚು ಗಂಟೆಗಳ ವೀಕ್ಷಣೆ ಚಾನೆಲ್‍ಗೆ ಇದೆ. ಇದು 4,000 ತಲುಪಿದರೆ ಚಾನೆಲ್‍ಗೆ ಸ್ವಲ್ಪ ಜಾಹೀರಾತು ಬರುತ್ತದೆ.

80ರಷ್ಟು ಮಂದಿ ನನ್ನ ಹಾಡುಗಳನ್ನು ಮನರಂಜನೆಗೆ ಎಂದು ನೋಡುತ್ತಾರೆ. ಉಳಿದವರು ಬಹಳ ಗಂಭೀರವಾಗಿ ನೋಡುತ್ತಾರೆ. ಒಮ್ಮೆ ಹೀಗೆ ಆಯಿತು, ನಮ್ಮ ಊರಿನ ಎಂಜಿನಿಯರ್‌ ಯುವಕನೊಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಅವನಿಗೆ ಹಳ್ಳಿಗೆ ಮರಳುವ ಆಸೆ. ಹಾಗಂತ, ಒಳ್ಳೆ ಸಂಬಳ ಬಿಟ್ಟು ಹೋಗುವುದಕ್ಕೂ ಎರಡನೇ ಮನಸ್ಸು. ನಮ್ಮ ಸಮುದಾಯದ ಯುವಕರ ಈ ತೊಳಲಾಟದ ಬಗ್ಗೆ ನಾನು ಹಾಡು ಬರೆದಿದ್ದೆ. ಇದನ್ನು ಕೇಳಿದ ಆ ಯುವಕ ಬೆಂಗಳೂರು ಬಿಟ್ಟು, ಹಳ್ಳಿಗೆ ವಾಪಾಸ್ಸಾಗಿರುವುದಾಗಿ ಕಾಮೆಂಟ್‌ ಮಾಡಿದ್ದ. ಇಂತಹ ಅನುಭವಗಳೂ ಆಗಿವೆ.


ಅಜಿತ್‌ ಬೊಪ್ಪನಳ್ಳಿ

ಕೆಲವರಿಗೆ ಅವು ಸಂದೇಶ
ಸದ್ಯ ಸಮುದಾಯ ಕೆಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಒಂದು ಮದುವೆಗೆ ಹೆಣ್ಣು ಸಿಗದೇ ಇರುವುದು. ಹಳ್ಳಿಯಲ್ಲಿವ ಗಂಡುಗಳು ಇನ್ನೂ ಕುವಾರರಾಗಿಯೇ ಇದ್ದಾರೆ. ಕೃಷಿ, ಅಡಿಕೆ ಬೆಳೆಗೆ ಬೆಲೆ, ಅಡಿಕೆ ಬೆಳೆಗಾರರ ಸಂಕಷ್ಟ, ಹೀಗೆ ಹತ್ತು ಹಲವು ವಿಚಾರಗಳನ್ನು ಪ್ರಮುಖವಾಗಿಸಿಕೊಂಡು ಹಾಸ್ಯದೊಂದಿಗೆ ಗೀತೆಗಳನ್ನು ರಚಿಸುತ್ತೇನೆ.

ಹೀಗೆ ಮಾಡುವುದರಿಂದಲೇ ಸಮುದಾಯದ ಸಮಸ್ಯೆ ಬಗೆಹರಿಯುತ್ತದೆ ಎನ್ನುವ ಅಭಿಪ್ರಾಯ ಅಲ್ಲ. ಆದರೂ, ನನ್ನ ರಚನೆಯ ಹಿಂದೆ ಈ ಎಲ್ಲಾ ವಿಷಯಗಳು ಗಿರಕಿ ಹೊಡೆಯುತ್ತವೆ. ಈ ರಚನೆಗಳು ಕೆಲವರಿಗೆ ಮನರಂಜನೆ ಕೆಲವರಿಗೆ ಅವು ಸಂದೇಶ.

ಲಿಂಕ್‌ : https://www.youtube.com/watch?v=udtiQERDZbo&t=13s

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry