ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಒಳನೋಟ: ಅ‍ಪ್ಪೆಮಿಡಿಯ ಅಂತರಂಗ..
ಒಳನೋಟ: ಅ‍ಪ್ಪೆಮಿಡಿಯ ಅಂತರಂಗ..
ಅಪ್ಪೆಮಿಡಿ; ನಿರಂತರ ಫಸಲು ಬಿಡುವ ತಳಿ ಬೇಕಿದೆ
ಫಾಲೋ ಮಾಡಿ
Published 27 ಆಗಸ್ಟ್ 2023, 0:39 IST
Last Updated 27 ಆಗಸ್ಟ್ 2023, 0:39 IST
Comments

ಸಾಗರ ತಾಲ್ಲೂಕು ಸೂಡೂರಿನ ನಾಗಭೂಷಣ ಭಟ್ಟರು ಆರು ಎಕರೆಯಲ್ಲಿ ವಿವಿಧ ತಳಿಗಳ 400 ಅಪ್ಪೆಮಿಡಿ ಮರಗಳನ್ನು ಬೆಳೆಸಿದ್ದಾರೆ. ಸುಮಾರು ನೂರು ಮರಗಳು ಫಸಲು ಬಿಡುತ್ತವೆ. ‘ಅಪ್ಪೆಮಿಡಿ’ಯ ವಾರ್ಷಿಕ ವಹಿವಾಟು ₹10 ಲಕ್ಷದಿಂದ ₹12 ಲಕ್ಷ. ‘ಅಡಿಕೆ ಬೆಳೆಗಿಂತ ಇದೇ ವಾಸಿ’ ಎನ್ನುತ್ತಾರೆ ಅವರು.

ಶಿರಸಿ ತಾಲ್ಲೂಕು ಶೀಗೇಹಳ್ಳಿಯ ಭಾರ್ಗವ ಹೆಗಡೆ 10 ಎಕರೆಯಲ್ಲಿ ಮೂರು ಪ್ರಮುಖ ಅಪ್ಪೆಮಿಡಿ ತಳಿಗಳ 900 ಗಿಡಗಳನ್ನು ಬೆಳೆದಿದ್ದಾರೆ. ಜೊತೆಗೆ 60 ವಿವಿಧ ತಳಿಗಳಿವೆ. ಎಲ್ಲವೂ ಫಸಲು ಕೊಡುವಂಥ ಮರಗಳಾದರೂ, ಕಾಯಿ ಬಿಡುತ್ತಿರುವುದು ಕೆಲವು ಮರಗಳು ಮಾತ್ರ. ಆದರೂ, ಬಿಟ್ಟಷ್ಟೇ ಫಸಲನ್ನು ಮಾರಾಟ ಮಾಡಿ ವರ್ಷಕ್ಕೆ ಸುಮಾರು ₹3 ಲಕ್ಷದಷ್ಟು ಆದಾಯ ಪಡೆಯುತ್ತಿದ್ದಾರೆ. ‘ಬೇಡಿಕೆ ಸಾಕಷ್ಟಿದೆ. ಪೂರೈಸುವುದಕ್ಕೆ ನೆಟ್ಟ ಮಿಡಿ ಮರಗಳೆಲ್ಲ ಫಸಲು ಬಿಡಬೇಕಲ್ಲ‘ ಎನ್ನುತ್ತಾರೆ.

ವಾರ್ಷಿಕ ಸುಮಾರು 4 ಲಕ್ಷ ಅಪ್ಪೆಮಿಡಿ ಖರೀದಿಸಿ ಉಪ್ಪಿನಕಾಯಿ ತಯಾರಿಸಿ, ಮಾರಾಟ ಮಾಡುವ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈನ ‘ಪೃಥ್ವಿ ಪಿಕಲ್ಸ್‌‘ನ ಶಶಿಕಲಾ ಹೆಗಡೆ–ಶಾಂತರಾಂ ಹೆಗಡೆ ದಂಪತಿ, ವಾರ್ಷಿಕ ಸುಮಾರು ₹50 ಲಕ್ಷದಷ್ಟು ವಹಿವಾಟು ನಡೆಸುತ್ತಾರೆ. ರಾಜ್ಯದಲ್ಲಿ ಅಪ್ಪೆಮಿಡಿ ಅಂದಾಜು ವಾರ್ಷಿಕ ವಹಿವಾಟು ₹100 ಕೋಟಿ ಇತ್ತು ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌), ನಾಲ್ಕೈದು ವರ್ಷಗಳ ಹಿಂದೆ ವರದಿಯೊಂದರಲ್ಲಿ ಉಲ್ಲೇಖಿಸಿತ್ತು. ಈಗ ವಹಿವಾಟು ನಾಲ್ಕುಪಟ್ಟಾಗಿರುವ ಅಂದಾಜಿದೆ!

ಮಲೆನಾಡಿನ ವಿಶಿಷ್ಟ ಮಾವಿನ ತಳಿ ಅಪ್ಪೆಮಿಡಿಗಿರುವ ಬೇಡಿಕೆಯ ಒಂದು ನಮೂನೆ ಇದು. ಈ ಅಭಿಪ್ರಾಯಗಳು ಅಪ್ಪೆಮಿಡಿ ಮಾವಿನ ಬೇಡಿಕೆ–ಪೂರೈಕೆ ನಡುವಿನ ವ್ಯತ್ಯಾಸವನ್ನೂ ತೆರೆದಿಡುತ್ತವೆ. ವಿಶೇಷವೋ, ವಿಚಿತ್ರವೋ, ಈ ಮಿಡಿ ಮಾವಿಗೆ ಎಷ್ಟು ಬೇಡಿಕೆ ಇದೆಯೋ, ಇದರ ಕೃಷಿಯ ಸುತ್ತ ಅಷ್ಟೇ ಸಮಸ್ಯೆಗಳೂ ಇವೆ.

ಮಾವು ಕುಲದಲ್ಲೇ ವಿಶಿಷ್ಠ ತಳಿ..

‘ಅಪ್ಪೆಮಿಡಿ’–ಒಂದು ವಿಶಿಷ್ಟ ಜಾತಿಯ ಕಾಡು ಮಾವು. ವಿಶಿಷ್ಟವಾದ ಸ್ವಾದ, ಪರಿಮಳ, ರುಚಿ ಹೊಂದಿರುವ ಮಾವಿನ ಕಾಯಿ. ಮಲೆನಾಡಿನ ನದಿ ದಡಗಳು, ಹೊಳೆ ಅಂಚುಗಳು ಅಪ್ಪೆಮಿಡಿಯ ಮೂಲ ನೆಲೆ. ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಕುಮಟಾ, ಯಲ್ಲಾಪುರ ಮತ್ತಿತರ ಕಡೆಗಳಲ್ಲಿ ಹರಿಯುವ ಅಘನಾಶಿನಿ, ಕುಮದ್ವತಿ, ಕಾಳಿ, ವರದಾ, ಬೇಡ್ತಿ ಹಾಗೂ ಶರಾವತಿ ನದಿಗಳ ದಂಡೆಯ ಮೇಲೆ ಹತ್ತಾರು ದಶಕಗಳಿಂದ ಅಪ್ಪೆಮಿಡಿ ಮರಗಳು ನೈಸರ್ಗಿಕವಾಗಿ ಬೆಳೆಯುತ್ತಿವೆ. 

ಅಪ್ಪೆಮಿಡಿ ಉತ್ಪನ್ನಗಳಿಗೆ ತುಂಬಾ ಬೇಡಿಕೆ ಇದೆ. ಈ ತಳಿಗಳಲ್ಲಿ ಜೀರಿಗೆ ಪರಿಮಳದ ಮಿಡಿಗೆ ಬೇಡಿಕೆ ಹೆಚ್ಚು. ಹೆಬ್ಬೆರಳು ಗಾತ್ರದ ಒಂದು ಮಿಡಿಗೆ ₹5 ರಿಂದ ₹15ರವರೆಗೂ ಬೆಲೆ ಇರುತ್ತದೆ. ಒಂದು ಕೆ.ಜಿಗೆ ₹300 ರಿಂದ ₹700ರವರೆಗೂ ಮಾರಾಟವಾಗುತ್ತದೆ. ಹಸಿ ಕಾಯಿಗೆ ಒಂದು ಬೆಲೆಯಾದರೆ, ಕಾಯಿಗಳನ್ನು ಉಪ್ಪಿನಲ್ಲಿಟ್ಟು ಮಾರಾಟ ಮಾಡುವುದಕ್ಕೆ ಇನ್ನೊಂದು ಬೆಲೆ. ಒಂದು ಕಾಲದಲ್ಲಿ ಮಲೆನಾಡಿನ ಮನೆ ಮನೆಗಳಲ್ಲಿ ಘಮಘಮಿಸುತ್ತಿದ್ದ ಅಪ್ಪೆಮಿಡಿಯ ಪರಿಮಳ ಈಗ ಹೊರದೇಶಗಳಲ್ಲೂ ಪಸರಿಸಿದೆ. ಹೀಗಾಗಿ ಐದಾರು ವರ್ಷಗಳ ಹಿಂದೆ ನೂರು ಕೋಟಿಯಷ್ಟಿದ್ದ ಮಿಡಿ ವಹಿವಾಟು ಈಗ ಮೂರ್ನಾಲ್ಕುಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗುತ್ತಿದೆ. ಹೀಗೆ ವಿಶಿಷ್ಟ ಸ್ವಾದ, ಪರಿಮಳ, ರುಚಿಯ ಕಾರಣಕ್ಕಾಗಿ ‘ಸಾಗರ ಪ್ರಾಂತದ ಅಪ್ಪೆಮಿಡಿ ತಳಿ‘ಗೆ  ಭೌಗೋಳಿಕ ಗುರುತಿಸುವಿಕೆ(Geographical Indicator Registry) ಮಾನ್ಯತೆ ಸಿಕ್ಕಿದೆ. 

ಅಪ್ಪೆಮಿಡಿಗೆ ಇಷ್ಟೆಲ್ಲ ಬೇಡಿಕೆ ಇದ್ದರೂ, ಅದಕ್ಕೆ ತಕ್ಕಂತೆ ಉತ್ಪಾದನೆಯಾಗುತ್ತಿಲ್ಲ. ವರದಿಯೊಂದರ ಪ್ರಕಾರ ಉಪ್ಪಿನಕಾಯಿ ತಯಾರಿಕೆಯ ಬೇಡಿಕೆಗೆ ಪೂರೈಕೆಯಾಗುತ್ತಿರುವ ಅಪ್ಪೆಮಿಡಿಗಳಲ್ಲಿ ಬೆಳೆಗಾರರ ಪಾಲು ಶೇ 1ಕ್ಕಿಂತ ಕಡಿಮೆ ಎನ್ನಲಾಗುತ್ತಿದೆ. ಇಂಥ ಅಪರೂಪದ ಮಾವಿನ ತಳಿಯ ಬೆಳೆ ಪ್ರದೇಶದ ವಿಸ್ತೀರ್ಣ, ಉತ್ಪಾದನೆ, ಬೇಡಿಕೆ, ವಹಿವಾಟು, ಮಾರುಕಟ್ಟೆಯಂತಹ ಮಾಹಿತಿಗಳು ಬೆಳೆಗಾರರ ಬಾಯಿಮಾತಿನಲ್ಲಿವೆಯೇ ಹೊರತು, ಎಲ್ಲೂ ದಾಖಲೆಯಾಗಿ ಲಭ್ಯವಿಲ್ಲ. ಇದಕ್ಕೆ ಕಾರಣ ಅಪ್ಪೆಮಿಡಿ ಕೃಷಿ, ಮಾರುಕಟ್ಟೆ ಎಲ್ಲ ಅಸಂಘಟಿತವಾಗಿರುವುದೇ ಆಗಿದೆ. 

ಐಐಎಚ್‌ಆರ್‌ನಲ್ಲಿ ನಡೆದ ಅಪ್ಪೆಮಿಡಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಜೀನ್‌ ಬ್ಯಾಂಕ್‌ನ ಅಪ್ಪೆಮಿಡಿ ತಳಿಗಳು
ಐಐಎಚ್‌ಆರ್‌ನಲ್ಲಿ ನಡೆದ ಅಪ್ಪೆಮಿಡಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಜೀನ್‌ ಬ್ಯಾಂಕ್‌ನ ಅಪ್ಪೆಮಿಡಿ ತಳಿಗಳು

ಅಪ್ಪೆಮಿಡಿಯ ವೈಶಿಷ್ಟ್ಯ

ಅಪ್ಪೆಮಿಡಿ ಉಪ್ಪಿನಕಾಯಿಗೆ ಬಳಸುವ ಅಪರೂಪದ ತಳಿ. ಜೀರಿಗೆ ಮಿಡಿ ಉಪ್ಪಿನಕಾಯಿ ಹೆಸರು ಹೇಳಿದರೆ ಸಾಕು, ಬಾಯಲ್ಲಿ ನೀರೂರುತ್ತದೆ. ಮಲೆನಾಡಿಗರು ಇದರಲ್ಲಿ ಗೊಜ್ಜು, ಹುಳಿ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸುತ್ತಾರೆ. ಕೃಷಿ ಬರಹಗಾರ ಪೂರ್ಣಪ್ರಜ್ಞ ಬೇಳೂರು ಅವರು ಈ ತಳಿಯಿಂದ ತಯಾರಿಸುವ ಸುಮಾರು ಇಪ್ಪತ್ತೆಂಟು ಖಾದ್ಯಗಳನ್ನು ದಾಖಲಿಸಿದ್ದಾರೆ. ಇಷ್ಟೆಲ್ಲ ಆದರೂ, ಈ ಅಪ್ಪೆಮಿಡಿಯನ್ನು ಮಲೆನಾಡಿಗರು ಉಪ್ಪಿನಕಾಯಿಯ ಸರಕಾಗಷ್ಟೇ ನೋಡುವುದಿಲ್ಲ. ತಮ್ಮ ಸೀಮೆಯ ಸಾಂಸ್ಕೃತಿಕ ರಾಯಭಾರಿಯಂತೆ ಕಾಣುತ್ತಾರೆ.

ಈ ಮಾವಿನ ಕಾಯಿಯ ತೊಟ್ಟು ಮುರಿದಾಗ ಚಿಮ್ಮುವ ಸೊನೆ ಇದೆಯಲ್ಲಾ, ಅದು ಉಪ್ಪಿನಕಾಯಿಯನ್ನು ದೀರ್ಘಕಾಲ ಕೆಡದಂತಿಡುವ ರಕ್ಷಾ ಕವಚ. ಸೊನೆಗೆ ಬೆಂಕಿ ಹಚ್ಚಿ ‘ಗುಣಮಟ್ಟ‘ ಪರೀಕ್ಷಿಸುತ್ತಾರೆ. ಆ ಬೆಂಕಿ ದೀರ್ಘಕಾಲ ಉರಿದರೆ ಮಿಡಿ ಉತ್ತಮ, ಬಾಳಿಕೆಯೂ ದೀರ್ಘವೆಂದು ಅರ್ಥ. ಒಂದೇ ಒಂದು ತೊಟ್ಟು ಸೊನೆ, ಇಡೀ ಆಹಾರವನ್ನೇ ಪರಿಮಳಯುಕ್ತವಾಗಿಸುತ್ತದೆ. ಈ ‘ಸೊನೆ’ಯ ಪರಿಮಳದಿಂದ ಗ್ರಾಹಕರನ್ನು ಮರಳು ಮಾಡುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತವೆಯಂತೆ !

ಮಿಡಿ ಮಾವಿನಲ್ಲಿ ರೈತರು ನಾಲ್ಕು ವಿಧದ/ತಳಿಗಳನ್ನು ಗುರುತಿಸುತ್ತಾರೆ. ಅಪ್ಪೆಮಿಡಿ, ಜೀರಿಗೆ ಮಿಡಿ, ಕರ್ಪೂರದ ಅಪ್ಪೆ ಮಿಡಿ, ಕಂಚಪ್ಪೆ ಮಿಡಿ. ಇವೆಲ್ಲ ಮಿಡಿಯ ಸೊನೆಯ ಪರಿಮಳ ಆಧರಿಸಿ ಗುರುತಿಸಿರುವ ತಳಿಗಳು. ಜೀರಿಗೆ ಪರಿಮಳವಿರುವ ಮಿಡಿಗೆ ‘ಜೀರಿಗೆ ಅಪ್ಪೆ’, ಕಂಚಿಕಾಯಿ ರುಚಿಯಿರುವ ಮಿಡಿಗೆ ‘ಕಂಚಪ್ಪೆ’ ಹಾಗೂ ಹುಳಿ ಅಂಶವಿರುವ ಮಿಡಿಗೆ ‘ಸಾದಾ ಅಪ್ಪೆ’ ಎನ್ನುತ್ತಾರೆ. ಇದೇ ತಳಿಗಳನ್ನು ಬೇರೆ ಬೇರೆ ಪ್ರದೇಶದಲ್ಲಿ ಬೆಳೆಯುವ ಕಾರಣ, ಈ ಮಾವಿನ ಜೊತೆಗೆ, ಆಯಾ ಪ್ರದೇಶ, ಊರುಗಳ ಹೆಸರೂ ಬೆರೆತುಕೊಂಡಿವೆ.  

ಮಲೆನಾಡಿನಲ್ಲಿ ನೂರು ವರ್ಷಕ್ಕೂ ಹಳೆಯದಾದ ಅಪ್ಪೆಮಿಡಿ ಮರಗಳಿವೆ. ಹಳೆಯ ಮರಗಳು ಬೃಹತ್ ಗಾತ್ರದ ಜೊತೆಗೆ ಎತ್ತರವಾಗಿರುತ್ತವೆ. ಇವುಗಳಲ್ಲಿ ಒಂದೊಂದು ಮರ 2 ಸಾವಿರದಿಂದ 6 ಸಾವಿರ ಮಿಡಿಗಳನ್ನು ಬಿಡುತ್ತದೆ. ಕೆಲವು 4 ರಿಂದ 5 ಟನ್‌ ಫಸಲು ಕೊಟ್ಟಿರುವ ಉದಾಹರಣೆಗಳಿವೆ.

ಬೆಳೆಗಾರರ ’ಮಾವಿನ ತಳಿ’ 

ವಿಶಿಷ್ಟ ಗುಣಗಳಿರುವ ಅಪ್ಪೆಮಿಡಿ ತಳಿಗಳನ್ನು ಮೊದಲು ಗುರುತಿಸಿದ್ದು, ತೋಟಗಳಲ್ಲಿ ಬೆಳೆಸಲು ಪ್ರಯತ್ನಿಸಿದ್ದು ಮಲೆನಾಡಿನ ಬೆಳೆಗಾರರೇ. ಅದು ಎಂಟು ದಶಕಗಳ ಹಿಂದೆ. 1939ರಲ್ಲಿ ಶಿರಸಿ ತಾಲ್ಲೂಕಿನ ಸಿದ್ದಾಪುರದ ಶೇಡಿ ದಂಟ್ಕಲ್‌ ಗಣೇಶ ಹೆಗಡೆಯವರು ಅಘನಾಶಿನಿ ನದಿಯ ದಂಡೆಯಲ್ಲಿದ್ದ ‘ಅನಂತಭಟ್ಟನ ಅಪ್ಪೆಮಿಡಿ’ ಎಂಬ ಮಾವಿನ ತಳಿಯನ್ನು ಮೊದಲ ಬಾರಿಗೆ ತೋಟದಲ್ಲಿ ನೆಟ್ಟು ಬೆಳೆಸಲು ಪ್ರಯತ್ನಿಸಿದರು ಎಂದು ಅಪ್ಪೆಮಿಡಿ ಕುರಿತು ಮೂರು ದಶಕಗಳ ಕಾಲ ಕ್ಷೇತ್ರಾಧ್ಯಯನ ನಡೆಸಿರುವ ಕೃಷಿ–ಪರಿಸರ ಬರಹಗಾರ ಶಿವಾನಂದ ಕಳವೆ ಹೇಳುತ್ತಾರೆ. 

ಅಂದಿನಿಂದ 90ರ ದಶಕದವರೆಗೂ ಅಲ್ಲಲ್ಲಿ ಅಪ್ಪೆಮಿಡಿ ಕೃಷಿ ಚರ್ಚೆಯಾಗುತ್ತಿದ್ದರೂ, 1990ರ ನಂತರ ಆ ವಿಷಯದ ಕುರಿತು ಗಂಭೀರವಾದ ಮಾತುಕತೆಗಳು ಆರಂಭವಾದವು. ಸಾಗರದ ಬೇಳೂರು ಸುಬ್ಬಣ್ಣನವರಂಥ ಅನುಭವಿ ಕೃಷಿಕರು ನೂರಾರು ಅಪ್ಪೆಮಿಡಿ ತಳಿಗಳನ್ನು ಗುರುತಿಸಿ, ಕಸಿ ಗಿಡಗಳನ್ನು ತಯಾರಿಸಿ ರೈತರಿಗೆ ಬೆಳೆಸಲು ಉತ್ತೇಜಿಸಿದರು. 2005 ರಿಂದ 2007ರ ನಡುವೆ ಶಿರಸಿ, ಸಾಗರದಲ್ಲಿ ಶಿವಾನಂದ ಕಳವೆ ನೇತೃತ್ವದಲ್ಲಿ ‘ಅಪ್ಪೆಮಿಡಿಯ ಮೂಲ ತಳಿಗಳ ಸಂರಕ್ಷಣೆ’ ಉದ್ದೇಶದೊಂದಿಗೆ ನಡೆದ ಮೇಳಗಳು ಈ ಮಾವಿನ ಕೃಷಿ ವಿಸ್ತರಣೆ ಜೊತೆಗೆ, ಮಹಿಳಾ ಸಂಘಗಳು ಮನೆ ಮನೆಗಳಲ್ಲಿ ಅಪ್ಪೆಮಿಡಿ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಲು ಉತ್ತೇಜನ ನೀಡಿದವು.

ಮೇಳಗಳು, ಹಬ್ಬಗಳಿಂದ ಅಪ್ಪೆಮಿಡಿಗೆ ಬೇಡಿಕೆಯೂ ಹೆಚ್ಚಾಯಿತು. ಉಪ್ಪಿನಕಾಯಿ ತಯಾರಕ ಕಂಪನಿಗಳು ಮಿಡಿ ರುಚಿ ಬೆನ್ನು ಹತ್ತಿ, ಆ ಬೇಡಿಕೆಯನ್ನು ವಿಸ್ತರಿಸಿದವು. ಈ ಲಾಭ ಪಡೆಯಲು ಹೊಳೆದಡದಲ್ಲಿದ್ದ ಮಾವಿನ ಮರಗಳಿಂದ ಅವೈಜ್ಞಾನಿಕವಾಗಿ ಕಾಯಿಗಳನ್ನು ಕೊಯ್ಯುವವರ ಸಂಖ್ಯೆಯೂ ಅಧಿಕವಾಯಿತು. ಎತ್ತರದ ಮರಗಳನ್ನು ಏರಿ ಕಾಯಿ ಕೊಯ್ಯುವ ಕೌಶಲವಿಲ್ಲದವರು, ಮರದ ರೆಂಬೆಗಳನ್ನು ಕತ್ತರಿಸಲಾರಂಭಿಸಿದರು. ಪರಿಣಾಮವಾಗಿ ಅಪರೂಪದ ಅಪ್ಪೆಮಿಡಿ ತಳಿಗಳು ಅಳಿಯಲು ಆರಂಭವಾದವು.

ತಳಿ ಸಂರಕ್ಷಣೆಯ ಪ್ರಯತ್ನ

ಇದೇ ವೇಳೆ ಅಪ್ಪೆಮಿಡಿಯ ಅಪರೂಪದ ತಳಿಗಳ ಸಂರಕ್ಷಣೆಗೆ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಮುಂದಾಯಿತು. ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಎಂ.ಆರ್. ದಿನೇಶ್, ಡಾ.ಕೆ.ವಿ.ರವಿಶಂಕರ್ ಮತ್ತಿತರರ ವಿಜ್ಞಾನಿಗಳ ತಂಡ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಸುತ್ತಾಡಿ, ಅಳಿವಿನಂಚಿನಲ್ಲಿದ್ದ ಅಪ್ಪೆಮಿಡಿ ತಳಿಗಳನ್ನು ಗುರುತಿಸಿ, ಸಸಿ ಮಾಡಿ ಐಐಎಚ್‌ಆರ್ ಆವರಣದಲ್ಲಿ (ಜೀನ್‌ ಬ್ಯಾಂಕ್‌) ನೆಟ್ಟು ಬೆಳೆಸಲಾರಂಭಿಸಿದರು. ಸುಮಾರು ಎರಡು ದಶಕಗಳಿಂದ ಈ ತಳಿ ಸಂರಕ್ಷಣೆ, ಸಂಶೋಧನೆ ಮುಂದುವರಿಯುತ್ತಿದೆ. ಸದ್ಯ 200ಕ್ಕೂ ಹೆಚ್ಚು ತಳಿ ಸಂಗ್ರಹವಾಗಿದೆ. ಸಂಗ್ರಹಿಸಿರುವ ತಳಿಗಳ ಗುಣ ವಿಶೇಷಣಗಳನ್ನು ದಾಖಲಿಸಲಾಗಿದೆ. ಇಲ್ಲಿ ಬೆಳೆಯುವ ಮಿಡಿಗಳನ್ನು ರೈತರಿಗೆ ಪರಿಚಯಿಸಲು ಐಐಎಚ್‌ಆರ್ ಪ್ರತಿ ವರ್ಷ ’ಅಪ್ಪೆಮಿಡಿ ಮೇಳ’ವನ್ನು ಆಯೋಜಿಸುತ್ತಿದೆ.

ಈ ನಡುವೆ 2008–09ರಲ್ಲಿ ಶಿವಮೊಗ್ಗ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾಗಿದ್ದ ವಿಶ್ವನಾಥ್ ಅವರು ಅಪ್ಪೆಮಿಡಿಯ ಸಂರಕ್ಷಣೆ ಮತ್ತು ವಿಸ್ತರಣೆಗೆ ಆಸಕ್ತ ಬೆಳೆಗಾರರನ್ನು ಉತ್ತೇಜಿಸಿದರು. ಸಾಗರದ ಭಾಗದಲ್ಲಿರುವ ಮಿಡಿ ತಳಿಗಳನ್ನು ಗುರುತಿಸಿ, ಕಸಿ ಗಿಡಗಳನ್ನು ತಯಾರಿಸಿ, ರೈತರಿಗೆ ವಿತರಿಸುವ ಕಾರ್ಯಕ್ಕೆ ಮುಂದಾದರು. ‘ಕ್ಲಸ್ಟರ್‌ ವಿಲೇಜ್‘ ಪರಿಕಲ್ಪನೆಯಲ್ಲಿ ರೈತರ ಗುಂಪುಗಳ ಮೂಲಕ ಅಪ್ಪೆಮಿಡಿ ಗಿಡಗಳನ್ನು ಬೆಳೆಸುವ ಆಂದೋಲನವೂ ನಡೆಯಿತು. ಇದೇ ವೇಳೆ ಇಲಾಖೆ ಆಸಕ್ತ ಬೆಳೆಗಾರರನ್ನು ಸೇರಿಸಿ ‘ಸಹ್ಯಾದ್ರಿ ಅಪ್ಪೆಮಿಡಿ ಬೆಳೆಗಾರರ ಸಂಘ‘ ಸ್ಥಾಪಿಸಲು ಉತ್ತೇಜಿಸಿತು. ಮಿಡಿ ಸಸಿಗಳ ವಿತರಣೆ ಜೊತೆಗೆ, ಅವುಗಳನ್ನು ಬೆಳೆಸಲು ಬೇಕಾದ ಗೊಬ್ಬರ, ನಿರ್ವಹಣೆಗೆ ಸಬ್ಸಿಡಿ ನೀಡುವ ಮೂಲಕ ಅಪ್ಪೆಮಿಡಿ ಬೆಳವಣಿಗೆಗೆ ಉತ್ತೇಜನ ನೀಡಲಾಯಿತು.

ಇದೇ ವೇಳೆ, ಸಾಗರದಲ್ಲಿರುವ ತೋಟಗಾರಿಕಾ ಇಲಾಖೆಯ ಫಾರಂನಲ್ಲಿ ವಿವಿಧ ತಳಿಗಳ ಮಿಡಿ ಮಾವಿನ ಸಸಿಗಳನ್ನು ಬೆಳೆಸುವ ಪ್ರಕ್ರಿಯೆ ಶುರುವಾಯಿತು. ಮತ್ತೊಂದೆಡೆ ಶಿರಸಿ ಭಾಗದಲ್ಲಿ ಅಲ್ಲಿನ ಅರಣ್ಯ ಕಾಲೇಜು, ಸ್ಥಳೀಯ ಬೆಳೆಗಾರರು ಆ ಭಾಗದಲ್ಲಿ ಅಪ್ಪೆಮಿಡಿ ವಿಸ್ತರಣೆಗೆ ಆಸಕ್ತಿ ತೋರಿದರು. ಪರಿಣಾಮವಾಗಿ ಈಗ  ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 50 ಹೆಕ್ಟೇರ್‌, ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 10 ಹೆಕ್ಟೇರ್‌ನಲ್ಲಿ ಅಪ್ಪೆಮಿಡಿ ಕೃಷಿ ಇದೆ. ‘ಸಹ್ಯಾದ್ರಿ ಬಳಗದಲ್ಲಿ 50 ನೋಂದಾಯಿತ ಸದಸ್ಯರಿದ್ದಾರೆ. ಸಾಗರದ ಎರಡು ಹೋಬಳಿಗಳಲ್ಲೇ ಸುಮಾರು 20 ಸಾವಿರ ಅಪ್ಪೆಮಿಡಿ‌ ಗಿಡಗಳಿವೆ’ ಎನ್ನುತ್ತಾರೆ ಸಂಘದ ಅಧ್ಯಕ್ಷ ಸಾಗರದ ಗಣೇಶ್‌ ಕಾಕಲ್‌. 

ದಶಕದಿಂದೀಚೆಗೆ ಅಪ್ಪೆಮಿಡಿಯು ತುಮಕೂರು, ದೊಡ್ಡಬಳ್ಳಾಪುರ ಮೈಸೂರು, ನೆಲಮಂಗಲ, ಹಿರಿಯೂರು ಸೇರಿದಂತೆ ಬಯಲು ಸೀಮೆ ಪ್ರದೇಶಕ್ಕೂ ವಿಸ್ತರಿಸಿದೆ. ಗದಗ ಜಿಲ್ಲೆ ಗಜೇಂದ್ರಗಡ ಸಮೀಪದಲ್ಲಿ ಸಮೀರ್ ಪಾಟೀಲ್ ಎಂಬುವವರು ನಾಲ್ಕು ವರ್ಷಗಳಿಂದ ದೊಂಬೆಸರ ಜೀರಿಗೆ, ಕ್ವಾಡ್ರಿಗೆ ಜೀರಿಗೆ, ಕಳ್ಕೊಪ್ಪ ಜೀರಿಗೆ, ಬಟಾಣಿಜೆಡ್ಡು ಹೆಸರಿನ 500 ಅಪ್ಪೆಮಿಡಿ ಗಿಡಗಳನ್ನು ಹಂತ ಹಂತವಾಗಿ ನಾಟಿ ಮಾಡಿಕೊಂಡು ಬಂದಿದ್ದಾರೆ. ಅವುಗಳಲ್ಲಿ 40 ರಿಂದ 60 ಗಿಡಗಳು ಫಸಲು ಕೊಡುತ್ತಿವೆ. ಉತ್ತಮ ಬೆಲೆಯೂ ಸಿಗುತ್ತಿದೆಯಂತೆ. ಮುಂದೆ ಮಿಡಿಗಳನ್ನು ಉಪ್ಪುನೀರಿನಲ್ಲಿಟ್ಟು, ನೇರವಾಗಿ ಗ್ರಾಹಕರಿಗೆ ತಲುಪಿಸುವ ಯೋಚನೆಯಲ್ಲಿದ್ದಾರೆ ಸಮೀರ್. 

ಮೂಲ ಸಮಸ್ಯೆ

ಇಷ್ಟೆಲ್ಲ ಪ್ರಯತ್ನಗಳ ಫಲವಾಗಿ 2007ರಿಂದ ಇಲ್ಲಿವರೆಗೂ ಅಪ್ಪೆಮಿಡಿ ಕೃಷಿ ದೊಡ್ಡ ಪ್ರಮಾಣದಲ್ಲೇನೊ ವಿಸ್ತರಣೆಯಾಗುತ್ತಿದೆ. ಆದರೆ, ನಾಟಿ ಮಾಡುವ ಗಿಡಗಳೆಲ್ಲ ಫಲ ಕೊಡುತ್ತಿಲ್ಲ (ಸಾಮಾನ್ಯವಾಗಿ ಗಿಡ ನೆಟ್ಟು ನಾಲ್ಕೈದು ವರ್ಷಗಳ ನಂತರ ಫಸಲು ಶುರುವಾಗುತ್ತದೆ).

ಸಾವಿರ ಗಿಡಗಳನ್ನು ಬೆಳೆಸಿರುವ ಭಾರ್ಗವ ಹೆಗಡೆ ‘ನಾನು ಎಲ್ಲ ರೀತಿಯ ಆರೈಕೆ ಮಾಡುತ್ತಿದ್ದೇನೆ. ಆದರೂ, ಎಲ್ಲ ಮರಗಳು ಪ್ರತಿ ವರ್ಷ ಕಾಯಿ ಬಿಡುವುದಿಲ್ಲ. ಕೆಲವು ತಳಿಗಳಂತೂ ಚೆನ್ನಾಗಿ ಬೆಳೆಯುತ್ತವೆ. ಒಮ್ಮೆಯೂ ಕಾಯಿ ಬಿಡದಿರುವ ಉದಾಹರಣೆಗಳಿವೆ’ ಎನ್ನುತ್ತಾರೆ.

‘ಸಾಗರ ತಾಲ್ಲೂಕಿನಲ್ಲಿ ಹತ್ತಾರು ಬೆಳೆಗಾರರು ಉತ್ಸಾಹದಿಂದ ಅಪ್ಪೆಮಿಡಿ ಬೆಳೆಗಾರರ ಸಂಘ ಮಾಡಿ, ಹೆಚ್ಚು ಅಪ್ಪೆಮಿಡಿ ಬೆಳೆಸಲು ಪ್ರಯತ್ನಿಸಿದರು. ಗಿಡಗಳನ್ನು ನೆಟ್ಟು ಏಳೆಂಟು ವರ್ಷಗಳಾದರೂ ಕಾಯಿ ಬಿಡಲಿಲ್ಲ. ಹೀಗಾಗಿ ಎಲ್ಲರಿಗೂ ನಿರಾಸೆಯಾಗಿದೆ. ಸಂಘದ ಚಟುವಟಿಕೆಗಳೂ ಮೊದಲಿನಷ್ಟು ಉತ್ಸಾಹದಿಂದ ನಡೆಯುತ್ತಿಲ್ಲ’ ಎನ್ನುತ್ತಾರೆ ಗಣೇಶ್ ಕಾಕಲ್.

ಸಾಗರದ ತೋಟಗಾರಿಕೆ ಇಲಾಖೆಯ ಫಾರಂನಲ್ಲಿ ಸುಮಾರು ಮೂರು ಸಾವಿರ ವಿವಿಧ ಅಪ್ಪೆಮಿಡಿ ತಳಿಗಳ ಮರಗಳಿವೆಯಂತೆ. ಪ್ರತಿ ವರ್ಷ 80 ರಿಂದ 90 ಮರಗಳಷ್ಟೇ ಕಾಯಿ ಬಿಡುತ್ತವೆ. ಉಳಿದ ಮರಗಳಲ್ಲಿ ಹೂವಾಗುತ್ತದೆ. ಕಾಯಿ ಕಚ್ಚುವುದಿಲ್ಲ. ಎಲ್ಲ ರೀತಿಯ ವೈಜ್ಞಾನಿಕ ಆರೈಕೆಗಳನ್ನು ಮಾಡಿದ್ದೇವೆ. ಪ್ರಯತ್ನಗಳಿಗೆ ‘ಫಲ‘ ಸಿಕ್ಕಿಲ್ಲ‘ ಎನ್ನುತ್ತಾರೆ ಸಾಗರದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್. ದಶಕಗಳ ಹಿಂದೆ ‘ಅನಂತಭಟ್ಟನ ಅಪ್ಪೆಮಿಡಿ ತಳಿ’ಯನ್ನು ಸಸಿ ಮಾಡಿ ಹಂಚಿದಾಗಲೂ ಇಂಥ ಅನುಭವಗಳೇ ಆಗಿವೆ. 

ಗಿಡಗಳು ಕಾಯಿ ಕಚ್ಚದಿರುವುದಕ್ಕೆ ಬೆಳೆಗಾರರು ಅವರದ್ದೇ ಆದ ಅನುಭವದಲ್ಲಿ ಕಂಡುಕೊಂಡಿರುವ ಕಾರಣಗಳನ್ನು ನೀಡುತ್ತಾರೆ. ಒಬ್ಬರು ‘ಹವಾಮಾನ ವೈಪರೀತ್ಯದಿಂದ ಹೀಗಾಗಿರಬಹುದು’ ಎಂದು ಅಂದಾಜಿಸಿದರೆ, ‘ನದಿ–ಹೊಳೆ ದಂಡೆ ವಾತಾವರಣದಲ್ಲಿ ಬೆಳೆಯುವ ತಳಿ, ಕೃಷಿ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳದೇ ಇರಬಹುದು’ ಎಂದು ತರ್ಕಿಸುತ್ತಾರೆ. ಕೆಲವು ವಿಜ್ಞಾನಿಗಳು ಹಾಗೂ ನರ್ಸರಿಯವರು ಗಿಡ ನಾಟಿ ಮಾಡುವ ತಾಂತ್ರಿಕ ಪ್ರಕ್ರಿಯೆಯಲ್ಲಿನ ವ್ಯತ್ಯಾಸದಿಂದ ಹೀಗಾಗುತ್ತಿದೆ ಎನ್ನುತ್ತಾರೆ. ಆದರೆ, ನಿಖರವಾದ ಕಾರಣವೇನೆಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ.

ಆದರೆ, ಐಐಎಚ್‌ಆರ್‌ ಮತ್ತು ಶಿರಸಿ ಅರಣ್ಯ ಕಾಲೇಜಿನ ಪ್ರಾಯೋಗಿಕ ತಾಕುಗಳಲ್ಲಿ ಬೆಳೆಸಿರುವ ಅಪ್ಪೆಮಿಡಿಯ ತಳಿಗಳಲ್ಲಿ ಕೆಲವು ಉತ್ತಮ ಫಲ ಕೊಡುತ್ತಿವೆ. ಐಐಎಚ್‌ಆರ್, ತನ್ನ ಜೀನ್‌ ಬ್ಯಾಂಕ್‌ನಲ್ಲಿ ಉತ್ತಮವಾಗಿ ಫಲ ಕೊಡುತ್ತಿ ರುವ ನಾಲ್ಕೈದು ತಳಿಗಳನ್ನು ಗುರುತಿಸಿ, ಅವುಗಳಿಂದ ಕಸಿ ಗಿಡಗಳನ್ನು ತಯಾರಿಸಿ ರೈತರಿಗೆ ವಿತರಿಸುತ್ತಿದೆ. ಆದರೆ, ಸಂಶೋಧನಾ ತಾಕುಗಳಲ್ಲಿ ಗೆಲ್ಲುವ ಅಪ್ಪೆಮಿಡಿ ತಳಿಗಳು ಜಮೀನಿನಲ್ಲೇಕೆ ಗೆಲ್ಲುವುದಿಲ್ಲ ಎನ್ನುವುದು ಬೆಳೆಗಾರರ ಪ್ರಶ್ನೆಯಾಗಿದೆ.

ಪರಿಹಾರದ ಮಾರ್ಗಗಳಾವುವು

ಪ್ರತಿ ವರ್ಷ ನಿಶ್ಚಿತವಾಗಿ ಕಾಯಿ ಬಿಡುವಂತಹ ಅಪ್ಪೆಮಿಡಿ ತಳಿಗಳನ್ನು ಗುರುತಿಸಿ, ರೈತರಿಗೆ ವಿತರಿಸುವ ಕೆಲಸವಾಗಬೇಕು ಎನ್ನುವುದು ಹಲವು ಅಪ್ಪೆಮಿಡಿ ಬೆಳೆಗಾರರ ಪ್ರಮುಖ ಬೇಡಿಕೆ. 

ಈವರೆಗೆ ಪರಿಮಳ, ಬಣ್ಣ, ಆಕಾರ ಚೆನ್ನಾಗಿರುವಂತಹ ಮಿಡಿ ಮಾವಿನ ಕುರಿತು ಸಂಶೋಧನೆಗಳಾಗಿವೆ. ಆದರೆ, ನಮಗೆ ಬೇಕಾಗಿರುವುದು ಪ್ರತಿ ವರ್ಷ ಫಸಲು ಬಿಡುವ ಮಾಮೂಲಿ ಅಪ್ಪೆಮಿಡಿ ತಳಿ. ಇದರ ಬಗ್ಗೆ ಸಂಶೋಧನೆ ಮಾಡಿ ತಿಳಿಸಿದರೆ, ರೈತರಿಗೂ ಅನುಕೂಲ, ಗ್ರಾಹಕರ ಜೇಬಿಗೂ ಹೊರೆಯಾಗೋದಿಲ್ಲ ಎನ್ನುತ್ತಾರೆ ಕೃಷಿಕ ಭಾರ್ಗವ ಹೆಗಡೆ.

ತಳಿ ಗುರುತಿಸುವ ಜೊತೆಗೆ, ಬೆಳೆಯುವ ವಿಧಾನದಲ್ಲಿ (ಕೃಷಿ) ಪ್ರಾದೇಶಿಕವಾಗಿ ಅನುಸರಿಸುವ ತಂತ್ರಜ್ಞಾನಗಳನ್ನು ಸಂಶೋಧಿಸುವ ಕಡೆಯೂ ಗಮನಹರಿಸಬೇಕಿದೆ. ಜೊತೆಗೆ, ಸ್ಥಳ ಮತ್ತು ವಾತಾವರಣ ಬದಲಾದಾಗ ತಳಿಗಳಲ್ಲಿನ ಗುಣದಲ್ಲಿ ವ್ಯತ್ಯಾಸವಾಗುತ್ತವೆಯೇ ಎಂಬುದನ್ನು ಸಂಶೋಧನೆಗಳ ಮೂಲಕ ಪತ್ತೆ ಹಚ್ಚಬೇಕಿದೆ ಎಂಬುದು ಬೆಳೆಗಾರರ ಬೇಡಿಕೆಯಾಗಿದೆ.

ಈಗಾಗಲೇ ಅಪ್ಪೆಮಿಡಿಯ ‘ಬೇಡಿಕೆ’ಯ ಬೆನ್ನುಹತ್ತಿ ಎಕರೆಗಟ್ಟಲೆ ಅಪ್ಪೆಮಿಡಿ ಗಿಡಗಳನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ. ಸಾಕಷ್ಟು ನರ್ಸರಿಗಳಲ್ಲಿ ಸಸಿಗಳು ಮಾರಾಟವಾಗುತ್ತಿವೆ. ‘ಹಲವು ಕನಸುಗಳನ್ನಿಟ್ಟುಕೊಂಡು ನೆಟ್ಟ ಗಿಡಗಳು ಫಸಲೇ ಬಿಡುತ್ತಿಲ್ಲ, ನಾವೇನಾದರೂ ಮೋಸ ಹೋಗಿದ್ದೀವಾ‘ ಎಂದು ಹಳಹಳಿಸುತ್ತಿರುವವರು ಇದ್ದಾರೆ.

ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ, ಅಪ್ಪೆಮಿಡಿಯಲ್ಲಿರುವ ಉತ್ತಮ ತಳಿಗಳ ಗುರುತಿಸುವಿಕೆ ಮತ್ತು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನಹರಿಸಬೇಕಿದೆ. ‘ಅಡಿಕೆಗೆ ಪರ್ಯಾಯ‘ ಬೆಳೆಯಾಗಬಹುದಾದ ಬೆಳೆ ಇದು ಎಂದು ಅಪ್ಪೆಮಿಡಿ ಬೆಳೆಸಿ ಯಶಸ್ಸು ಕಂಡವರು ಹೇಳುತ್ತಿದ್ದಾರೆ. ಬೇರೆಲ್ಲ ಮಾವಿಗಿಂತ ಕಡಿಮೆ ಆರೈಕೆಯಲ್ಲಿ, ಹೆಚ್ಚು ಹಣ ನೀಡುವ ತಳಿ ಎಂದು ಅನುಭವಿ ರೈತರ ಅಭಿಪ್ರಾಯವಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ, ತನ್ನ ವಿಶಿಷ್ಟ ಗುಣಗಳಿಗಾಗಿಯೇ ಅಪ್ಪೆಮಿಡಿ ಜಿ.ಐ ಮಾನ್ಯತೆ ಪಡೆದಿದೆ. ಇಂಥ ಅಪೂರೂಪದ ‘ತಳಿ’ಯ ಅಭಿವೃದ್ಧಿಗಾಗಿ ಪ್ರತ್ಯೇಕ ಯೋಜನೆಯೊಂದನ್ನು ರೂಪಿಸುವ ಅಗತ್ಯವೂ ಇದೆ. 

(ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಿರಸಿ, ಐಐಎಚ್‌ಆರ್‌, ಬೆಂಗಳೂರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆ. ಡಾ. ವಾಸುದೇವ್ ಆರ್. ಶಿರಸಿ, ಅನಂತಮೂರ್ತಿ ಜವಳಿ, ರಿಪ್ಪನ್‌ಪೇಟೆ, ನಾಗೇಂದ್ರ ಸಾಗರ್) 

ಅಡ್ಡೇರಿ ಜೀರಿಗೆ
ಚಿತ್ರ: ಡಾ.ಕೆ.ವಿ.ರವಿಶಂಕರ್
ಅಡ್ಡೇರಿ ಜೀರಿಗೆ ಚಿತ್ರ: ಡಾ.ಕೆ.ವಿ.ರವಿಶಂಕರ್
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಐಐಎಚ್‌ಆರ್‌ನ ಅಪ್ಪೆಮಿಡಿ ಜೀನ್‌ ಬ್ಯಾಂಕ್‌
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಐಐಎಚ್‌ಆರ್‌ನ ಅಪ್ಪೆಮಿಡಿ ಜೀನ್‌ ಬ್ಯಾಂಕ್‌
ಜಾಡಿಯಲ್ಲಿರುವ ಉಪ್ಪು ಬೆರೆಸಿದ ಅಪ್ಪೆಮಿಡಿ ಕಾಯಿಗಳು
ಜಾಡಿಯಲ್ಲಿರುವ ಉಪ್ಪು ಬೆರೆಸಿದ ಅಪ್ಪೆಮಿಡಿ ಕಾಯಿಗಳು
ಅಪ್ಪೆಮಿಡಿ ಮರ
ಅಪ್ಪೆಮಿಡಿ ಮರ
ಅಪ್ಪೆಮಿಡಿ ಉಪ್ಪಿನಕಾಯಿ
ಅಪ್ಪೆಮಿಡಿ ಉಪ್ಪಿನಕಾಯಿ
1. ಅಪ್ಪೆಮಿಡಿ ಕಾಯಿ 2.ಉಪ್ಪಿನಲ್ಲಿ ಹಾಕಿರುವುದು 3. ಉಪ್ಪುನೀರಿನಲ್ಲಿ ಮುಳುಗಿಸಿದ ನಂತರ 4. ಉಪ್ಪಿನಕಾಯಿ
ಚಿತ್ರಗಳು: ಅಪ್ಪೆಮಿಡಿ ಐಐಎಚ್‌ಆರ್ ಪ್ರಕಟಿತ ಪುಸ್ತಕದಿಂದ
1. ಅಪ್ಪೆಮಿಡಿ ಕಾಯಿ 2.ಉಪ್ಪಿನಲ್ಲಿ ಹಾಕಿರುವುದು 3. ಉಪ್ಪುನೀರಿನಲ್ಲಿ ಮುಳುಗಿಸಿದ ನಂತರ 4. ಉಪ್ಪಿನಕಾಯಿ ಚಿತ್ರಗಳು: ಅಪ್ಪೆಮಿಡಿ ಐಐಎಚ್‌ಆರ್ ಪ್ರಕಟಿತ ಪುಸ್ತಕದಿಂದ
ಅಪ್ಪೆಮಿಡಿ ಉಪ್ಪಿನಕಾಯಿ
ಅಪ್ಪೆಮಿಡಿ ಉಪ್ಪಿನಕಾಯಿ

ಎರಡು ವರ್ಷಗಳ ಹಿಂದೆ ‘ಜೀನ್‌ ಬ್ಯಾಂಕ್‌‘ನಲ್ಲಿ ಉತ್ತಮ ಫಸಲು ನೀಡುವ ಐದು ತಳಿಗಳನ್ನು ಗುರುತಿಸಿದ್ದೇವೆ. ಅವುಗಳಿಂದ ಕಸಿ ಗಿಡಗಳನ್ನು ತಯಾರಿಸಿ ರೈತರಿಗೆ ವಿತರಿಸಿದ್ದೇವೆ. ಫಸಲು ಆರಂಭವಾಗಲು ಎರಡು ವರ್ಷ ಕಾಯಬೇಕಿದೆ.

–ಡಾ.ಎಂ.ಶಂಕರನ್‌ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು ಹಣ್ಣುಬೆಳೆ ವಿಭಾಗ ಐಐಎಚ್‌ಆರ್ ಬೆಂಗಳೂರು.

ಇನ್ನಷ್ಟು ಅಧ್ಯಯನ ಅಗತ್ಯ ಪ್ರದೇಶ ಬದಲಾದಾಗ ತಳಿಯ ಗುಣ ಬದಲಾಗಬಹುದು. ಈ ಕುರಿತು ಅಧ್ಯಯನಗಳು ಆಗಬೇಕಿದೆ. ಈಗಾಗಲೇ ರೈತರ ಬಳಿಯಿರುವ ಮೂರ್ನಾಲ್ಕು ತಳಿಗಳು ಮಾತ್ರ ವರ್ಷಕ್ಕೆ ಎರಡು ವರ್ಷಕ್ಕೋ ಫಲ ಕೊಡುವುದಾಗಿ ತೋರಿವೆ. ಅಂಥ ರೈತರ ಬಳಿ ಚರ್ಚಿಸಿ ಅವರ ಅನುಭವಗಳೊಂದಿಗೆ ಈ ತಳಿಗಳನ್ನು ಅಭಿವೃದ್ಧಿಪಡಿಸಬೇಕಿದೆ.

– ಶಿವಾನಂದ ಕಳವೆ ಕೃಷಿ–ಪರಿಸರ ಚಿಂತಕ ಶಿರಸಿ

ಸಹಭಾಗಿತ್ವದ ಸಂಶೋಧನೆ ಐಐಎಚ್‌ಆರ್‌ ತೋಟಗಾರಿಕೆ ಇಲಾಖೆ ಜಂಟಿಯಾಗಿ ಬೆಳೆಗಾರರು ಮತ್ತು ಬಳಕೆದಾರರ ಸಹಭಾಗಿತ್ವದೊಂದಿಗೆ ಅಪ್ಪೆಮಿಡಿ ತಳಿಗಳ ಕುರಿತು ಅಧ್ಯಯನ ನಡೆಸಬೇಕು. ಯಾವ ತಳಿಯಲ್ಲಿ ಅಪ್ಪೆಮಿಡಿಯ ಮೂಲ ಗುಣವಿದೆ. ಉಪ್ಪಿನಕಾಯಿಗೆ ಒಗ್ಗುವ ತಳಿಯಾವುದು. ಇಂಥ ಗುಣವಿಶೇಷಣಗಳನ್ನು ಪತ್ತೆ ಮಾಡಬೇಕು‘

–ಡಾ. ಕೆ. ರಾಮಕೃಷ್ಣಪ್ಪ ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕರು

ಅಪ್ಪೆಮಿಡಿ ಬೆಳೆ ವಿಸ್ತರಣೆಯಾಗುತ್ತಿದೆ. ಶೀಘ್ರ ಹಾಗೂ ನಿರಂತರವಾಗಿ ಫಲ ಕೊಡುವಂತಹ ತಳಿಗಳ ಸಂಶೋಧನೆ ನಡೆಸು ಕುರಿತು ತೋಟಗಾರಿಕಾ ವಿಶ್ವವಿದ್ಯಾಲಯೊಂದಿಗೆ ಚರ್ಚಿಸಲಾಗಿದೆ.

– ಪ್ರಕಾಶ್ ಉಪ ನಿರ್ದೇಶಕರು ತೋಟಗಾರಿಕಾ ಇಲಾಖೆ ಶಿವಮೊಗ್ಗ  

––––––––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT