‘ಎಷ್ಟು ಆಹ್ಲಾದಕರ ಹಾಗೂ ಸುಮಧುರವಾಗಿದೆ. ನಾವು ಮೊದಲು ಮನುಷ್ಯರು. ಬಾಕಿದ್ದೆಲ್ಲ ಕಾಲ್ಪನಿಕ. ಒಬ್ಬರು ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಇನ್ನೊಬ್ಬರು ಮೈತೇಯಿ ಸಮುದಾಯಕ್ಕೆ ಸೇರಿದವರು. ಇದು ವೈವಿಧ್ಯ ಹಾಗೂ ಪ್ರೀತಿಯ ಸೌಂದರ್ಯ’ ಎಂದು ಖ್ಯಾತ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರು ಆ. 6ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಪುರುಷ ಹಾಗೂ ಮಹಿಳೆಯೊಬ್ಬರು ಹಿಂದಿ ಚಿತ್ರಗೀತೆಯೊಂದನ್ನು ಹಾಡಿರುವ ವಿಡಿಯೊ ಇದಾಗಿದ್ದು, ಪ್ರಶಾಂತ್ ಅವರು ಈ ವಿಡಿಯೊ ಜತೆಗೆ ಮೇಲಿನ ಬರಹವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೊವನ್ನು 3.9 ಲಕ್ಷ ಜನರು ವೀಕ್ಷಿಸಿದ್ದರು ಹಾಗೂ ವಿಡಿಯೊಕ್ಕೆ 11 ಸಾವಿರ ಲೈಕ್ಸ್ ದೊರೆತಿತ್ತು. ಆದರೆ, ಇದು ಸುಳ್ಳು ಸುದ್ದಿ.
ಈ ವಿಡಿಯೊ ಮೊದಲ ಬಾರಿಗೆ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಿದ್ದು ಮೇ 25ರಂದು. ಇದೇ ವಿಡಿಯೊ ಟ್ವಿಟರ್‌ನಲ್ಲೂ ಇದ್ದು, ಇದನ್ನು ಶೆಕಿನಾ ಮುಖಿಯಾ ಎಂಬವರು ಅಪ್‌ಲೋಡ್ ಮಾಡಿದ್ದಾರೆ. ‘ನಾನು ಹಾಗೂ ನನ್ನ ಅಪ್ಪ ಈ ಸುಂದರ ಹಾಡನ್ನು ಹಾಡಲು ಯತ್ನಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಪ್ರಶಾಂತ್ ಭೂಷಣ್ ಅವರ ಪೋಸ್ಟ್ ಅನ್ನು ತಮ್ಮ ಪೋಸ್ಟ್‌ನೊಂದಿಗೆ ಲಗತ್ತಿಸಿ, ಶೆಕಿನಾ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ. ‘ನಮಗೂ ಮಣಿಪುರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ. ‘ನಾವು ಉತ್ತರಾಖಂಡದವರು’ ಎಂದು ಶೆಕಿನಾ ಅವರ ತಂದೆ ವಿಕಾಸ್ ಮುಖಿಯಾ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಈ ವಿಡಿಯೊದಲ್ಲಿ ಇರುವವರು ಮಣಿಪುರದವರು ಅಲ್ಲ. ಬದಲಿಗೆ ಉತ್ತರಾಖಂಡದ ತಂದೆ–ಮಗಳ ಜೋಡಿ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.