‘ಅಂಬಾನಿ ಬರ್ತಡೇ ಆಫರ್. ಜಿಯೊ ಕಂಪನಿಯು ಭಾರತದ ಎಲ್ಲಾ ಬಳಕೆದಾರರಿಗೆ ₹239 ಮೌಲ್ಯದ 28 ದಿನಗಳ ಅವಧಿಯ ರೀಚಾರ್ಜ್ ಅನ್ನು ಉಚಿತವಾಗಿ ನೀಡುತ್ತಿದೆ. ತಮ್ಮ ಮಾಲೀಕರಾದ ಮುಕೇಶ್ ಅಂಬಾನಿ ಅವರ ಜನ್ಮದಿನದ ಅಂಗವಾಗಿ ಜಿಯೊ ಕಂಪನಿಯು ಇಂತಹ ಕೊಡುಗೆ ನೀಡುತ್ತಿದೆ. ಈ ಸಂದೇಶದ ಕೆಳಗೆ ನೀಡಲಾಗಿರುವ ನೀಲಿ ಬಣ್ಣದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವೂ ಉಚಿತ ರೀಚಾರ್ಜ್ ಪಡೆದುಕೊಳ್ಳಿ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜತೆಗೆ myphoneoffer.com ಎಂಬ ಲಿಂಕ್ ಅನ್ನು ಸಂದೇಶದ ಜತೆಗೆ ಹಂಚಿಕೊಳ್ಳಲಾಗಿದೆ. ಆದರೆ ಇದು ಸುಳ್ಳು ಮತ್ತು ಹಣದೋಚುವ ಉದ್ದೇಶದ ಸಂದೇಶ.
ಇಂತಹ ಕೊಡುಗೆ ಜಾರಿ ಮಾಡಿರುವ ಬಗ್ಗೆ ಜಿಯೊ ಕಂಪನಿಯು ಎಲ್ಲಿಯೂ ಘೋಷಿಸಿಲ್ಲ, ಯಾವುದೇ ಪ್ರಕಟಣೆ ನೀಡಿಲ್ಲ. ಈ ಸಂದೇಶದಲ್ಲಿ ಇರುವ ಲಿಂಕ್ ಅನ್ನು ಕಠಿಣವಾದ ಭದ್ರತಾ ವ್ಯವಸ್ಥೆ ಇರುವ ಕಂಪ್ಯೂಟರ್‌ನ ಬ್ರೌಸರ್‌ನಲ್ಲಿ ತೆರೆಯಲು ಯತ್ನಿಸಲಾಯಿತು. ಆ ಭದ್ರತಾ ವ್ಯವಸ್ಥೆಯು, ‘ಇದೊಂದು ಹಣದೋಚುವ ಉದ್ದೇಶದ ವಂಚಕ ಲಿಂಕ್’ ಎಂದು ಎಚ್ಚರಿಕೆ ನೀಡಿತು. ಭದ್ರತಾ ವ್ಯವಸ್ಥೆ ಇಲ್ಲದ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಈ ಲಿಂಕ್ ಅನ್ನು ತೆರೆದರೆ, ವಂಚಕರು ಹಣ ದೋಚುವ ಅಪಾಯವಿರುತ್ತದೆ. ಈ ಎಚ್ಚರಿಕೆಯನ್ನು ಒಳಗೊಂಡ ಪ್ರಕಟಣೆಯನ್ನು ಈಚೆಗೆ ರಾಯಚೂರು ಸೈಬರ್ ಪೊಲೀಸರು ಹೊರಡಿಸಿದ್ದರು. ಹೀಗಾಗಿ ಇಂತಹ ಸಂದೇಶದೊಂದಿಗೆ ಬರುವ ಲಿಂಕ್ ಅನ್ನು ಒತ್ತದೇ ಇರುವುದು ಉತ್ತಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.