ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸು-ಚಿರತೆಯ ವಾತ್ಸಲ್ಯಮಯ ಭೇಟಿಯ ಚಿತ್ರ ವೈರಲ್: ಅದರ ಹಿಂದಿನ ಸತ್ಯಾಂಶ ಇಲ್ಲಿದೆ

Last Updated 18 ಮೇ 2022, 8:16 IST
ಅಕ್ಷರ ಗಾತ್ರ

ಚಿರತೆಯೊಂದು ಹಸುವಿನಲ್ಲಿ ತಾಯಿಯ ಪ್ರೀತಿಯನ್ನು ಕಂಡು ಪ್ರತಿ ದಿನವೂ ಅದರ ಭೇಟಿಗೆ ಬರುತ್ತಿತ್ತು ಎಂಬ ಉಲ್ಲೇಖದೊಂದಿಗೆ ಹಸು ಮತ್ತು ಚಿರತೆಗಳು ಜೊತೆಯಾಗಿರುವ ಚಿತ್ರಗಳು ಇತ್ತೀಚೆಗೆ ಫೇಸ್‌ಬುಕ್, ಟ್ವಿಟರ್ ಮತ್ತಿತರ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವರು ಇದು ಅಸ್ಸಾಂನಲ್ಲಿ ಎಂದರೆ, ಮತ್ತೆ ಕೆಲವರು ಬ್ರೆಜಿಲ್‌ನಲ್ಲಿ ಅಂತೆಲ್ಲ ಬರೆದುಕೊಂಡಿದ್ದರು. ಇದಕ್ಕೆ ನೂರಾರು ಜನರು ಮೆಚ್ಚುಗೆ ಸೂಸಿದ್ದು, ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ಕೆಲವು ಲಿಂಕ್‌ಗಳು ಈ ಕೆಳಗಿವೆ.

ಮತ್ತೊಂದು ಪೋಸ್ಟ್‌ನಲ್ಲಿ ಚಿತ್ರಗಳಿಗೆ ರೋಹಿತ್ ವ್ಯಾಸ್ ಅವರಿಗೆ ಕ್ರೆಡಿಟ್ ನೀಡಲಾಗಿದೆ.

ಇನ್ನೊಂದು ಲಿಂಕ್ ಇಲ್ಲಿದೆ:

ಇದರ ಹಿಂದಿರುವ ಸತ್ಯಾಂಶವೇನು ಎಂಬ ಕುರಿತು ಪ್ರಜಾವಾಣಿ ಸಮಗ್ರವಾಗಿ ಫ್ಯಾಕ್ಟ್‌ಚೆಕ್ ನಡೆಸಿತು.

ಏನಿದು ಕ್ಲೇಮ್?

ಫೇಸ್‌ಬುಕ್ ಜಾಲತಾಣದಲ್ಲಿ ಬಳಕೆದಾರರೊಬ್ಬರ ಪೋಸ್ಟ್ ಹೀಗಿದೆ: "ಪ್ರತಿದಿನ ನಾಯಿಗಳ ಬೊಗಳುವಿಕೆ ಕೇಳಿ ಬಂದ ಹಸುವಿನ ಮಾಲೀಕರು ಕ್ಯಾಮೆರಾ ಅಳವಡಿಸಲು ನಿರ್ಧರಿಸಿದ್ದಾರೆ. ಆದ್ದರಿಂದ ಅವರು ಈ ಅದ್ಭುತ ದೃಶ್ಯವನ್ನು ನೋಡಿದರು. ಪ್ರತಿದಿನ ಚಿರತೆ ಬರುತ್ತದೆ ಮತ್ತು ಹಸು ಅವನನ್ನು ಪ್ರೀತಿಸುತ್ತದೆ, ನೆಕ್ಕುತ್ತದೆ. ಹಸುವಿನ ಹಳೆಯ ಮಾಲೀಕರಿಂದ ತಿಳಿದುಕೊಂಡಾಗ, ಚಿರತೆಯ ತಾಯಿ ಸತ್ತಾಗ ಈ ಚಿರತೆ ಕೇವಲ ಇಪ್ಪತ್ತು ದಿನವಾಗಿತ್ತು ಎಂದು ಹೇಳಿದರು. ಅಂದಿನಿಂದ ಹಸುವು ಅವನಿಗೆ ತನ್ನ ಹಾಲನ್ನು ತಿನ್ನಿಸಿದೆ ಮತ್ತು ಚಿರತೆ ಹಸುವನ್ನು ತನ್ನ ತಾಯಿ ಎಂದು ಭಾವಿಸುತ್ತದೆ, ಆದ್ದರಿಂದ ಚಿರತೆ ತನ್ನ ತಾಯಿಯ ಮೇಲೆ ಪ್ರೀತಿಯಿಂದ ಪ್ರತಿದಿನ ಹಸುವನ್ನು ಭೇಟಿ ಮಾಡಲು ಬರುತ್ತದೆ."

ಈ ಪೋಸ್ಟ್‌ನ ಒಂದು ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಎಂಜಿನ್ ಮೂಲಕ ಜಾಲಾಡಿದಾಗ, ಇದಕ್ಕೆ ಸಂಬಂಧಿಸಿದಂತೆ ಅನೇಕ ಪೋಸ್ಟ್‌ಗಳು ವೆಬ್ ಮಾಧ್ಯಮಗಳಲ್ಲಿರುವುದು ಕಂಡುಬಂದವು. ಸರ್ಚ್ ಮಾಡುವಾಗ ಗೂಗಲ್ ತಾನಾಗಿಯೇ ಇದಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕವಾಗಿ mordida de onça pintada ಎಂಬ ಕೀವರ್ಡ್ ಅನ್ನು ಸೇರಿಸಿತ್ತು. ಅದನ್ನು ಅನುಸರಿಸಿದಾಗ, ಪೋರ್ಚುಗೀಸ್ ಭಾಷೆಯ ಜಾಲ ತಾಣವೊಂದರಲ್ಲಿ ಇದೇ ಚಿತ್ರವು ಬಳಕೆಯಾಗಿರುವುದು ಗಮನಕ್ಕೆ ಬಂತು. ಅದರ ಲಿಂಕ್ ಇಲ್ಲಿದೆ.

ಇದು 2017ರಲ್ಲಿ ಪೋಸ್ಟ್ ಮಾಡಿದ ಲೇಖನ. ಅದನ್ನು ಗೂಗಲ್ ಟ್ರಾನ್ಸ್‌ಲೇಟ್ ಟೂಲ್ ಬಳಸಿ ಇಂಗ್ಲಿಷಿಗೆ ಭಾಷಾಂತರಿಸಿದಾಗ, ಇದು ಬ್ರೆಜಿಲ್‌ನ ಬಹಿಯಾ ಎಂಬಲ್ಲಿನ ಚಿತ್ರವೆಂದು ಪ್ರಕಟವಾಗಿತ್ತು. ಈ ಕುರಿತಾಗಿ ಮತ್ತೊಂದು ಪೋರ್ಚುಗೀಸ್ ಭಾಷೆಯ ವೆಬ್ ತಾಣವೊಂದರಲ್ಲಿ (ಲಿಂಕ್ ಇಲ್ಲಿದೆ) ನೋಡಿದಾಗ, ಅದು ಬ್ರೆಜಿಲ್‌ನ ಚಿತ್ರವಲ್ಲ. ಬದಲಾಗಿ ಗುಜರಾತ್‌ನ ವಡೋದರಾ ಜಿಲ್ಲೆಯ ಅಂಟೋಲಿ ಎಂಬ ಗ್ರಾಮದಲ್ಲಿ ಕಂಡುಬಂದ ಚಿತ್ರವೆಂಬ ಮಾಹಿತಿ ಸಿಕ್ಕಿತು.

ಜೊತೆಗೆ, ಆನ್‌ಫಾರೆಸ್ಟ್ ಡಾಟ್ ಕಾಂ ಎಂಬ ತಾಣದಲ್ಲಿ ಈ ವಿಷಯದ ಕುರಿತು ಪೂರ್ಣ ಮಾಹಿತಿ ದೊರೆಯಿತು. ಅಷ್ಟೇ ಅಲ್ಲದೆ, ಹೆಚ್ಚು ಸ್ಪಷ್ಟವಾದ ಚಿತ್ರಗಳು ಇಲ್ಲಿದ್ದವು. (ಅದರ ಲಿಂಕ್ ಇಲ್ಲಿದೆ). ಮತ್ತು ಇದು ಗುಜರಾತ್‌ನ ವಡೋದರಾದ ಘಟನೆಗೆ ಸಂಬಂಧಿಸಿದ್ದು ಎಂಬುದರ ಕುರಿತು ಮಾಹಿತಿ ದೊರೆಯಿತು.

ಈ ವಿಷಯದಲ್ಲಿ ಸೂಕ್ತ ಕೀವರ್ಡ್‌ಗಳ ಮೂಲಕ ಹುಡುಕಾಡಿದಾಗ, 2002ರಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಪ್ರಕಟಿಸಿದ ಮಾಹಿತಿಯು ದೊರೆಯಿತು. ಇದರ ಲಿಂಕ್ ಇಲ್ಲಿದೆ. ಆದರೆ ಇದರಲ್ಲಿ ಚಿತ್ರ ಇರಲಿಲ್ಲ. ಮತ್ತಷ್ಟು ಶೋಧಿಸಿದಾಗ, ಅನೂಹ್ಯವಾದ ಕ್ರೂರ ಪ್ರಾಣಿ- ಸಾಧು ಪ್ರಾಣಿ ಸಂಬಂಧದ ವಿಷಯ ಬೆಳಕಿಗೆ ಬಂದಿದೆ.

ಸತ್ಯಾಂಶವೇನು?
ವಿಶೇಷವೆಂದರೆ, ಸಾಕಷ್ಟು ಶೇರ್ ಆಗಿರುವ ಈ ಚಿತ್ರ ತಿರುಚಿದ್ದಲ್ಲ. ಆದರೆ, ಎಲ್ಲಿ ಎಂಬುದು ಮತ್ತು ಯಾವಾಗ ಎಂಬುದೇ ಸರಿಯಾಗಿ ವರದಿಯಾಗಿಲ್ಲ. ಪ್ರಜಾವಾಣಿಯ ಫ್ಯಾಕ್ಟ್‌ಚೆಕ್ ಅನುಸಾರ, ಇದು 2002ರಲ್ಲಿ ಸಂಭವಿಸಿದ ನಿಜ ಘಟನೆ. ಗುಜರಾತ್‌ನ ವಡೋದರಾದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಆಂಟೋಲಿ ಎಂಬಲ್ಲಿನ ಜಂಬುಘೋಡಾ ವನ್ಯಜೀವಿ ಧಾಮದಲ್ಲಿ ಪರಿಸರಪ್ರೇಮಿ ಮತ್ತು ರೇಂಜರ್ ಆಗಿ ನಾಮನಿರ್ದೇಶನಗೊಂಡಿದ್ದ ಮನೋಜ್ ಠಾಕರ್ ಹಾಗೂ ಅರಣ್ಯಾಧಿಕಾರಿ (ರೇಂಜರ್) ರೋಹಿತ್ ವ್ಯಾಸ್ ಅವರು ಸೆರೆಹಿಡಿದ ಚಿತ್ರಗಳಿವು.

ಕೆಲವು ವರ್ಷಗಳ ಹಿಂದೆ ಈ ಚಿತ್ರವು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದಾಗ ಈ ಕುರಿತು ಝೀ ನ್ಯೂಸ್ ತಂಡವೂ ಕೂಡ ರಾತೋರಾತ್ರಿ ಕ್ಯಾಮೆರಾ ಕಾರ್ಯಾಚರಣೆ ನಡೆಸಿ, ಸತ್ಯಾಂಶವನ್ನು ಬಯಲಿಗೆಳೆದಿದೆ. ಇದು ಥರ್ಡ್ ಪಾರ್ಟಿ ಯೂಟ್ಯೂಬ್ ಚಾನೆಲ್‌ನಲ್ಲಿ ಇಲ್ಲಿ ಪ್ರಸಾರವಾಗಿದೆ.

ಇದಲ್ಲದೆ, ಟೈಮ್ಸ್ ಬಳಗದ ಗುಜರಾತಿ ಪೋರ್ಟಲ್ 'ಐಆ್ಯಮ್ ಗುಜರಾತ್'ನಲ್ಲಿ 2020ರಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ (ಲಿಂಕ್ ಇಲ್ಲಿದೆ)

ಇದಲ್ಲದೆ, ಮನೋಜ್ ಠಾಕರ್ ಅವರು ಗುಜರಾತ್‌ನ ಸಸ್ತನಿಗಳ ಕುರಿತಾಗಿ ಬರೆದಿರುವ ಪುಸ್ತಕ 'Mammals of Gujarat'ನ 84ನೇ ಪುಟದಲ್ಲಿ ಈ ವಿಷಯ ದಾಖಲಾಗಿದೆ.

ನಿಜ ವಿಷಯವೇನು?
2002ರ ಜೂನ್ ಆಸುಪಾಸಿನಲ್ಲಿ ಹೆಣ್ಣು ಚಿರತೆಯೊಂದು ರಾತ್ರಿ ವೇಳೆ ದಟ್ಟವಾಗಿದ್ದ ಕಬ್ಬಿನ ಗದ್ದೆಗೆ ಬಂದು ಅಲ್ಲಿದ್ದ ಹಂದಿ, ಇಲಿ, ಜಿಂಕೆ, ನಾಯಿ, ಹಕ್ಕಿಗಳು, ಮೇಕೆ ಮುಂತಾದವುಗಳನ್ನು ತಿನ್ನುತ್ತಿತ್ತು. ಗ್ರಾಮಸ್ಥರ ಆತಂಕ ಹೆಚ್ಚಾಯಿತು. ಈ ಕುರಿತು ಗಾಂಧಿನಗರದಲ್ಲಿದ್ದ ಅರಣ್ಯ ಸಚಿವರಿಗೂ ದೂರು ಹೋಯಿತು. ಅಂದಿನ ಅರಣ್ಯ ಸಚಿವ ದೌಲತ್ ಸಿಂಗ್ ದೇಸಾಯಿ ಅವರು ಮನೋಜ್ ಠಾಕರ್ ಅವರಿಗೆ ಈ ಕುರಿತು ಪರಿಶೀಲಿಸುವಂತೆ ಸೂಚಿಸಿದರು. ನಂತರ ಚಿರತೆಯನ್ನು ಸೆರೆಹಿಡಿಯಲು ನಿರ್ಧರಿಸಿ ಕಾರ್ಯತಂತ್ರ ರೂಪಿಸಲಾಯಿತು. ಅದಕ್ಕೆ ಆಹಾರದೊಂದಿಗೆ ಬೋನು ಇರಿಸಲಾಯಿತು. ಇದರ ಫೋಟೋ ಹಾಗೂ ವಿಡಿಯೊ ದಾಖಲಾಗುವಂತೆ ವಡೋದರಾದ ಅರಣ್ಯಪ್ರೇಮಿ, ವನ್ಯಜೀವಿ ಇಲಾಖೆಯ ಗೌರವ ವಾರ್ಡನ್ ಆಗಿದ್ದ ಮನೋಜ್ ಠಾಕರ್ ಅವರು ನೋಡಿಕೊಂಡರು. ಸ್ಥಳೀಯ ರೇಂಜ್ ಫಾರೆಸ್ಟ್ ಅಧಿಕಾರಿ, ಅರಣ್ಯಾಧಿಕಾರಿ ರೋಹಿತ್ ವ್ಯಾಸ್, ಮನೋಜ್ ಠಾಕರ್ ಮತ್ತು ವಡೋದರದ ಇತರ ಪರಿಸರಪ್ರಿಯರು ಹಲವಾರು ರಾತ್ರಿಗಳನ್ನು ಅದೇ ಸ್ಥಳದಲ್ಲಿ ಕಳೆದು, ಚಿರತೆಯನ್ನು ಹಿಡಿದು (20 ಸೆಪ್ಟೆಂಬರ್ 2002ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ) ಸಮೀಪದ ಅರಣ್ಯದಲ್ಲಿ ಬಿಟ್ಟರು.

ಗ್ರಾಮಸ್ಥರು ನಿಟ್ಟುಸಿರುಬಿಟ್ಟರಾದರೂ, ಹೊಸ ತಲೆನೋವು ಪ್ರಾರಂಭವಾಯಿತು. ಒಂದನೆಯದು ಈ ಚಿರತೆ ಇರುವಾಗ ಕರಡಿಗಳಾಗಲೀ, ಬೇರೆ ಪ್ರಾಣಿಗಳಾಗಲೀ ಕಬ್ಬಿನ ತೋಟಕ್ಕೆ ಬಂದು ಹಾನಿ ಮಾಡುತ್ತಿರಲಿಲ್ಲ. ಸುಮಾರು ಒಂದು ತಿಂಗಳ ಬಳಿಕ, ಗ್ರಾಮಸ್ಥರೊಬ್ಬರು ಪ್ರತಿ ರಾತ್ರಿ ಚಿರತೆಯೊಂದು ಬರುತ್ತಿರುವುದನ್ನು ಕಂಡರು. ಅದು ತಾವು ಬಯಲಿನಲ್ಲಿ ಕಟ್ಟಿದ್ದ ಹಸುವಿನ ಬಳಿ ಬರುತ್ತಿತ್ತು. ಹಸು-ಚಿರತೆಗಳು ಪರಸ್ಪರ ಮುದ್ದಾಡುತ್ತಾ, ಆಟವಾಡುತ್ತಾ ಕಳೆಯುತ್ತಿದ್ದವು. ಆದರೆ ಸಣ್ಣ ಸದ್ದಾದರೂ ಚಿರತೆ ಓಡಿ ಹೋಗಿ, ಸ್ವಲ್ಪ ಹೊತ್ತಿನ ಬಳಿಕ ಮರಳಿ ಹಸುವಿನ ಬಳಿಗೆ ಬರುತ್ತಿತ್ತು.

ಚಿರತೆ-ಹಸುವಿನ ಸ್ನೇಹ ವಾತ್ಸಲ್ಯದ ಕುರಿತಾದ ಈ ವಿಷಯವನ್ನು ಯಾರೂ ನಂಬಲಿಲ್ಲ. ಸಮೀಪ ಬೇರೆ ಹಸು, ಎತ್ತುಗಳಿದ್ದರೂ ಕೂಡ ಅವುಗಳಿಗೆ ಚಿರತೆ ಏನೂ ಮಾಡುತ್ತಿರಲಿಲ್ಲ. ಈ ವಿಷಯ ನಿಧಾನವಾಗಿ ಸುತ್ತಮುತ್ತ ಹರಡಿತು. ಪಕ್ಕದ ಅಟ್ಟಳಿಗೆ ಮನೆಯಲ್ಲಿ ಕುಳಿತು ಈ ವಿಶೇಷ ಸನ್ನಿವೇಶ ನೋಡಲೆಂದೇ ಜನರು ಬರತೊಡಗಿದರು. ಪತ್ರಿಕೆಗಳಲ್ಲಿಯೂ ಇದು ಸುದ್ದಿಯಾಯಿತು. ಝೀ ನ್ಯೂಸ್ ತನ್ನ ತಂಡವನ್ನು ಕಳುಹಿಸಿ ಸುದ್ದಿ ಮಾಡಿತು.

ಚಿರತೆಯು ರಾತ್ರಿ ಸುಮಾರು 9.30ರಿಂದ 11 ಗಂಟೆಯ ನಡುವೆ ಬರುತ್ತಿತ್ತು. ಅತ್ತಿತ್ತ ನೋಡಿಕೊಂಡು ಕಳ್ಳ ಹೆಜ್ಜೆಯಿಡುತ್ತಾ ಹಸುವಿನ ಬಳಿ ಬರುತ್ತಿದ್ದರೆ, ಹಸುವು ಇದರ ಆಗಮನದ ಸದ್ದನ್ನು ಕಿವಿಯಗಲಿಸಿಕೊಂಡು ಸುಳಿವು ಪಡೆಯುತ್ತಿತ್ತು. ಹಸುವು ತನ್ನದೇ ಮಗುವೆಂಬಂತೆ ಚಿರತೆಯನ್ನು ನೆಕ್ಕುತ್ತಾ, ಮುದ್ದಿಸುತ್ತಾ, ಅದಕ್ಕೆ ತನ್ನ ದೇಹವನ್ನು ಪ್ರೀತಿಯಿಂದ ಒರೆಸುತ್ತಾ, ಆಟವಾಡುತ್ತಿತ್ತು. ಕೆಲವು ಸಮಯದ ಬಳಿಕ ಚಿರತೆ ಬರುವುದು ನಿಂತುಹೋಯಿತು ಎಂದು ಠಾಕರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಆದರೆ, ಚಿರತೆಯು ಹಸುವಿನ ಬಳಿಗೆ ಯಾಕಾಗಿ ಬರುತ್ತಿತ್ತು ಎಂಬ ಬಗ್ಗೆ ಎಲ್ಲೂ ಖಚಿತ ಮಾಹಿತಿ ದೊರೆಯಲಿಲ್ಲ. ಕೆಲವು ಪೋಸ್ಟ್‌ಗಳಲ್ಲಿರುವಂತೆ, ತಾಯಿಯನ್ನು ಕಳೆದುಕೊಂಡಿದ್ದ ಮರಿಚಿರತೆಗೆ ಹಸುವು ಹಾಲೂಡಿಸಿ ಸಾಕಿರಬಹುದು, ಹೀಗಾಗಿ ಚಿರತೆಯು ಪ್ರತಿದಿನ ತನ್ನ 'ತಾಯಿ'ಯನ್ನು ನೋಡಲು ಬರುತ್ತಿದ್ದಿರಬಹುದು ಎಂಬ ವಾದಕ್ಕೆ ಪುಷ್ಟಿ ನೀಡುವಂತಹ ಯಾವುದೇ ಮಾಹಿತಿಯೂ ಸಿಕ್ಕಿಲ್ಲ.

ಆದರೆ, ವೈರಲ್ ಆಗುತ್ತಿರುವ ಚಿತ್ರಗಳು ನಿಜವಾದದ್ದೇ ಹೊರತು, ತಿದ್ದುಪಡಿ ಮಾಡಲಾದ ಚಿತ್ರಗಳಲ್ಲ ಎಂಬುದು ಖಚಿತವಾಗಿದೆ. ಮತ್ತು ಇದು ಅಸ್ಸಾಂ ಅಥವಾ ಬ್ರೆಜಿಲ್‌ನಲ್ಲಿ ಘಟಿಸಿದ ಸಂಗತಿಯಲ್ಲ, ಬದಲಾಗಿ ನಮ್ಮದೇ ಭಾರತದ ಗುಜರಾತ್‌ನ ವಡೋದರಾ ಸಮೀಪದ ಆಂತೋಲಿ ಗ್ರಾಮದ ದೃಶ್ಯ ಎಂಬುದೂ ದೃಢಪಟ್ಟಿದೆ.

ನಿರ್ಣಯ
ಹಸು ಮತ್ತು ಚಿರತೆಯು ವಾತ್ಸಲ್ಯದಿಂದ ಪರಸ್ಪರ ವಾತ್ಸಲ್ಯದಿಂದ ಆಟವಾಡುತ್ತಿರುವ, ಪ್ರೀತಿ ತೋರುತ್ತಿರುವ ಚಿತ್ರಗಳು ನಿಜವಾದದ್ದು, ಆದರೆ ಅದು ಅಸ್ಸಾಂ ಅಥವಾ ಬ್ರೆಜಿಲ್‌ನದ್ದಲ್ಲ. ಗುಜರಾತ್‌ನ ವಡೋದರಾ ಬಳಿಕ ಅಂತೋಲಿ ಗ್ರಾಮದಲ್ಲಿ 2002ರಲ್ಲಿ ನಡೆದ ಘಟನೆಗಳ ದೃಶ್ಯವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT