ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಬೆ ಹೈಕೋರ್ಟ್‌: ಸುಂದರೇಶನ್ ನೇಮಕಕ್ಕೆ ಕೇಂದ್ರ ಒಪ್ಪಿಗೆ

Published 23 ನವೆಂಬರ್ 2023, 16:35 IST
Last Updated 23 ನವೆಂಬರ್ 2023, 16:35 IST
ಅಕ್ಷರ ಗಾತ್ರ

ನವದೆಹಲಿ: ವಕೀಲ ಸೋಮಶೇಖರ್ ಸುಂದರೇಶನ್ ಅವರನ್ನು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರವು ಗುರುವಾರ ಸಮ್ಮತಿ ನೀಡಿದೆ. ಇವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ 10 ತಿಂಗಳಿಗೂ ಹಿಂದೆ ಮರು ಶಿಫಾರಸು ಮಾಡಿತ್ತು.

ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿ ಇರುವ ಪ್ರಕರಣಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುಂದರೇಶನ್ ಅವರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ ಎಂಬ ಕಾರಣ ನೀಡಿ ಕೇಂದ್ರ ಸರ್ಕಾರವು ಅವರ ಹೆಸರನ್ನು ಈ ಹಿಂದೆ ವಾಪಸ್ ಕಳುಹಿಸಿತ್ತು.

ಸುಂದರೇಶನ್ ಅವರ ಹೆಸರನ್ನು ಕೊಲಿಜಿಯಂ 2022ರ ಫೆಬ್ರುವರಿಯಲ್ಲಿ ಮೊದಲ ಬಾರಿ ಶಿಫಾರಸು ಮಾಡಿತ್ತು. ಆದರೆ 2022ರ ನವೆಂಬರ್‌ನಲ್ಲಿ ಕೇಂದ್ರವು ಇವರ ಹೆಸರನ್ನು ಮರುಪರಿಶೀಲಿಸಬೇಕು ಎಂದು ಹೇಳಿತ್ತು. ಕೊಲಿಜಿಯಂ ಈ ವರ್ಷದ ಜನವರಿಯಲ್ಲಿ ಸುಂದರೇಶನ್ ಅವರ ಹೆಸರನ್ನು ಮತ್ತೆ ಶಿಫಾರಸು ಮಾಡಿತು. ಈಗ ಅವರ ಹೆಸರಿಗೆ ಕೇಂದ್ರ ಒಪ್ಪಿಗೆ ನೀಡಿದೆ.

ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಕೊಲಿಜಿಯಂ ಮರು ಶಿಫಾರಸು ಮಾಡಿದ ಹೆಸರನ್ನು ಕೇಂದ್ರವು ಒಪ್ಪಿಕೊಳ್ಳಲೇಬೇಕು ಎಂಬುದು ನಿಯಮ. ‘ಎಲ್ಲ ಪ್ರಜೆಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಅಭ್ಯರ್ಥಿಯೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರೆ ಅವರು ಸಾಂವಿಧಾನಿಕ ಹುದ್ದೆಯನ್ನು ಹೊಂದಲು ಅನರ್ಹರಾಗುವುದಿಲ್ಲ’ ಎಂದು ಮರು ಶಿಫಾರಸು ಮಾಡುವ ಸಂದರ್ಭದಲ್ಲಿ ಕೊಲಿಜಿಯಂ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT