ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರತಿಕೂಲ ಹವಾಮಾನ | ಬಿಸಿ ಗಾಳಿಗೆ ತತ್ತರಿಸಿದ ಉತ್ತರ ಭಾರತ; 19 ಸಾವು

ಬಿಸಿಲ ಆಘಾತದಿಂದ ಹಲವರ ಸಾವು ಶಂಕೆ
Published 31 ಮೇ 2024, 23:30 IST
Last Updated 31 ಮೇ 2024, 23:30 IST
ಅಕ್ಷರ ಗಾತ್ರ

ರೂರ್ಕೆಲಾ/ಕೌಶಾಂಬಿ/ಶಹಜಹಾನ್‌ಪುರ: ಉತ್ತರ ಪ್ರದೇಶ, ಬಿಹಾರ ಹಾಗೂ ಒಡಿಶಾ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಶಾಖಾಘಾತವೇ ಸಾವುಗಳಿಗೆ ಕಾರಣ ಎಂದು ಶಂಕಿಸಲಾಗಿದೆ.

ಒಡಿಶಾದ ರೂರ್ಕೆಲಾ ನಗರದಲ್ಲಿ ಗುರುವಾರ 10 ಜನರು ಹಾಗೂ ಬಿಹಾರದಲ್ಲಿ ನಾಲ್ವರು ಮೃತಪಟ್ಟಿದ್ದು, ಈ ಸಾವುಗಳಿಗೆ ಶಾಖಾಘಾತವೇ ಕಾರಣ ಎಂಬುದಾಗಿ ಶಂಕಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೋರಾಗಿ ಬೀಸಿದ ಗಾಳಿ ಪರಿಣಾಮ ಶೆಡ್‌ ಕುಸಿದು ಉತ್ತರ ಪ್ರದೇಶದಲ್ಲಿ ಶುಕ್ರವಾರ ಐವರು ಮೃತಪಟ್ಟಿದ್ಧಾರೆ.

ತಾತ್ಕಾಲಿಕ ಶೆಡ್‌ ಕುಸಿದ ಪರಿಣಾಮ ಶಹಜಹಾನ್‌ಪುರದಲ್ಲಿ ಮೂವರು ಮೃತಪಟ್ಟಿದ್ಧಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕಕುಮಾರ್‌ ಮೀನಾ ತಿಳಿಸಿದ್ದಾರೆ.

ಕೌಶಾಂಬಿಯಲ್ಲಿ ವೃದ್ಧೆ ಸೇರಿದಂತೆ ಇಬ್ಬರು ಶಾಖಾಘಾತದಿಂದ ಮೃತಪಟ್ಟಿದ್ದಾರೆ. 

‘ಈ ಇಬ್ಬರು ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ, ಬಿಸಿಲ ಆಘಾತದಿಂದ ಅಸ್ವಸ್ಥಗೊಂಡಿದ್ದರು. ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಅರ್ಧ ಗಂಟೆಯಲ್ಲಿಯೇ ಅವರು ಮೃತಪಟ್ಟರು. ಬಿಸಿಲ ಆಘಾತದಿಂದ ಕಂಡುಬಂದ ತೊಂದರೆಗಳೇ ಅವರ ಸಾವಿಗೆ ಕಾರಣವಾಗಿರಬಹುದು’ ಎಂದು ಕೌಶಾಂಬಿಯ ಮುಖ್ಯ ವೈದ್ಯಾಧಿಕಾರಿ ಸುಷ್ಪೇಂದ್ರಕುಮಾರ್ ಶುಕ್ರವಾರ ತಿಳಿಸಿದ್ದಾರೆ.

‘ಗುರುವಾರ ಮಧ್ಯಾಹ್ನ 2 ಗಂಟೆ ನಂತರ ಆರು ತಾಸುಗಳ ಅವಧಿಯಲ್ಲಿ 10 ಜನರು ಮೃತಪಟ್ಟಿದ್ದಾರೆ’ ಎಂದು ರೂರ್ಕೆಲಾ ಸರ್ಕಾರಿ ಆಸ್ಪತ್ರೆ ಉಸ್ತುವಾರಿ ನಿರ್ದೇಶಕಿ ಡಾ.ಸುಧಾರಾಣಿ ಪ್ರಧಾನ್‌ ತಿಳಿಸಿದ್ದಾರೆ.

‘ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆಗಾಗಲೇ 8 ಜನರು ಮೃತಪಟ್ಟಿದ್ದರು. ಉಳಿದವರು ಚಿಕಿತ್ಸೆ ನೀಡುವ ಸಮಯದಲ್ಲಿ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

‘ಮೃತಪಟ್ಟವರ ದೇಹದ ಉಷ್ಣಾಂಶ 103–104 ಫ್ಯಾರೆನ್‌ಹೀಟ್‌ನಷ್ಟಿತ್ತು (39.4–40 ಡಿಗ್ರಿ ಸೆಲ್ಸಿಯಸ್‌). ಇಷ್ಟೊಂದು ಅಧಿಕ ತಾಪಮಾನವೇ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಆಸ್ಪತ್ರೆಗೆ ಬರುವ ಮೊದಲೇ ಮೃತಪಟ್ಟಿದ್ದರಿಂದ, ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಗೊತ್ತಾಗಲಿದೆ’ ಎಂದೂ ಡಾ.ಪ್ರಧಾನ್‌ ಹೇಳಿದ್ದಾರೆ.

* ಬಿಸಿಗಾಳಿ ಪರಿಣಾಮ ಬಿಹಾರದಲ್ಲಿ ಜೂನ್‌ 8ರವರೆಗೆ ಎಲ್ಲ ಶಾಲೆಗಳು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ
* ಒಡಿಶಾದ 19 ಸ್ಥಳಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ದಾಖಲು
* ಉತ್ತರ ಪ್ರದೇಶದ ಲಖಿಂಪುರ ಖೀರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಜೋರಾಗಿ ಗಾಳಿ ಬೀಸಿದ ಪರಿಣಾಮ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಇದರಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿಯೂ ಜನರು ಪರದಾಡಿದರು

23 ಚುನಾವಣಾ ಸಿಬ್ಬಂದಿ ಸಾವು

ಪಟ್ನಾ(ಬಿಹಾರ)/ಮಿರ್ಜಾಪುರ(ಉತ್ತರ ಪ್ರದೇಶ): ಬಿಸಿಲ ಆಘಾತ ಮತ್ತು ಆರೋಗ್ಯ ಏರುಪೇರಾಗಿ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ 23 ಮಂದಿ ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬಿಹಾರದಲ್ಲಿ ಬಿಸಿಲಿನ ಆಘಾತದಿಂದಾಗಿ ಕಳೆದ 24 ಗಂಟೆಗಳಲ್ಲಿ 10 ಜನ ಚುನಾವಣಾ ಸಿಬ್ಬಂದಿ ಮೃತಪಟ್ಟಿದ್ದರೆ ಆರೋಗ್ಯ ಸಮಸ್ಯೆಗಳಿಂದಾಗಿ ಉತ್ತರ ಪ್ರದೇಶದ ಮಿರ್ಜಾಪುರದ ಆಸ್ಪತ್ರೆಯೊಂದರಲ್ಲಿ 13 ಮಂದಿ ಮೃತಪಟ್ಟಿದ್ಧಾರೆ. ಈ ಕುರಿತು ಪ್ರಕಟಣೆ ನೀಡಿರುವ ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ಭೋಜಪುರ ಜಿಲ್ಲೆಯಲ್ಲಿ ಐವರು ರೋಸ್ತಾಸ್‌ನಲ್ಲಿ ಮೂವರು ಕೈಮೂರ್‌ ಮತ್ತು ಔರಂಗಾಬಾದ್‌ನಲ್ಲಿ ತಲಾ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

ಬಿಹಾರದ 8 ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದೆ ‘ಆಸ್ಪತ್ರೆಗೆ ದಾಖಲಾಗಿದ್ದ 13 ಮಂದಿ ವಿಪರೀತ ಜ್ವರ ಹಾಗೂ ಅಧಿಕ ರಕ್ತದೊತ್ತಡ ಪರಿಣಾಮ ಮೃತಪಟ್ಟಿದ್ದಾರೆ’ ಎಂದು ಮಿರ್ಜಾಪುರದ ಮಾ ವಿಂಧ್ಯವಾಸಿನಿ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ರಾಜ ಬಹದೂರ್ ಕಮಲ್‌ ಹೇಳಿದ್ದಾರೆ.

‘ಆಸ್ಪತ್ರೆಗೆ ಕರೆತಂದ ವೇಳೆಯೇ ಇವರು ವಿಪರೀತ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು’ ಎಂದೂ ಅವರು ತಿಳಿಸಿದ್ದಾರೆ. ಇವರನ್ನು ಮಿರ್ಜಾಪುರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ವಿಪಕ್ಷಗಳ ಒತ್ತಡಕ್ಕೆ ಮಣಿದು ಶಾಲೆಗಳಿಗೆ ಘೋಷಿಸಲಾಗಿದೆ. ಆದರೆ ಶಿಕ್ಷಕರಿಗೆ ಶಾಲೆಗಳಿಗೆ ಬರುವಂತೆ ಸೂಚಿಸಿರುವುದು ಯಾಕೆ? ಮಕ್ಕಳೇ ಇಲ್ಲದಿರುವಾಗ ಅವರು ಏನು ಮಾಡುತ್ತಾರೆ?
–ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ ಬಿಹಾರ

ಸುಪ್ರೀಂ ಕೋರ್ಟ್ ಆವರಣದಲ್ಲಿ ನೀರಿನ ವ್ಯವಸ್ಥೆ 

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಹೆಚ್ಚುತ್ತಿರುವ ಕಾರಣ ಸುಪ್ರೀಂ ಕೋರ್ಟ್ ಆವರಣದಲ್ಲಿ ಪಕ್ಷಿಗಳು ಹಾಗೂ ಚಿಕ್ಕ ಪ್ರಾಣಿಗಳಿಗೆ ನೀರು ಮತ್ತು ಧಾನ್ಯಗಳನ್ನು ಇಡಲಾಗಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಸೂಚನೆಯಂತೆ ನ್ಯಾಯಾಲಯದ ಆವರಣದಲ್ಲಿ ನೀರು ಮತ್ತು ಆಹಾರ ಧಾನ್ಯಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯಲ್ಲಿ ಈ ವರ್ಷ ಮೇ ತಿಂಗಳಲ್ಲಿ ಕೇವಲ ಎರಡು ದಿನಗಳಷ್ಟೆ ಮಳೆಯಾಗಿದೆ. ಈ ರೀತಿ ಆಗಿರುವುದು ಹತ್ತು ವರ್ಷಗಳ ನಂತರ ಇದೇ ಮೊದಲು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT