ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಜಾತಿ ಮೀಸಲು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ

Last Updated 15 ಜನವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಸಂಸ್ಥೆ ಪ್ರವೇಶದಲ್ಲಿ ಶೇ 10ರಷ್ಟು ಮೀಸಲು ನೀಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು. ಇದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಹೇಳಿದೆ.

ಸಚಿವಾಲಯ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ನ (ಎಐಸಿಟಿಇ) ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಮೇಲ್ಜಾತಿಗಳ ಜನರಿಗೆ ಮೀಸಲಾತಿ ನೀಡುವುದರಿಂದ ಈಗಾಗಲೇ ಇರುವ ಮೀಸಲಾತಿ ಮೇಲೆ ಯಾವುದೇ ಪರಿಣಾಮ ಆಗದಂತೆ ಮಾಡುವುದಕ್ಕಾಗಿ ಸೀಟುಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ದೇಶದಲ್ಲಿ 40 ಸಾವಿರ ಕಾಲೇಜುಗಳು ಮತ್ತು 900 ವಿಶ್ವವಿದ್ಯಾಲಯಗಳಿವೆ. ಈ ಎಲ್ಲ ಸಂಸ್ಥೆಗಳಲ್ಲಿ ಮೇಲ್ಜಾತಿ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

‘ಸೀಟು ಏರಿಕೆಯನ್ನು ಯಾವ ರೀತಿ ಜಾರಿಗೆ ತರಬಹುದು ಎಂಬ ಬಗ್ಗೆ ಯೋಜನೆ ಸಿದ್ಧವಾಗುತ್ತಿದೆ. ಹೆಚ್ಚಳವಾಗಲಿರುವ ಸೀಟುಗಳ ಸಂಖ್ಯೆ ಎಷ್ಟು ಎಂಬುದು ಒಂದು ವಾರದೊಳಗೆ ತಿಳಿಯಲಿದೆ. ಮೀಸಲಾತಿ ಹೇಗೆ ಜಾರಿ ಮಾಡಬೇಕು ಎಂಬ ಕೈಪಿಡಿಯನ್ನೂ ಬಿಡುಗಡೆ ಮಾಡಲಾಗುವುದು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಮಾಹಿತಿ ಪತ್ರದಲ್ಲಿ ಮೀಸಲಾತಿ ಮಾಹಿತಿ ನೀಡಬೇಕು ಮತ್ತು ಮೀಸಲಾತಿ ಜಾರಿಗೆ ಬೇಕಾದ ಮೂಲಸೌಕರ್ಯ ಹೊಂದಿಸಿಕೊಳ್ಳಬೇಕು’ ಎಂದು ಜಾವಡೇಕರ್‌ ಹೇಳಿದ್ದಾರೆ. ಖಾಸಗಿ ವಿಶ್ವವಿದ್ಯಾಲಯಗಳೂ ಮೇಲ್ಜಾತಿ ಮೀಸಲು ಜಾರಿಗೆ ಸಮ್ಮತಿಸಿವೆ ಎಂದು ತಿಳಿಸಿದರು. ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತು ಈಚೆಗೆ ಅನುಮೋದಿಸಿತ್ತು.

7ನೇ ವೇತನ ಆಯೋಗ: ‘ತಾಂತ್ರಿಕ ಸಂಸ್ಥೆ ಬೋಧಕರಿಗೂ ಅನ್ವಯ’

ಏಳನೇ ವೇತನ ಆಯೋಗದ ಶಿಫಾರಸುಗಳು ತಾಂತ್ರಿಕ ಶೈಕ್ಷಣಿಕ ಸಂಸ್ಥೆಯಲ್ಲಿನ ಬೋಧಕರಿಗೂ ಅನ್ವಯವಾಗಬೇಕು ಎಂಬ ಪ್ರಸ್ತಾವಕ್ಕೆ ಮಾನವ ಸಂಪನ್ಮೂಲ ಸಚಿವಾಲಯವು ಮಂಗಳವಾರ ಅನುಮೋದನೆ ನೀಡಿದೆ.

ಸರ್ಕಾರಿ ಮತ್ತು ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶೈಕ್ಷಣಿಕ ಸಿಬ್ಬಂದಿ ಇದರ ಫಲಾನುಭವಿಗಳಾಗಲಿದ್ದು, ಇದಕ್ಕಾಗಿ ₹1,241 ಕೋಟಿಯನ್ನು ಸಚಿವಾಲಯವು ಮಂಜೂರು ಮಾಡಲಿದೆ.

‘ರಾಜ್ಯ ಸರ್ಕಾರದ ಅನುದಾನದಡಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳ 29,264 ಶಿಕ್ಷಕರು ಮತ್ತು ಇತರೆ ಶೈಕ್ಷಣಿಕ ಸಿಬ್ಬಂದಿ ನೇರವಾಗಿ ಇದರ ಪ್ರಯೋಜನ ಪಡೆಯಲಿದ್ದಾರೆ. ಅಲ್ಲದೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಡಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ತಾಂತ್ರಿಕ ಕಾಲೇಜು ಅಥವಾ ಸಂಸ್ಥೆಗಳ 3.5 ಲಕ್ಷ ಶಿಕ್ಷಕರು ಕೂಡ ಇದರ ಫಲಾನುಭವಿಗಳಾಗಲಿದ್ದಾರೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್‌ ಹೇಳಿದ್ದಾರೆ.

‘ಸರ್ಕಾರದ ಈ ಕ್ರಮದಿಂದ,ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿರುವ ಪ್ರತಿಭಾವಂತ ಬೋಧಕರನ್ನು ತಾಂತ್ರಿಕ ಶಿಕ್ಷಣ ಸಂಸ್ಥೆಗಳತ್ತ ಆಕರ್ಷಿಸುವುದು ಇದರಿಂದ ಸಾಧ್ಯವಾಗಲಿದೆ’ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT