ಅಗರ್ತಲಾ: ‘ಸೂಕ್ತ ದಾಖಲೆಗಳಲ್ಲಿದೆ ಮೂವರು ಮಹಿಳೆಯರು ಸೇರಿದಂತೆ 12 ಬಾಂಗ್ಲಾದೇಶದ ನಾಗರಿಕರು ತ್ರಿಪುರಾ ಮೂಲಕ ಭಾರತ ಪ್ರವೇಶಿಸಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ಈ 12 ಮಂದಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಭಾನುವಾರ ತಿಳಿಸಿದರು.
‘ಬಾಂಗ್ಲಾದೇಶದ ಪ್ರಜೆಗಳು ತ್ರಿಪುರಾದಲ್ಲಿರುವುದು ಗುಪ್ತಚರ ಮಾಹಿತಿಗಳಿಂದ ತಿಳಿಯಿತು. ಬಿಎಸ್ಎಫ್ ಸಹಕಾರದೊಂದಿಗೆ ಆ ಎಲ್ಲರನ್ನೂ ಶನಿವಾರ ರಾತ್ರಿ ವೇಳೆಗೆ ಬಂಧಿಸಲಾಗಿದೆ. ದಾಖಲೆಗಳಿಲ್ಲದೆಯೇ ಭಾರತವನ್ನು ಪ್ರವೇಶಿಸಿರುವುದಾಗಿ ತನಿಖೆ ವೇಳೆ 12 ಮಂದಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಗಡಿ ಪ್ರದೇಶಗಳಲ್ಲಿ ಪೊಲೀಸರು ಹೆಚ್ಚು ಗಸ್ತು ತಿರುಗುತ್ತಿದ್ದಾರೆ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಗಡಿ ಪ್ರದೇಶಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ. ಅಕ್ರಮವಾಗಿ ಭಾರತದ ಒಳಗೆ ನುಸುಳುವವರನ್ನು ಪತ್ತೆ ಮಾಡುವ ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದರು.