ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಕಲಿ ಎನ್‌ಸಿಸಿ ಶಿಬಿರ: 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

11 ಆರೋಪಿಗಳ ಬಂಧನ | ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
Published 20 ಆಗಸ್ಟ್ 2024, 0:04 IST
Last Updated 20 ಆಗಸ್ಟ್ 2024, 0:04 IST
ಅಕ್ಷರ ಗಾತ್ರ

ಚೆನ್ನೈ: ಕೇಂದ್ರ ಮೀಸಲು ಪೊಲೀಸ್‌ ಪಡೆಯ ಮಾಜಿ ಸಿಬ್ಬಂದಿಯೊಬ್ಬರ ನೆರವು ಪಡೆದು, ಎನ್‌ಸಿಸಿ ಸಂಯೋಜಕ ಎಂದು ಬಿಂಬಿಸಿಕೊಂಡಿದ್ದ ವ್ಯಕ್ತಿಯೊಬ್ಬ ಕೃಷ್ಣಗಿರಿಯ ಖಾಸಗಿ ಶಾಲೆಯಲ್ಲಿ ನಾಲ್ಕು ದಿನಗಳ ‘ನಕಲಿ ಎನ್‌ಸಿಸಿ ಶಿಬಿರ’ ನಡೆಸಿ, 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಲದೆ ಶಿಬಿರದಲ್ಲಿ ಇತರೆ 12 ಬಾಲಕಿಯರನ್ನು ಅನುಚಿತವಾಗಿ ಸ್ಪರ್ಶಿಸುವ ಮೂಲಕ ಅವರನ್ನು ಲೈಂಗಿಕ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದೂ ಆರೋಪಿಸಲಾಗಿದೆ.

ಈ ಸಂಬಂಧ ಪ್ರಮುಖ ಆರೋಪಿ ಶಿವರಾಮನ್‌, ಶಾಲೆಯ ಪ್ರತಿನಿಧಿ ಸ್ಯಾಮ್ಸನ್‌ ವೆಸ್ಲಿ, ಪ್ರಾಚಾರ್ಯ ಸತೀಶ್‌ ಕುಮಾರ್‌, ಇಬ್ಬರು ಶಿಕ್ಷಕರು, ಸಿಆರ್‌ಪಿಎಫ್‌ ಮಾಜಿ ಸಿಬ್ಬಂದಿ ವಿ.ಸುಬ್ರಮಣಿ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಪ್ರಕರಣ:

ಈ ಆರೋಪಿಗಳ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿದ್ದ ಶಿವರಾಮನ್‌ ಅನ್ನು ಸೋಮವಾರ ಬೆಳಿಗ್ಗೆ ಕೊಯಮತ್ತೂರಿನಲ್ಲಿ ಪತ್ತೆ ಹಚ್ಚಿ, ಬಂಧಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

ಕೃಷ್ಣಗಿರಿ ಜಿಲ್ಲೆಯ ಬರ್ಗೂರ್‌ನಲ್ಲಿ ಆಗಸ್ಟ್‌ 5ರಿಂದ ಆಗಸ್ಟ್‌ 9ರ ನಡುವೆ ಈ ಘಟನೆ ನಡೆದಿದೆ. ತಮಿಳು ರಾಷ್ಟ್ರೀಯವಾದಿ ಸಂಘಟನೆ ‘ನಾಮ್‌ ತಮಿಳರ್‌ ಕಚ್ಚಿ’ಯ (ಎನ್‌ಟಿಕೆ) ಪದಾಧಿಕಾರಿಯಾದ ಶಿವರಾಮನ್‌ ಎನ್‌ಸಿಸಿಯ ಭಾಗವಾಗಿದ್ದಾರೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದೇ ಶಾಲೆಯವರು ಎನ್‌ಸಿಸಿ ಶಿಬಿರ ನಡೆಸಲು ಅವರಿಗೆ ಅನುಮತಿ ನೀಡಿದ್ದರು ಎಂದು ಗೊತ್ತಾಗಿದೆ.

17 ಬಾಲಕಿಯರು ಸೇರಿದಂತೆ ಒಟ್ಟು 41 ವಿದ್ಯಾರ್ಥಿಗಳು ಈ ನಕಲಿ ಎನ್‌ಸಿಸಿ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದ ಕೊನೆಯ ದಿನ ಶಿವರಾಮನ್‌, ಎಂಟನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  

ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಶಾಲೆ:

‘ಬಾಲಕಿಯು ನಡೆದ ಘಟನೆಯ ಕುರಿತು ಪ್ರಾಚಾರ್ಯರಿಗೆ ತಿಳಿಸಿದಾಗ, ಅದನ್ನು ಗಂಭೀರವಾಗಿ ಪರಿಗಣಿಸದೆ ಪ್ರಕರಣ ಮುಚ್ಚಿಹಾಕಲು ಆಡಳಿತ ಮಂಡಳಿಯವರು ಯತ್ನಿಸಿದ್ದರು. ಈ ಬಗ್ಗೆ ಬಾಲಕಿಯ ಪೋಷಕರು ಆಗಸ್ಟ್‌ 16ರಂದು ದೂರು ನೀಡಿದ ಕೂಡಲೇ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ತಂಗದೊರೆ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

ಎಸ್‌ಒಪಿ ಪಾಲನೆಯಾಗಿಲ್ಲ:

‘ಶಿಬಿರದಲ್ಲಿ ಬಾಲಕಿಯರು ಪಾಲ್ಗೊಂಡಿದ್ದಾಗ, ರಾತ್ರಿ ವೇಳೆಯಲ್ಲಿ ಅವರೊಂದಿಗೆ ಶಿಕ್ಷಕಿ ಇರಬೇಕು ಎಂಬ ನಿಯಮವನ್ನು ಈ ಶಾಲೆ ಪಾಲನೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎಂ.ಸರಯೂ ಹೇಳಿದ್ದಾರೆ.

‘ಈ ಪ್ರಕರಣ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪ್ರತ್ಯೇಕ ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತ ಬಾಲಕಿಯರು ಮತ್ತು ಅವರ ಪೋಷಕರಿಗೆ ಆಪ್ತ ಸಮಾಲೋಚನೆ ನೀಡಲಾಗತ್ತಿದೆ’ ಎಂದು ಹೇಳಿದ ಅವರು, ಶಿಬಿರ ನಡೆಸುವುದಾಗಿ ಬಂದ ವ್ಯಕ್ತಿಯ ಪೂರ್ವಾಪರ ಪರಿಶೀಲಿಸುವಲ್ಲಿ ಶಾಲೆ ವಿಫಲವಾಗಿದೆ ಎಂದಿದ್ದಾರೆ.

‘ಖಾಸಗಿ ಶಾಲೆಯಲ್ಲಿ ನಡೆದ ಶಿಬಿರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಎನ್‌ಸಿಸಿ ಸ್ಪಷ್ಟಪಡಿಸಿದೆ. 

ಶಿವರಾಮನ್‌ ಮತ್ತು ಸಿಆರ್‌ಪಿಎಫ್‌ನ ಮಾಜಿ ಸಿಬ್ಬಂದಿ ಸೇರಿಕೊಂಡು ಹೊಸೂರು ಬಳಿಯ ಶೂಲಗಿರಿಯ ಎರಡು ಶಾಲೆಗಳಲ್ಲಿ ಇದೇ ರೀತಿ ನಕಲಿ ಎನ್‌ಸಿಸಿ ಶಿಬಿರಗಳನ್ನು ನಡೆಸಿ ವಂಚಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT