ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಕೊಲೆ: ದೇಹದಲ್ಲಿ ಸುಮಾರು 150 ಎಂ.ಜಿಯಷ್ಟು ವೀರ್ಯ ಪತ್ತೆ

Published : 14 ಆಗಸ್ಟ್ 2024, 14:14 IST
Last Updated : 14 ಆಗಸ್ಟ್ 2024, 14:14 IST
ಫಾಲೋ ಮಾಡಿ
Comments

ಕೋಲ್ಕತ್ತ: ‘ಇಲ್ಲಿನ ಸರ್ಕಾರಿ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಯಾದ 31 ವರ್ಷದ ವೈದ್ಯ ವಿದ್ಯಾರ್ಥಿನಿಯ ದೇಹದಲ್ಲಿ ಸುಮಾರು 150 ಎಂ.ಜಿಯಷ್ಟು ವೀರ್ಯ ಪತ್ತೆಯಾಗಿದೆ. ಇದು ಸಾಮೂಹಿಕ ಅತ್ಯಾಚಾರವನ್ನು ಸೂಚಿಸುತ್ತದೆ’ ಎಂದು ವಿದ್ಯಾರ್ಥಿನಿಯ ಪೋಷಕರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

‘ಕತ್ತು ಹಿಸುಕಿ ಮಗಳನ್ನು ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ. ಅಲ್ಲದೆ ಲೈಂಗಿಕ ದೌರ್ಜನ್ಯವೂ ನಡೆದಿದೆ ಎಂಬುದನ್ನು ಅದರಲ್ಲಿ ಉಲ್ಲೇಖಿಸಲಾಗಿದೆ’ ಎಂದು ಅವರು ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

‘ಮಗಳ ದೇಹದಲ್ಲಿ ಹಲವು ಗಾಯದ ಗುರುತುಗಳಿವೆ. ಅವು ಮಗಳ ಮೇಲೆ ನಡೆದಿರುವ ಕ್ರೂರ ಮತ್ತು ಹಿಂಸಾತ್ಮಕ ದಾಳಿಯನ್ನು ಸೂಚಿಸುತ್ತವೆ ಎಂಬುದನ್ನು ಮರಣೋತ್ತರ ವರದಿ ದೃಢಪಡಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ’ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ಕುರಿತ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಕಲ್ಕತ್ತ ಹೈಕೋರ್ಟ್‌ ಮಂಗಳವಾರ ಆದೇಶಿಸಿತ್ತು.

ಪೋಷಕರ ಅರ್ಜಿಯಲ್ಲಿರುವ ಪ್ರಮುಖ ಅಂಶಗಳು:

  • ಮಗಳ ತಲೆಯ ಹಲವೆಡೆ, ಎರಡೂ ಕಿವಿಗಳಗಳಲ್ಲಿ, ತುಟಿಯಲ್ಲಿ ಗಾಯದ ಗುರುತುಗಳಿವೆ. ಆಕೆಯ ಕುತ್ತಿಗೆ ಮೇಲೆ ಕಚ್ಚಿದ ಗುರುತುಗಳು ಕಂಡು ಬಂದಿವೆ. ಇವೆಲ್ಲ ಹಿಂಸೆ ಮತ್ತು ಹಲ್ಲೆಯ ತೀವ್ರತೆ ಎಷ್ಟಿತ್ತು ಎಂಬುದನ್ನು ಒತ್ತಿ ಹೇಳುತ್ತವೆ. ಅಲ್ಲದೆ ಈ ಹಿಂಸೆಯ ವಿರುದ್ಧ ಸಂತ್ರಸ್ತೆ ನಡೆಸಿದ ಹೋರಾಟವನ್ನು ಸೂಚಿಸುತ್ತವೆ. ಈ ಕೃತ್ಯ ಎಸಗುವ ವೇಳೆ ಆಕೆಯ ಬಾಯಿಯನ್ನು ಬಲವಂತವಾಗಿ ಮುಚ್ಚಿರಬಹುದು ಎಂಬುದನ್ನೂ ಇದು ತಿಳಿಸುತ್ತದೆ. 

  • ದೇಹದಲ್ಲಿ 150 ಎಂ.ಜಿಯಷ್ಟು ವೀರ್ಯ ಪತ್ತೆಯಾಗಿದೆ. ಒಂದಕ್ಕಿಂತ ಹೆಚ್ಚು ಜನರು ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಇದು ಸೂಚಿಸುತ್ತದೆ. ಇಷ್ಟು ಪ್ರಮಾಣದ ವೀರ್ಯ ಕಂಡು ಬಂದಿರುವುದು, ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆಯನ್ನು ಮತ್ತಷ್ಟು ದೃಢಪಡಿಸುತ್ತದೆ.

  • ಮಗಳನ್ನು ಕತ್ತು ಹಿಸುಕಿ ಕೊಲ್ಲುವ ಕೃತ್ಯದಲ್ಲಿ ಮೂವರು ಭಾಗಿಯಾಗಿದ್ದರು ಎಂಬುದನ್ನು ಸಾಕ್ಷ್ಯಾಧಾರಗಳು ಸೂಚಿಸುತ್ತವೆ ಎಂಬ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳಿಂದ ನಾವು ತಿಳಿದುಕೊಂಡಿದ್ದೇವೆ

  • ಇದು ಒಬ್ಬ ವ್ಯಕ್ತಿಯಿಂದ ಆದ ಕೃತ್ಯ ಅಲ್ಲ, ಹಲವರು ಪಾಲ್ಗೊಂಡಿರುವ ಶಂಕೆಯಿದೆ. ಆದರೂ ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಹಾಗೂ ಸುರಕ್ಷತೆಯ ಜವಾಬ್ದಾರಿ ಹೊಂದಿದ್ದವರನ್ನು ಇಲ್ಲಿಯವರೆಗೆ ಬಂಧಿಸಿಲ್ಲ.

  • ಶವಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಲಾಗಿದೆ. ಮಗಳ ಸಾವಿನಲ್ಲಿ ಭಾಗಿಯಾಗಿರುವ ಕೆಲವರನ್ನು ರಕ್ಷಿಸುವ ಉದ್ದೇಶದಿಂದ ಅಸಮರ್ಪಕವಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ತನಿಖೆ ಆರಂಭಿಸಿದ ಸಿಬಿಐ

ಕೋಲ್ಕತ್ತ: ಕಲ್ಕತ್ತ ಹೈಕೋರ್ಟ್‌ ಆದೇಶದಂತೆ ಈ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದ್ದು ತನಿಖೆ ಸಲುವಾಗಿ ಸಿಬಿಐ ಹಿರಿಯ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆ ಕೋಲ್ಕತ್ತ ತಲುಪಿದೆ. ವೈದ್ಯಕೀಯ ಮತ್ತು ವಿಧಿವಿಜ್ಞಾನ ತಜ್ಞರನ್ನು ಒಳಗೊಂಡ ಸಿಬಿಐ ಅಧಿಕಾರಿಗಳ ತಂಡ ಟ್ರೈನಿ ವೈದ್ಯೆಯ ಮೃತ ದೇಹ ಪತ್ತೆಯಾದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಸೆಮಿನಾರ್‌ ಸಭಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

ಅಲ್ಲದೆ ಸಂತ್ರಸ್ತೆ ಮತ್ತು ಅಂದು ಕರ್ತವ್ಯದಲ್ಲಿದ್ದವರ ದೂರವಾಣಿ ಕರೆಗಳ ವಿವರಗಳನ್ನು ಪಡೆದು ಪರಿಶೀಲಿಸಲಿದೆ. ತನಿಖೆಗಾಗಿ ಸಿಬಿಐ ಅಧಿಕಾರಿಗಳ ತಂಡವನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಒಂದು ತಂಡವು ಕಾಲೇಜಿಗೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಿದ್ದು ಅಂದು ಕರ್ತವ್ಯದಲ್ಲಿದ್ದ ವೈದ್ಯರ ವಿಚಾರಣೆ ನಡೆಸಲಿದೆ.

ಇನ್ನೊಂದು ತಂಡವು ಈಗಾಗಲೇ ಬಂಧಿತನಾಗಿರುವ ಸಂಜೋಯ್‌ ರಾಯ್‌ ಅನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ತನ್ನ ವಶಕ್ಕೆ ಪಡೆಯುವ ಕಾರ್ಯ ನಿರ್ವಹಿಸಲಿದೆ. ಮತ್ತೊಂದು ತಂಡವು ಕೋಲ್ಕತ್ತದ ಪೊಲೀಸರ ಜತೆ ಸಮನ್ವಯ ಸಾಧಿಸಲಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಲೋಪ ಆಗಿಲ್ಲ– ಸರ್ಕಾರಿ ವಕೀಲರು

ಮರಣೋತ್ತರ ಪರೀಕ್ಷೆಯನ್ನು ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ನಡೆಸಲಾಗಿದ್ದು ಯಾವುದೇ ಲೋಪ ಆಗದಂತೆ ಎಚ್ಚರ ವಹಿಸಲಾಗಿದೆ. ಪರೀಕ್ಷೆಯ ಇಡೀ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ವರದಿಯ ಪ್ರತಿಯನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಹೇಳಿದ್ದಾರೆ.

ದೇಶದಾದ್ಯಂತ ಮುಂದುವರಿದ ಪ್ರತಿಭಟನೆ

  • ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ದೇಶದ ವಿವಿಧೆಡೆ ಬುಧವಾರವೂ ವೈದ್ಯರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ಹಲವು ಆಸ್ಪತ್ರೆಗಳಲ್ಲಿ ಸೇವೆಗಳು ಸ್ತಬ್ಧ ಗೊಂಡಿದ್ದವು. ರೋಗಿಗಳು ಸಂಕಷ್ಟಕ್ಕೆ ಒಳಗಾದರು.

  • ನವದೆಹಲಿಯ ‘ಏಮ್ಸ್‌’ ವಿಎಂಎಂಸಿ ಸಫ್ದರ್‌ಜಂಗ್‌ ಆಸ್ಪತ್ರೆ ರಾಮ ಮನೋಹರ ಲೋಹಿಯಾ ಇಂದಿರಾಗಾಂಧಿ ಆಸ್ಪತ್ರೆಯ ಸ್ಥಾನಿಕ ವೈದರು ಒಪಿಡಿ ಒಟಿ ಮತ್ತು ವಾರ್ಡ್‌ಗಳಲ್ಲಿ ಕೆಲಸ ನಿರ್ವಹಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

  • ಉತ್ತರ ಪ್ರದೇಶದ ಲಖನೌನಲ್ಲಿನ ಕಿಂಗ್‌ ಜಾರ್ಜ್‌ ವೈದ್ಯಕೀಯ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

  • ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಮಹಿಳಾ ವೈದ್ಯರಿಗೆ ಮತ್ತು ಇತರ ಸಿಬ್ಬಂದಿಗೆ ರಾತ್ರಿ ವೇಳೆ ಪ್ರತ್ಯೇಕ ಸ್ಥಳಗಳಿಗೆ ಒಂಟಿಯಾಗಿ ಹೋಗುವುದನ್ನು ತಪ್ಪಿಸುವಂತೆ ನೀಡಿದ್ದ ಸಲಹೆಯನ್ನು ಬುಧವಾರ ಹಿಂಪಡೆದಿದೆ. ಆಸ್ಪತ್ರೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಬದಲಿಗೆ ಈ ರೀತಿ ಸಲಹೆ ನೀಡಿರುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಕಾಲೇಜು ಆಡಳಿತ ಮಂಡಳಿ ಸಲಹೆಯನ್ನು ಹಿಂದಕ್ಕೆ ಪಡೆದಿದೆ. ‌

  • ರಾಜಸ್ಥಾನದ ವಿವಿಧೆಡೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರತಿಭಟನೆ ನಡೆಸಿದ್ದರಿಂದ ರೋಗಿಗಳಿಂದ ತೊಂದರೆ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT