ತಿರುವನಂತಪುರಂ: ‘ಜುಲೈ 30ರಂದು ವಯನಾಡ್‌ನಲ್ಲಿ ನಡೆದ ಗುಡ್ಡ ಕುಸಿತದಲ್ಲಿ 17 ಕುಟುಂಬಗಳ 65 ಮಂದಿ ಕಣ್ಮರೆಯಾಗಿದ್ದಾರೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
‘ಇದುವರೆಗೂ ಗುರುತಿಸಲಾದ 179 ಮೃತದೇಹಗಳ ಪೈಕಿ ಐದು ಮಂದಿ ಅವಲಂಬಿತರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಮೃತಪಟ್ಟ 59 ಮಂದಿ ಅವಲಂಬಿತರಿಗೆ ಸರ್ಕಾರದಿಂದ ತಲಾ ₹6 ಲಕ್ಷ ಆರ್ಥಿಕ ನೆರವು ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಭೂಕುಸಿತದಿಂದ 119 ಮಂದಿ ಈಗಲೂ ಕಣ್ಮರೆಯಾಗಿದ್ದಾರೆ. 91 ಮಂದಿ ಸಂಬಂಧಿಕರ ಡಿಎನ್‌ಎ ಸ್ಯಾಂಪಲ್ಸ್ ಸಂಗ್ರಹಿಸಲಾಗಿದ್ದು, ಅದನ್ನು ಹೊಂದಾಣಿಕೆ ಮಾಡಿ ನೋಡುವ ಕೆಲಸವು ಪ್ರಗತಿಯಲ್ಲಿದೆ’ ಎಂದು ವಿವರಿಸಿದ್ದಾರೆ.
‘ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವವರಿಗೆ ತಾತ್ಕಾಲಿಕ ನೆಲೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ತಜ್ಞರು, ಸ್ಥಳೀಯರು, ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ ಪುನರ್‌ವಸತಿ ಯೋಜನೆಯನ್ನು ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.