ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿ ನೀರು ಹಂಚಿಕೆ: ಡಿಎಂಕೆ–ಬಿಜೆಪಿ ಸದಸ್ಯರ ವಾಗ್ವಾದ

Last Updated 21 ಜೂನ್ 2019, 19:50 IST
ಅಕ್ಷರ ಗಾತ್ರ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಷಯವು ಶುಕ್ರವಾರ ಲೋಕಸಭೆಯಲ್ಲಿ ಡಿಎಂಕೆ ಮತ್ತು ರಾಜ್ಯದ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಡಿಎಂಕೆ ಸದಸ್ಯ ಡಿ.ರವಿಕುಮಾರ್ ಅವರು, ‘ಮುಂದಿನ ವಾರ ಚರ್ಚೆಗೆ ತೆಗೆದುಕೊಳ್ಳಲು ಕಾವೇರಿ ನದಿ ನೀರು ಹಂಚಿಕೆ ವಿಷಯವನ್ನು ವಿಷಯಸೂಚಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು. ಇದು, ಬಿಜೆಪಿ ಸದಸ್ಯರನ್ನು ಕೆರಳಿಸಿತು.

ಶೋಭಾ ಕರಂದ್ಲಾಜೆ, ನಳಿನ್‌ ಕುಮಾರ್‌ ಕಟೀಲ್, ತೇಜಸ್ವಿ ಸೂರ್ಯ ಹಾಗೂ ಇತರರು ಕೂಡಲೇ ಎದ್ದುನಿಂತು ಡಿಎಂಕೆ ಮನವಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಪಕ್ಷೇತರ ಸದಸ್ಯೆ ಸುಮಲತಾ ಅವರು ವಿರೋಧಕ್ಕೆ ಕೈಜೋಡಿಸಿದರು.

‘ಕಾವೇರಿ ನದಿಯಲ್ಲಿ ನೀರಿನ ಕೊರತೆ ಇದೆ. ಬೆಂಗಳೂರಿಗೆ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಿಲ್ಲ’ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಈ ಹಂತದಲ್ಲಿಯೂ ಉಭಯ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಇನ್ನೊಂದು ಹಂತದಲ್ಲಿ ವಿಸಿಕೆ ಸದಸ್ಯ ಟಿ.ತಿರುಮಾವಲವನ್ ಅವರು, ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶದ ಅನುಷ್ಠಾನ ಕುರಿತು ಚರ್ಚೆಗೆ ಅವಕಾಶ ಕೋರಿದಾಗಲೂ ಗೊಂದಲಕರ ಸ್ಥಿತಿ ನಿರ್ಮಾಣವಾಯಿತು.

ಉಳಿದಂತೆ, ವಿವಿಧ ವಿಷಯಗಳಿಗೆ ಸಂಬಂಧಿಸಿ ಸದಸ್ಯರು ಏರಿದ ದನಿಯಲ್ಲಿ ಮಾತನಾಡಿದ್ದು ಶುಕ್ರವಾರ ಸದನದಲ್ಲಿ ಆಗಾಗ್ಗೆ ಕೋಲಾಹಲ, ಗೊಂದಲದ ಸ್ಥಿತಿ ನಿರ್ಮಾಣವಾಯಿತು.

ಕಲಾಪದ ನಡುವೆ ಪರಸ್ಪರ ಚರ್ಚೆಯಲ್ಲಿ ತೊಡಗದಂತೆ ಸದಸ್ಯರಿಗೆ ವಿಪ್‌ ಜಾರಿಗೊಳಿಸಬೇಕು ಎಂದು ಸ್ಪೀಕರ್ ಒಂದು ಹಂತದಲ್ಲಿ ಅಭಿಪ್ರಾಯಪಟ್ಟರು. ಈ ಮಾತಿಗೆ ಹಲವು ಸದಸ್ಯರಿಂದ ವಿರೋಧ ವ್ಯಕ್ತವಾಯಿತು.

ಮತ್ತೊಮ್ಮೆ ಗೊಂದಲದ ಸ್ಥಿತಿ ಮೂಡಿದಾಗ ಸ್ಪೀಕರ್‌ ಓಂ ಬಿರ್ಲಾ ಅವರು, ‘ಇದು ಪ್ರಾಥಮಿಕ ಶಾಲೆಯೇ? ನಾವು ಚುನಾಯಿತ ಪ್ರತಿನಿಧಿಗಳು. ತಾಳ್ಮೆಯಿಂದ ಇರಿ’ ಎಂದು ಅಸಮಾಧಾನ ಹೊರಹಾಕಿದರು. ಈ ಹಂತದಲ್ಲಿ ಕಲಾಪ ಸಹಜ ಸ್ಥಿತಿಗೆ ಮರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT