ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ಕಾರ್ಖಾನೆ ಸ್ಫೋಟ: ಮೂವರ ಬಂಧನ

Published 7 ಫೆಬ್ರುವರಿ 2024, 16:07 IST
Last Updated 7 ಫೆಬ್ರುವರಿ 2024, 16:07 IST
ಅಕ್ಷರ ಗಾತ್ರ

ಹರ್ದಾ/ಭೋಪಾಲ್‌/ಇಂದೋರ್‌: ಮಧ್ಯ ಪ್ರದೇಶದ ಹರ್ದಾ ಪಟ್ಟಣದ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಇಬ್ಬರು ಮಾಲೀಕರು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾಲೀಕರಾದ ರಾಜೇಶ್‌ ಅಗರ್ವಾಲ್‌, ಸೋಮೇಶ್‌ ಅಗರ್ವಾಲ್‌ ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ರಫಿಕ್‌ ಖಾನ್‌ ಬಂಧಿತರಾಗಿದ್ದಾರೆ ಎಂದು ಹರ್ದಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ್‌ ಕಾಂಚನ್‌ ಸುದ್ದಿಗಾರರಿಗೆ ತಿಳಿಸಿದರು. ಆರೋಪಿಗಳ ವಿರುದ್ಧ ಐಪಿಸಿ ಕಲಂ 304 (ಕೊಲೆ), 308, 34ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ತನಿಖೆಗೆ ಮೂವರ ಸಮಿತಿ ರಚನೆ:

ಪ್ರಕರಣದ ತನಿಖೆಗೆ ಹೆಚ್ಚವರಿ ಮುಖ್ಯ ಕಾರ್ಯದರ್ಶಿ (ಗೃಹ) ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ಮಧ್ಯಪ್ರದೇಶ ಸರ್ಕಾರ ರಚಿಸಿದೆ. ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರ (ಗುಪ್ತಚರ) ಮತ್ತು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಘಟನೆ ತಡೆಯಲು ನಿರ್ಲಕ್ಷ್ಯವಹಿಸಿದ ಅಧಿಕಾರಿಗಳನ್ನು ಗುರುತಿಸಿ, ಅವರಿಗೆ ಜವಾಬ್ದಾರಿ ನಿಗದಿಪಡಿಸುವ ಹೊಣೆಯೂ ಸಮಿತಿ ಮೇಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ದುರಂತದಲ್ಲಿ ಒಟ್ಟು 11 ಮಂದಿ ಮೃತಪಟ್ಟು, 174 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 34 ಮಂದಿಯನ್ನು ಚಿಕಿತ್ಸೆಗಾಗಿ ಭೋಪಾಲ್‌ ಮತ್ತು ಹೋಶಂಗಾಬಾದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 140 ಮಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರು ಗೋದಾಮಿಗೆ ಬೀಗ:

ಪಟಾಕಿ ದುರಂತದ ಬೆನ್ನಲ್ಲೇ ತೀವ್ರ ಕಾರ್ಯಾಚರಣೆ ನಡೆಸಿದ ಇಂದೋರ್‌ ಜಿಲ್ಲಾಡಳಿತವು ನಿಯಮ ಮೀರಿ ಪಟಾಕಿ ಸಂಗ್ರಹಿಸಿದ್ದ ಆರು ಪಟಾಕಿ ಗೋದಾಮುಗಳಿಗೆ ಬೀಗ ಜಡಿದಿದೆ.

ಆರು ಗೋದಾಮುಗಳಲ್ಲಿ ಒಂದು ವಸತಿ ಪ್ರದೇಶದಲ್ಲಿದ್ದರೆ, ಇತರ ಗೋದಾಮುಗಳು ಅನುಮತಿ ಪಡೆದದ್ದಕ್ಕಿಂತ ಹೆಚ್ಚು ಪಟಾಕಿಗಳನ್ನು ಸಂಗ್ರಹಿಸಿದ್ದವು. ಅಲ್ಲದೆ ಅಗತ್ಯ ರಕ್ಷಣಾ ಮತ್ತು ಭದ್ರತಾ ವ್ಯವಸ್ಥೆ ಹೊಂದಿರಲಿಲ್ಲ ಎಂದು ಇಂದೋರ್‌ ಜಿಲ್ಲಾಧಿಕಾರಿ ಆಶಿಶ್‌ ಸಿಂಗ್‌ ತಿಳಿಸಿದ್ದಾರೆ. 

ಎಸ್‌.ಪಿ ವರ್ಗಾವಣೆ:

ದುರಂತ ಸಂಭವಿಸಿದ ಬೆನ್ನಲ್ಲೇ ಹರ್ದಾದ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ್‌ ಕಾಂಚನ್‌ ಅವರನ್ನು ಸರ್ಕಾರ ಭೋಪಾಲ್‌ನಲ್ಲಿರುವ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಗೆ ಬುಧವಾರ ವರ್ಗಾಯಿಸಿ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT