ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
2023 ಮರೆಯುವ ಮುನ್ನ | ವಿಪರೀತ ಹವಾಮಾನ ಏರಿಳಿತದ ವರ್ಷ
2023 ಮರೆಯುವ ಮುನ್ನ | ವಿಪರೀತ ಹವಾಮಾನ ಏರಿಳಿತದ ವರ್ಷ
ಮಹಮ್ಮದ್ ನೂಮಾನ್‌
Published 27 ಡಿಸೆಂಬರ್ 2023, 0:53 IST
Last Updated 27 ಡಿಸೆಂಬರ್ 2023, 0:53 IST
ಅಕ್ಷರ ಗಾತ್ರ
ಭಾರತವು 2023ರಲ್ಲಿ ಹವಾಮಾನಕ್ಕೆ ಸಂಬಂಧಿಸಿದ ವಿಪರೀತ ಏರಿಳಿತಗಳಿಗೆ ಸಾಕ್ಷಿಯಾಗಿದೆ. ಮುಂಗಾರು ಮಳೆಯ ಅಸಮಾನ ಹಂಚಿಕೆಯಿಂದಾಗಿ ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾದರೆ, ಕೆಲವು ಭಾಗಗಳಲ್ಲಿ ಬರದ ಛಾಯೆ ಆವರಿಸಿತು. ಮಳೆಯ ನಿರೀಕ್ಷೆಯಲ್ಲಿ ರೈತ ಆಗಸದತ್ತ ದೃಷ್ಟಿ ನೆಟ್ಟಿರುವ ಚಿತ್ರ ಮಾತ್ರವಲ್ಲದೆ, ಜನರು ಪ್ರವಾಹದ ನೀರಿನಲ್ಲಿ ಸುರಕ್ಷಿತ ಪ್ರದೇಶಗಳತ್ತ ಸಾಗುತ್ತಿರುವ ದೃಶ್ಯವನ್ನೂ ಈ ವರ್ಷವು ನಮ್ಮ ಕಣ್ಮುಂದೆ ಇರಿಸಿದೆ

ವರ್ಷದ ಆರಂಭದಿಂದಲೂ ದೇಶದಲ್ಲಿ ಹವಾಮಾನಕ್ಕೆ ಸಂಬಂಧಿಸಿದಂತೆ ವಿಪರೀತ ಏರಿಳಿತಗಳು ಸಂಭವಿಸಿವೆ ಎಂದು ‘ಸೆಂಟರ್‌ ಫಾರ್‌ ಸೈನ್ಸ್‌ ಆ್ಯಂಡ್ ಎನ್ವಿರಾನ್‍ಮೆಂಟ್’ (ಸಿಎಸ್‌ಇ) ಸಂಸ್ಥೆ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. ದೇಶದಲ್ಲಿ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಮಾಹಿತಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿಯಲ್ಲಿದೆ. ಒಟ್ಟಾರೆಯಾಗಿ ಮಳೆ ಕೊರತೆ ಶೇ 5.6 ರಷ್ಟು ಆಗಿದೆ. ಒಟ್ಟು 221 ಜಿಲ್ಲೆಗಳು ಮಳೆ ಕೊರತೆ ಅನುಭವಿಸಿದವು.

ಪೆಸಿಫಿಕ್‌ ಸಾಗರದಲ್ಲಿ ಉಂಟಾದ ಎಲ್‌ ನಿನೊ ಪರಿಣಾಮದಿಂದ ಮುಂಗಾರು ಪ್ರವೇಶ ಅಲ್ಪ ತಡವಾಗಿತ್ತು. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹವಾಮಾನದ ಏರಿಳಿತ ವಿಪರೀತವಾಗಿತ್ತು. ಜೂನ್‌ನಲ್ಲಿ ಒಟ್ಟಾರೆ ಶೇ 10ರಷ್ಟು ಮಳೆ ಕೊರತೆ ಉಂಟಾದರೆ, ಜುಲೈನಲ್ಲಿ ಪೂರ್ವ ಮತ್ತು ಈಶಾನ್ಯ ರಾಜ್ಯಗಳು ಹೊರತುಪಡಿಸಿ ಇತರ ಕಡೆಗಳಲ್ಲಿ ಉತ್ತಮ ಮಳೆಯಾಯಿತು

ಈ ವರ್ಷದ ಆಗಸ್ಟ್‌, 1901ರ ನಂತರದ ಅತ್ಯಂತ ಶುಷ್ಕ ತಿಂಗಳು ಮತ್ತು ದೇಶದಲ್ಲಿ ಇದುವರೆಗೆ ದಾಖಲಾದ ಅತ್ಯಂತ ಹೆಚ್ಚು ಉಷ್ಣಾಂಶದ ತಿಂಗಳಾಗಿ ಗುರುತಿಸಿಕೊಂಡಿದೆ. ಆಗಸ್ಟ್‌ನಲ್ಲಿ ನಿರೀಕ್ಷಿತ ಮಳೆ ಬೀಳದ ಕಾರಣ ದೇಶದ ಮೇಲೆ ಬರದ ಛಾಯೆ ಆವರಿಸಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಎರಡು ಕಡೆಗಳಲ್ಲಿ ವಾತಾವರಣದಲ್ಲಿ ಆದ ಕಡಿಮೆ ಒತ್ತಡದಿಂದಾಗಿ ಸಾಕಷ್ಟು ಮಳೆ ಸುರಿದದ್ದು, ದೇಶವನ್ನು ಬರದ ಸುಳಿಯಿಂದ ಪಾರು ಮಾಡಿದೆ.

ಮಳೆ ಸಂಬಂಧಿ ದುರಂತಗಳು ಹಲವೆಡೆ ಸಂಭವಿಸಿದವು. ಚಂಡಮಾರುತದ ಅಬ್ಬರ ಮಾತ್ರವಲ್ಲದೆ, ಭೂಕುಸಿತಗಳೂ ಉಂಟಾದವು.

ಬಿಪೊರ್‌ಜಾಯ್‌ ಚಂಡಮಾರುತ

ಜೂನ್‌ ತಿಂಗಳಲ್ಲಿ ಬಿಪೊರ್‌ಜಾಯ್ ಚಂಡಮಾರುತದಿಂದ ಕಛ್‌ ಸೇರಿದಂತೆ ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಿತು. ದ್ವಾರಕಾ, ಜಾಮ್‌ನಗರ, ಮೊರ್ಬಿ, ಜುನಾಗಢ, ಗಿರ್‌ ಸೋಮನಾಥ್, ರಾಜಕೋಟ್‌, ಪೋರಬಂದರ್ ಜಿಲ್ಲೆಗಳಲ್ಲಿ ಹಾನಿ ಉಂಟಾದವು. 

ಚಂಡಮಾರುತ ಮುಂಜಾಗ್ರತೆಯಾಗಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿತ್ತು. ಇದರಿಂದ ಹೆಚ್ಚಿನ ಪ್ರಾಣಹಾನಿ ಆಗುವುದು ತಪ್ಪಿತು.

ಬಿಪೊರ್‌ಜಾಯ್, 1977ರ ಬಳಿಕ ಅತ್ಯಂತ ಸುದೀರ್ಘ ಅವಧಿಯವರೆಗೆ ‘ಸಕ್ರಿಯ’ವಾಗಿ ಇದ್ದ (13 ದಿನ 3 ಗಂಟೆ) ಚಂಡಮಾರುತ ಎನಿಸಿಕೊಂಡಿದೆ. ತನ್ನ 2,525 ಕಿ.ಮೀ. ದೂರದ ಹಾದಿಯಲ್ಲಿ ಒಂಬತ್ತು ಸಲ ದಿಕ್ಕು ಬದಲಿಸಿತ್ತು. ಇದರಿಂದ ಹವಾಮಾನ ಇಲಾಖೆಗೆ ಚಂಡಮಾರುತದ ಹಾದಿಯನ್ನು ಊಹಿಸುವುದೂ ಸವಾಲಾಗಿ ಪರಿಣಮಿಸಿತ್ತು. 

ಮಿಚಾಂಗ್‌ ಅಬ್ಬರ

ವರ್ಷದ ಕೊನೆಯ ತಿಂಗಳಲ್ಲಿ ‘ಮಿಚಾಂಗ್‌’ ಚಂಡಮಾರುತ ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸಿತು. ಧಾರಾಕಾರ ಮಳೆ, ಗಾಳಿಯಿಂದ ಸಂಭವಿಸಿದ ಅವಘಡಗಳಲ್ಲಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು.

ಚೆನ್ನೈ ನಗರದ ಹಲವು ಪ್ರದೇಶಗಳು ಮುಳುಗಡೆಯಾದವು. ಬಹುತೇಕ ರಸ್ತೆಗಳು ಜಲಾವೃತಗೊಂಡವು. ಚೆನ್ನೈ, ತಿರುವಳ್ಳೂರ್‌, ಕಾಂಚಿಪುರಂ ಮತ್ತು ಚೆಂಗಲ್‌ಪೇಟ್‌ನಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸಿದವು.

‘ಮಿಚಾಂಗ್‌’ ಚಂಡಮಾರುತದ ಪರಿಣಾಮ ಸುರಿದ ಮಳೆಗೆ ಚೆನ್ನೈನ ಕೆಲವು ಪ್ರದೇಶಗಳು ಜಲಾವೃತಗೊಂಡಿದ್ದ ದೃಶ್ಯ
‘ಮಿಚಾಂಗ್‌’ ಚಂಡಮಾರುತದ ಪರಿಣಾಮ ಸುರಿದ ಮಳೆಗೆ ಚೆನ್ನೈನ ಕೆಲವು ಪ್ರದೇಶಗಳು ಜಲಾವೃತಗೊಂಡಿದ್ದ ದೃಶ್ಯ
‘ಮಿಚಾಂಗ್‌’ ಚಂಡಮಾರುತದ ಪರಿಣಾಮ ಸುರಿದ ಮಳೆಗೆ ಜಲಾವೃತಗೊಂಡ ಚೆನ್ನೈನ ರಸ್ತೆಯಲ್ಲಿ ಮಹಿಳೆಯೊಬ್ಬರು ಸಾಗಿದ ದೃಶ್ಯ
‘ಮಿಚಾಂಗ್‌’ ಚಂಡಮಾರುತದ ಪರಿಣಾಮ ಸುರಿದ ಮಳೆಗೆ ಜಲಾವೃತಗೊಂಡ ಚೆನ್ನೈನ ರಸ್ತೆಯಲ್ಲಿ ಮಹಿಳೆಯೊಬ್ಬರು ಸಾಗಿದ ದೃಶ್ಯ

ರಾಯಗಢ ಭೂಕುಸಿತ

ಮಹಾರಾಷ್ಟ್ರದ ರಾಯಗಢದಲ್ಲಿ ಜುಲೈ 19ರ ರಾತ್ರಿ ಸಂಭವಿಸಿದ್ದ ಭೂಕುಸಿತದಲ್ಲಿ 57 ಜನ ನಾಪತ್ತೆಯಾಗಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ 27 ಮೃತದೇಹಗಳನ್ನು ಪತ್ತೆಹಚ್ಚಲಾಗಿತ್ತು. ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಭೂಕುಸಿತ ಪೀಡಿತ 103 ಹಳ್ಳಿಗಳಿಂದ ಅಂದಾಜು 7 ಸಾವಿರ ಜನರನ್ನು ಸ್ಥಳಾಂತರಿಸಲಾಗಿತ್ತು.

ಮುನಿದ ಭೂತಾಯಿ

  • ಉತ್ತರಾಖಂಡದ ಜೋಶಿಮಠದಲ್ಲಿ ಉಂಟಾದ ಭೂಕುಸಿತ ವರ್ಷದ ಆರಂಭದಲ್ಲಿ ದೊಡ್ಡ ಸುದ್ದಿಯಾಯಿತು. ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ಕುಸಿದಿರುವುದನ್ನು ಉಪಗ್ರಹ ಚಿತ್ರಗಳು ದೃಢಪಡಿಸಿದ್ದವು. ಇಲ್ಲಿನ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಯಿತು

  • ಲಡಾಖ್‌ನಲ್ಲಿ ಜುಲೈನಲ್ಲಿ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಯಿತು. 

  • ಜುಲೈನಲ್ಲಿ ಯಮುನಾ ನದಿ ಉಕ್ಕಿ ಹರಿದು, ರಾಷ್ಟ್ರದ ರಾಜಧಾನಿಯ ಹಲವು ಪ್ರದೇಶಗಳು ಮುಳುಗಡೆಯಾದವು. ಯಮುನೆಯು 45 ವರ್ಷಗಳ ಹಿಂದಿನ ದಾಖಲೆ ಮಟ್ಟವನ್ನು ಮೀರಿ ಹರಿಯಿತು. ಹರಿಯಾಣದಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿತು.

  • ಹಿಮಾಚಲ ಪ್ರದೇಶದಲ್ಲಿ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಮೃತಪಟ್ಟರು. ಭೂಕುಸಿತದಿಂದ ನೂರಾರು ಮನೆಗಳು ನೆಲಸಮವಾದವು.

  • ಉತ್ತರಾಖಂಡದ ಗೌರಿಕುಂಡದ ಬಳಿ ಆಗಸ್ಟ್‌ನಲ್ಲಿ ಭೂ ಕುಸಿತ ಸಂಭವಿಸಿ 10ಕ್ಕೂ ಅಧಿಕ ಮಂದಿ ಮೃತಪಟ್ಟರು.

  • ಮೇಘಸ್ಫೋಟ ಹಾಗೂ ನಂತರ ತೀಸ್ತಾ ನದಿಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಉತ್ತರ ಸಿಕ್ಕಿಂನಲ್ಲಿ ಯೋಧರು ಸೇರಿದಂತೆ 50ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. 

  • ಸೆಪ್ಟೆಂಬರ್‌ನಲ್ಲಿ ನಾಗಪುರದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಯಿತು.

  • ನವೆಂಬರ್‌ನಲ್ಲಿ ಗುಜರಾತ್‌ನ ವಿವಿಧೆಡೆ ಸುರಿದ ಅಕಾಲಿಕ ಮಳೆಯಿಂದಾಗಿ ಸಿಡಿಲು ಬಡಿದು 27 ಮಂದಿ ಮೃತಪಟ್ಟರು.

ಸಾವು ಗೆದ್ದ 41 ಕಾರ್ಮಿಕರು

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ–ಬಡಕೋಟ್ ಸುರಂಗದಲ್ಲಿ ಸಿಲುಕಿದ್ದ 41 ಮಂದಿ ಕಾರ್ಮಿಕರನ್ನು 17 ದಿನಗಳ ಬಳಿಕ ರಕ್ಷಿಸಿದ್ದು, ಭಾರತದಲ್ಲಿ ನಡೆದ ಚಾರಿತ್ರಿಕ ರಕ್ಷಣಾ ಕಾರ್ಯಾಚರಣೆ ಎನಿಸಿಕೊಂಡಿದೆ.

ನವೆಂಬರ್‌ 12ರಂದು ಬೆಳಿಗ್ಗೆ 5.30ರ ವೇಳೆ ಸುರಂಗದಲ್ಲಿ ಕುಸಿತ ಉಂಟಾಗಿತ್ತು. ಹಲವು ಅಡೆತಡೆಗಳ ನಡುವೆಯೂ ನ.28ರಂದು ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.

ಅವಶೇಷಗಳ ಮಧ್ಯೆ ಸುಮಾರು 60 ಮೀ. ವರೆಗೂ ಪೈಪ್‌ಗಳನ್ನು ತೂರಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಯಂತ್ರಗಳ ಮೂಲಕ ಪೈಪ್‌ ಅಳವಡಿಸುವ ಕಾರ್ಯಕ್ಕೆ ಅಡ್ಡಿ ಉಂಟಾದಾಗ ‘ರ‍್ಯಾಟ್‌ ಹೋಲ್‌ ಮೈನಿಂಗ್’ ತಂತ್ರದ ಮೂಲಕ ಸುರಂಗ ಕೊರೆಯುವ ಕೆಲಸ ಮುಂದುವರಿಸಿ, ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು.

ದೇಶದ ವಿವಿಧ ಸಂಸ್ಥೆಗಳ ಜತೆ ವಿದೇಶದ ಸುರಂಗ ರಕ್ಷಣಾ ಕಾರ್ಯಕರ್ತ ಅರ್ನಾಲ್ಡ್‌ ಡಿಕ್ಸ್‌ ಅವರೂ ಈ ಕಾರ್ಯಾಚರಣೆಗೆ ನೆರವಾಗಿದ್ದರು. ‘ಈ ಕಾರ್ಯದಲ್ಲಿ ತೊಡಗಿದ್ದ ಎಲ್ಲರೂ ಮಾನವೀಯತೆ ಹಾಗೂ ಒಂದು ತಂಡವಾಗಿ ಕೆಲಸ ಮಾಡುವುದಕ್ಕೆ ಅದ್ಭುತವಾದ ಉದಾಹರಣೆಯೊಂದನ್ನು ಸೃಷ್ಟಿಸಿಕೊಟ್ಟಿದ್ದಾರೆ’ ಎಂದು ಪ್ರಧಾನ ನರೇಂದ್ರ ಮೋದಿ ಅವರು ಬಣ್ಣಿಸಿದ್ದರು.

ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಕಾರ್ಮಿಕರೊಬ್ಬರನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆಲಂಗಿಸಿದ ಕ್ಷಣ 
ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಕಾರ್ಮಿಕರೊಬ್ಬರನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಆಲಂಗಿಸಿದ ಕ್ಷಣ 
ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತರಲು ನಡೆದ ರಕ್ಷಣಾ ಕಾರ್ಯಾಚರಣೆಯ ನೋಟ
ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತರಲು ನಡೆದ ರಕ್ಷಣಾ ಕಾರ್ಯಾಚರಣೆಯ ನೋಟ

ಒಡಿಶಾ ರೈಲು ದುರಂತ

ಪ್ರಾಕೃತಿಕ ವಿಕೋಪಗಳು ದೇಶದ ವಿವಿಧೆಡೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡರೆ, ಮಾನವ ಲೋಪದಿಂದಲೂ ಕೆಲವು ದುರ್ಘಟನೆಗಳು ಸಂಭವಿಸಿದವು. ಒಡಿಶಾ ರೈಲು ದುರಂತ ಅವುಗಳಲ್ಲಿ ಎಲ್ಲಕ್ಕಿಂತಲೂ ಘೋರವಾದುದು.

ಕೋರೊಮಂಡಲ್‌ ಎಕ್ಸ್‌ಪ್ರೆಸ್‌ ರೈಲು, ಯಶವಂತಪುರ–ಹೌರಾ ಎಕ್ಸ್‌ಪ್ರೆಸ್‌ ರೈಲು ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಜೂನ್‌ 2ರಂದು ಸಂಭವಿಸಿದ್ದ ಅಪಘಾತದಲ್ಲಿ 291 ಮಂದಿ ಮೃತಪಟ್ಟು, 1,200ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು.

ರೈಲು ದುರಂತಕ್ಕೆ ಮನುಷ್ಯರಿಂದಾದ ಲೋಪವೇ ಕಾರಣ ಎಂಬುದು ರೈಲು ಸುರಕ್ಷತಾ ಕಮಿಷನರ್ (ಸಿಆರ್‌ಎಸ್‌) ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿತ್ತು. ಸಿಗ್ನಲಿಂಗ್ ಮತ್ತು ಟೆಲಿಕಾಂ ವಿಭಾಗ ಹಾಗೂ ಸಂಚಾರ ನಿರ್ವಹಣಾ ವಿಭಾಗದ ಸಿಬ್ಬಂದಿಯ ತಪ್ಪಿನಿಂದ ದುರಂತ ಸಂಭವಿಸಿದೆ ಎಂದು ತನಿಖಾ ವರದಿ ಹೇಳಿದೆ. 

ದುರ್ಘಟನೆಗಳು 

ಮೇ 7: ಕೇರಳದ //ಮಲ್ಲಪುರಂ// ಜಿಲ್ಲೆಯ ತಾನೂರು ಪ್ರದೇಶದ ತುವಲ್‌ತೀರ ಬೀಚ್‌ ಬಳಿ ಹೌಸ್‌ಬೋಟ್‌ ಮಗುಚಿ 22 ಮಂದಿ ನೀರುಪಾಲು

ಜುಲೈ 1: ಮಹಾರಾಷ್ಟ್ರದ ಬುಲ್ದಾನಾದಲ್ಲಿ ಖಾಸಗಿ ಬಸ್‌ ಬೆಂಕಿಗೆ ಆಹುತಿಯಾಗಿ 25 ಮಂದಿ ಸಾವು. ನಾಗ್ಪುರ– ಮುಂಬೈ ಸಮೃದ್ಧಿ ಎಕ್ಸ್‌ಪ್ರೆಸ್ ವೇನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತ್ತು

ಆಗಸ್ಟ್‌ 23: ಮಿಜೋರಾಂ ರಾಜಧಾನಿ ಐಜ್ವಾಲ್‌ ಸಮೀಪದ ಸೈರಂಗ ಬಳಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ವೇಳೆ, ಕ್ರೇನ್‌ ಕುಸಿದು 23 ಕಾರ್ಮಿಕರ ದುರ್ಮರಣ

ಅಕ್ಟೋಬರ್‌ 29: ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಹೌರಾ–ಚೆನ್ನೈ ರೈಲು ಮಾರ್ಗದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 13 ಸಾವು

ನವೆಂಬರ್‌ 15: ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯ ಬಟೋತ್‌–ಕಿಸ್ತವಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ವೊಂದು 300 ಅಡಿ ಆಳದ ಕಣಿವೆಗೆ ಬಿದ್ದು 36 ಮಂದಿ ಮೃತಪಟ್ಟರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT