ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
2023 ಮರೆಯುವ ಮುನ್ನ | ಕೋರ್ಟ್‌ ಅಂಗಳವ ಹಿಂದಿರುಗಿ ನೋಡಿದಾಗ
2023 ಮರೆಯುವ ಮುನ್ನ | ಕೋರ್ಟ್‌ ಅಂಗಳವ ಹಿಂದಿರುಗಿ ನೋಡಿದಾಗ
ಫಾಲೋ ಮಾಡಿ
Published 28 ಡಿಸೆಂಬರ್ 2023, 23:30 IST
Last Updated 28 ಡಿಸೆಂಬರ್ 2023, 23:30 IST
Comments
ಸುಪ್ರೀಂ ಕೋರ್ಟ್‌ 2023ರಲ್ಲಿ ನೀಡಿರುವ ಕೆಲವು ತೀರ್ಪುಗಳು ಅವುಗಳಲ್ಲಿನ ಒಳನೋಟ, ಕಾನೂನು ವ್ಯಾಖ್ಯಾನದ ಕಾರಣದಿಂದಾಗಿ ಹಾಗೂ ಜನಜೀವನದ ಮೇಲೆ ಅವು ಬೀರಲಿರುವ ಪರಿಣಾಮದ ಕಾರಣದಿಂದಾಗಿ ಸ್ಮರಣೀಯ. ಅಂತಹ ಕೆಲವು ತೀರ್ಪುಗಳ ಮೇಲೊಂದು ಕಿರುನೋಟ ಇಲ್ಲಿದೆ

ನೋಟು ರದ್ದತಿ ಮಾನ್ಯ

ಗರಿಷ್ಠ ಮುಖಬೆಲೆಯ ನೋಟುಗಳ ಮಾನ್ಯತೆಯನ್ನು 2016ರ ನವೆಂಬರ್ 8ರಂದು ರದ್ದುಪಡಿಸಿದ ಕೇಂದ್ರ ಸರ್ಕಾರದ ತೀರ್ಮಾನವು ಕಾನೂನಿಗೆ ಅನುಗುಣವಾಗಿಯೇ ಇತ್ತು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಜನವರಿಯಲ್ಲಿ ನೀಡಿದ ಬಹುಮತದ ತೀರ್ಪಿನಲ್ಲಿ ಹೇಳಿತು.

ನೋಟು ರದ್ದತಿ ಕ್ರಮ ಪ್ರಶ್ನಿಸಿ ವಕೀಲ ವಿವೇಕ್‌ ನಾರಾಯಣ ಶರ್ಮ ಹಾಗೂ ಇತರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌. ಅಬ್ದುಲ್‌ ನಜೀರ್‌, ಬಿ.ಆರ್‌.ಗವಾಯಿ, ಎ.ಎಸ್. ಬೋಪಣ್ಣ, ವಿ.ರಾಮಸುಬ್ರಮಣಿಯನ್‌ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಸಂವಿಧಾನ ಪೀಠ ಈ ತೀರ್ಪು ನೀಡಿತು.

ಸಂವಿಧಾನ ಪೀಠದಲ್ಲಿ ಇದ್ದ ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನಮತದ ತೀರ್ಪು ಬರೆದರು. ನೋಟು ರದ್ದತಿಯು ಕಾನೂನುಬಾಹಿರ ಎಂದು ಹೇಳಿದರು. ನೋಟು ರದ್ದತಿಯ ಉದ್ದೇಶ ಸರಿ ಇದ್ದಿರಬಹುದು. ಆದರೆ ಅದನ್ನು ಜಾರಿಗೆ ತಂದ ಬಗೆಯು, ಅನುಸರಿಸಿದ ಪ್ರಕ್ರಿಯೆಗಳು ಕಾನೂನುಬದ್ಧವಾಗಿ ಇರಲಿಲ್ಲ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರಕ್ಕೆ ಯಾವುದೇ ಕರೆನ್ಸಿಯನ್ನು ಅಮಾನ್ಯ ಮಾಡುವ ಅಧಿಕಾರ ಇದೆಯಾದರೂ ಅದನ್ನು ಶಾಸನಬದ್ಧವಾಗಿ ಮಾಡಬೇಕೇ ಹೊರತು ಗೆಜೆಟ್‌ ಅಧಿಸೂಚನೆ ಮೂಲಕ ಅಲ್ಲ ಎಂದು ನಾಗರತ್ನ ಅವರು ತೀರ್ಪಿನಲ್ಲಿ ಬರೆದಿದ್ದಾರೆ.

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲ

ಸಲಿಂಗ ಜೋಡಿಗಳ ಸಹಬಾಳ್ವೆಯ ಹಕ್ಕನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿಯಿತಾದರೂ, ಸಲಿಂಗ ಜೋಡಿಗಳ ಮದುವೆಗೆ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಕಾನೂನಿನ ಮಾನ್ಯತೆ ನೀಡಲು ನಿರಾಕರಿಸಿತು. ಹೀಗಿದ್ದರೂ, ಅವರ ಮದುವೆಗೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಸಂಸತ್ತು ಕಾನೂನು ರೂಪಿಸಬಹುದು ಎಂದು ಅಕ್ಟೋಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ ಸ್ಪಷ್ಟಪಡಿಸಿತು. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಒಳಚರಂಡಿ ಸ್ವಚ್ಛಗೊಳಿಸುವಾಗ ಮೃತ‍ಪಟ್ಟರೆ ₹30 ಲಕ್ಷ ಪರಿಹಾರ

ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರದ ಪ್ರಾಧಿಕಾರಗಳು ₹30 ಲಕ್ಷ ಪರಿಹಾರ ಒದಗಿಸಬೇಕು, ಒಳಚರಂಡಿ ಸ್ವಚ್ಛಗೊಳಿಸುವಾಗ ಕಾರ್ಮಿಕರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಅವರಿಗೆ ಕನಿಷ್ಠ ₹20 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಅಕ್ಟೋಬರ್‌ ತಿಂಗಳಲ್ಲಿ ಆದೇಶಿಸಿತು.

‘ಒಳಚರಂಡಿ, ಶೌಚಗುಂಡಿಯನ್ನು ಬರಿಗೈಯಿಂದ ಸ್ವಚ್ಛಗೊಳಿಸುವ ಪದ್ಧತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಇಲ್ಲವಾಗಿಸಬೇಕು’ ಎಂದು ತಾಕೀತು ಮಾಡಿತು ಸಹ. ಕಾರ್ಮಿಕರಿಗೆ ಬೇರೆ ಯಾವುದೇ ರೀತಿಯ ಅಂಗವೈಕಲ್ಯ ಉಂಟಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ₹10 ಲಕ್ಷದವರೆಗೆ ‍ಪರಿಹಾರ ಒದಗಿಸಬೇಕು ಎಂದು ನ್ಯಾಯಮೂರ್ತಿ ಭಟ್ ಅವರು ಆದೇಶದಲ್ಲಿ ಹೇಳಿದರು.

ವಿಶೇಷ ಸ್ಥಾನಮಾನ ರದ್ದತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಡಿಸೆಂಬರ್‌ 11ರಂದು ಸರ್ವಾನುಮತದಿಂದ ಎತ್ತಿಹಿಡಿಯಿತು. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ತೀರ್ಮಾನಕ್ಕೆ ಸಿಕ್ಕ ಜಯ ಎಂದು ವಿಶ್ಲೇಷಿಸಲಾಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನವನ್ನು ‘ಆದಷ್ಟು ಬೇಗ ಮರಳಿಸಬೇಕು’ ಎಂದು ಕೋರ್ಟ್‌ ತಾಕೀತು ಮಾಡಿತು.

‘370ನೆಯ ವಿಧಿ ಹಾಗೂ 1ನೆಯ ವಿಧಿಯನ್ನು ಒಟ್ಟಾಗಿ ಓದಿದಾಗ, ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಭಾಗವನ್ನಾಗಿ  ವಿಲೀನಗೊಳಿಸಿದ್ದು ಪರಿಪೂರ್ಣವಾಗಿತ್ತು ಎಂಬುದರಲ್ಲಿ ಯಾವ ಅನುಮಾನವೂ ಉಳಿಯುವುದಿಲ್ಲ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ಹೇಳಿದ್ದರು.

ನ್ಯಾಯಮೂರ್ತಿಗಳ ನೇಮಕ: ಮುಂದುವರಿದ ಸಂಘರ್ಷ

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ಕೊಲಿಜಿಯಂ ವ್ಯವಸ್ಥೆಯ ಮೂಲಕ ನೇಮಕ ಮಾಡುವ ವ್ಯವಸ್ಥೆಯ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ನಡುವಿನ ಸಂಘರ್ಷ 2023ರಲ್ಲಿಯೂ ಮುಂದುವರಿಯಿತು. ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿ ಕೂಡ ಇರಬೇಕು ಎಂದು ಕೇಂದ್ರ ಕಾನೂನು ಸಚಿವ ಆಗಿದ್ದ ಕಿರಣ್ ರಿಜಿಜು ಒತ್ತಾಯಿಸಿದ್ದರು. ಆದರೆ ನ್ಯಾಯಾಂಗವು, ಕೊಲಿಜಿಯಂ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿತು. ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಕೊಲಿಜಿಯಂ ವ್ಯವಸ್ಥೆಯನ್ನು ಅತ್ಯುತ್ತಮ ಎಂದು ಬಣ್ಣಿಸಿದರು.

ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವರ್ಷದ ಆರಂಭದಲ್ಲಿ, ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದರು. ಸಂಸತ್ತಿನ ಪಾರಮ್ಯವನ್ನು ತಗ್ಗಿಸುವ ಕೆಲಸವನ್ನು ನ್ಯಾಯಾಂಗ ಮಾಡಬಾರದು ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT