ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Sikkim Flood:140 ಜನರಿಗಾಗಿ ಶೋಧ ಕಾರ್ಯ ಮುಂದುವರಿಕೆ

ಪ್ರವಾಹದಲ್ಲಿ ಕೊಚ್ಚಿಹೋದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು
Published 7 ಅಕ್ಟೋಬರ್ 2023, 16:13 IST
Last Updated 7 ಅಕ್ಟೋಬರ್ 2023, 16:13 IST
ಅಕ್ಷರ ಗಾತ್ರ

ಗ್ಯಾಂಗ್ಟಕ್‌: ಉತ್ತರ ಸಿಕ್ಕಿಂನ ತೀಸ್ತಾ ನದಿ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿದ್ದು, ನಾಪತ್ತೆಯಾದ 140 ಜನರಿಗಾಗಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. 

ಲಾಚೆನ್‌, ಲಾಚುಂಗ್, ಮಂಗನ್‌ ಜಿಲ್ಲೆಯಲ್ಲಿ ಸಿಲುಕಿರುವ ಮೂರು ಸಾವಿರ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಮತ್ತೆ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ಪ್ರಯತ್ನಿಸಲಾಯಿತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಲಾಚೆನ್ ಮತ್ತು ಲಾಚುಂಗ್ ಗೆ ಹೋಗುವ ರಸ್ತೆಗಳು ಹಾನಿಯಾಗಿವೆ. ರಕ್ಷಣಾ ತಂಡಗಳು ಅಲ್ಲಿಗೆ ಹೋಗಲು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗುತ್ತಿದೆ. ಸಿಂಗ್‌ತಮ್, ಬರ್ದಂಗ್‌ ಮತ್ತು ರಂಗ್ಪೊ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ  ನಿರತವಾಗಿವೆ. ಆದರೆ ಉತ್ತರ ಸಿಕ್ಕಿಂ, ಚುಂಗ್‌ತಾಂಗ್, ಲಾಚೆನ್ ಮತ್ತು ಲಾಚುಂಗ್ ತಲುಪಲು ಸಾಧ್ಯವಾಗಿಲ್ಲ. 

ಈವರೆಗೂ 56 ಮೃತದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಪಶ್ಚಿಮ ಬಂಗಾಳದಲ್ಲಿ ಶನಿವಾರ ಮತ್ತೊಬ್ಬ ಯೋಧನ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ದಿಢೀರ್ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು/ಸ್ಫೋಟಕಗಳು ಜನರಿಗೆ ಅಪಾಯ ತಂದೊಡ್ಡಬಹುದು ಎಂಬ ಆತಂಕವನ್ನು ಸೇನೆ ವ್ಯಕ್ತಪಡಿಸಿದೆ. ಇವುಗಳನ್ನು ಪತ್ತೆ ಮಾಡಿ, ಮರು ವಶಪಡಿಸಿಕೊಳ್ಳಲು ಕೆಲ ತಂಡಗಳನ್ನು ರಚಿಸಿ, ಅವುಗಳನ್ನು ನದಿ ತೀರದ ಉದ್ದಕ್ಕೂ ನಿಯೋಜಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. 

ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಸಿಲುಕಿರುವ ಮೇಘಾಲಯದ 26 ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದ್ದು, ಅವರು ಶಿಲ್ಲಾಂಗ್‌ಗೆ ತೆರಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಶನಿವಾರ ಮಂಗನ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸೇನೆ ಮತ್ತು ಸ್ಥಳೀಯ ಆಡಳಿತ ನಡೆಸುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು. ನಾಗಾ, ರೆಲ್ ಮತ್ತು ಟೂಂಗ್ ವಾರ್ಡ್ ಗಳ ಪ್ರವಾಹ ಪೀಡಿತ ಕುಟುಂಬಗಳೊಂದಿಗೆ ಮಾತುಕತೆ ನಡೆಸಿದರು. ‌

ಕಾಳಜಿ ಕೇಂದ್ರಕ್ಕೆ ತಮಾಂಗ್ ಭೇಟಿ ನೀಡಿ, ಸಂತ್ರಸ್ತರ ಪುನರ್ವಸತಿಗಾಗಿ ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವು ಒದಗಿಸುವ ಭರವಸೆ ನೀಡಿದರು.

 ‘ರಸ್ತೆ ಸಂಪರ್ಕವನ್ನು ಪುನಃಸ್ಥಾಪಿಸುವುದು ಆದ್ಯತೆಯಾಗಿದೆ. ಇದರಿಂದ ಪರಿಹಾರ ಕಾರ್ಯ ವೇಗಗೊಳ್ಳುವುದರ ಜತೆಗೆ ಜನರನ್ನು ಸ್ಥಳಾಂತರಿಸಲು ಅನುಕೂಲವಾಗುತ್ತದೆ’ ಎಂದು ತಮಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಪ್ರವಾಹದಿಂದ ಚುಂಗ್‌ತಾಂಗ್ ಪಟ್ಟಣ ಶೇಕಡ 80ರಷ್ಟು ಬಾಧಿತವಾಗಿದೆ. 1,200 ಮನೆಗಳಿಗೆ ಹಾನಿಯಾಗಿದ್ದು, 13 ಸೇತುವೆಗಳು  ಕೊಚ್ಚಿ ಹೋಗಿವೆ. ಎರಡು ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಏಳು ಸಾವಿರ ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಿದ್ದಾರೆ.  

ತೀಸ್ತಾ ನದಿ ಪ್ರವಾಹಕ್ಕೂ ಕೆಲ ನಿಮಿಷಗಳ ಮುನ್ನ ಸಿಕ್ಕಿಂ-ಪಶ್ಚಿಮ ಬಂಗಾಳ ಗಡಿ ಬಳಿ ರೈಲ್ವೆ ಸುರಂಗ ನಿರ್ಮಾಣದಲ್ಲಿ ತೊಡಗಿದ್ದ ಸುಮಾರು 150 ಕಾರ್ಮಿಕರನ್ನು ರಕ್ಷಿಸಲಾಯಿತು.  

ಕಾರ್ಮಿಕರು ಕೆಲಸ ಮಾಡುವ ಖಾಸಗಿ ನಿರ್ಮಾಣ ಕಂಪನಿಯ ಅಧಿಕಾರಿಗಳು, ಪ್ರವಾಹದ ವಿಷಯ ತಿಳಿದ ಕೂಡಲೇ ವಾಹನಗಳೊಂದಿಗೆ  ಸ್ಥಳಕ್ಕೆ ತೆರಳಿ, ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT