ನವದೆಹಲಿ: ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದ ಮಸೂದೆಗೆ ಮೂರು ಮುಸ್ಲಿಂ ಸಂಘಟನೆಗಳು ಶುಕ್ರವಾರ ಬೆಂಬಲ ವ್ಯಕ್ತಪಡಿಸಿವೆ ಎಂದು ಮೂಲಗಳು ಹೇಳಿವೆ.
ಅಖಿಲ ಭಾರತ ಸಜ್ಜಾದನಶೀನ್ ಕೌನ್ಸಿಲ್, ಆರ್‌ಎಸ್‌ಎಸ್ ಅಂಗಸಂಸ್ಥೆ ರಾಷ್ಟ್ರೀಯ ಮುಸ್ಲಿಂ ಮಂಚ್ ಹಾಗೂ ಭಾರತ್ ಫಸ್ಟ್ ಎಂಬ ಸ್ವಯಂ ಸೇವಾ ಸಂಸ್ಥೆ ಈ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿವೆ.
ತಿದ್ದುಪಡಿ ಮಸೂದೆ ಕುರಿತು ರಚಿಸಲಾಗಿರುವ ಸಮಿತಿ ಮುಂದೆ ಪ್ರತ್ಯೇಕವಾಗಿ ಹಾಜರಾಗಿದ್ದ ಈ ಸಂಘಟನೆಗಳು, ತಮ್ಮ ಅಹವಾಲು ಸಲ್ಲಿಸಿ, ಬೆಂಬಲ ವ್ಯಕ್ತಪಡಿಸಿದವು ಎಂದು ಮೂಲಗಳು ಹೇಳಿವೆ.
ವಾಗ್ವಾದ: ಸಲಹೆ–ಸೂಚನೆಗಳನ್ನು ಆಲಿಸಲು ನಡೆದಿದ್ದ ಸಭೆಯಲ್ಲಿ, ಸಮಿತಿಯ ಕೆಲ ಸದಸ್ಯರ ನಡುವೆ ವಾಗ್ವಾದ ನಡೆಯಿತು ಎಂದು ಮೂಲಗಳು ಹೇಳಿವೆ.
‘ಮತ್ತೊಂದು ಕಡೆಯವರ ಅಭಿಪ್ರಾಯಗಳನ್ನು ಆಲಿಸಲು ಮುಕ್ತ ಮನಸು ಹೊಂದಿರಬೇಕು’ ಎಂದು ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸದಸ್ಯರನ್ನು ಉದ್ದೇಶಿಸಿ ಶಿವಸೇನಾ ನಾಯಕ ನರೇಶ್ ಮ್ಹಾಸ್ಕೆ ಹೇಳಿದ್ದು, ಜಟಾಪಟಿಗೆ ಕಾರಣವಾಯಿತು.
ಪ್ರವಾಸ: ಸಮಿತಿಯು ಸೆ.26ರಿಂದ ಅಕ್ಟೋಬರ್ 1ರ ನಡುವೆ ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರಿಗೆ ಭೇಟಿ ನೀಡಿ, ವಿವಿಧ ಭಾಗೀದಾರರಿಂದ ಅಹವಾಲು ಸ್ವೀಕರಿಸಲಿದೆ.